ಶನಿವಾರ, ಮೇ 8, 2021
26 °C

ರಾಶಿ ರಾಶಿ ಗಣೇಶ, ಪತ್ರಿಕೆಯೂ ವಿಶೇಷ

ಡಿ. ಯಶೋದಾ Updated:

ಅಕ್ಷರ ಗಾತ್ರ : | |

1961ರಲ್ಲಿ ಶುರುವಾದ ಫೈನಾನ್ಶಿಯಲ್ ಎಕ್ಸ್‌ಪ್ರೆಸ್, 1972ರಲ್ಲಿ ಆರಂಭವಾದ ಡೆಬೊನಾಯರ್‌ನ ಮೊದಲ ಪ್ರತಿ, ಮನೇಕಾ ಗಾಂಧಿ ಸಂಪಾದಕತ್ವದ ಸೂರ್ಯ ಇಂಡಿಯಾ ನಿಯತಕಾಲಿಕೆ, 1961ರ ದಿ ಎಕಾನಮಿಕ್ ಟೈಮ್ಸ, 1959ರ ಕಾಕ್‌ಟೈಲ್ ಮ್ಯಾಗಜೀನ್... ಇಂಥ ಇನ್ನೂ ಹಲವಾರು ಪತ್ರಿಕೆಗಳ ಮೊದಲ ಸಂಚಿಕೆಯ ಪ್ರತಿಗಳನ್ನು ನೋಡಬೇಕೇ? ಹಾಗಿದ್ದರೆ ಬೆಂಗಳೂರಿನ ಪ್ರಭಾಕರ ಕಿಣಿ ಅವರನ್ನು ಭೇಟಿಯಾಗಲೇಬೇಕು. ಒಂದು ಪತ್ರಿಕೆಯ ಆಯುಷ್ಯ ಒಂದೇ ದಿನ. ಮ್ಯೋಗಜಿನ್‌ಗಳು ಒಂದು ವಾರ, ಹದಿನೈದು ದಿನ, ತಿಂಗಳು, ಎರಡು ತಿಂಗಳು ಬದುಕಿರಬಹುದು. ನಂತರ ಅವು ರದ್ದಿ.  ಇಂಥ ಪರಿಸ್ಥಿತಿಯಲ್ಲಿ ಸುಮಾರು 40 ವರ್ಷಗಳ ಹಳೆಯ ಪೇಪರ್‌ಗಳು, ನಿಯತಕಾಲಿಕೆಗಳು ಈಗಲೂ ಸಿಗುತ್ತವೆ ಎಂದರೆ ಅವು ಕೇವಲ ಪತ್ರಿಕಾ ಕಚೇರಿಗಳಲ್ಲಿ ಮಾತ್ರ ಎಂದು ಅನ್ನಿಸಬಹುದು. ಬಹಳಷ್ಟು ಪತ್ರಿಕಾ ಕಚೇರಿಗಳಲ್ಲಿ ಆಯಾ ಪತ್ರಿಕೆಗಳ ಸಂಗ್ರಹವಷ್ಟೇ ಇರುತ್ತದೆ. ಆದರೆ ಅಪರೂಪದ, ವಿಶೇಷ ಸಂಚಿಕೆಗಳ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಕಿಣಿ ಅವರ ಸಂಗ್ರಹದಲ್ಲಿ ಮಾತ್ರ ಲಭ್ಯ. ಹಿರಿಯ ನಿವೃತ್ತ ಸಾಫ್ಟ್‌ವೇರ್ ಉದ್ಯಮಿಯಾದ ಬೆಂಗಳೂರಿನ 74ರ ಪ್ರಭಾಕರ ಕಿಣಿ ಅವರು ಅಪರೂಪದ ವೃತ್ತ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಸಂಗ್ರಹಿಸಿಕೊಂಡು ಬಂದಿದ್ದಾರೆ. ಇವರ ಸಂಗ್ರಹದಲ್ಲಿ ಸುಮಾರು 1950ರಿಂದ ಶುರುವಾದ ಬಹಳಷ್ಟು ಪತ್ರಿಕೆಗಳ ಮತ್ತು ನಿಯತಕಾಲಿಕೆಗಳ ಮೊದಲ ಸಂಚಿಕೆಯ ಪ್ರತಿಗಳು ಇವೆ.  ಪದವಿಯ ನಂತರ ಕೆಲಸ ಅರಸಿ ಮುಂಬೈಗೆ ಹೋದ ಕಿಣಿ ಅವರಿಗೆ ಪತ್ರಕರ್ತರೊಬ್ಬರ ಪರಿಚಯವಾಯಿತು. ಅವರಿಂದ ಕಿಣಿ ಅವರಿಗೆ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಮೂಡಿತು. ತಾವೂ ಪತ್ರಕರ್ತರಾಗಬೇಕೆಂದುಕೊಂಡರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಪತ್ರಿಕೋದ್ಯಮದ ಬಗ್ಗೆ ತಮಗಿದ್ದ ಆಸಕ್ತಿ ಕಳೆದುಕೊಳ್ಳಲಿಲ್ಲ. ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಸಂಗ್ರಹಿಸುತ್ತಾ ಬಂದರು. ಇವರ ಸಂಗ್ರಹದಲ್ಲಿ ಸುಮಾರು 300 ದಿನಪತ್ರಿಕೆ, ನಿಯತಕಾಲಿಕೆ ಮತ್ತು ಚಿತ್ರಕಲೆಯ ಕೆಲವು ಪುಸ್ತಕಗಳೂ ಇವೆ.

  ಸ್ಪೋರ್ಟ್ಸ್‌ಸ್ಟಾರ್, ಬೆಂಗಳೂರು ಆವೃತ್ತಿಯ ಟೈಮ್ಸ ಆಫ್ ಇಂಡಿಯಾ, ಎಕಾನಮಿಕ್ ಟೈಮ್ಸ, ದಿ ಸಂಡೇ ಟೈಮ್ಸ, ದಿ ಮಿಂಟ್, ಮಾತೃಭೂಮಿ, ಹೊಸ ದಿಗಂತ, ಹಿಂದೂ- ಬಿಸಿನೆಸ್ ಲೈನ್, ಡಿಎನ್‌ಎ ಮೊದಲಾದವು ಪ್ರಥಮ ಸಂಚಿಕೆ ಪತ್ರಿಕೆಗಳು.ಇಂಟೀರಿಯರ್ಸ್‌, ಸ್ಟಾರ್‌ಡಸ್ಟ್, ನ್ಯೂಡೆಲ್ಲಿ , ಬಿಸಿನೆಸ್ ಇಂಡಿಯಾ, ಸೂರ್ಯ, ಸೊಸೈಟಿ, ಬಿಸಿನೆಸ್ ವರ್ಲ್ಡ್, ಜಿಎಫ್‌ಕ್ಯೂ, ಟೆಕ್ನೋಕ್ರಾಟ್, ಅಲ್ಟ್ರಾ, ಇಂಡಿಯಾ ಟುಡೇ (ಹಿಂದಿ), ಸಿನಿಬ್ಲಿಜ್ ಇನ್ನಿತರ ಪ್ರಥಮ ಸಂಚಿಕೆಯ ನಿಯತಕಾಲಿಕೆಗಳು.ವೈವಿಧ್ಯ ಗಣೇಶ

ಕಿಣಿ ಅವರ ಇನ್ನೊಂದು ಹವ್ಯಾಸ ಗಣೇಶ ಮೂರ್ತಿಗಳ ಸಂಗ್ರಹ. ಸಾಂತಾಕ್ಲಾಸ್ ಗಣೇಶ , ಕಾಂಗರೂ ಗಣೇಶ, ಹಮ್ಟಿಡಮ್ಟಿ ಗಣೇಶ, ರಿಕ್ಷಾ ಗಣೇಶ, ಮೊಬೈಲ್ ಗಣೇಶ, ಬೇಡರ ಗಣೇಶ, ಹನುಮಾನ್ ಗಣೇಶ, ಮಧ್ವಾಚಾರ್ಯ ಗಣೇಶ, ಶ್ರಿ ರಾಮ ಗಣೇಶ, ಲ್ಯಾಪ್‌ಟಾಪ್ ಗಣೇಶ, ಕುಬೇರ ಗಣೇಶ ಹೀಗೆ ಹಲವಾರು ರೂಪಗಳ ಗಣೇಶ ಇವರ ಸಂಗ್ರಹದಲ್ಲಿವೆ. ಅಷ್ಟೇ ಅಲ್ಲ, ಸುಮಾರು 200ಕ್ಕೂ ಹೆಚ್ಚಿನ ವಿಭಿನ್ನವಾದ ಗಣೇಶನ ಪೇಂಟಿಂಗ್‌ಗಳು ಹಾಗೂ 200ಕ್ಕೂ ವಿವಿಧ ರೀತಿಯ ಗಣೇಶ ಮೂರ್ತಿಗಳು ಇವೆ.ಹಾಗಾಗಿ ತಮ್ಮ ಸಂಗ್ರಹಾಲಯಕ್ಕೆ ಗಣೇಶ ವೈವಿಧ್ಯಂ ಎಂದು ಹೆಸರಿಟ್ಟಿದ್ದಾರೆ. ಭಾರತದ ವಿವಿಧೆಡೆ ಹಾಗೂ ವಿದೇಶಗಳಿಂದಲೂ ಗಣೇಶನನ್ನು ತಂದು ಸಂಗ್ರಹಿಸಿದ್ದಾರೆ. ಇವರ ಗಣೇಶ ಸಂಗ್ರಹದಲ್ಲಿ  ಕ್ರಿಸ್ಟಲ್ ಗಣೇಶಗಳೇ ಪ್ರತ್ಯೇಕ ಹಾಗೂ ಗಾಜಿನ ಗಣೇಶಗಳೇ ಪ್ರತ್ಯೇಕ. ತಾವು ಭೇಟಿ ನೀಡುವ ಪ್ರತಿಯೊಂದು ದೇಶದ ಸಂಸ್ಕೃತಿ- ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ವಸ್ತುಗಳನ್ನು ಕೊಂಡು ಸಂಗ್ರಹಿಸುವುದು ಕಿಣಿ ಅವರ ಮತ್ತೊಂದು ಹವ್ಯಾಸ.40 ವರ್ಷಗಳ ತಮ್ಮ ಈ ಹವ್ಯಾಸದಿಂದ ತುಂಬಾ ಖುಷಿಯಾಗಿದ್ದರೂ ಅವುಗಳ ನಿರ್ವಹಣೆ ಕಷ್ಟ ಎನ್ನುತ್ತಾರೆ ಕಿಣಿ. ತಮ್ಮಲ್ಲಿರುವ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪತ್ರಿಕೆಗಳು, ಪುಸ್ತಕಗಳು, ನಿಯತಕಾಲಿಕಗಳನ್ನು ಅವರು ಯಾವುದಾದರೂ ಪತ್ರಿಕೋದ್ಯಮ ಕಾಲೇಜಿಗೆ ಕೊಡಬೇಕೆಂದುಕೊಂಡಿದ್ದಾರೆ. ಮ್ಯೂಸಿಯಂ ದೊಡ್ಡದು ಮಾಡುವ ಆಲೋಚನೆಯಿದ್ದು, ಮ್ಯೂಸಿಯಂ ವಿಸ್ತಾರಕ್ಕೆ ಸ್ಥಳದ ನೆರವು ದೊರೆತರೆ ಅನುಕೂಲ. ಸಂಪರ್ಕಕ್ಕೆ 080- 2676 706

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.