ಸೋಮವಾರ, ಮೇ 23, 2022
27 °C

ರಾಮಾಯಣ ಬದುಕು ರೂಪಿಸುವ ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ಭಾರತೀಯ ಸಂಸ್ಕೃತಿಯ ಜನಜೀವನದ ಬಹುಮುಖ್ಯ ಅಂಗವಾದ ರಾಮಾಯಣವು ಕೇವಲ ಕಾವ್ಯಕೃತಿಯಾಗಿರದೆ ಉತ್ತಮ ಬದುಕನ್ನು ನಿರೂಪಿಸುವ ಹಾಗೂ ಮಾನವ ಮಾಧವತ್ವದೆಡೆಗೆ ಸಾಗಲು ಸಾಧ್ಯವೆಂಬ ಸತ್ಯವನ್ನು ಲೋಕಕ್ಕೆ ತಿಳಿಸುವಂತಹ ಅಸಾಧಾರಣ ಸಾಹಿತ್ಯ ಕೃತಿಯಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಹೇಳಿದರು.ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿ ಮಹಾಶಿವರಾತ್ರಿ ಉತ್ಸವದ ನಿಮಿತ್ತ ಆಯೋಜಿತವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯಜೀವನದ ಒಳಿತು- ಕೆಡುಕುಗಳನ್ನು ನೋವು ನಲಿವುಗಳನ್ನು ತೋರಿಸಿ ದೋಷರಹಿತವಾದ, ಸಹಜೀವಿಗಳಿಗೆ ಉಪಯುಕ್ತವೂ ಆದ ಬದುಕನ್ನು ಹೇಗೆ ರೂಢಿ ಸಿಕೊಳ್ಳಲು ರಚನೆಯಾದ ಕಾವ್ಯಕೃತಿ ರಾಮಾಯಣ ಎಂದರು.ಮಾನವ ಸಹಜವಾದ ಎಲ್ಲ ಘಟನೆಗಳೂ ಈ ಕೃತಿಯಲ್ಲಿ ಅಸಾಧಾರಣವಾದ ರೀತಿಯಲ್ಲಿ ಮೂಡಿಬಂದಿವೆ. ಭೂಮಿಯಲ್ಲಿ ಆದ ದೋಷವನ್ನು ಸರಿಪಡಿಸಲೆಂದು ಆ ಭಗವಂತನೇ ಭೂಮಿಗಿಳಿದು ಬಂದಘಟನೆಯೇ ರಾಮಾಯಣವಾಗಿ ರೂಪು ಪಡೆಯಿತು ಎಂದರು.ಕಹಿಯಾದ ಔಷಧವನ್ನು ಜೇನುಬೆರಸಿ ತೆಗೆದುಕೊಳ್ಳುವಂತೆ ರಾಮಾಯಣವು ನಮ್ಮ ಬದುಕಿಗೆ ಅಗತ್ಯವಾದ ತತ್ವಗಳನ್ನು ಕಥೆಗಳ ಮೂಲಕ ಉಪದೇಶಿಸುತ್ತದೆ. ಹಾಗೆಯೇ ರಾಮಾಯಣವು ಒಂದು ಆದರ್ಶ ಅಥವಾ ಕನ್ನಡಿ. ನಮ್ಮ ಮುಖದ ಓರೆ ಕೋರೆಗಳನ್ನು ಕನ್ನಡಿಯಲ್ಲಿ ನೋಡಿ ತಿದ್ದಿಕೊಳ್ಳುವಂತೆ ಜೀವನದ ಲೋಪದೋಷಗಳನ್ನು ರಾಮಾಯಣದ ತತ್ವಗಳಿಗನುಸಾರವಾಗಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಸ್ವಾಮೀಜಿ ನುಡಿದರು.ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರದೀಪ ನಾಯಕ, ತಾ.ಪಂ, ಅಧ್ಯಕ್ಷೆ ನೀಲಾಂಬಿಕಾ ನಾಯಕ್, ಶಿವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಡಾ. ವಿ.ಆರ್.ಮಲ್ಲನ್ ವೇದಿಕೆಯಲ್ಲಿದ್ದರು. ರಾಮಕಥೆಯಲ್ಲಿ ಖ್ಯಾತ ಗಾಯಕ ಪರಮೇಶ್ವರ ಹೆಗಡೆ ಹಾಗೂ ಶ್ರೀಪಾದ ಭಟ್ ಶ್ರೀರಾಮಗುಣಗಾನವನ್ನು ಗೀತೆಯ ಮುಖಾಂತರ ಪ್ರಸ್ತುತ ಪಡಿಸಿ ಸಮಾರಂಭಕ್ಕೆ ನಾದಸುಧೆಯ ಸಿಂಚನವನ್ನು ನೀಡಿದರು. ಶಿತಿಕಂಠ ಭಟ್ಟ ಹಿರೇ ದಂಪತಿ ಸ್ವಾಮೀಜಿಯವರಿಗೆ ಫಲಕಾಣಿಕೆಯನ್ನು ಸಮರ್ಪಿಸಿದರು. ಮಾಧ್ಯಮ ವಿಭಾಗದ ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.  ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.