ಶನಿವಾರ, ಜುಲೈ 31, 2021
28 °C

ರಫ್ತು ವಹಿವಾಟು: ದಾಖಲೆ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ  (ಪಿಟಿಐ): ಮಾರ್ಚ್ 31ಕ್ಕೆ ಕೊನೆಗೊಂಡ  2010-11ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ರಫ್ತು ವಹಿವಾಟು ಶೇ 37.55ರಷ್ಟು ಪ್ರಗತಿ ಕಂಡಿದ್ದು, ದಾಖಲೆ ಮಟ್ಟ 245.86 ಶತಕೋಟಿ ಡಾಲರ್ ತಲುಪಿದೆ.ಈ ಅವಧಿಯಲ್ಲಿ    200 ಶತಕೋಟಿ ಡಾಲರ್ ರಫ್ತು ವಹಿವಾಟಿನ ಗುರಿಯನ್ನು ಸರ್ಕಾರ ಹೊಂದಿತ್ತು. ಈ ಗುರಿಯನ್ನು ದಾಟಿ ದಾಖಲೆಯ ರಫ್ತು ವಹಿವಾಟು ನಡೆದಿದೆ.ಸಾಂಪ್ರದಾಯಿಕ  ಪಾಶ್ಚಾತ್ಯ  ಮಾರುಕಟ್ಟೆ ಮಾತ್ರವಲ್ಲ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಿಂದಲೂ ಭಾರತೀಯ ಸರಕುಗಳಿಗೆ ಈ ಅವಧಿಯಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.  ರಫ್ತು ದಾಖಲೆಯ ಪ್ರಗತಿ ಕಂಡಿದ್ದರೂ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ  ವ್ಯಾಪಾರ ಕೊರತೆ 104.82 ಶತಕೋಟಿ ಡಾಲರ್‌ಗಳಷ್ಟಾಗಿದೆ. ಆದರೆ ಕಳೆದ ವರ್ಷದ 109.6 ಶತಕೋಟಿ ಡಾಲರ್‌ಗಳಿಗೆ ಹೋಲಿಸಿದರೆ ವ್ಯಾಪಾರದ ಕೊರತೆ  ಇಳಿಕೆ ಕಂಡಿದೆ.   ಕಳೆದ ಮಾರ್ಚ್ ತಿಂಗಳಲ್ಲಿ ರಫ್ತು ವಹಿವಾಟು ಶೇ 43.5ರಷ್ಟು ಪ್ರಗತಿ ಕಂಡಿದ್ದು, 29.1 ಶತಕೋಟಿ ಡಾಲರ್‌ಗಳಷ್ಟಾಗಿದೆ, ಇದು ಗರಿಷ್ಠ ತಿಂಗಳ ಪ್ರಗತಿ. ಇದೇ ಅವಧಿಯಲ್ಲಿ 5.6 ಶತಕೋಟಿ ಡಾಲರ್ ವ್ಯಾಪಾರದ ಕೊರತೆ ದಾಖಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಸೋಮವಾರ ಇಲ್ಲಿ ಬಿಡುಗಡೆ ಮಾಡಿರುವ ಅಂಕಿಅಂಶಗಳು ತಿಳಿಸಿವೆ.ಮಾರ್ಚ್ ತಿಂಗಳಲ್ಲಿ ದೇಶದ ಆಮದು ವಹಿವಾಟು 34.7 ಶತಕೋಟಿ ಡಾಲರ್‌ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 17.27ರಷ್ಟು ಪ್ರಗತಿ ದಾಖಲಿಸಿದೆ.  2010-11ನೇ ಸಾಲಿನಲ್ಲಿ ದೇಶದ ಒಟ್ಟು ಆಮದು ವಹಿವಾಟು 350.3 ಶತಕೋಟಿ ಡಾಲರ್‌ಗಳಷ್ಟಾಗಿದೆ.2014ರ ವೇಳೆಗೆ ದೇಶದ ಒಟ್ಟು ರಫ್ತು ವಹಿವಾಟಿನಲ್ಲಿ ದ್ವಿಗುಣ ಪ್ರಗತಿಯನ್ನು ಸರ್ಕಾರ ನಿರೀಕ್ಷಿಸುತ್ತಿದ್ದು, 450 ಶತಕೋಟಿ ಡಾಲರ್ ಗುರಿಯನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ  ಯೋಜನೆ ರೂಪುರೇಷೆಗಳನ್ನು ಈ ವಾರ ಸಿದ್ದಪಡಿಸಲಿದೆ.ಕಚ್ಚಾತೈಲ ಆಮದಿಗೆ ಹೆಚ್ಚಿನ ಹಣ ವ್ಯಯವಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ ತೈಲಕ್ಕಾಗಿ 9.43 ಶತಕೋಟಿ ಡಾಲರ್ ವ್ಯಯಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ ತೈಲಕ್ಕಾಗಿ ಒಟ್ಟು 101.6 ಶತಕೋಟಿ ಡಾಲರ್ ಖರ್ಚಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಇದು ಶೇ 16.7ರಷ್ಟು ಹೆಚ್ಚಿದೆ.2010-11ನೇ ಸಾಲಿನಲ್ಲಿ ಎಂಜಿನೀಯರಿಂಗ್ ಸರಕುಗಳ ರಫ್ತಿನಲ್ಲಿ ಶೇ 84.76ರಷ್ಟು ಪ್ರಗತಿ ಕಂಡುಬಂದಿದ್ದು ಈ ಕ್ಷೇತ್ರ 60 ಶತಕೋಟಿ ಡಾಲರ್ ವಹಿವಾಟು ದಾಖಲಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ 60ರಷ್ಟು ಹೆಚ್ಚಿದ್ದು, 42.45 ಶತಕೋಟಿ ಡಾಲರ್‌ಗಳಷ್ಟಾಗಿದೆ.

 

ಚಿನ್ನಾಭರಣಗಳ ರಫ್ತು 33.54 ಶತಕೋಟಿ ಡಾಲರ್‌ಗಳಿಗೆ ಏರಿದ್ದು, ಶೇ 15.34ರಷ್ಟು ಏರಿಕೆ ಪ್ರದರ್ಶಿಸಿದೆ. ಔಷಧ ಉದ್ಯಮದ ವಹಿವಾಟು 10.32 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಿದೆ. ಸಿದ್ಧ ಉಡುಪುಗಳು 11 ಶತಕೋಟಿ ಡಾಲರ್ ವಹಿವಾಟು ದಾಖಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.