ಶನಿವಾರ, ಮೇ 8, 2021
27 °C

ರಾಜೋಲಿ ಬಂಡ ತಿರುವು ನೀರಾವರಿ ಯೋಜನೆ:ಬಾಕಿ ವಸೂಲಿ ತಡ: ಸಿಎಜಿ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜೋಲಿ ಬಂಡ ತಿರುವು ನೀರಾವರಿ ಯೋಜನೆಯ ನಿರ್ವಹಣಾ ವೆಚ್ಚ ಹಂಚಿಕೆ ಬಾಬ್ತು ಆಂಧ್ರಪ್ರದೇಶ ಸರ್ಕಾರದಿಂದ ರಾಜ್ಯವು 2004ರಿಂದ ಯಾವುದೇ ಮೊತ್ತವನ್ನೂ ವಸೂಲಿ ಮಾಡಿಲ್ಲ. 2005ರಲ್ಲಿ 13.86 ಕೋಟಿ ರೂಪಾಯಿ ಇದ್ದ ಆಂಧ್ರಪ್ರದೇಶದ ಬಾಕಿ ಪ್ರಸ್ತುತ ರೂ 18.66 ಕೋಟಿ ರೂಪಾಯಿಗೆ ಏರಿಕೆಯಾಗಿದೆ.ಎಂಟು ವರ್ಷಗಳಿಂದ ನೆರೆಯ ರಾಜ್ಯದಿಂದ ಬಾಕಿ ವಸೂಲಿ ಮಾಡದಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (ಸಿಎಜಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 13.86 ಕೋಟಿ ಬಾಕಿ ಇರುವ ಬಗ್ಗೆ 2005ರ ಲೆಕ್ಕ ಪರಿಶೋಧನಾ ವರದಿಯಲ್ಲಿ ತಿಳಿಸಿದ್ದರೂ, ಏಳು ವರ್ಷಗಳವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.ರೂ 13.86 ಕೋಟಿ ಬಾಕಿ ವಸೂಲಿ ಮಾಡದಿರುವ ಬಗ್ಗೆ ಜೂನ್ 2010ರಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಉತ್ತರ ನೀಡಿದ್ದ ಸರ್ಕಾರ, ಪ್ರಕರಣವನ್ನು 2006ರಲ್ಲೇ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿತ್ತು. ಆದರೆ, ಬಾಕಿ ವಸೂಲಿಗೆ ದೃಢವಾದ ಪ್ರಯತ್ನಗಳೇ ಸರ್ಕಾರದಿಂದ ನಡೆಯಲಿಲ್ಲ. ಕಿರಿಯ ಅಧಿಕಾರಿಗಳಿಗೆ ಈ ಹೊಣೆಗಾರಿಕೆ ನೀಡಲಾಗಿತ್ತು. ಸರ್ಕಾರದ ಮಟ್ಟದಲ್ಲಿ ಅಂತಹ ಯಾವ ಪ್ರಯತ್ನವೂ ನಡೆದಿಲ್ಲ. ಈ ಕುರಿತ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವಲ್ಲೂ ಸರ್ಕಾರ ವಿಫಲವಾಗಿದೆ ಎಂಬುದು  ವರದಿಯಲ್ಲಿದೆ.ತುಂಗಭದ್ರಾ ಮಂಡಳಿಯ ಮೂಲಕ ಆಂಧ್ರಪ್ರದೇಶವು ನಿರ್ವಹಿಸುವ ತುಂಗಭದ್ರಾ ಅಣೆಕಟ್ಟೆ ಮತ್ತು ಬಲದಂಡೆ ಕಾಲುವೆಗಳ ನಿರ್ವಹಣಾ ವೆಚ್ಚದ ಪಾವತಿಗೆ ಒಂದು ವ್ಯವಸ್ಥೆ ರೂಢಿಯಲ್ಲಿದೆ. ಅಂತರರಾಜ್ಯ ಅಮಾನತ್ತು ಲೆಕ್ಕ ಪಾಲನೆ ಮೂಲಕ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮಾಸಿಕ ವೆಚ್ಚವನ್ನು ತೀರುವಳಿ ಮಾಡಲಾಗುತ್ತದೆ. ಆದರೆ, ಕರ್ನಾಟಕ ಸರ್ಕಾರ ಮಾಡುವ ನಿರ್ವಹಣಾ ವೆಚ್ಚವನ್ನು ಸರಿಹೊಂದಿಸಲು ಈ ರೀತಿಯ ವ್ಯವಸ್ಥೆ ಇಲ್ಲ.ಪರಿಣಾಮವಾಗಿ ಆಂಧ್ರಪ್ರದೇಶದಿಂದ ಬಾಕಿ ಉಳಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ ಮತ್ತು ಉಪ ಕಾಲುವೆಗಳ ಆಧುನೀಕರಣ ಯೋಜನೆಯಲ್ಲಿ ವಿವರವಾದ ಯೋಜನಾ ವರದಿ ಇಲ್ಲದೆಯೇ ಹಲವು ಕಾಮಗಾರಿಗಳನ್ನು ಚಾಲ್ತಿಯಲ್ಲಿ ಇಡಲಾಗಿತ್ತು ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಕೆಲವು ಪ್ರಕರಣಗಳಲ್ಲಿ ಇಲಾಖೆಯು ಸಮ್ಮತಿಸಿದ ತಾಂತ್ರಿಕ ಮಾದರಿಗಳಿಗೆ ನಿಷ್ಠವಾಗದೇ ಕಾಮಗಾರಿಗಳನ್ನು ನಡೆಸಿರುವುದರಿಂದ 17.48 ಕೋಟಿ ರೂಪಾಯಿ ಹೊರೆ ಸರ್ಕಾರದ ಮೇಲೆ ಬಿದ್ದಿದೆ ಎಂಬುದನ್ನು ಬಹಿರಂಗಪಡಿಸಿದೆ.ಭೂಮಿ ನೀಡುವಲ್ಲಿ ಲೋಪ: ಗುಲ್ಬರ್ಗ ಜಿಲ್ಲೆ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ 184.03 ಭೂಮಿಯನ್ನು ನೀಡಿರುವ ರಾಜ್ಯ ಸರ್ಕಾರದ ಕ್ರಮ ಕಾನೂನುಬಾಹಿರವಾದುದು. ಗೋಧವರ್ಮನ್ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಸ್ಪಷ್ಟ ಉಲ್ಲಂಘನೆ ಭೂಮಿ ಮಂಜೂರಾತಿಯಲ್ಲಿ ನಡೆದಿದೆ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಪ್ರಕಾರ ಯಾವುದೇ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವ ಮುನ್ನ ಕೇಂದ್ರ ಸರ್ಕಾರದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ನಂತರ ಹಸ್ತಾಂತರ ಮಾಡುವ ಅರಣ್ಯ ಭೂಮಿಯ ಮೌಲ್ಯವನ್ನು ಬಳಕೆದಾರರಿಂದ ವಸೂಲಿ ಮಾಡಬೇಕು.ಆದರೆ, ಈ ಪ್ರಕರಣದಲ್ಲಿ,~ಅರಣ್ಯ ಭೂಮಿಯಲ್ಲ~ ಎಂಬ ಅಭಿಪ್ರಾಯದೊಂದಿಗೆ ಕಂದಾಯ ಇಲಾಖೆಯು ನಿರ್ಧಾರ ಕೈಗೊಂಡಿದೆ. ಇಲಾಖೆಯ ದಾಖಲೆಗಳ ಪ್ರಕಾರ ಈಗಲೂ ಅದು `ಅರಣ್ಯ ಭೂಮಿ~. ಆದ್ದರಿಂದ ಇದು ಅನಧಿಕೃತ ಭೂಸ್ವಾಧೀನ ಪ್ರಕರಣ ಎಂದು ಹೇಳಿದೆ.ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಗಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಕಂಪೆನಿಗೆ 68.12 ಹೆಕ್ಟೇರ್ ಸೇರಿದಂತೆ ವಿವಿಧ ಪ್ರಕರಣಗಳಲಿ ಅರಣ್ಯೇತರ ಉದ್ದೇಶಕ್ಕಾಗಿ ಹಸ್ತಾಂತರ ಮಾಡಿದ 133.96 ಹೆಕ್ಟೇರ್ ಅರಣ್ಯ ಭೂಮಿಯ ಸಂಬಂಧ ಮೌಲ್ಯ ವಸೂಲಿ ನಡೆದಿಲ್ಲ.ಬಳಕೆದಾರ ಸಂಸ್ಥೆಗಳು ಈ ಬಾಬ್ತು 8.86 ಕೋಟಿ ರೂಪಾಯಿಯನ್ನು ಅರಣ್ಯ ಇಲಾಖೆಗೆ ಪಾವತಿಸಬೇಕಿದೆ. ಬಾಕಿ ವಸೂಲಿಯಲ್ಲಿ ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.ಮುಖ್ಯಾಂಶಗಳು* ಆಂಧ್ರಪ್ರದೇಶದ ಬಾಕಿ ಪ್ರಸ್ತುತ ರೂ 18.66 ಕೋಟಿ ರೂಪಾಯಿಗೆ ಏರಿಕೆ* 8 ವರ್ಷಗಳಿಂದ ಬಾಕಿ ವಸೂಲಿ ಮಾಡಿಲ್ಲ, ಸಿಎಜಿ ತೀವ್ರ ಆಕ್ಷೇಪ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.