ಸೋಮವಾರ, ಮೇ 23, 2022
25 °C

ರಸ್ತೆ ತುಂಬ ದೂಳು; ಪಾದಚಾರಿಗಳ ಗೋಳು...

ಪ್ರಜಾವಾಣಿ ವಾರ್ತೆ/ ಎಸ್.ಶರತ್ ಕುಮಾರ್ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಸ್ತೆ ತುಂಬಾ ಗುಂಡಿಗಳು, ಮಳೆ ಬಂದರೆ ರಸ್ತೆಯಲ್ಲೇ ಹರಿಯುವ ನೀರು. ಬೇಸಿಗೆ ಬಂದರೆ ರಸ್ತೆ ತುಂಬೆಲ್ಲಾ ದೂಳು. ಸರಿಯಾದ ಫುಟ್‌ಪಾತ್ ಇಲ್ಲ...

- ಇದು ದಾವಣಗೆರೆಯ ಪಿ.ಬಿ. ರಸ್ತೆಯ ಒಂದು ಪರಿಚಯ.ರಸ್ತೆ ವಿಸ್ತರಣೆ ಮಾಡಿ, ಉನ್ನತ ದರ್ಜೆಗೆ ಏರಿಸದ ಹೊರತು ದೂಳಿನಿಂದ ಮುಕ್ತಿ ಸಿಗುವುದಿಲ್ಲ. ದಾವಣಗೆರೆಯನ್ನು ಎರಡನೇ ರಾಜಧಾನಿ ಮಾಡಬೇಕೆಂದು ನಿರಂತರ ಹೋರಾಟ ನಡೆಯುತ್ತಿದೆ. ಆದರೆ, ಇಲ್ಲಿ ಸರಿಯಾದ ರಸ್ತೆಗಳಿಲ್ಲ. ಫುಟ್‌ಪಾತ್ ಇಲ್ಲ. ದೂಳಿನ ಸಮಸ್ಯೆ ಹಿನ್ನೆಲೆಯಲ್ಲಿ ತರಿಸಲಾದ ದೂಳು ತೆಗೆಯುವ ಯಂತ್ರವೇ ಕೆಲವು ಸಮಯದಿಂದ ದೂಳು ಹಿಡಿದುಕೊಂಡು ಮೂಲೆಗುಂಪಾಗಿದೆ!ಪಿ.ಬಿ. ರಸ್ತೆ ದಾವಣಗೆರೆಯ ಮುಖ್ಯರಸ್ತೆ. ಹರಿಹರ-ದಾವಣಗೆರೆ ಸಂಪರ್ಕಿಸುವ ರಸ್ತೆ. ಪ್ರಮುಖ ವಾಣಿಜ್ಯ ಮಳಿಗೆಗಳು, ಸರ್ಕಾರಿ ಕಚೇರಿಗಳು, ಚಿತ್ರಮಂದಿರಗಳು, ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಇರುವುದು ಇಲ್ಲಿಯೇ. ನಗರದಲ್ಲಿ ದಿನಕಳೆದಂತೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಸೂಕ್ತವಾದ ರಸ್ತೆ ಇಲ್ಲ. ಇದ್ದರೂ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟ. ಸರಿಯಾದ ನಿರ್ವಹಣೆ ಇಲ್ಲದಿರುವುದಿಂದ ರಸ್ತೆ ಯಾವಾಗಲೂ ದೂಳಿನಿಂದ ಕೂಡಿರುತ್ತದೆ. ಮಳೆ ಬಂದರೆ ರಸ್ತೆಯಲ್ಲಿ ನೀರು ತುಂಬಿ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಇದರಿಂದ ಅಪಘಾತ ಪ್ರಮಾಣವು ಹೆಚ್ಚುವ ಸಂಭವ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಶೇಷಣ್ಣ.ರಸ್ತೆ ವಿಸ್ತರಣೆ ಕೇವಲ ಗಿಮಿಕ್:  ರಸ್ತೆ ವಿಸ್ತರಣೆ ಮಾಡುತ್ತೇವೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ನೆಪ ಮಾತ್ರಕ್ಕೆ ಸಭೆ ನಡೆಸಿದ್ದಾರೆ. ಆದರೆ, ರಸ್ತೆ ವಿಸ್ತರಣೆಗೆ ಬೇಕಾದ ಯಾವುದೇ ಮಾರ್ಗಸೂಚಿ ಸಿದ್ಧಪಡಿಸಿಲ್ಲ. ರಸ್ತೆ ವಿಸ್ತರಣೆ ಸಭೆ ಕೇವಲ ಗಿಮಿಕ್ ಎನ್ನುತ್ತಾರೆ ಹೆಸರು ಹೇಳಬಯಸದ ಪಾಲಿಕೆ ಅಧಿಕಾರಿಯೊಬ್ಬರು.ಬೇಸಿಗೆಯಲ್ಲಿ ದೂಳಿನ ಪ್ರಮಾಣ 100 ಪಟ್ಟು ಹೆಚ್ಚು: ರಸ್ತೆಯ ಸರಿಯಾದ ನಿರ್ವಹಣೆ ಇಲ್ಲದೇ ದೂಳಿನ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಪಾಲಿಕೆ ಗಮನಕ್ಕೆ ತರಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಸಿಗೆ ಸಮಯದಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಗಾಳಿಯ ಗುಣಮಟ್ಟ 100 ಆಂಬಿಯಂಟ್ (ವಾತಾವರಣದಲ್ಲಿನ ಗಾಳಿಯ ಗುಣಮಟ್ಟ) ಇರಬೇಕು. ಆದರೆ, ಕಳೆದ ತಿಂಗಳಲ್ಲಿ ಇದರ ಪ್ರಮಾಣ 200 ಆಂಬಿಯಂಟ್‌ವರೆಗೂ ತಲುಪಿರುವುದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ದಾಖಲಾಗಿದೆ. ಈ ಗಾಳಿ ಮನುಷ್ಯನ ಆರೋಗ್ಯಕ್ಕೆ ಹಾನಿಕರ.ಪ್ರತಿ ವಾರ ಮೋತಿ ಚಿತ್ರಮಂದಿರ ಬಳಿ ದೂಳಿನ ಪ್ರಮಾಣ ಅಳೆಯಲಾಗುತ್ತಿದೆ. ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆ ವಿಸ್ತರಣೆ ಮಾಡಬೇಕು. ಫುಟ್‌ಪಾತ್ ನಿರ್ಮಾಣ ಮಾಡಬೇಕು. ದೂಳಿನ ಪ್ರಮಾಣ ಹೆಚ್ಚಾದಂತೆ ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ಬಗ್ಗೆ ಪಾಲಿಕೆ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜಿಲ್ಲಾ ಉಪ ಪರಿಸರ ಅಧಿಕಾರಿ ಮಹೇಶ್ವರಪ್ಪ.ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ:  ನಗರದ ಪಿ.ಬಿ. ರಸ್ತೆ ವಿಸ್ತರಣೆ ಸಲುವಾಗಿ ಈಗಾಗಲೇ 30 ಕೋಟಿ ಕ್ರಿಯಾಯೋಜನೆ ರಚಿಸಲಾಗಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೂ ಅನುದಾನ ಬಂದಿಲ್ಲ. ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ ಅವರು ಬಂದಿದ್ದಾಗ, ಮನವಿ ಸಲ್ಲಿಸಲಾಗಿತ್ತು ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಲ್ಲಿಕಾರ್ಜುನಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.