ಶನಿವಾರ, ಜೂಲೈ 4, 2020
24 °C

ರಾಷ್ಟ್ರಕವಿಗೆ ಸಾಹಿತ್ಯಾಭಿಮಾನಿಗಳ ಸಂತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ನಿಧನಕ್ಕೆ ಸಾಹಿತಿಗಳು, ಸ್ವಾಮೀಜಿಗಳು, ಸಾಹಿತ್ಯಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.‘ಮೌಲ್ಯಗಳು ಪತನಗೊಳ್ಳುತ್ತಿರುವ ಈ ಕಾಲದಲ್ಲಿ ಒಬ್ಬ ವ್ಯಕ್ತಿಯಾಗಿ ಘನತೆಯಿಂದ ಹೇಗೆ ಬದುಕಬೇಕು ಎಂಬುದಕ್ಕೆ ಆದರ್ಶವಾಗಿದ್ದರು. ಮೇಲ್ನೋಟಕ್ಕೆ ಗಂಭೀರ ವ್ಯಕ್ತಿಯಾಗಿ ಕಂಡರೂ ಮನುಷ್ಯ ಪ್ರೀತಿ ಸ್ಥಾಯಿಯಾಗಿ ಇಟ್ಟುಕೊಂಡಿದ್ದರು. ಕುವೆಂಪು ಅವರ ನೆಚ್ಚಿನ ಶಿಷ್ಯನಾಗಿ ಕುವೆಂಪು ಪರಂಪರೆಯಲ್ಲಿ ಮುಂದುವರಿದಿದ್ದರು’ ಎಂದು ಸ್ಮರಿಸುತ್ತಾರೆ ಸಾಹಿತಿ ಡಾ.ಶ್ರೀಕಂಠ ಕೂಡಿಗೆ.ಸಂಸ್ಕೃತಿ ಚಿಂತಕ ಡಿ.ಎಸ್‌.ನಾಗಭೂಷಣ್‌, ‘ಜಿಎಸ್‌ಎಸ್‌ ಜೀವನ ಪ್ರೀತಿ, ಶ್ರದ್ಧೆ, ಶಿಸ್ತು, ಅಚ್ಚುಕಟ್ಟುತನ, ಹಿತಮಿತವಾದ ವಿನೋದ ಹಾಗೂ ಸಹಜ ಸಂಕೋಚದ ಆದರ್ಶ ವ್ಯಕ್ತಿತ್ವ. ಇದು ನಮ್ಮ ತಲೆಮಾರಿಗೆ ಮಾದರಿ’ ಎಂದು ಸ್ಮರಿಸುತ್ತಾರೆ ಅವರು.ಶಿವರುದ್ರಪ್ಪ ನಾಡಿನ ಒಬ್ಬ ಸಾಂಸ್ಕೃತಿಕ ಧೀಮಂತ ನಾಯಕ. ನಾಡಿನ ನಿಜವಾದ ನಾಡೋಜರಾಗಿದ್ದರು. ಸಾಹಿತ್ಯ ಜೀವನದ ನಿಜವಾದ ಗತಿಬಿಂಬ ಎಂದೇ ಅವರು ಪ್ರತಿಪಾದಿಸುತ್ತಿದ್ದರು. ಅವರ ನೆನಪು ನಮಗೆಲ್ಲಾ ಶಕ್ತಿ ಎಂದು ಸ್ಮರಿಸುತ್ತಾರೆ ಕವಿ ಸತ್ಯನಾರಾಯಣ ಅಣತಿ.ಜಿಎಸ್‌ಎಸ್‌ ಅವರ ನಿಧನಕ್ಕೆ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಸಾಗರದ ಶಿರವಂತೆ ಚಿತ್ರಸಿರಿಯ ಚಂದ್ರಶೇಖರ್, ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ.ಹಾಗೆಯೇ, ವಿನೋಬನಗರ ಕಲ್ಲಹಳ್ಳಿಯ ಪ್ರಿಯದರ್ಶನಿ ಆಂಗ್ಲ ಶಾಲೆಯಲ್ಲಿ ಸೋಮವಾರ ಸಂತಾಪ ಸಭೆ ನಡೆಸಿ, ಗಾಯಕರಾದ ಕೆ.ಯುವರಾಜ್‌, ಶಾಂತಾ ಶೆಟ್ಟಿ ಮತ್ತಿತರರು ಜಿಎಸ್‌ಎಸ್‌ ಅವರ ಗೀತೆಗಳನ್ನು ಹಾಡಿದರು. ಸಂಸ್ಥೆಯ ಎನ್‌.ರಮೇಶ್‌, ಪ್ರಾಂಶುಪಾಲೆ ಸುನೀತಾದೇವಿ ಮತ್ತಿತರರು ಉಪಸ್ಥಿತರಿದ್ದರು.

ಬಸವಕೇಂದ್ರದಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿ ನಡೆದ ಸಂತಾಪ ಸಭೆಯಲ್ಲಿ ಬೆನಕಪ್ಪ, ರುದ್ರಮುನಿ ಸಜ್ಜನ್‌, ಕತ್ತಿಗೆ ಚೆನ್ನಪ್ಪ ಮತ್ತಿತರರು ಜಿಎಸ್‌ಎಸ್‌ ಅವರಿಗೆ ಸಂತಾಪ ಸೂಚಿಸಿದರು.ಪಂಚಾಯತ್ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಜಿಎಸ್‌ಎಸ್‌ ಅವರ ಸಾಧನೆಗಳನ್ನು ಸ್ಮರಿಸಲಾಯಿತು.

ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಸ್.ಎಂ.ಹರೀಶ್, ಗಣೇಶ್‌ ಮತ್ತು ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.ಕನ್ನಡವನ್ನು ವೈಚಾರಿಕ ನೆಲೆಯಲ್ಲಿ ಕಟ್ಟಿದ ಕವಿ

ಸಾಗರ:
ಕನ್ನಡವನ್ನು ವೈಚಾರಿಕ ನೆಲೆಯಲ್ಲಿ ಕಟ್ಟಿದ ಅಪರೂಪದ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಸ್ಮರಿಸಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ್ದ ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರ ಹೃದಯವನ್ನು ತಮ್ಮ ಕಾವ್ಯದ ಮೂಲಕ ತಟ್ಟಿರುವ ಜಿ.ಎಸ್.ಎಸ್ ಅಗಲಿದ ದಿನ ಕನ್ನಡ ಸಾಹಿತ್ಯಾಸಕ್ತರ ಪಾಲಿಗೆ ಅತ್ಯಂತ ದು:ಖದ ದಿನವಾಗಿದೆ ಎಂದರು.ಸಾಹಿತಿ ಡಾ.ಕಾಳೇಗಾಡ ನಾಗವಾರ ಮಾತನಾಡಿ,  1953ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ವಿದ್ಯಾರ್ಥಿಯಾಗಿದ್ದಾಗ ಜಿ.ಎಸ್.ಎಸ್ ಕನ್ನಡ ಅಧ್ಯಾಪಕರಾಗಿ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ರ ‘ಯಶೋಧರ’ ನಾಟಕವನ್ನು ಪಾಠ ಮಾಡಿದ ದಿನಗಳನ್ನು ನೆನಪಿಸಿಕೊಂಡ ನಾ.ಡಿಸೋಜ ಆ ನಾಟಕದ ಪಾಠದ ಜೊತೆಗೆ ಬುದ್ದನ ಸಮಗ್ರ ವ್ಯಕ್ತಿತ್ವವನ್ನು ಜಿ.ಎಸ್.ಎಸ್ ಪರಿಚಯ ಮಾಡಿಕೊಟ್ಟ ಬಗೆಯನ್ನು ವಿವರಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಮಂಜುನಾಥ್, ತಾಲ್ಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ತಹಶೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ನಾಗಭೂಷಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಸವರಾಜ್

ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.