ಗುರುವಾರ , ಮೇ 13, 2021
24 °C

ರಂಗಾಯಣದ ಅಂಗಳದಲ್ಲಿ ಚಿಣ್ಣರ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಂಗಾಯಣದ ಅಂಗಳದಲ್ಲಿ ಬುಧವಾರ ಹಬ್ಬದ ವಾತಾವರಣ. ಕುಕ್ಕರಹಳ್ಳಿ ಕೆರೆಯಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ವನರಂಗದ ಬಯಲು ರಂಗಮಂದಿರದಲ್ಲಿದ್ದ ಮಕ್ಕಳ ಸಂತೋಷ ಇಮ್ಮಡಿಯಾಗಿತ್ತು.ಕೈಯಲ್ಲಿ ಕತ್ತಿ, ಗುರಾಣಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಿಗೆ ಲಿಂಗ- ರುದ್ರಾಕ್ಷಿ ಧರಿಸಿದ್ದ; ಉದ್ದ ಮೀಸೆಯ ಗಂಭೀರ ಮುಖಭಾವದ ವ್ಯಕ್ತಿ ರಂಗಮಂದಿರಕ್ಕೆ ಕಾಲಿಡುತ್ತಿದ್ದಂತೆ ಅಂಗಳದಲ್ಲಿ ಕುಳಿತಿದ್ದ ಮಕ್ಕಳು ಬೆಕ್ಕಸ ಬೆರಗಾದರು. ಆಹಾಹಾ.. ರುದ್ರ.. ವೀರಭದ್ರ.. ಎಂದು ಒಡಪು ಹೇಳುತ್ತಿದ್ದಂತೆ ಕೆಲವರು ಬೆಚ್ಚಿದರು. ಆದರೆ ವೀರಗಾಸೆ ಕುಣಿತ ಆರಂಭವಾದ ತಕ್ಷಣ ಕೈ-ಕಾಲು ಆಡಿಸುತ್ತಾ, ಕೇಕೆ ಹಾಕುತ್ತಾ ಸಂಭ್ರಮಿಸಿದರು.ಬಳಿಕ ವೇದಿಕೆಗೆ ಆಗಮಿಸಿದ ರಂಗಾ ಯಣದ ಕಲಾವಿದರು ಮಕ್ಕಳಂತೆ ಅಭಿ ನಯಿಸಿ ನಗೆಯ ಬುಗ್ಗೆ ಉಕ್ಕಿಸಿದರು. ಗೋಲಿ, ಬುಗುರಿ, ಲಗೋರಿ ಆಟವನ್ನು ಮೈಮ್ ಮೂಲಕ ಕಟ್ಟಿಕೊಟ್ಟರು. ಆಟದ ಮಧ್ಯೆ ನಡೆಯುವ ಜಗಳ, ಬಳಿಕ ರಾಜಿಯಾಗಿ ಮತ್ತೊಂದು ಆಟವಾಡುವ ಪರಿಯನ್ನು ಕಂಡು ಮಕ್ಕಳೇ ನಾಚಿದರು!ನಂತರ ನಡೆದ ಚಿಣ್ಣರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾ ಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ, ವಿಶ್ವದ ಎಲ್ಲೆಡೆ ನೌತಿಕ ಮೌಲ್ಯಗಳು ಅಧಃಪತನವಾಗುತ್ತಿವೆ. ಹೀಗಾಗಿ ಪೋಷಕರು, ಶಿಕ್ಷಕರು ಮಕ್ಕಳನ್ನು ಬೆಳೆಸುವ ಕುರಿತು ಗಮನ ಹರಿಸಬೇ ಕಾದ ಅಗತ್ಯವಿದೆ. ಅವರ ಮನೋ ಭೂಮಿಕೆಯಲ್ಲಿ ಉತ್ತಮ ಮೌಲ್ಯಗ ಳನ್ನು ಬಿತ್ತಬೇಕಿದೆ ಎಂದು ಕರೆ ನೀಡಿದರು.ಹುಟ್ಟುವಾಗ ಎಲ್ಲ ಮಕ್ಕಳೂ ಪ್ರತಿಭಾವಂತರಾಗಿರುತ್ತಾರೆ. ಆದರೆ ಶಾಲೆಗಳೇ ಮಕ್ಕಳನ್ನು ಮೂರ್ಖರ ನ್ನಾಗಿ ಮಾಡುತ್ತವೆ ಎಂಬ ಭಾವನೆ ಬಲವಾಗುತ್ತಿದೆ. ಶಾಲೆಯಲ್ಲಿನ ಪಠ್ಯೇತರ ಚಟುವಟಿಕೆಗಳಲ್ಲಿ ಆಯ್ಕೆಗ ಳಿಲ್ಲ. ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಆಟವಾಡಬಾರದು, ಹೊರಗೆ ಹೋಗಬಾರದು ಎಂದು ನಿರ್ಬಂಧ ಹೇರುತ್ತಾರೆ. ಆದರೆ ಚಿಣ್ಣರ ಮೇಳದಲ್ಲಿ ಪಾಠದ ಕಾಟವಿಲ್ಲ. ಶಿಕ್ಷಕರ ಕಿರಿಕಿರಿಯಿಲ್ಲ. ಪೋಷಕರ ನಿರ್ಬಂಧವಿಲ್ಲ ಎಂದರು.`ಓ ಮಲ್ಲಿಗೆ ಕಾಕಡ

ನೀನು ಬಾರಿ ಪಾಕಡ

ಕಣ್ಣು ಬಿಟ್ಟೆ ಗಡಗಡಕೆಳಗೆ ಬಿದ್ದೆ ಬಡಬಡ..~ ಹೀಗೆ ಮಕ್ಕಳ ಹಾಡುಗಳನ್ನು ಹೇಳಿ ರಂಜಿಸುತ್ತಾ ಪೋಷಕರ ಕುರಿತು ಮಾತನಾಡಿದ ಅವರು, ಮಕ್ಕಳು ಹೂವಿನಂತೆ. ಅವರು ಅರಳುವ ಪರಿ ಬೆರಗುಂಟು ಮಾಡುತ್ತದೆ. ಅದು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು ಬಲವಂತದಿಂದ ಅರಳಿಸಲು ಪ್ರಯತ್ನಿಸಬಾರದು. ಅವರ ಆಸಕ್ತಿಯನ್ನು ಗಮನಿಸಿ ಪ್ರೋತ್ಸಾಹ ನೀಡಬೇಕು. ಹಣ ತರುವ ಕೆಲಸವನ್ನೇ ಮಾಡಬೇಕು ಎಂಬ ದುರಾಸೆ ಬಿಡಿ ಎಂದು ನೀತಿ ಪಾಠ ಹೇಳಿದರು.ದೇಶದಲ್ಲಿ ಈಚೆಗೆ ನಡೆದ ಸಮೀಕ್ಷೆಯೊಂದರಲ್ಲಿ 4, 6 ಮತ್ತು 8ನೇ ತರಗತಿಯ 23 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಶೇ 30 ರಷ್ಟು ಮಂದಿ `ಧರ್ಮ ರಕ್ಷಣೆಗೆ ಹಿಂಸೆ ಮಾಡಲು ಸಿದ್ಧ~ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 43 ರಷ್ಟು ಮಕ್ಕಳು `ಮಹಿಳೆಗೆ ಶಿಕ್ಷಣ ನೀಡುವುದು ವ್ಯರ್ಥ, ಅಂಗವಿಕಲರು ದೇಶಕ್ಕೆ ಹೊರೆ~ ಎಂದು ಹೇಳಿದ್ದಾರೆ. ಅವರ ಈ ಅಭಿಪ್ರಾಯಗಳು ಬಲಿತರೆ ದೇಶದ ಪರಿಸ್ಥಿತಿಯೇ ಬದಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಶಿಬಿರಕ್ಕೆ ಚಾಲನೆ ನೀಡಿದರು. ರಂಗಾಯಣದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹಾಜರಿದ್ದರು. ಬಿಳಿಕೆರೆ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.