ಗುರುವಾರ , ಜೂನ್ 24, 2021
22 °C
ಟಿಕೆಟ್‌ ಹಂಚಿಕೆ, ಸ್ಪರ್ಧೆಗೆ ಕಾರ್ಯಕರ್ತರ ಕೋಪ

ರಾಮನಗರದಲ್ಲಿ ಆಕ್ರೋಶ, ಬೀದರ್‌ನಲ್ಲಿ ದಾಂದಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ಬೀದರ್‌/ರಾಮನಗರ: ರಾಜ್ಯದಲ್ಲಿ ಲೋಕಸಭಾ ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬೀದರ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ. ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಎಚ್‌.ಡಿ.ಕುಮಾರ­ಸ್ವಾಮಿ ಇಂಗಿತ ರಾಮನಗರದ ಜೆಡಿಎಸ್‌ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ  ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಸೂರ್ಯಕಾಂತ ನಾಗಮಾ­ರಪಳ್ಳಿ ಅವರಿಗೆ ಟಿಕೆಟ್ ಸಿಗದ ಕಾರಣ ಅವರ ಬೆಂಬಲಿಗರು ಉದಗೀರ ರಸ್ತೆಯಲ್ಲಿರುವ ಬೀದರ್‌ ನಗರ ಬಿಜೆಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದರು. ಪಕ್ಷ ಹಾಗೂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆ ವೇಳೆ ಬಿಜೆಪಿ ಕಚೇರಿ ಬಂದ್‌ ಆಗಿತ್ತು. ಕಚೇರಿಯ ಕಟ್ಟಡದ ಕಿಟಕಿಗಳತ್ತ ಕಲ್ಲು ತೂರಿದ ಪರಿಣಾಮ ಗಾಜುಗಳು ಪುಡಿಯಾದವು. ಅದೇ ಕಟ್ಟಡದ ಕೆಳಗಡೆ ಇದ್ದ ಪ್ಲಾಸ್ಟಿಕ್‌ ಕುರ್ಚಿಗಳನ್ನು ನೆಲಕ್ಕೆ ಅಪ್ಪಳಿಸಿ ಮುರಿದು ಹಾಕಿದರು.ಒಂದು ಹಂತದಲ್ಲಿ ರಸ್ತೆ ತಡೆ ನಡೆಸಿ ಟೈರ್‌ ಸುಡಲು ಯತ್ನಿಸಿದರಾದರೂ ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಮುಖಂಡ ಡಿ.ಕೆ. ಸಿದ್ರಾಮ, ಝರೆಪ್ಪಾ ಮಮದಾಪುರ ಮತ್ತಿತರರು ಇದ್ದರು.ಬಂಡೇಳುವ ಸಾಧ್ಯತೆ: ಈ ಮಧ್ಯೆ ಸೂರ್ಯಕಾಂತ ನಾಗಮಾರಪಲ್ಲಿ ಬಂಡೆದ್ದು ಪಕ್ಷೇತರರಾಗಿ   ಅಥವಾ ಜೆಡಿಎಸ್‌ ಅಭ್ಯರ್ಥಿಯಾಗಿ ಬೀದರ್‌ನಿಂದ ಸ್ಪರ್ಧಿ­ಸುವ ಸಾಧ್ಯತೆ ಇದೆ. ಬೀದರ್‌ನಲ್ಲಿ ಬೃಹತ್‌ ಸಮಾ­ವೇಶ ಆಯೋಜಿ­ಸುವುದಕ್ಕೂ ಅವರು ಸಿದ್ಧತೆ ನಡೆ­ಸಿ­ದ್ದಾರೆ. ಸೂರ್ಯಕಾಂತ ಅವರಿಗೇ ಟಿಕೆಟ್‌ ನೀಡಲು ರಾಜ್ಯದ ಮುಖಂಡರು ಒಪ್ಪಿ, ಅದನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದ್ದರು. ಆದರೆ ಹರಿಯಾಣ ಮೂಲದ ಯೋಗಗುರು­ವೊ­ಬ್ಬರ ಒತ್ತಡಕ್ಕೆ ಮಣಿದ ಪಕ್ಷದ ದೆಹಲಿ ವರಿಷ್ಠರು ಸೂರ್ಯ­ಕಾಂತ ಅವರ ಹೆಸರನ್ನು ಬದಲಿಸಿ, ಭಗ­ವಂತ್ ಖೂಬಾ ಅವರಿಗೆ ಟಿಕೆಟ್‌ ಘೋಷಿಸಿದರು ಎನ್ನಲಾಗಿದೆ.

ಕುಮಾರಸ್ವಾಮಿಗೆ ತರಾಟೆ: ಚಿಕ್ಕಬಳ್ಳಾಪುರದಿಂದ  ಸ್ಪರ್ಧಿಸಲು ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಸಮ್ಮತಿಸಿದ್ದಾರೆ ಎಂಬ ವರದಿ ರಾಮನಗರ ಜೆಡಿಎಸ್‌ ವಲಯದಲ್ಲಿ ಕೋಪಾವೇಶಕ್ಕೆ ಕಾರಣವಾಗಿದೆ.ಶುಕ್ರವಾರ ರಾಮನಗರದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಕುಮಾರಸ್ವಾಮಿ ಅವರ ವರ್ತನೆ­ಯನ್ನು ಕಾರ್ಯಕರ್ತರು ತೀವ್ರವಾಗಿ ಆಕ್ಷೇಪಿಸಿದರು. ಆದರೆ ಕಾರ್ಯಕರ್ತರ ಕೋಪದ ಮುನ್ಸೂಚನೆ ಇದ್ದ ಕುಮಾರಸ್ವಾಮಿ ಸಭೆಯಲ್ಲಿ ಹಾಜರಿರಲಿಲ್ಲ. ‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಏಕೆ? ಹಾಗೊಂದು ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದೇ ಆದರೆ ಇಲ್ಲಿನ ಕಾರ್ಯಕರ್ತರಿಗೆ ಮೊದಲು ವಿಷ ಕೊಡಲಿ’ ಎಂದು ಹೇಳಿ ಕಾರ್ಯಕರ್ತರು ಸಭೆಯನ್ನು ಬಹಿಷ್ಕರಿಸಿದರು. ಇದಕ್ಕೂ ಮುನ್ನ ಸಭೆಯಲ್ಲಿದ್ದ ಮುಖಂಡರಿಗೆ, ಶಾಸಕರಿಗೆ ಛೀಮಾರಿ ಹಾಕಿದರು.‘ಕುಮಾರಸ್ವಾಮಿ ಚಿಕ್ಕಬಳ್ಳಾಪುರ ದಿಂದ ಸ್ಪರ್ಧಿಸಲು ಹೋದರೆ ಇಲ್ಲಿನ ಜನರಿಗೆ ನಂಬಿಕೆ ದ್ರೋಹ ಮಾಡಿದಂತಾಗುತ್ತದೆ. ಅಲ್ಲದೆ ಸಚಿವ ಡಿ.ಕೆ.­ಶಿವಕುಮಾರ್‌ ಸಹೋದರರಿಗೆ ಹೆದರಿ ಪಲಾಯನ ಮಾಡಿದರು ಎಂಬ ಸಂದೇಶ ರವಾನೆ­ಯಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದರು.‘ರಾಮನಗರದ ಜನ ಮತ್ತೊಂದು ಉಪಚುನಾವಣೆ ಎದುರಿಸುವಂತೆ ಮಾಡಬೇಡಿ. ರಾಮನಗರ– ಚನ್ನಪಟ್ಟಣವನ್ನು  ನನ್ನ ಎರಡು ಕಣ್ಣು ಎನ್ನುತ್ತಿದ್ದವರು ಈಗೇಕೆ ನಮ್ಮನ್ನು ತಬ್ಬಲಿ ಮಾಡುತ್ತಿದ್ದೀರಿ, ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವುದಾ­ದರೆ ಈ ಭಾಗದ ಕಾರ್ಯಕರ್ತರು ಅನ್ಯಪಕ್ಷಗಳನ್ನು ಬೆಂಬಲಿಸಬೇಕಾಗುತ್ತದೆ. ಈ ಎಚ್ಚರ ಮರೆಯಬೇಡಿ! ಅಷ್ಟೇ ಅಲ್ಲ ಜೆಡಿಎಸ್‌ ಅಭ್ಯರ್ಥಿ ಇಲ್ಲಿ ನಾಮಪತ್ರ ಸಲ್ಲಿಸುವಾಗ ನಾವ್ಯಾರೂ ಬರುವುದಿಲ್ಲ!’ ಎಂದು ಭಾರಿ ಬೆದರಿಕೆ ಮತ್ತು ಆಕ್ರೋಶಭರಿತ ನುಡಿಗಳನ್ನು ಹೊರಹಾಕಿದರು.

ಕುಮಾರಣ್ಣನಿಗೆ ಬುದ್ಧಿ ಕಲಿಸಿ: ‘ರಾಮನಗರವನ್ನು ನನ್ನ ಕರ್ಮಭೂಮಿ, ಇಲ್ಲಿನ ಜನರಿಗೂ ನನಗೂ ತಾಯಿ– ಮಗನ ಸಂಬಂಧ ಇದೆ ಎಂದು ಹೇಳಿಕೊಳ್ಳುತ್ತಿದ್ದ ಕುಮಾರಸ್ವಾಮಿ ಈಗ ನಮಗೆಲ್ಲಾ ವಿಶ್ವಾಸ ದ್ರೋಹ ಎಸಗುತ್ತಿದ್ದಾರೆ. ಇದೇ ದ್ರೋಹವನ್ನು ಅವರು ಚಿಕ್ಕಬಳ್ಳಾಪುರದ ಜನರಿಗೂ ಮುಂದೊಂದು ದಿನ ಮಾಡುತ್ತಾರೆ. ಹಾಗಾಗಿ ಅವರು ಅಲ್ಲಿಂದ ಏನಾದರೂ ಸ್ಪರ್ಧಿಸಿದರೆ ಅವರನ್ನು ಸೋಲಿಸಿ ಬುದ್ಧಿ ಕಲಿಸಿ’ ಎಂದು ಕೆಲ ಕಾರ್ಯಕರ್ತರು ಏರಿದ ದನಿಯಲ್ಲಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.