ಸೋಮವಾರ, ಜೂನ್ 21, 2021
29 °C

ರಾಜ್ಯದಲ್ಲಿ ಆದಾಯ ತೆರಿಗೆ ಸಂಗ್ರಹ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದಲ್ಲಿ ಆದಾಯ ತೆರಿಗೆ ಸಂಗ್ರಹ ಇಳಿಮುಖವಾಗಿದ್ದು, ಗೋವಾದಲ್ಲೂ ಈ ಪರಿಸ್ಥಿತಿ ಇದೆ ಎಂದು ಆದಾಯ ತೆರಿಗೆ ಮುಖ್ಯ ಆಯುಕ್ತ (ಬೆಂಗಳೂರು-1) ಕೆ.ಸತ್ಯನಾರಾಯಣ ಹೇಳಿದರು.ಆದಾಯ ತೆರಿಗೆ ಇಲಾಖೆ ನಗರದ ಅತ್ತಾವರದಲ್ಲಿ ಆರಂಭಿಸಿರುವ ಆದಾಯ ತೆರಿಗೆ ಸೇವಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ 2011-12 ನೇ ಸಾಲಿನ ಬಜೆಟ್‌ನಲ್ಲಿ ನೀಡಿದ ವಾಗ್ದಾನದಂತೆ ದೇಶದಾದ್ಯಂತ ಆದಾಯ ತೆರಿಗೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯದ ನಾಲ್ಕು ಕಡೆ ಸೇವಾಕೇಂದ್ರ ತೆರೆಯಲಾಗುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯಾರಂಭವಾಗಿದೆ. ಹುಬ್ಬಳ್ಳಿಯಲ್ಲಿ ಶೀಘ್ರವೇ ಸೇವಾ ಕೇಂದ್ರ ತೆರಿಗೆದಾರರ ಸೇವೆಗೆ ಸಿದ್ಧವಾಗಲಿದೆ ಎಂದು ಹೇಳಿದರು.ಆದಾಯ ತೆರಿಗೆದಾರರಿಗೆ ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭ್ಯವಾಗಲು ಈ ರೀತಿಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದರರ್ಥ ಹೆಚ್ಚು ತೆರಿಗೆ ಪಾವತಿಸಲು ಉತ್ತೇಜಿಸುವುದಲ್ಲ. ಬದಲಿಗೆ ಅವರು ನೀಡಬೇಕಾದ ತೆರಿಗೆಯನ್ನು ಪ್ರಾಮಾಣಿಕವಾಗಿ ಸರಿಯಾದ ಸಮಯಕ್ಕೆ ಸಲ್ಲಿಸುವುದು ಎಂದು ಅವರು ವಿವರಿಸಿದರು.ಅದಾಯ ತೆರಿಗೆ ಇಲಾಖೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ತೆರಿಗೆದಾರರಿಗೆ ಅನುಕೂಲವಾಗುವಂತೆ ಕೇಂದ್ರವನ್ನು ರೂಪಿಸಲಾಗಿದೆ. ನಾಗರಿಕರ ತೆರಿಗೆ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಹಾಗೂ ಅದನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ ಎಂದು ಅವರು ವಿವರಿಸಿದರು.ಆದಾಯ ತೆರಿಗೆ ಮುಖ್ಯ ಆಯುಕ್ತ (ಬೆಂಗಳೂರು 2) ಜಯಂತ್ ಕುಮಾರ್ ಹೋತಾ ಮಾತನಾಡಿ, ಆದಾಯ ತೆರಿಗೆ ಪಾವತಿ ಸಂಬಂಧ ಇಂದು ಜನರ ಧೋರಣೆ ಬದಲಾಗಿದೆ. ತೆರಿಗೆದಾರರಿಗೆ ಇಲಾಖೆ ಎಲ್ಲ ರೀತಿಯ ನೆರವು ನೀಡಲಿದೆ. ಈ ಹಿಂದೆ ಆದಾಯ ತೆರಿಗೆ ಪಾವತಿ ಬಗ್ಗೆ ಜನರಿಗೆ ಭಯ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕರಾವಳಿ ಭಾಗದ ಜನ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿರುವುದು ಮತ್ತು ಇಲ್ಲಿನ ಜನರಿಗೆ ತೆರಿಗೆ ಪಾವತಿ ಬಗ್ಗೆ ಅರಿವಿರುವುದು ಈ ರೀತಿಯ ಕೇಂದ್ರಗಳಿಗೆ ನೆರವಾಗಲಿದೆ ಎಂದು ಹೇಳಿದರು.ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸಿಎಂಡಿ ಎಂ.ನರೇಂದ್ರ ಮಾತನಾಡಿ, ಬ್ಯಾಂಕ್ ದೇಶದಾದ್ಯಂತ ಶಾಖೆಗಳನ್ನು ತೆರೆಯುತ್ತಿದ್ದು, ಆದಾಯತೆರಿಗೆ ಸೇವಾ ಕೇಂದ್ರದಲ್ಲಿ ಬ್ಯಾಂಕ್‌ನ ಎಟಿಎಂ ಅನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಆದಾಯ ತೆರಿಗೆ ಇಲಾಖೆ ಎಂದರೆ ನೋಟಿಸ್ ಜಾರಿ ಮಾಡುವುದು, ದಾಳಿ ನಡೆಸುವುದಕ್ಕೆ ಮಾತ್ರ ಸೀಮಿತವಾದ ಇಲಾಖೆ ಎಂಬ ಮನೋಭಾವನೆ ಇತ್ತು. ಆದರೆ ಈ ಇಲಾಖೆಯೂ ಸಹ ಸಾಮಾಜಿಕ ಸೇವೆಗಳನ್ನು ಮಾಡುವಲ್ಲಿ ಮುಂದಾಗಲಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದರು.ಗೋವಾ ರಾಜ್ಯ ಮುಖ್ಯ ಆದಾಯ ತೆರಿಗೆ ಆಯುಕ್ತ ದಿಲೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಆದಾಯ ತೆರಿಗೆ ಮಂಗಳೂರು ವಿಭಾಗದ ಆಯುಕ್ತ ಡಾ.ಬಿ.ಎಸ್.ಎನ್.ಪ್ರಸಾದ್ ಇದ್ದರು.ಸಮಾರಂಭದಲ್ಲಿ ಕೆಸಿಸಿಐ ಅಧ್ಯಕ್ಷೆ ಲತಾ ಆರ್.ಕಿಣಿ, ಭಾರತೀಯ ಲೆಕ್ಕಪರಿಶೋಧಕರ ಸಂಘ ಮಂಗಳೂರು ಚಾಪ್ಟರ್‌ನ ಮುರಳಿ ಮೋಹನ್, ಉಡುಪಿ ಚಾಪ್ಟರ್‌ನ ವೈ.ಗಣೇಶ್, ಆದಾಯ ತೆರಿಗೆ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ವಿನೋದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.