ಸೋಮವಾರ, ಜೂನ್ 14, 2021
27 °C

ರಾಜ್ಯದ ಆರ್ಥಿಕತೆಯಲ್ಲೂ ಕುಸಿತ

ಪ್ರಜಾವಾಣಿ ವಾರ್ತೆ/ ಪಿ.ಎಂ.ರಘುನಂದನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಗತಿಕ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದ ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದು ಆರ್ಥಿಕ ಸಮೀಕ್ಷೆಯಿಂದ ದೃಢಪಟ್ಟಿದೆ. ರಾಜ್ಯದ ಆರ್ಥಿಕ ಬೆಳವಣಿಗೆಯೂ ಇದೇ ಹಾದಿ ಹಿಡಿದಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಮುಗ್ಗರಿಸಿದೆ.ಪ್ರಸಕ್ತ ವರ್ಷ ರಾಜ್ಯದ ನಿವ್ವಳ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಬೆಳವಣಿಗೆ ದರ ಶೇಕಡ 8.5 ಎಂದು ಅಂದಾಜಿಸಲಾಗಿತ್ತು. ಆದರೆ, ಇನ್ನಷ್ಟೇ ಬಿಡುಗಡೆ ಆಗಬೇಕಿರುವ 2011-12ನೇ ಸಾಲಿನ ರಾಜ್ಯದ ಆರ್ಥಿಕ ಸಮೀಕ್ಷೆ ಪ್ರಕಾರ ಜಿಎಸ್‌ಡಿಪಿ ಬೆಳವಣಿಗೆ ದರ ಶೇ 6.4ರ ಆಸುಪಾಸಿನಲ್ಲೇ ಇದೆ.ಮಾಹಿತಿ ತಂತ್ರಜ್ಞಾನ ವಲಯದ ಬೆಳವಣಿಗೆಯಲ್ಲಿ ಕುಸಿತ, 122 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ, ಗಣಿಗಾರಿಕೆ ಮತ್ತು ಅದಿರು ರಫ್ತು ನಿಷೇಧ ಮತ್ತಿತರ ಕಾರಣಗಳು ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ 8.5ರ ಗುರಿ ತಲುಪದಂತೆ ತಡೆದಿವೆ. ಕಳೆದ ವರ್ಷ ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ 8.2ರಷ್ಟಿತ್ತು. ಅದರ ಹಿಂದಿನ ಎರಡು ವರ್ಷಗಳಲ್ಲಿ ಸತತ ಆರ್ಥಿಕ ಕುಸಿತದಿಂದ ಜಿಎಸ್‌ಡಿಪಿ ಬೆಳವಣಿಗೆ ದರದಲ್ಲಿ ಸತತ ಕುಸಿತ ಆಗಿತ್ತು.ರಾಜ್ಯದ ಆರ್ಥಿಕ ವ್ಯವಸ್ಥೆ ಬಹುಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ಉದ್ಯಮ ಮತ್ತು ಅದಿರು ರಫ್ತನ್ನು ಅವಲಂಬಿಸಿದೆ. ಈ ಕಾರಣದಿಂದಾಗಿ ಜಾಗತಿಕ ಆರ್ಥಿಕ ಕುಸಿತದ ದುಷ್ಪರಿಣಾಮ ದೇಶದ ಆರ್ಥಿಕತೆಗಿಂತಲೂ ಹೆಚ್ಚಾಗಿ ರಾಜ್ಯದ ಮೇಲೆ ಆಗಲಿದೆ ಎನ್ನುತ್ತವೆ ಮೂಲಗಳು.ಭಾರತದ ಜಿಎಸ್‌ಡಿಪಿ ಮತ್ತು ಕರ್ನಾಟಕದ ಜಿಎಸ್‌ಡಿಪಿ ಬೆಳವಣಿಗೆಯ ಹಾದಿಯನ್ನು ಗಮನಿಸಿದರೆ ರಾಜ್ಯದ ಪರಿಸ್ಥಿತಿಯೇ ಕೆಟ್ಟದಾಗಿದೆ. ಆರ್ಥಿಕ ಕುಸಿತ ಸಂಭವಿಸುವ ಮುಂಚೆ ಕರ್ನಾಟಕದ ಜಿಎಸ್‌ಡಿಪಿ ದರ ಭಾರತದ ಜಿಎಸ್‌ಡಿಪಿ ದರಕ್ಕಿಂತ ಹೆಚ್ಚಿತ್ತು. 2006-07ರಲ್ಲಿ ರಾಜ್ಯದ ಜಿಎಸ್‌ಡಿಪಿ ದರ ಶೇ 10.1 ಇತ್ತು. 2007-08ರಲ್ಲಿ ಈ ಪ್ರಮಾಣ ಶೇ 12.9 ತಲುಪಿತ್ತು. ಭಾರತದ ಜಿಎಸ್‌ಡಿಪಿ ಬೆಳವಣಿಗೆ ದರ ಇದೇ ಅವಧಿಯಲ್ಲಿ ಶೇ 9.7 ಮತ್ತು ಶೇ 9.2 ಇತ್ತು.ಆರ್ಥಿಕ ಕುಸಿತ ಸಂಭವಿಸಿದ 2008-09ರಲ್ಲಿ ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ 3.7ಕ್ಕೆ ಕುಸಿದಿತ್ತು. ಅದೇ ಸ್ಥಿತಿ ಇದ್ದ 2009-10ರಲ್ಲಿ ಬೆಳವಣಿಗೆ ದರ ಶೇ 5.2 ಮಾತ್ರ ಇತ್ತು. ಈ ಅವಧಿಯಲ್ಲಿ ದೇಶದ ಜಿಎಸ್‌ಡಿಪಿ ಬೆಳವಣಿಗೆ ದರ ಕ್ರಮವಾಗಿ ಶೇ 6.7 ಮತ್ತು ಶೇ 8 ಇತ್ತು.2010-11ರಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಜಿಎಸ್‌ಡಿಪಿ ಬೆಳವಣಿಗೆ ದರ ಶೇ 8.2 ತಲುಪಿತ್ತು. ಸೇವಾ ವಲಯದಿಂದ (ಮಾಹಿತಿ ತಂತ್ರಜ್ಞಾನ) ಶೇ 55, ಕೈಗಾರಿಕಾ ವಲಯದಿಂದ ಶೇ 17 ಮತ್ತು ಪ್ರಾಥಮಿಕ (ಕೃಷಿ) ವಲಯದಿಂದ ಶೇ 17ರಷ್ಟು ಕೊಡುಗೆ ಬಂದಿತ್ತು. ಕೃಷಿ ವಲಯ ಶೇ 5.9ರ ಬೆಳವಣಿಗೆಯೊಂದಿಗೆ ಉತ್ತಮ ಸಾಧನೆ ದಾಖಲಿಸಿತ್ತು.ಮೂಲಗಳ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೃಷಿ ವಲಯ ಹೆಚ್ಚು ಹಾನಿಗೆ ಒಳಗಾಗಿದೆ. ಬರದಿಂದಾಗಿ ಕೃಷಿಯ ಬೆಳವಣಿಗೆ ದರ ಶೇ 4.5ರ ಆಸುಪಾಸಿನಲ್ಲೇ ಇರಲಿದೆ. ಆಹಾರ ಧಾನ್ಯಗಳ ಉತ್ಪಾದನೆ 105 ಲಕ್ಷ ಟನ್‌ಗಳಿಗೆ ಕುಸಿಯುವ ಸಾಧ್ಯತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ 20 ಲಕ್ಷ ಟನ್‌ನಷ್ಟು ಕಡಿಮೆ ಉತ್ಪಾದನೆ ನಿರೀಕ್ಷಿಸಲಾಗಿದೆ.`ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಸೇವಾ ಕ್ಷೇತ್ರದ ಬೆಳವಣಿಗೆಯೂ ಆಶಾದಾಯಕವಾಗಿಲ್ಲ. ಈ ಕ್ಷೇತ್ರಗಳ ಬೆಳವಣಿಗೆ ದರ ಶೇ 9ಕ್ಕೆ ಕುಸಿಯುವ ಸಾಧ್ಯತೆ ಇದೆ. ಕಳೆದ ವರ್ಷ ಈ ಕ್ಷೇತ್ರಗಳ ಬೆಳವಣಿಗೆ ದರ ಶೇ 9.7 ಇತ್ತು~ ಎನ್ನುತ್ತವೆ ಮೂಲಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.