ಭಾನುವಾರ, ಜೂನ್ 20, 2021
29 °C

ರಾಮನಗರ ಜಿಲ್ಲೆಗೆ ಬರಲಿಲ್ಲ ಲೋಕಲ್ ಟ್ರೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ ರಾಮನಗರ ಜಿಲ್ಲೆಯ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಹೆಚ್ಚು ರೈಲುಗಳ ಸಂಚಾರ ನಿರೀಕ್ಷಿಸಿದ್ದ ಜನತೆಗೆ ಈ ಬಾರಿಯ ಬಜೆಟ್ ನಿರಾಸೆಗೊಳಿಸಿದೆ.ರಾಜಧಾನಿ ಬೆಂಗಳೂರಿಗೆ ಚನ್ನಪಟ್ಟಣ, ರಾಮನಗರ, ಬಿಡದಿ ಭಾಗದಿಂದ ನಿತ್ಯ ಸಹಸ್ರಾರು ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಯಾವ ಹೊತ್ತಿನಲ್ಲಿಯೂ ಪ್ರಯಾಣಿಕರಿಗೆ ಆಸನಗಳು ದೊರೆಯುತ್ತಿಲ್ಲ. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಪ್ರಯಾಣಿಕರು ಹೆಚ್ಚಿನ ರೈಲುಗಳನ್ನು ಬೆಂಗಳೂರು-ಮೈಸೂರು ಮಾರ್ಗದಲ್ಲಿ ನಿರೀಕ್ಷಿಸಿದ್ದರು. ಆದರೆ ಈಗಾಗಲೇ ವಾರದಲ್ಲಿ ಆರು ದಿನ ಸಂಚರಿಸುತ್ತಿರುವ ಎರಡು ಪ್ಯಾಸೆಂಜರ್ ರೈಲುಗಳನ್ನು ಏಳು ದಿನಕ್ಕೆ ವಿಸ್ತರಿಸಲಾಗಿದೆ. ಇದರಿಂದ ನಿತ್ಯ ಸಂಚರಿಸುವವರ ಸಂಕಟ ಪರಿಹಾರ ಆಗುವುದಿಲ್ಲ ಎಂಬುದು ಪ್ರಯಾಣಿಕರ ಅಳಲು.ಲೋಕಲ್ ಟ್ರೈನ್ ಬರಲಿಲ್ಲ:

ಬೆಂಗಳೂರು-ಮೈಸೂರು ಜೋಡಿ ಮಾರ್ಗದಲ್ಲಿ ಈಗಾಗಲೇ ಬೆಂಗಳೂರಿನಿಂದ ಚನ್ನಪಟ್ಟಣದ ಶೆಟ್ಟಿಹಳ್ಳಿಯವರೆಗೆ ಜೋಡಿ ಮಾರ್ಗ ಪೂರ್ಣಗೊಂಡಿದೆ. ಈ ಭಾಗದಲ್ಲಿ ಎರಡು ಪಥ ಇರುವುದರಿಂದ ಚನ್ನಪಟ್ಟಣದಿಂದ ಬೆಂಗಳೂರಿಗೆ ಒಂದು `ಲೋಕಲ್~ ರೈಲು ಚಲಿಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂಬುದು ಈ ಭಾಗದ ಪ್ರಯಾಣಿಕರ ಬೇಡಿಕೆಯಾಗಿತ್ತು.ಇದರಿಂದ ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ನಾಯಂಡಹಳ್ಳಿಯ ಸಾವಿರಾರು ಜನತೆಗೆ ಅನುಕೂಲವಾಗುತ್ತಿತ್ತು. ಆದರೆ ರೈಲ್ವೆ ಬಜೆಟ್‌ನಲ್ಲಿ ಈ ಬೇಡಿಕೆ ಪರಿಗಣನೆಯಾಗಿಲ್ಲ. ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲವಾಗಿದೆ ಎಂದು ರೈಲ್ವೆ ಪ್ರಯಾಣಿಕ ಶಿವಸ್ವಾಮಿ ಪ್ರತಿಕ್ರಿಯಿಸುತ್ತಾರೆ.ಮೈಸೂರು-ಶಿರಡಿ ಎಕ್ಸ್‌ಪ್ರೆಸ್ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈಗಾಗಲೇ ಈ ರೈಲು ವಾರಕ್ಕೊಮ್ಮೆ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಅದೇ ರೈಲಿನ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗಿದೆ. ಆದರೆ ಈ ರೈಲಿನಿಂದ ಈ ಭಾಗದ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗುವುದಿಲ್ಲ ಎಂದು ಅವರು ಹೇಳುತ್ತಾರೆ.ಸತ್ಯಮಂಗಲ ರೈಲು: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು- ಸತ್ಯಮಂಗಲ (260 ಕಿ.ಮೀ) ರೈಲು ಯೋಜನೆ ಬಗ್ಗೆ ಕಳೆದ ರೈಲ್ವೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಕೆಂಗೇರಿ-ಕನಕಪುರ-ಮಳವಳ್ಳಿ-ಚಾಮರಾಜನಗರದ ಮೂಲಕ ಸತ್ಯಮಂಗಲಕ್ಕೆ ಮಾರ್ಗವನ್ನು ಅಂದಾಜು 226 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ತಿಳಿಸಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಸಕ್ತಿಯಿಂದ ತೆಗೆದುಕೊಂಡರೆ, ಕನಕಪುರ ತಾಲ್ಲೂಕಿನ ಜನತೆಗೆ ರೈಲು ಸಂಪರ್ಕದ ಸಂತಸ ಮೂಡುತ್ತದೆ ಎಂದು ಕನಕಪುರ ರೈಲು ಕ್ರಿಯಾ ಸಮಿತಿ ಅಧ್ಯಕ್ಷ ನಾಗರಾಜು ಪ್ರತಿಕ್ರಿಯಿಸುತ್ತಾರೆ.ದರ ಹೆಚ್ಚಳಕ್ಕೆ ಅಸಮಾಧಾನ: ರೈಲು ಪ್ರಯಾಣ ದರವನ್ನು ಹತ್ತು ವರ್ಷಗಳ ಬಳಿಕ ಏರಿಸಲಾಗಿದೆ.  ಇದು ಜನ ಸಾಮಾನ್ಯರಿಗೆ ಹೊರೆಯಾಗುತ್ತದೆ. ದರ ಏರಿಸುವ ರೈಲ್ವೆ ಇಲಾಖೆ, ರೈಲು ನಿಲ್ದಾಣಗಳಲ್ಲಿ ಶುಚಿತ್ವ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಅಲ್ಲದೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸೋತಿದೆ. ಆಧುನೀಕರಣ ಮತ್ತು ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಸಮಯಕ್ಕೆ ಸರಿಯಾಗಿ ರೈಲು ಸಂಚಾರವನ್ನು ಇಲಾಖೆ ಕಾಯ್ದುಕೊಂಡಿಲ್ಲ ಎಂದು ಗೃಹಿಣಿ ಎಸ್.ಮೀನಾಕ್ಷಿ  ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.