ಶುಕ್ರವಾರ, ಜೂನ್ 5, 2020
27 °C

ರಾಜಕೀಯ ಇಚ್ಛಾಶಕ್ತಿಯ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ತಮ್ಮ ಕೈ ಸೇರಿದೆ ಎಂಬ ವಿಕಿಲೀಕ್ಸ್ ಘೋಷಣೆ ಜಗತ್ತಿನಾದ್ಯಂತ ಕೋಲಾಹಲಕ್ಕೆ ಕಾರಣವಾಗಿದೆ. ಸ್ವಿಸ್ ಬ್ಯಾಂಕಿನ ಉದ್ಯೋಗಿಯೇ ವಿಕಿಲೀಕ್ಸ್‌ಗೆ ನೀಡಿರುವ ಖಾತೆದಾರರ ಪಟ್ಟಿಯಲ್ಲಿ ಭಾರತದ 50 ತೆರಿಗೆ ವಂಚಕರು ಸೇರಿದ್ದಾರೆ ಎನ್ನುವ ಮಾಹಿತಿ ಇಲ್ಲಿಯೂ ಕುತೂಹಲವನ್ನು ಕೆರಳಿಸಿದೆ.  ಕಪ್ಪುಹಣ ವಿದೇಶಿ ಬ್ಯಾಂಕ್‌ಗಳ ಖಾತೆ ಸೇರುತ್ತಿರುವುದನ್ನು ತಡೆಗಟ್ಟುವ ಕೇಂದ್ರ ಸರ್ಕಾರದ ಪ್ರಯತ್ನದ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದೆ. ಕಪ್ಪುಹಣ ದೇಶದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಹಾವಳಿಯೇನಲ್ಲ. ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜತೆಯಲ್ಲಿ ಅನೇಕ ಉದ್ಯಮಪತಿಗಳು ಕೂಡಾ ದೇಶದಲ್ಲಿ ತೆರಿಗೆಯನ್ನು ವಂಚಿಸಿದ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಕೂಡಿಟ್ಟಿರುವುದು ಎಲ್ಲರಿಗೂ ಗೊತ್ತು. ಆದರೆ ಈ ರೀತಿ ಅಕ್ರಮವಾಗಿ ಕೂಡಿಟ್ಟ ಹಣ ಎಷ್ಟು? ಆ ಹಣದ ವಾರಸುದಾರರು ಯಾರು? ಎಂಬ ನಿಖರವಾದ ಮಾಹಿತಿ ಈ ವರೆಗೆ ಎಲ್ಲಿಯೂ ಅಧಿಕೃತವಾಗಿ ಲಭ್ಯವಿಲ್ಲ.ಈ ಮಾಹಿತಿ ಕೊರತೆಗೆ  ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದೇಶಿ ಬ್ಯಾಂಕುಗಳು ಬೇರೆಬೇರೆ ದೇಶಗಳ ಜತೆ ಮಾಡಿಕೊಂಡಿರುವ ಒಪ್ಪಂದಗಳು ಕೂಡಾ ಕಾರಣ. ಪ್ರಧಾನಿ ಮನಮೋಹನ್‌ಸಿಂಗ್ ಅವರು ಇದನ್ನೇ ಉಲ್ಲೇಖಿಸಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ಒಪ್ಪಲಾಗದು. ಯಾವುದೇ ಒಪ್ಪಂದ ಸಾರ್ವಜನಿಕ ಹಿತಾಸಕ್ತಿಗಿಂತ ದೊಡ್ಡದೇನಲ್ಲ. ಆದ್ದರಿಂದ ಅಗತ್ಯ ಬಿದ್ದರೆ ಈ ಒಪ್ಪಂದವನ್ನು ಪುನರ್‌ಪರಿಶೀಲನೆಗೊಳಪಡಿಸಲು ಸಂಬಂಧಿತ ದೇಶಗಳ ಜತೆ ಭಾರತ ಮಾತುಕತೆಗೆ ಮುಂದಾಗಬೇಕೇ ವಿನ: ತಮ್ಮ ಕಾರ್ಯವೈಫಲ್ಯಕ್ಕೆ ಅದನ್ನೇ ಸಬೂಬಾಗಿ ಬಳಸುವುದಲ್ಲ. ವಿದೇಶಿ ಬ್ಯಾಂಕುಗಳ ಖಾತೆಗಳಲ್ಲಿ ಭಾರತೀಯರ ಕಪ್ಪುಹಣದ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವ ಮಾಹಿತಿ ಇದೆ. ಆರ್ಥಿಕ ಉದಾರೀಕರಣದ ಯುಗದ ಜತೆಯಲ್ಲಿ ಕಪ್ಪುಹಣದ ಹಾವಳಿ ಹೆಚ್ಚಾಗಿರುವುದು ವಿಪರ್ಯಾಸ. ತೆರಿಗೆ ವಂಚನೆಯನ್ನು ತಪ್ಪಿಸುವ ಮೂಲಕ ಕಪ್ಪುಹಣದ ಹಾವಳಿಯನ್ನು ಕಡಿಮೆಮಾಡುವುದು ಕೂಡಾ ಆರ್ಥಿಕ ಉದಾರೀಕರಣದ ಉದ್ದೇಶಗಳಲ್ಲಿ ಒಂದಾಗಿತ್ತು. ಆದರೆ ಆ ಉದ್ದೇಶ ಈಡೇರಿದಂತಿಲ್ಲ.ಸಡಿಲಗೊಂಡಿರುವ ರಿಸರ್ವ್ ಬ್ಯಾಂಕ್ ನಿಯಮಗಳು ಕಪ್ಪುಹಣ ವಿದೇಶಿ ಬ್ಯಾಂಕುಗಳಲ್ಲಿ ಕೂಡಿಡಲು ನೆರವಾಗುತ್ತಿದೆ ಎನ್ನುವ ಇನ್ನೊಂದು ಆರೋಪ ಇದೆ.  ಸ್ಥಳೀಯವಾಗಿ ಸಂಗ್ರಹವಾಗುತ್ತಿರುವ ಕಪ್ಪುಹಣದ ಪ್ರಮಾಣ ಕೂಡಾ ಕಳೆದ ಇಪ್ಪತ್ತುವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಾಗಿದೆ ಎಂದು ಅನೇಕ ಆರ್ಥಿಕ ತಜ್ಞರು ನಡೆಸಿರುವ ಸ್ವತಂತ್ರ ಅಧ್ಯಯನ ಹೇಳಿದೆ. ಇದನ್ನು ತಡೆಯಲು ಕೇಂದ್ರ ಹಣಕಾಸು ಇಲಾಖೆ ಯಾಕೆ ವಿಫಲವಾಗುತ್ತಿದೆ? ಇದಕ್ಕೆ ಯಾವ ಒಪ್ಪಂದಗಳ ತಡೆ ಇದೆ? ಈ ಕಾರ್ಯದಲ್ಲಿ ಸರ್ಕಾರ ವಿಫಲಗೊಳ್ಳಲು ಮುಖ್ಯ ಕಾರಣ ಕಪ್ಪುಹಣ ಮತ್ತು ರಾಜಕೀಯದ ನಡುವೆ ಅನೈತಿಕವಾದ ಸಂಬಂಧವೇ ಹೊರತು ಬೇರೇನಲ್ಲ. ಇದರಿಂದಾಗಿ ಕಪ್ಪುಹಣದ ಹಾವಳಿ ವಿರುದ್ಧ ಯಾವ ರಾಜಕೀಯ ಪಕ್ಷವೂ ಪ್ರಾಮಾಣಿಕತೆಯಿಂದ ಹೋರಾಟ ನಡೆಸಿದ್ದೇ ಇಲ್ಲ. ಕಪ್ಪುಹಣದ ಹಾವಳಿಯನ್ನು ತಡೆಯಲು ಸಾಧ್ಯವಾಗದಿರುವುದಕ್ಕೆ ಪ್ರಧಾನಿಯವರು ಮುಂದೊಡ್ಡುತ್ತಿರುವ ಸಬೂಬುಗಳನ್ನು ನೋಡಿದರೆ ಇವರನ್ನು ಬೇರೆ ರಾಜಕೀಯ ನಾಯಕರ ಸಾಲಿನಲ್ಲಿಯೇ ನಿಲ್ಲಿಸಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.