ಮಂಗಳವಾರ, ಏಪ್ರಿಲ್ 13, 2021
24 °C

ರಕ್ಷಣೆಗೆ ಶಾಸನಗಳ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು ತಾಲ್ಲೂಕಿನ ಹಲವೆಡೆ ಬಂಡೆಗಳ ಮೇಲೆ ಕೊರೆಯಲಾಗಿರುವ ಕನ್ನಡ ಶಾಸನಗಳು ರಕ್ಷಣೆಯಿಲ್ಲದೆ ಮಂಕಾಗುತ್ತಿವೆ. ಮಳೆ, ಗಾಳಿಗೆ ಮೈಯೊಡ್ಡಿದ ಬಂಡೆಗಳ ಮೇಲಿನ ಶಾಸನಗಳ ಅಕ್ಷರಗಳು ಕಾಲಗತಿಯಲ್ಲಿ ಮಂಕಾಗುತ್ತಿವೆ. ಜನವಸತಿ ಇರುವ ಪ್ರದೇಶಗಳಲ್ಲಿ ಶಾಸನಗಳಿರುವ ಬಂಡೆಗಳನ್ನು ಒಕ್ಕಣೆ ತಾಣಗಳಾಗಿ ಬಳಸಲಾಗುತ್ತಿದೆ.ಶ್ರೀನಿವಾಸಪುರ ತಾಲ್ಲೂಕು ರಾಜಗುಂಡ್ಲಹಳ್ಳಿ ಬೃಹತ್ ಕೆರೆ ನಿರ್ಮಾಣ ಕುರಿತು ರಚನೆಯಾಗಿರುವ ಕದರೀಪುರ ಗ್ರಾಮದ ದೇಗುಲ ಬದಿಯ ಬಂಡೆಯ ಮೇಲೆ ಶಾಸನವನ್ನು ಕೆತ್ತಲಾಗಿದೆ. ಆದರೆ ಅದೇ ಬಂಡೆಯ ಮೇಲೆ ಹುಲ್ಲಿನ ರಾಶಿ ಕಂಡು ಬರುತ್ತದೆ. ಅಲ್ಲೊಂದು ಮಹತ್ವದ ಶಾಸನ ಇದೆ ಎಂಬ ಅರಿವು ಯಾರಿಗೂ ಸುಲಭಕ್ಕೆ ಬರುವುದಿಲ್ಲ.ರಾಜಗುಂಡ್ಲಹಳ್ಳಿ ಕೆರೆಯ ಬಳಿ ಸಿಕ್ಕಿರುವ ಕನ್ನಡ ಶಿಲಾಶಾಸನ ಹಾಗೂ ಕದರೀಪುರ ಗ್ರಾಮದ ಶಿಲಾಶಾಸನ ಒಂದೇ ಆಗಿದೆ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೋ.ಕೆ.ಆರ್.ನರಸಿಂಹನ್. ಕದರೀಪುರದ ಬಂಡೆಯ ಮೇಲಿನ ಶಾಸನ ನಿರ್ಲಕ್ಷಕ್ಕೊಳಗಾಗಿದೆ. ರಾಗಿ, ಭತ್ತದ ಒಕ್ಕಣೆ ಶಾಸನದ ಮೇಲೆ ನಡೆಯುತ್ತಿದೆ.ಕುರುಡುಮಲೆ ಗ್ರಾಮದ ವಿನಾಯಕನ ದೇವಾಲಯದ ಸುತ್ತಲು ಇರುವ ಶಿಲಾ ಶಾಸನದ ಪ್ರತಿರೂಪದ ಶಾಸನ ಸಹ ಕುರುಡುಮಲೆ ಗ್ರಾಮದಿಂದ ಮೂರು ಕಿ.ಮೀ.ದೂರದಲ್ಲಿರುವ ಸಿದ್ಧಘಟ್ಟ ಗ್ರಾಮದ ಹೊರವಲಯದಲ್ಲಿ ಲಭ್ಯವಿದೆ. ಇವೆಲ್ಲವೂ ಸಹಾ ದೇವಾಲಯಕ್ಕೆ ನೀಡಿರುವ ಜಮೀನು, ಅನ್ನದಾನಕ್ಕೆ ಅಗತ್ಯವಾದ ಮಾಹಿತಿಗಳನ್ನೊಳಗೊಂಡಿರುವುದು ವಿಶೇಷ. ಇಂತಹ ಕನ್ನಡ ಶಿಲಾಶಾಸನಗಳು ಇಂದು ನಿರ್ಲಕ್ಷಕ್ಕೊಳಗಾಗಿವೆ. ಪಟ್ಟಣದ ಆಂಜನಾದ್ರಿ ತಪ್ಪಲಿನಲ್ಲಿ ಬಂಡೆಯನ್ನು ಒಳಗೊಂಡಂತೆ ನಾಂಚಾತಮ್ಮ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಬೃಹತ್ ಬಂಡೆಯ ಕಲ್ಲಿನ ಮೇಲೆ ಅಪರೂಪದ ಕನ್ನಡ ಭಾಷೆಯ ಸುಂದರವಾದ ಶಿಲಾಶಾಸನವಿದೆ.  ಕ್ರಿ.ಶ. 1416ನೇ ಇಸವಿಯ ಕನ್ನಡ ಭಾಷೆಯ ಪ್ರಾಚೀನತೆ ಬಗ್ಗೆ ಈ ಶಾಸನ ಬೆಳಕು ಚೆಲ್ಲುತ್ತದೆ.

ಈ ಶಾಸನದಲ್ಲಿ ಮಹಾರಾಜಾಧಿರಾಜ ರಾಜಪರಮೇಶ್ವರರು ಮತ್ತು ಮಹಾಪ್ರತಾಪ ದೇವರಾಯರು ಮುಳಬಾಗಲು ನಾಗಣ್ಣದಣ್ಣಾಯವಕರಿಗೆ ಸೇವೆ ಸಲ್ಲಿಸಲು ಅನ್ನದಾನದಂತ ಪುಣ್ಯ ಕಾರ್ಯ ಗಳನ್ನು ಮಾಡಲು  ಸುತ್ತಮುತ್ತಲ  ಜಮೀನು ನೀಡಿರುವ ಬಗ್ಗೆ  ಮಾಹಿತಿ ಇದೆ. ಶಾಸನ ಮುಖ್ಯವಾಗಿ ಶ್ರೀವತ್ಸಗೋತ್ರದ ಬಗ್ಗೆ ಪ್ರಸ್ತಾಪಿಸಲಾಗಿದೆ. ಜೋಳದ ಹೊಲ ಅರಳಿಮರ ಹಾಗೂ ಹುಣಸೆ ಮರ ದಾನನೀಡಿರುವ ಬಗ್ಗೆ ವಿವರಿಸಲಾಗಿದೆ. ಈ ಶಾಸನ 14ನೇ ಶತಮಾನದ ಶಿಲಾಶಾಸನ ಕನ್ನಡ ಭಾಷೆಯ ಅಭಿವೃದ್ಧಿ ಬಗೆಗೂ ಗಮನ ಸೆಳೆದಿದೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.