ಭಾನುವಾರ, ಜೂನ್ 13, 2021
25 °C

ರಾಜಕೀಯಕ್ಕೆ ಟರ್ನಿಂಗ್ ಪಾಯಿಂಟ್: ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯಕ್ಕೆ ಟರ್ನಿಂಗ್ ಪಾಯಿಂಟ್: ಶೆಟ್ಟರ್

ಹುಬ್ಬಳ್ಳಿ: `ಯಾವುದೇ ಸ್ಥಾನಮಾನಕ್ಕಾಗಿ ಒತ್ತಾಯಿಸಲು ಈ ಕಾರ್ಯಕ್ರಮವನ್ನು ಸಂಘಟಿಸಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸುವ ಮೂಲಕ ಭಾರಿ ನಿರೀಕ್ಷೆಯೊಂದಿಗೆ ಸಂಘಟಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಯಾವುದೇ ಸ್ಪಷ್ಟವಾದ ಸಂದೇಶ ಹೊರಬೀಳಲಿಲ್ಲ. ಆದರೆ, ಸೂಕ್ತ ಸ್ಥಾನಮಾನ ನೀಡುವ ಆಶ್ವಾಸನೆ ಹೈಕಮಾಂಡ್‌ನಿಂದ ಸಿಕ್ಕಿದ್ದರಿಂದಲೇ ಯಡಿಯೂರಪ್ಪ ಅವರ ಈ ಕದನವಿರಾಮಕ್ಕೆ ಕಾರಣ ಎನ್ನಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಮಂದಿ ಹುಬ್ಬಳ್ಳಿಗೆ ಆಗಮಿಸಿದ್ದರಾದರೂ ಪಕ್ಷದ ರಾಷ್ಟ್ರೀಯ ಮುಖಂಡರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಾಗಲಿ ಸಮಾವೇಶಕ್ಕೆ ಬರಲಿಲ್ಲ. ಸದಾನಂದಗೌಡರ ಸಂಪುಟದಲ್ಲಿರುವ ಅರ್ಧದಷ್ಟು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿ, ಹುರಿದುಂಬಿಸಿದರು. ಹನ್ನೆರಡು ಮಂದಿ ಸಂಸದರು, 25-30 ಮಂದಿ ಬಿಜೆಪಿ ಶಾಸಕರು ನಾನಾ ಭಾಗಗಳಿಂದ ಆಗಮಿಸಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟುಹಿಡಿದಿದ್ದ ಯಡಿಯೂರಪ್ಪ ಅವರಿಗೆ ಯಾವುದೇ ಸ್ಥಾನವನ್ನು ನೀಡದೇ ಮಣಿಸಿದ ಹೈಕಮಾಂಡ್‌ಗೆ ಸೆಡ್ಡು ಹೊಡೆಯಲು ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದೇ ಬಿಂಬಿಸಲಾಗಿತ್ತು. ಯಡಿಯೂರಪ್ಪ ಅವರ ಬೆಂಬಲಿಗರೂ 50-60 ಮಂದಿ ವಿಧಾನಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿಕೊಂಡಿದ್ದರು. ಅಷ್ಟರ ಮಟ್ಟಿಗೆ ಸಂಘಟಕರ ನಿರೀಕ್ಷೆ ಹುಸಿಯಾಯಿತು. ಸಮಾವೇಶದಲ್ಲಿ ಮಾತನಾಡಿದ ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ರಾಜುಗೌಡ, ಆರ್. ಅಶೋಕ, ಸಿ.ಎಂ.ಉದಾಸಿ, ರೇವೂನಾಯಕ ಬೆಳಮಗಿ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ವಿವಿಧ ಯೋಜನೆಗಳು, ಆರಂಭಿಸಿದ ಹೊಸ ಕಾರ್ಯಕ್ರಮಗಳನ್ನು ಸ್ಮರಿಸಿದರು.

ಶೋಭಾ ಮತ್ತು ಶೆಟ್ಟರ್ ಮಾತ್ರ ಯಡಿಯೂರಪ್ಪ ಅವರ ವಿರೋಧಿಗಳಿಗೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಮಾತನಾಡಿದರು. `ಇಂದಿನ ಅಭಿನಂದನಾ ಸಮಾವೇಶ ರಾಜ್ಯದ ರಾಜಕೀಯಕ್ಕೆ ಟರ್ನಿಂಗ್ ಪಾಯಿಂಟ್ ಆಗಲಿದೆ~ ಎಂದು ಶೆಟ್ಟರ್ ಭವಿಷ್ಯ  ನುಡಿದರೆ, `ನೀವು ಮುನ್ನುಗ್ಗಿ, ನಿಮ್ಮ ಹಿಂದೆ ನಾವಿದ್ದೇವೆ~ ಎಂದು ಶೋಭಾ ಧೈರ್ಯ ತುಂಬಿದರು. `ಪ್ರವಾಹದ ವಿರುದ್ಧ ಈಜುವ ಛಾತಿಯುಳ್ಳ ಛಲದಂಕ ಮಲ್ಲ. ಯಡಿಯೂರಪ್ಪ ಅವರಿಗೆ ಅವರೇ ಸಾಟಿ~ ಎಂದು  ಸಮಿತಿ ಅಧ್ಯಕ್ಷರೂ ಆಗಿದ್ದ ಉದಾಸಿ ಕೊಂಡಾಡಿದರು.

ಮೊದಲೇ ದೊರೆತ ಸ್ಪಷ್ಟವಾದ ಸೂಚನೆ ಹಿನ್ನೆಲೆಯಲ್ಲಿ ಯಾವೊಬ್ಬ ಮುಖಂಡರೂ ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲಿಲ್ಲ. ಮೊದಲೇ ಲೆಕ್ಕಾಚಾರ ಮಾಡಿ ಪ್ರತಿ ಸಮುದಾಯವನ್ನು ಪ್ರತಿನಿಧಿಸುವ ಒಬ್ಬೊಬ್ಬ ಮುಖಂಡರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಹೈಕಮಾಂಡ್ ಭರವಸೆ ಕುರಿತಂತೆ ಎಲ್ಲ ಬೆಂಬಲಿಗರಿಗೂ ಮಾಹಿತಿ ಇದ್ದಿದ್ದರಿಂದಲೇ ಅವರಿಂದ ಅಂತಹ ಅಸಮಾಧಾನದ ಮಾತುಗಳು ಕೇಳಿಬರದಿರಲು ಕಾರಣ ಎನ್ನಲಾಗಿದೆ.

ಸಮಾವೇಶಕ್ಕೂ ಮುನ್ನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತ್ರ ತಮ್ಮ ನಾಯಕನಿಗೆ ಈ ಸಲ ಬಜೆಟ್ ಮಂಡನೆ ಮಾಡುವ ಅವಕಾಶ ಸಿಗದಿದ್ದಕ್ಕೆ ಅತೃಪ್ತಿ ಎದ್ದು ಕಾಣುತ್ತಿತ್ತು. ಯಡಿಯೂರಪ್ಪ ಅವರ ಬೆಂಬಲದಿಂದಲೇ ಮುಖ್ಯಮಂತ್ರಿಯಾದ ಸದಾನಂದಗೌಡ ತಿರುಗಿಬಿದ್ದಿದ್ದಕ್ಕೂ ಆಕ್ರೋಶ ತುಂಬಿತ್ತು. ಮುಖ್ಯಮಂತ್ರಿ ಚುನಾವಣೆ ಸಂದರ್ಭದಲ್ಲಿ ವಿರೋಧ ಎದುರಿಸಿದ್ದ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಪಾಳೆಯ ಸೇರುವ ಮೂಲಕ ಅಚ್ಚರಿ ಮೂಡಿಸಿದರು.

ಸದಾನಂದಗೌಡರೇ ಮುಖ್ಯಮಂತ್ರಿ

ವಿಜಾಪುರ/ಆಲಮಟ್ಟಿ: ಮುಂಬರುವ ವಿಧಾನಸಭಾ ಚುನಾವಣೆಯವರೆಗೆ ಸದಾನಂದಗೌಡ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ.  ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಆಲಮಟ್ಟಿಯಲ್ಲಿ ಸುದ್ದಿಗಾರರಿಗೆ ಹೇಳಿದರು.

`ಮುಖ್ಯಮಂತ್ರಿ ಸ್ಥಾನ ಯಾರಿಗೆ ನೀಡಬೇಕು ಮತ್ತು ಯಾವಾಗ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಇದರಲ್ಲಿ ಯಾವುದೇ ಗೊಂದಲ ಇಲ್ಲ `ಎಂದು  ಅವರು ಹೇಳಿದರು.

ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ಮತ್ತೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ  ನಿರ್ಧಾರ ತೆಗೆದುಕೊಳ್ಳಬೇಕಿರುವುದೂ ಪಕ್ಷದ ಹೈಕಮಾಂಡ್~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.