ಶುಕ್ರವಾರ, ಏಪ್ರಿಲ್ 23, 2021
22 °C

ರಸೆಲ್ ಮಾರ್ಕೆಟ್‌ನ ಖರ್ಜೂರದಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖರ್ಜೂರ, ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತೆ ಅಲ್ವಾ? ತಿನ್ನಲು ರುಚಿಕರವಾದ ಖರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಆದರೆ ನಮ್ಮಲ್ಲಿ ಸಿಗುವ ಖರ್ಜೂರದ ಬಗೆಗಳು ಕಡಿಮೆ. ತರಹೇವಾರಿ ಖರ್ಜೂರ ತಿನ್ನುವ ಆಸೆ ಇದ್ದವರು ರಸೆಲ್ ಮಾರ್ಕೆಟ್‌ನಲ್ಲಿರುವ `ಡೆಲಿಷಿಯಸ್~ ಮಳಿಗೆಗೆ ಒಮ್ಮೆ ಭೇಟಿ ನೀಡಬೇಕು.

 

ಅಂದಹಾಗೆ, ಇಲ್ಲಿ ಸಿಕ್ಕುವ ಬಗೆಬಗೆಯ ಖರ್ಜೂರಗಳು ಬೆಂಗಳೂರಲ್ಲಷ್ಟೇ ಅಲ್ಲ, ಇಡೀ ರಾಜ್ಯದಾದ್ಯಂತ ಎಲ್ಲೂ ಸಿಗುವುದಿಲ್ಲವಂತೆ. ಈ ಮಳಿಗೆಯನ್ನು ಕೇವಲ ಖರ್ಜೂರ ಮಾರಾಟಕ್ಕೆಂದೇ ವಿಶೇಷವಾಗಿ ಮೀಸಲಿಡಲಾಗಿದೆ.ಇಲ್ಲಿ ಒಂದಲ್ಲ, ಎರಡಲ್ಲ. ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 67 ಬಗೆಯ ಖರ್ಜೂರಗಳು ದೊರಕುತ್ತವೆ. ಸೌದಿ ಅರೇಬಿಯಾ, ಜೋರ್ಡಾನ್, ಇರಾನ್, ಟರ್ಕಿ ಹೀಗೆ ಮಧ್ಯಪ್ರಾಚ್ಯ ದೇಶದ ಅನೇಕ ಬಗೆಯ ವಿಶಿಷ್ಟ ಸ್ವಾದದ ಖರ್ಜೂರಗಳು ಇಲ್ಲಿ ಲಭ್ಯ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರು, ಶಾಸಕರು, ಸಿನಿಮಾ ನಟ-ನಟಿಯರ ಮನೆಗೆಲ್ಲಾ ಖರ್ಜೂರ ಇಲ್ಲಿಂದಲೇ ಹೋಗುತ್ತವೆಯಂತೆ.ವಿಶ್ವದಲ್ಲೇ ಅತ್ಯಂತ ಉತ್ಕೃಷ್ಟ ಖರ್ಜೂರ ಅಂತ ಅನಿಸಿಕೊಂಡಿರುವ ಅಜ್ವಾ ಇಲ್ಲಿನ ವಿಶೇಷ. ಮದೀನಾ ಮನೋಹರದಿಂದ ಬರುವ ಅಜ್ವಾ ಖರ್ಜೂರ ಆಲ್ಮಂಡ್ ಹಾಗೂ ವೈಟ್‌ಹನಿ ಸ್ವಾದ ಹೊಂದಿರುತ್ತದೆ. ಇದರ ಬೆಲೆ ಕಿಲೋಗೆ ರೂ.4,100. ಜೋರ್ಡಾನ್‌ನಿಂದ ಆಮದಾಗಿರುವ ಮೆಡ್ಜೋಲ್ ಕಿಂಗ್ ಖರ್ಜೂರದ ಸವಿ ಸವಿದೇ ತಿಳಿಯಬೇಕು. ಇದರಲ್ಲಿ ಭರಪೂರ ಹಾಲಿನಂಶ ಇದ್ದು ಮುಟ್ಟಿದರೆ ಅತ್ಯಂತ ಮೃದು ಅನುಭವ ನೀಡುತ್ತದೆ.ಮುಖ್ಯಮಂತ್ರಿ ಶೆಟ್ಟರ್‌ಗೆ ಇದು ಅತ್ಯಂತ ಪ್ರಿಯವಾದದ್ದಂತೆ. ಕಿಂಗ್ ಬೆಲೆ ಕಿಲೋಗೆ ರೂ.1,600. ಜೋರ್ಡಾನ್‌ನಿಂದಲೇ ಬಂದಿರುವ ಮತ್ತೊಂದು ಖರ್ಜೂರ ತುಮಿಷಾ.ಚಾಕೋಲೆಟ್ ಸ್ವಾದದಲ್ಲಿರುತ್ತದೆ. ಇದರ ಬೆಲೆ ಕಿಲೋಗೆ ರೂ.850. ರಕ್ತಹೀನತೆಯಿಂದ ಬಳಲುತ್ತಿರುವವರಿಗಾಗಿ ಸಫವಿ ಖರ್ಜೂರ ಕೂಡ ಇಲ್ಲಿದೆ. ಇದನ್ನು ತಿಂದರೆ ದೇಹದಲ್ಲಿ ರಕ್ತ ಹೆಚ್ಚುತ್ತದಂತೆ. ಇದರ ಬೆಲೆ ಕಿಲೋಗೆ ರೂ.820. ಇನ್ನುಳಿದಂತೆ ಅಲ್‌ಮರಿನಾ ಅಜ್ವಾ, ಇಕ್ವಾಲ್ಸ್, ಮುಸಪತ್ತಿ ಇಲ್ಲಿ ಸಿಗುವ ಜನಪ್ರಿಯ ಖರ್ಜೂರಗಳು. ಈ ಮಳಿಗೆಯಲ್ಲಿ ಕಿಲೋಗೆ ರೂ.80ರಿಂದ 4,100ರೂ ವರೆಗಿನ ಖರ್ಜೂರಗಳು ಸಿಗುತ್ತವೆ.

`ಖರ್ಜೂರದಲ್ಲಿ ಅನೇಕ ಔಷಧೀಯ ಗುಣಗಳು ಇವೆ. ಗರ್ಭಿಣಿಯರಿಗೆ, ಕೀಲು ನೋವು, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರ ದಿವ್ಯೌಷಧ. ದೇಹಕ್ಕೆ ಕಸುವು ತುಂಬುವ ಖರ್ಜೂರ ನಿಸರ್ಗ ನೀಡಿದ ಸಹಜ ತಿನಿಸು. ಸೆಕ್ಸ್‌ನಲ್ಲಿ ವಿಜೃಂಭಿಸಲು ಇದು ಸಹಕಾರಿ.ಎಲ್ಲರಿಗೂ ಪ್ರಿಯವಾದ ಖರ್ಜೂರದಲ್ಲಿ ಸಾಕಷ್ಟು ಪೌಷ್ಠಿಕಾಂಶ ಕೂಡ ಇದೆ. ನಮ್ಮಲ್ಲಿ ಕ್ಯಾಲಿಫೋರ್ನಿಯಾದಿಂದ ಆಮದಾದ ಒಂದು ವಿಶೇಷ ಬಗೆಯ ಖರ್ಜೂರ ಇದೆ. ಫ್ರುನ್ಸ್ ಹೆಸರಿನ ಈ ಖರ್ಜೂರ ತಿಂದರೇ ಬ್ಲಡ್ ಪ್ಲೇಟ್‌ಲೆಟ್ಸ್ ಹೆಚ್ಚುತ್ತದೆ. ಹಾಸಿಗೆ ಹಿಡಿದ ರೋಗಿಗಳು ಇದನ್ನು ತಿಂದು ಎದ್ದು ಓಡಾಡಬಹುದು~ ಎನ್ನುವ ಭರವಸೆ ಅಂಗಡಿ ಮಾಲೀಕ ಮೊಹಮ್ಮದ್ ಇದ್ರಾಸ್ ಚೌಧರಿ.`ರಂಜಾನ್ ಉಪವಾಸ ನಡೆಯುತ್ತಿದೆ. ವ್ಯಾಪಾರ ಕೂಡ ಜೋರಾಗಿಯೇ ಇದೆ. ಆದರೆ ನಮ್ಮ ಅಂಗಡಿಗೆ ಮುಸ್ಲಿಂ ಸಮುದಾಯವರಿಗಿಂತ ಹೆಚ್ಚಾಗಿ ಹಿಂದೂ ಮತ್ತು ಕ್ರಿಶ್ಚಿಯನ್ನರು ಬಹು ದೊಡ್ಡ ಗ್ರಾಹಕರು. ಇನ್ನೂ ಈ ಖರ್ಜೂರಗಳನ್ನು ಆರು ತಿಂಗಳವರೆಗೆ ಬಳಸಬಹುದು. ಖರ್ಜೂರದ ಜತೆಗೆ ನಮ್ಮಲ್ಲಿ ಎಲ್ಲ ಬಗೆಯ ಡ್ರೈ ಪ್ರೂಟ್ಸ್, ಪಿಸ್ತಾ, ಬಾದಾಮಿ, ಗೋಡಂಬಿ, ದ್ರಾಕ್ಷಿ ಕೂಡ ಸಿಗುತ್ತವೆ~ ಎನ್ನುತ್ತಾರೆ ಚಾಧರಿ.ಸ್ಥಳೀಯವಾಗಿ ಸಿಗುವ ರಾಜಸ್ತಾನದ ಸುಕ್ಕಾ ಕಜೂರ್ ಮತ್ತು ಲಾಲ್ ಕಜೂರ್ ತಿಂದು ಬೇಸತ್ತವರು ಒಮ್ಮೆ ಇತ್ತ ಕಣ್ಣು ಹಾಯಿಸಬಹುದು. ಮಾಹಿತಿಗೆ: 2559 6786.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.