ಶುಕ್ರವಾರ, ಜೂನ್ 18, 2021
23 °C

ರಂಗಿನ ಹಾಡುಗಳ ಗುಂಗಿನಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಳಿ ಬಂದಾಗಲೆಲ್ಲ ರಂಗುರಂಗಿನ ಹಾಡುಗಳನ್ನು ಗುನುಗುವುದು ಹೆಚ್ಚಾಗುತ್ತದೆ. ಗಲ್ಲಿಗಲ್ಲಿಗಳಲ್ಲೂ 80ರ ದಶಕದ ಸಿಲ್‌ಸಿಲಾ ಚಿತ್ರಗೀತೆ `ರಂಗ್ ಬರಸೆ ಭೀಗೆ ಚುನರ್‌ವಾಲಿ ರಂಗ್ ಬರಸೆ~ ಹಾಡು ಅನುರಣಿಸತೊಡಗುತ್ತದೆ. ಇಲ್ಲವೇ `ಹೋಲಿ ಆಯಿ ರೇ..~ ಹಾಡು ಕೇಳತೊಡಗುತ್ತದೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಶೋಲೆ ಚಿತ್ರದ `ಹೋಲಿ ಕೆ ದಿನ್ ದಿಲ್ ಖಿಲ್ ಜಾತೆ ಹೈ... ರಂಗೋಮೆ ರಂಗ್ ಮಿಲ್‌ಜಾತೆ ಹೈ~. ವಿವಿಧ ಭಾರತಿ ಇರಲಿ ಇನ್ನಾವುದೇ ರೇಡಿಯೋ ಸ್ಟೇಷನ್‌ಗಳಿರಲಿ ಈ ಹಾಡುಗಳಿಲ್ಲದೇ ಹೋಳಿ ಹಬ್ಬ ಅಪೂರ್ಣವೆಂಬಂತೆಯೇ ಆಗಿದೆ.

ಹಿಂದಿ ಚಲನಚಿತ್ರದಲ್ಲಿ ಒಂದು `ಮಸ್ತಿಭರಾ ಗೀತ್~ ಎಂಬಂತೆ ಚಿತ್ರೀಕರಿಸಬೇಕಿದ್ದರೆ ಅಲ್ಲೊಂದು ಹೋಳಿ ಹಬ್ಬದ ಆಚರಣೆ ಇರಲೇಬೇಕಿತ್ತು. ಸರಸ-ಸಲ್ಲಾಪ ಸಲಿಗೆಗೆ ಈ ಹಾಡು- ಹಬ್ಬ ಎರಡೂ ಮಾಧ್ಯಮವಾಗಿದ್ದವು. 90ರ ದಶಕದಲ್ಲಿ `ಡರ್~ ಚಿತ್ರದ `ಅಂಗ್ ಸೆ ಅಂಗ್ ಲಗಾನಾ, ಸಜನ್ ಹಮೆ ಐಸೆ ರಂಗ್ ಲಗಾನಾ..~ ಹಾಡು ಸಹ ಮೋಜು ಮತ್ತು ಮಸ್ತಿ ಎರಡನ್ನೂ ಬಿಂದಾಸ್ ಆಗಿ ಉಣಬಡಿಸಿತ್ತು.

ನಂತರ ಅಮಿತಾಬ್ ಬಚ್ಚನ್ ಮತ್ತದೇ ತುಂಟತನ ಹಾಗೂ ಲವಲವಿಕೆಯಿಂದ ಹಾಡಿ ಕುಣಿದಿದ್ದು ಬಾಗ್ಬನ್ ಚಿತ್ರದಲ್ಲಿ `ಹೋಲಿ ಖೇಲೆ ರಘುವೀರಾ~ ಹಾಡಿನಲ್ಲಿ. ಹಳೆಯ ಹಾಡುಗಳ ಸಾಲಿಗೆ ಈ ಎರಡೂ ಹಾಡುಗಳು ಕಾಯಂ ಸ್ಥಳವನ್ನು ಪಡೆದವು.

ಆದರೆ ಇತ್ತೀಚೆಗೆ `ಆ್ಯಕ್ಷನ್ ರಿಪ್ಲೆ~ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ಅಭಿನಯದ `ಛನ್‌ಕೆ ಮೊಹಲ್ಲಾ~ ಹಾಡು ಚಿತ್ರೀಕರಿಸಿದರೂ ಹೋಳಿಯ ಸಂಭ್ರಮದ ಬಣ್ಣ ಈ ಹಾಡಿಗೆ ದಕ್ಕಲಿಲ್ಲ.

ಹೋಳಿಹಬ್ಬದ ಸಂಭ್ರಮವನ್ನೇ 2005ರಲ್ಲಿ ಬಿಡುಗಡೆಯಾದ `ವಕ್ತ್~ ಚಿತ್ರದಲ್ಲಿ ಹಾಡಿಗೆ ತೆಗೆದುಕೊಳ್ಳಲಾಗಿತ್ತು. ಅನುಮಲಿಕ್ ಸಮಕಾಲೀನ ಯುವಜನಾಂಗವನ್ನು ಗಮನದಲ್ಲಿರಿಸಿಕೊಂಡು `ಹಿಂಗ್ಲಿಷ್~ ಹಾಡನ್ನು ಹೆಣೆದಿದ್ದರು. `ಡು ಮಿ ಎ ಫೇವರ್, ಲೆಟ್ಸ್ ಪ್ಲೇ ಹೋಲಿ~ ಎಂದು ಹಾಡಿ ಕುಣಿಯುವಂತೆ ಮಾಡಿದ್ದರು.

ಹೋಲಿ ಸಂಭ್ರಮಾಚರಣೆಯಲ್ಲಿ ರಂಗಿನೋಕುಳಿ ಹಾಗೂ ಭಾಂಗ್ ಸೇವನೆ (ಹಾಲು, ಗಸಗಸೆ, ಕರಬೂಜಿನ ಬೀಜ, ಏಲಕ್ಕಿ, ಖೋವಾ, ಮುಂತಾದ ಹಣ್ಣುಗಳ ಮಿಶ್ರಣದ ಪೇಯ, ಮೊದಲೆಲ್ಲ ಅಫೀಮು ಸಹ ಸೇರಿಸುತ್ತಿದ್ದರು) ಹಾಗೂ ಮಕ್ಕಳಿಗೆ ಸೇವಿಸಲು ನೀಡುವ ತಂಪು ಪಾನೀಯ `ಥಂಡಾಯ್~ ಗಮನ ಸೆಳೆಯುತ್ತದೆ. ಇವುಗಳೊಂದಿಗೆ ಢೋಲಕ್ ಒಂದಿದ್ದರೆ ಹಾಡಿನ ಬಂಡಿಯೇ ಅಲ್ಲಿ ತೇಲುತ್ತದೆ. ಬೀಡಾ ತಿನ್ನುತ್ತ ತುಟಿರಂಗಿನ ಲೇಪನವಾದಂತೆ ಹಾಡುವುದು ಸಾಮಾನ್ಯ. ಅದೇ ಕಾರಣಕ್ಕೆ ರಂಗ್ ಬರಸೆ ಚಿತ್ರದಲ್ಲಿ `ಲೊಂಗ್ ಔರ್ ಇಲಾಚಿ ಕಾ ಬೀಡಾ ಬನಾಯಾ... ಖಾಯೆ ಗೋರಿ ಕಾ ಯಾರ್ ಬಲಮ್ ತರಸೆ... ರಂಗ್ ಬರಸೆ~ ಎಂಬ ಸಾಲನ್ನು ಸೇರಿಸಲಾಗಿತ್ತು.

ಯುವಕ ಯುವತಿಯರ ನಡುವೆ ಸಲುಗೆ ಹೆಚ್ಚಿಸುವ ಈ ಹಬ್ಬ, ಹಳೆಯ ಕಾಲದಲ್ಲಿ ರೋಮ್ಯಾಂಟಿಸಂನ ಬಲು ಮುಖ್ಯ ಸೂತ್ರವಾಗಿತ್ತು. ಸಹನಟಿಯನ್ನು ತಬ್ಬಿ ಹಿಡಿಯಲು, ನರ್ತಿಸಲು ಈ ಹಾಡು ಮುಖ್ಯವಾಗಿರುತ್ತಿತ್ತು. ಆದರೆ ಈಗ ಹಾಗಲ್ಲವಲ್ಲ!

ಈಗ ಏನಿದ್ದರೂ `ಪ್ರಿಟ್ಟಿ ವುಮನ್~ ಹಾಗೂ `ಲೆಟ್ಸ್ ಗೋ ಪಾರ್ಟಿ ಟು ನೈಟ್~ ಎಂದು ಹಾಡಿ ಕುಪ್ಪಳಿಸುವ ದಿನಗಳು.

ಇದೇ ಕಾರಣದಿಂದಲೇ ಹಿಂದಿ ಚಿತ್ರರಂಗದಿಂದ ಹೋಳಿ ಸಂಭ್ರಮಾಚರಣೆ ನೇಪಥ್ಯಕ್ಕೆ ಸರಿದಿದೆ ಎಂದು ನಿರ್ದೇಶಕಿ ತನುಜಾ ಚಂದ್ರ ಅಭಿಪ್ರಾಯ ಪಡುತ್ತಾರೆ. ಆದರೆ ಬಾಲಿವುಡ್‌ನ ಚಲನೆಯನ್ನು ಗಮನಿಸಿದರೆ ಮತ್ತೊಮ್ಮೆ ಹೋಳಿ ಹಾಡಿನ ಸಂಭ್ರಮ ಮರುಕಳಿಸಬಹುದು ಎಂಬ ಆಶಾವಾದವನ್ನು ನಿರ್ಮಾಪಕ ಗೋಲ್ಡಿ ಬೆಹಲ್ ವ್ಯಕ್ತ ಪಡಿಸುತ್ತಾರೆ. 

ಆದರೆ 30 ವರ್ಷಗಳ ನಂತರವೂ `ರಂಗ್ ಬರಸೆ~ ಹಾಡು, ತನ್ನ ಬಣ್ಣವನ್ನು ಗಾಢವಾಗಿಯೇ ಜನಜೀವನದಲ್ಲಿ ಉಳಿಸಿದೆ. ಈ ಹಾಡಿಲ್ಲದೇ ಹೋಳಿ ಹಬ್ಬದ ಸಂಭ್ರಮಾಚರಣೆ ಎನ್ನುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.