ಶನಿವಾರ, ಜೂನ್ 12, 2021
24 °C

ರಾಮನಗರ ಸ್ನಾತಕೋತ್ತರ ಕೇಂದ್ರಕ್ಕೆ ರೂ50 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |
ಬೆಂಗಳೂರು: ರಾಮನಗರದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ 50 ಲಕ್ಷ ರೂಪಾಯಿ ಮೀಸಲು, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ `ಒಂದೇ ಹೆಣ್ಣು ಮಗು~ ಹೊಂದಿರುವ ಪೋಷಕರ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ನೀಡುವ ಪ್ರೋತ್ಸಾಹ ಧನ ರೂ. 500ರಿಂದ ಒಂದು ಸಾವಿರ ರೂಪಾಯಿಗಳಿಗೆ ಹೆಚ್ಚಳ, 47ನೇ ಘಟಿಕೋತ್ಸವದಲ್ಲಿ ರ‌್ಯಾಂಕ್ ವಿಜೇತರಿಗೆ ಚಿನ್ನದ ಪದಕ ನೀಡಲು 50 ಲಕ್ಷ ನಿಗದಿ..- ಇವು ಬೆಂಗಳೂರು ವಿಶ್ವವಿದ್ಯಾಲಯದ 2012-13ನೇ ಸಾಲಿನ ಬಜೆಟ್‌ನ ಮುಖ್ಯಾಂಶಗಳು.

ಒಟ್ಟು 232.22 ಕೋಟಿ ರೂಪಾಯಿಗಳ ಬಜೆಟ್‌ಗೆ ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತು ಸೋಮವಾರ ಅನುಮೋದನೆ ನೀಡಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಶ್ವವಿದ್ಯಾಲಯವು ವಿವಿಧ ಮೂಲಗಳಿಂದ 222.80 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಿದ್ದು, 6.42 ಕೋಟಿ ರೂಪಾಯಿಗಳ ಕೊರತೆ ಬಜೆಟ್ ಮಂಡಿಸಲಾಗಿದೆ.ರಾಮನಗರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ಬಜೆಟ್‌ನಲ್ಲಿ 50 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ. ಅಲ್ಲಿನ ಜಿಲ್ಲಾಡಳಿತ ನೂರು ಎಕರೆ ಜಾಗ ನೀಡುವ ಭರವಸೆ ನೀಡಿದ್ದು, ಈ ವರ್ಷವೇ ಜಾಗ ನೀಡಿದಲ್ಲಿ ವಿ.ವಿ. ಆಡಳಿತ ಕಚೇರಿ ಸ್ಥಾಪಿಸಲಾಗುವುದು. ನಂತರದ ವರ್ಷಗಳಲ್ಲಿ ಬೇಡಿಕೆಗೆ ಅನುಗುಣವಾಗಿ ನೆರವು ಒದಗಿಸಲಾಗುವುದು. ಸದ್ಯಕ್ಕೆ ಇನ್ನೂ ಜಿಲ್ಲಾಡಳಿತ ಜಾಗ ನೀಡಿಲ್ಲ ಎಂದು ಕುಲಪತಿ ಡಾ.ಎನ್. ಪ್ರಭುದೇವ್ ಸಭೆಗೆ ತಿಳಿಸಿದರು.ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ `ಒಂದೇ ಹೆಣ್ಣು ಮಗು~ ಹೊಂದಿರುವ ಪೋಷಕರ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲು ಒಂದು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.ದೃಷ್ಟಿಮಾಂದ್ಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸ್ಥಾಪಿಸಿರುವ `ಬ್ರೈಲ್ ಸೆಂಟರ್~ಗೆ 8 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ವಿಶ್ವವಿದ್ಯಾಲಯವು ಪ್ರತಿ ವಿದ್ಯಾರ್ಥಿಗೆ ಮಾಸಿಕ ರೂ. 500ರಂತೆ ಹತ್ತು ತಿಂಗಳಿಗೆ ವಿದ್ಯಾರ್ಥಿ ವೇತನ ನೀಡಲಿದೆ. ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿಗಾಗಿ ಸ್ಥಾಪಿಸಿರುವ ಸೆಲ್‌ಗೆ ರೂ. 1.75 ಲಕ್ಷ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇಮಾಭಿವೃದ್ಧಿಗಾಗಿ 4.90 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೆ ಹಾಗೂ ವಿ.ವಿ. ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ/ಪಾಂಡಿತ್ಯ ವೇತನಕ್ಕಾಗಿ 1.35 ಕೋಟಿ, ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗ ಹಾಗೂ ವಿ.ವಿ. ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಮೆ ಸೌಲಭ್ಯಕ್ಕಾಗಿ 10 ಲಕ್ಷ ಅನುದಾನ ಒದಗಿಸಲಾಗಿದೆ.ಪರೀಕ್ಷಾ ವಿಭಾಗದ ಉನ್ನತೀಕರಣಗೊಳಿಸಲು ಹೊರಗುತ್ತಿಗೆ ಪದ್ಧತಿಯಲ್ಲಿ ಪರೀಕ್ಷಾ ವಿಭಾಗದ ಕೋಡಿಂಗ್ ಹಾಗೂ ಡಿಕೋಡಿಂಗ್ ಮತ್ತು ಸ್ಕ್ಯಾನಿಂಗ್ ಕಾರ್ಯ ಗಣಕೀಕರಣಗೊಳಿಸಲು 8.50 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಈ ವರ್ಷ ಕ್ರೀಡೆಗೆ 62.10 ಲಕ್ಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 31.85 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ.ಪ್ರಮುಖ ವೆಚ್ಚಗಳು: ಬೋಧಕೇತರ ಸಿಬ್ಬಂದಿ ವೇತನ- 32.21 ಕೋಟಿ; ಬೋಧಕ ಸಿಬ್ಬಂದಿ ವೇತನ- 40.71 ಕೋಟಿ; ಪಿಂಚಣಿ ಮತ್ತು ಪಿಂಚಣಿ ವಂತಿಗೆ: 19 ಕೋಟಿ ; ಅತಿಥಿ ಉಪನ್ಯಾಸಕರ ಸಂಭಾವನೆ- ರೂ. 5.65 ಕೋಟಿ  

ಕುಲಪತಿ- ಶೈಕ್ಷಣಿಕ ಪರಿಷತ್ತಿನ ಸದಸ್ಯರ ನಡುವೆ ಜಟಾಪಟಿ
ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸಭೆ ನಡೆಸುವ ವಿಚಾರದಲ್ಲಿ ಸೋಮವಾರ ಕುಲಪತಿ ಹಾಗೂ ಪರಿಷತ್ತಿನ ಸದಸ್ಯರ ನಡುವೆ ಕೆಲಕಾಲ ಜಟಾಪಟಿ ನಡೆಯಿತು. ಕೊನೆಗೆ ಕುಲಪತಿಗಳ ಬಿಗಿ ಪಟ್ಟಿಗೆ ಮಣಿದ ಸದಸ್ಯರು ಬೋರ್ಡ್‌ರೂಂನಿಂದ ಸೆಮಿನಾರ್ ಹಾಲ್‌ಗೆ ತೆರಳಿ ಸಭೆ ನಡೆಸಲು ಸಹಕರಿಸಿದರು.

ಬೆಳಿಗ್ಗೆ 11 ಗಂಟೆಗೆ ಪರಿಷತ್ತಿನ ಸಭೆ ನಿಗದಿಯಾಗಿತ್ತು. ನಿಗದಿತ ವೇಳೆಗೆ ಬಂದ ಸದಸ್ಯರು ಬೋರ್ಡ್ ರೂಂನಲ್ಲಿ ಕುಳಿತರು. ಆದರೆ, ಕುಲಪತಿ ಡಾ.ಎನ್. ಪ್ರಭುದೇವ್ ಮಾತ್ರ ಸುಮಾರು ಹೊತ್ತು ಬೋರ್ಡ್ ರೂಂಗೆ ಬರಲೇ ಇಲ್ಲ. ಬದಲಿಗೆ, ಕೋರಂ ಸಿಕ್ಕದ ನಂತರ ಸದಸ್ಯರಿಗೆ ಗೊತ್ತಿಲ್ಲದಂತೆ ಬಂದು ಸೆಮಿನಾರ್ ಹಾಲ್‌ನಲ್ಲಿ ಒಬ್ಬರೇ ಬಂದು ಕುಳಿತಿದ್ದರು.

ಸುಮಾರು 20-25 ನಿಮಿಷಗಳಾದರೂ ಕುಲಪತಿಗಳು ಸಭೆಗೆ ಬಾರದಿದ್ದರಿಂದ ಕುಲಸಚಿವ ಡಾ.ಬಿ.ಸಿ. ಮೈಲಾರಪ್ಪ, ಕುಲಸಚಿವ (ಮೌಲ್ಯಮಾಪನ) ಟಿ.ಆರ್. ಸುಬ್ರಮಣ್ಯ ಹಾಗೂ ವಿತ್ತಾಧಿಕಾರಿ ಪ್ರೊ.ಎನ್. ರಂಗಸ್ವಾಮಿ ಬೋರ್ಡ್ ರೂಂನಿಂದ ಹೊರಗಡೆ ತೆರಳಿದರು. ಈ ಸಂದರ್ಭದಲ್ಲಿ ಕುಲಪತಿಗಳೊಬ್ಬರೇ ಸೆಮಿನಾರ್ ಹಾಲ್‌ನಲ್ಲಿ ಕುಳಿತಿದ್ದನ್ನು ಗಮನಿಸಿದ ಕುಲಸಚಿವರು, ಅವರನ್ನು ಬೋರ್ಡ್ ರೂಂಗೆ ಬರುವಂತೆ ಆಹ್ವಾನ ನೀಡಿದರು. ಆದರೆ, ಬೋರ್ಡ್ ರೂಂಗೆ ಬರಲು ಕುಲಪತಿ ಒಪ್ಪಲಿಲ್ಲ.

ಈ ಸಂದರ್ಭದಲ್ಲಿ ಬೋರ್ಡ್ ರೂಂನಿಂದ ಹೊರ ಬಂದ ಶೈಕ್ಷಣಿಕ ಪರಿಷತ್ತಿನ ಸದಸ್ಯರು ಕುಲಪತಿಗಳ ಜತೆ ವಾಗ್ವಾದಕ್ಕಿಳಿದರು. ಬೋರ್ಡ್ ರೂಂನಲ್ಲಿ ಮೈಕ್ ಸೇರಿದಂತೆ ಸಭೆ ನಡೆಸಲು ಅಗತ್ಯವಾದ ಎಲ್ಲ ಸೌಲಭ್ಯಗಳಿವೆ. ಹೀಗಾಗಿ, ಅಲ್ಲೇ ಸಭೆ ನಡೆಸಿ ಎಂದು ಒತ್ತಾಯಿಸಿದರು. ಆದರೆ, ಸದಸ್ಯರ ಮನವಿಗೆ ಕುಲಪತಿಗಳು ಜಗ್ಗಲಿಲ್ಲ. ಸದಸ್ಯೆ ಜ್ಯೋತಿ, `ಒಳ್ಳೆ ಮಕ್ಕಳ ರೀತಿ ವರ್ತಿಸುತ್ತಿದ್ದೀರಿ~ ಎಂದು ಕುಲಪತಿಗಳ ವಿರುದ್ಧ ಹರಿಹಾಯ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಕುಲಪತಿಗಳು, `ನೀವ್ಯಾರೂ ನನಗೆ ಗೌರವ ಕೊಡುವುದಿಲ್ಲ ಎಂಬುದು ಗೊತ್ತಿದೆ. ಇನ್ನು 10 ನಿಮಿಷ ಅವಕಾಶ ನೀಡುತ್ತೇನೆ. ಇಲ್ಲದಿದ್ದರೆ ಸಭೆ ಮುಂದೂಡುತ್ತೇನೆ~ ಎಂದು ಬೆದರಿಕೆ ಹಾಕಿದರು. ಈ ಸಂದರ್ಭದಲ್ಲಿ ಇನ್ನೂ ಕೆಲವು ಸದಸ್ಯರು ಕುಲಪತಿಗಳ ವಿರುದ್ಧ ತಿರುಗಿ ಬಿದ್ದರು. ಕೊನೆಗೂ ಕುಲಪತಿಗಳು ತಮ್ಮ ಪಟ್ಟು ಸಡಿಲಿಸದೆ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸದಸ್ಯರೇ ಸೆಮಿನಾರ್ ಹಾಲ್‌ನಲ್ಲಿ ಕುಳಿತು ಸಭೆ ನಡೆಸಲು ಸಹಮತ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.