ಭಾನುವಾರ, ಜೂನ್ 13, 2021
21 °C

ರಾಮನಗರ ಜಿಲ್ಲೆಯ 579 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ ಜಿಲ್ಲೆಯ 579 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

15.47 ಕೋಟಿ ರೂಪಾಯಿ ಪ್ರಸ್ತಾವ ಸಲ್ಲಿಕೆ

 ರಾಮನಗರ: ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿನ ಒಟ್ಟಾರೆ 579 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದನ್ನು ಪರಿಹರಿಸಲು ಅಂದಾಜು 15.47 ಕೋಟಿ ರೂಪಾಯಿ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಶನಿವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ನಿರ್ಣಯ ತೆಗೆದುಕೊಂಡಿದೆ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.



ಬರ ಹಾಗೂ ಕುಡಿಯು ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ನಗರದ ಕಂದಾಯ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ನಂತರ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.



ನಾಲ್ಕೂ ತಾಲ್ಲೂಕುಗಳಲ್ಲಿನ ಆಯಾ ಶಾಸಕರ ನೇತೃತ್ವದ ತಾಲ್ಲೂಕು ಟಾಸ್ಕ್‌ಫೋರ್ಸ್ ಸಮಿತಿಗಳು ಸಿದ್ಧಪಡಿಸಿದ ವರದಿಯನ್ನು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಪರಿಶೀಲಿಸಿ ಅನುಮೋದಿಸಿತು. ಅದರಂತೆ ರಾಮನಗರ ತಾಲ್ಲೂಕಿನಲ್ಲಿ 90 ಗ್ರಾಮಗಳಲ್ಲಿ, ಚನ್ನಪಟ್ಟಣದಲ್ಲಿ 110 ಗ್ರಾಮಗಳಲ್ಲಿ, ಕನಕಪುರದಲ್ಲಿ 205 ಗ್ರಾಮಗಳಲ್ಲಿ ಹಾಗೂ ಮಾಗಡಿಯಲ್ಲಿ 174 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸಚಿವರು ಪ್ರತಿಕ್ರಿಯಿಸಿದರು.



ಈ 579 ಗ್ರಾಮಗಳ ಪೈಕಿ 431 ಗ್ರಾಮಗಳಿಗೆ ಕೊಳವೆ ಬಾವಿ ಕೊರೆಸುವ ಮೂಲಕ ನೀರು ಪೂರೈಸಲು ಯೋಜಿಸಲಾಗಿದೆ. ಉಳಿದ ಗ್ರಾಮಗಳಿಗೆ ಪರ್ಯಾಯ ನೀರಿನ ಮಾರ್ಗಗಳನ್ನು ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.



ಸರ್ಕಾರದಿಂದ ಹಣ ಬಿಡುಗಡೆಯಾದ ನಂತರ ತುರ್ತು ಅಗತ್ಯ ಇರುವ ಗ್ರಾಮಗಳನ್ನು ಗಮನಕ್ಕೆ ತೆಗೆದುಕೊಂಡು ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ ಎಂದರು.



ಈ ಸಂಬಂಧ ತಹಶೀಲ್ದಾರ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ, ಎಇಇ ಅವರ ಸಮಿತಿಯನ್ನು ರಚಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.



ಒಂದು ವೇಳೆ ಖಾಸಗಿಯವರ ಜಮೀನಿನಲ್ಲಿ ಸಾಕಷ್ಟು ನೀರಿದ್ದರೆ ಉತ್ತಮ ಬೆಲೆ ನೀಡಿ ನೀರನ್ನು ಖರೀದಿಸಲು ಸಹ ಸಭೆಯಲ್ಲಿ ಸೂಚಿಸಲಾಗಿದೆ. ತುರ್ತು ಅಗತ್ಯ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕಳುಹಿಸಲು, ಸಂಚಾರ ವೆಚ್ಚ ವಿನಿಯೋಗಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.



ಸಭೆಯಲ್ಲಿ ರಾಮನಗರ ಶಾಸಕ ಕೆ.ರಾಜು, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ವೆಂಕಟೇಶಪ್ಪ, ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್, ನಾಲ್ಕೂ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.