ಮಂಗಳವಾರ, ಮೇ 24, 2022
26 °C

ರಾಜಕಾರಣವೂ ಬಾಲ ಲೀಲೆಯೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ: ಅಧಿನಾಯಕುಡು (ತೆಲುಗು)

ನಿರ್ಮಾಪಕ: ಎಂ.ಎಲ್. ಕುಮಾರ್ ಚೌಧರಿ

ನಿರ್ದೇಶನ: ಪರಚೂರಿ ಮುರಳಿ

ತಾರಾಗಣ: ನಂದಮೂರಿ ಬಾಲಕೃಷ್ಣ, ಲಕ್ಷ್ಮಿ ರೈ, ಸಲೋನಿ, ಜಯಸುಧಾ, ಬ್ರಹ್ಮಾನಂದಂ, ಪ್ರದೀಪ್ ರಾವತ್, ಕೋಟ ಶ್ರೀನಿವಾಸರಾವ್ ಮತ್ತಿತರರು.

ಲೀಲೆ ತೋರಲು ನಾಯಕ ತ್ರಿಪಾತ್ರಧಾರಿಯಾಗಿದ್ದಾನೆ. ರಕ್ತ ಹರಿಸಲು ರಾಯಲಸೀಮೆ ಇದೆ. ಹೃದಯ ಮೆದುಗೊಳಿಸಲು ಭಾವುಕತೆಯಿದೆ. ನಗುವಿನಲ್ಲಿ ಮೀಯಲು ಹಾಸ್ಯದ ಹೊಳೆಯಿದೆ. ಎಲ್ಲಕ್ಕೂ ಮಿಗಿಲಾಗಿ `ಎದುರಾಳಿ~ಗಳನ್ನು ತಿವಿಯುವಂತಹ ಮಾತುಗಳಿವೆ. ಹೀಗಾಗಿ ಕತೆಯಲ್ಲಿ ಹೊಸತನವಿಲ್ಲದಿದ್ದರೂ `ಅಧಿನಾಯಕುಡು~ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾನೆ. ಆ ಮೂಲಕ ಚಿತ್ರಮಂದಿರದಲ್ಲಿ ಕುಳಿತವರನ್ನಷ್ಟೇ ಅಲ್ಲ, ಆಂಧ್ರಪ್ರದೇಶದ ಚುನಾವಣಾ ರಾಜಕೀಯವನ್ನೂ ಪ್ರಭಾವಿಸುತ್ತಿರುವಂತೆ ಅನುಮಾನ ಹುಟ್ಟಿಸುತ್ತಾನೆ!ಹಗೆಯ ಕತೆ ಹೇಳಲು, ದುರ್ಜನರ ಎದುರು ಸಜ್ಜನರಿಗೇ ಗೆಲುವೆಂದು ತೋರಿಸಲು, ನಾಯಕನ ಪೌರುಷವನ್ನು ಎತ್ತಿ ಹಿಡಿಯಲು ತೆಲುಗು ಚಿತ್ರಲೋಕ ಬಹುತೇಕ ನೆಚ್ಚಿಕೊಂಡಿರುವುದು ರಾಯಲಸೀಮೆಯನ್ನು. ನಿಜ ಜೀವನದಲ್ಲಿ ರಾಯಲಸೀಮೆ ಹೊಂದಿದ ರಕ್ತಚರಿತ್ರೆಯನ್ನೂ ನಾಚಿಸುವಂತೆ ತೆಲುಗು ಚಿತ್ರಗಳಲ್ಲಿ ಅದರ ನೆತ್ತರ ದಾಹ ಬಿಂಬಿತ. ಅಂಥ ಸೀಮೆಗೆ ಹರಿಶ್ಚಂದ್ರಪ್ರಸಾದ್ ಎಂಬ ಜನಾನುರಾಗಿ ನೇತಾರ. ಕಬ್ಬಿಣದ ಅದಿರು ತೆಗೆಯಲು ಆತ ವಿದೇಶದಿಂದ ಹಣಕಾಸಿನ ನೆರವು ತರುತ್ತಾನೆ. ಅಕ್ರಮವಾಗಿ ಆ ನೆಲವನ್ನು ಆಳುತ್ತಿರುವ ದುಷ್ಟಶಕ್ತಿಗಳಿಗೆ ಅಡ್ಡಗಾಲಾಗುತ್ತಾನೆ. ಪರಿಣಾಮ ವೃದ್ಧ ಹರಿಶ್ಚಂದ್ರನ ಬಲಿ.ಆತನ ಮಗ ರಾಮಕೃಷ್ಣಪ್ರಸಾದ್ ಕೂಡ ಅಪ್ಪನ ಸನ್ನಡತೆಯ ಹಾದಿಯಲ್ಲಿ ಸಾಗಿದವನು. ಅಪ್ಪ ಬದುಕಿದ್ದಾಗ ನಡೆದ ಸಂಘರ್ಷವೊಂದರಲ್ಲಿ ರಾಮಕೃಷ್ಣನ ಮಗ ಬಾಬಿ ನಾಪತ್ತೆಯಾಗುತ್ತಾನೆ. ಇಪ್ಪತ್ತೈದು ವರ್ಷ ಕಳೆದ ಬಳಿಕ ಮಗ ಮನೆಗೆ ಹೆಜ್ಜೆಯಿಡುತ್ತಾನೆ.

 

ಆದರೆ ಹಿಂಡನಗಲಿದ `ಮರಿ~ಯನ್ನು ರಾಮಕೃಷ್ಣ ಒಪ್ಪಿಕೊಳ್ಳುತ್ತಿಲ್ಲ. ಆತ ಹಾಗೆ ಮಾಡಿದ್ದು ಏಕೆ? ಅಲ್ಲಿಂದ ರಾಯಲಸೀಮೆಯ ಭವಿಷ್ಯ ಎತ್ತ ಸಾಗುವುದು ಎಂಬುದು ಚಿತ್ರದ ಪೂರ್ಣ ಸಾರ.  ವೃದ್ಧ ಹರಿಶ್ಚಂದ್ರಪ್ರಸಾದ್ ಹಾಗೂ ಆತನ ಮಗ ರಾಮಕೃಷ್ಣಪ್ರಸಾದ್ ಪಾತ್ರಗಳಲ್ಲಿ ನಂದಮೂರಿ ಬಾಲಕೃಷ್ಣ ಮೋಡಿಯಿದೆ. ಇವೆರೆಡೂ ಚಿತ್ರದ ಬಲವಾದ ಪಾತ್ರಗಳು. ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್‌ಟಿಆರ್ ಅವರನ್ನು ನೆನಪಿಸುವಂತಹ ಹರಿಶ್ಚಂದ್ರಪ್ರಸಾದ್ ಮಾತು ಹಾಗೂ ಹಾವಭಾವಗಳಿಗೆ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಇದೆ. ಅಲ್ಲದೆ ಆಡಳಿತ ವ್ಯವಸ್ಥೆಗೆ ಸವಾಲೆಸೆಯುವಂಥ, ಸಮಕಾಲೀನ ವಿದ್ಯಮಾನಗಳನ್ನು ಒರೆಗೆ ಹಚ್ಚುವಂಥ ಸಂಭಾಷಣೆಗಳಿವೆ. ಪಕ್ಷ ರಾಜಕಾರಣದ ಸೋಂಕಿದ್ದರೂ ತಥಾಕಥಿತ ಕತೆಗೆ ಇಂಥ ಮಾತುಗಳ ಸರಣಿ ಹೊಸ ಆಯಾಮ ನೀಡಿದೆ. (ಚಿತ್ರದ ಮುಖಾಂತರ ಉಪಚುನಾವಣೆಯ ಲಾಭ ಪಡೆಯಲಾಗುತ್ತಿದೆ ಎಂದು ಆಂಧ್ರದ ಪ್ರಮುಖ ರಾಜಕೀಯ ಪಕ್ಷವೊಂದು ಚುನಾವಣಾ ಆಯೋಗಕ್ಕೆ ದೂರಿತ್ತಿರುವುದಕ್ಕೆ ಈ ಅಂಶಗಳು ಕಾರಣವಿರಬಹುದು).ಬಾಲಕೃಷ್ಣ ಎಡವಿರುವುದು ಬಾಬಿ ಪಾತ್ರಕ್ಕೆ ಜೀವ ತುಂಬುವಲ್ಲಿ. ಬಹುಶಃ ಮಾಗಿದ ಎರಡು ಪಾತ್ರಗಳ ಗುಂಗು ಅಥವಾ ಬಾಲಕೃಷ್ಣ ಅವರ ನಡುವಯಸ್ಸು ಯುವ ಪಾತ್ರದ ಮೇಲೆ ಸವಾರಿ ಮಾಡಿತೇ ಎಂಬ ಅನುಮಾನ ನೋಡುಗರನ್ನು ಕಾಡುವುದುಂಟು. ಆದರೂ ಆ ಪಾತ್ರ ದಡ ಸೇರಿರುವುದು ಹಾಸ್ಯನಟ ಬ್ರಹ್ಮಾನಂದಂ ಅವರ ಅಭಿನಯ ಚಾತುರ್ಯದಿಂದ. ಎರಡನೆಯ ನಾಯಕಿ ಸಲೋನಿ ಅವರ ಪಾತ್ರಕ್ಕೆ ಅಷ್ಟೇನೂ ಕಿಮ್ಮತ್ತಿಲ್ಲ. ಒಂದೆರಡು ದೃಶ್ಯಗಳಲ್ಲಿ ಅವರು ಬಂದು ಹೋಗಿದ್ದಾರೆ. ಇನ್ನು ನಾಯಕಿ ಲಕ್ಷ್ಮೀ ರೈ ಪಾತ್ರ ತುಂಡು ಬಟ್ಟೆ ಝಳಪಿಸಲಷ್ಟೇ ಮುಡಿಪು. ಒಂದು ಚಿತ್ರಕ್ಕೆ ನಾಯಕಿ ಇರಬೇಕು ಎಂಬ ಸಿದ್ಧಸೂತ್ರಕ್ಕೆ ತಕ್ಕಂತೆ ಈ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಖಳರ ಬಣದಲ್ಲಿ ಕಾಣಿಸಿಕೊಂಡಿರುವ ಪ್ರದೀಪ್ ರಾವತ್, ಚರಣ್‌ರಾಜ್, ಕೋಟ ಶ್ರೀನಿವಾಸರಾವ್ ಅಭಿನಯ ಗಮನಾರ್ಹ. ಉಳಿದಂತೆ ಜಯಸುಧಾ, ವೇಣುಮಾಧವ್, ಆದಿತ್ಯ ಮೆನನ್ ಅವರ ನಟನೆಯನ್ನು ಮರೆಯುವಂತಿಲ್ಲ. ಕಲ್ಯಾಣ್ ಮಲ್ಲಿಕ್ ಸಂಯೋಜಿಸಿರುವ ಸಂಗೀತಕ್ಕೆ ನೇತಾರರನ್ನು ಅಮರವೀರರನ್ನಾಗಿ ಬಿಂಬಿಸುವ ಗುಣವಿದೆ. ಕೆಲ ಹಾಡುಗಳು ಬಾಲಕೃಷ್ಣ ಅಭಿಮಾನಿಗಳಿಗಾಗಿ ಹೇಳಿ ಮಾಡಿಸಿದಂತಿವೆ. ಅಧಿನಾಯಕನ ವರ್ಚಸ್ಸು ಹೆಚ್ಚಿಸುವ ವೈಭವೋಪೇತ ಸಾಹಸ ದೃಶ್ಯಗಳಿವೆ. ಚಿತ್ರದ ಮೊದಲರ್ಧ ನಿರ್ದೇಶಕ ಪರಚೂರಿ ಮುರಳಿ ಅವರು ಹೇಳಿದಂತೆ ಕೇಳಿದೆ. ಆದರೆ ದ್ವಿತೀಯಾರ್ಧದ ಫ್ಲಾಶ್‌ಬ್ಯಾಕ್ ತಂತ್ರ ನೋಡುಗನಿಗೆ ಹೊರೆ.ಒಂದು ಚಿತ್ರವನ್ನು ಬಳಸಿಕೊಂಡು ಚುನಾವಣೆಯನ್ನು ಗೆಲ್ಲಬಹುದೋ ಇಲ್ಲವೋ ತಿಳಿಯದು. ಆದರೆ `ಅಧಿನಾಯಕುಡು~ ಕುರಿತ ವಿವಾದ, ಚಲನಚಿತ್ರವು ಅಭಿಪ್ರಾಯ ರೂಪಿಸಬಲ್ಲ ಪ್ರಭಾವಿ ಮಾಧ್ಯಮ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.