ಶುಕ್ರವಾರ, ಮೇ 27, 2022
27 °C

ರಾಷ್ಟ್ರೀಯ ಕೃಷಿ ಮೇಳಕ್ಕೆ ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತನ್ನ ಇತಿಹಾಸದಲ್ಲಿ ಇದೇ ಮೊದಲು ಬಾರಿಗೆ ರಾಷ್ಟ್ರೀಯ ಕೃಷಿ ಮೇಳವನ್ನು ಸಂಘಟಿಸಲು ಪೂರಕ ಸಿದ್ಧತೆ ನಡೆಸಿದೆ.ನವೆಂಬರ್ 16ರಿಂದ 20ರವರೆಗೆ ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆಯಲಿರುವ ಈ ಕೃಷಿ ಮೇಳ ನಿಜವಾದ ಅರ್ಥದಲ್ಲಿ `ರಾಷ್ಟ್ರೀಯ ಮಟ್ಟದ ಮೇಳ~ ಮಾಡಲು ನಿರ್ಧರಿಸಿದೆ. ದಕ್ಷಿಣದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಪ್ರಾಧ್ಯಾಪಕರು ಮತ್ತು ಪ್ರಗತಿಪರ ರೈತರು ಐದು ದಿನಗಳ ಈ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.ಜೊತೆಗೆ ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆಗಳಾದ ದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್),ಭೋಪಾಲ್‌ನ ಕೇಂದ್ರೀಯ ಕೃಷಿ ಎಂಜಿನಿಯರಿಂಗ್ ಸಂಸ್ಥೆ (ಸಿಐಎಇ) ಮತ್ತಿತರ ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗವಹಿಸಲಿದ್ದಾರೆ. ಸಿಐಎಇತಜ್ಞರು ತಾವು ಕೈಗೊಂಡಿರುವ ಕೃಷಿ ಪರಿಕರಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.ಎಂದಿನಂತೆ ಕೃಷಿ ವಿ.ವಿ.ಯ ವಿಜ್ಞಾನಿಗಳು ಸಂಶೋಧಿಸಿದ ನೂತನ ತಳಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ. ಆದರೆ ಈ ಬಾರಿಯ ವಿಶೇಷವೆಂದರೆ ಕಾರ್ಯಕ್ರಮ ಮತ್ತು ಚರ್ಚಾಗೋಷ್ಠಿಗಳು ನಡೆಯುವ ಮುಖ್ಯ ವೇದಿಕೆಯ ಪಕ್ಕದಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆಯ ತಾಕುಗಳನ್ನು ಬೆಳೆಸುತ್ತಿರುವುದು. ಆಹಾರ ಬೆಳೆಗಳು ಮತ್ತು ಅವುಗಳ ಮೌಲ್ಯವರ್ಧನೆಯ ಬಗ್ಗೆ ತಿಳಿವಳಿಕೆ ನೀಡುವುದೂ ಈ ಮೇಳದ ಉದ್ದೇಶಗಳಲ್ಲೊಂದು. ಆದ್ದರಿಂದ ಹೆಚ್ಚುವರಿಯಾಗಿ 50 ಮಳಿಗೆಗಳನ್ನು ಸ್ಥಾಪಿಸಿ ಆಹಾರ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.ಯುವ ಕೃಷಿಕ ಪ್ರಶಸ್ತಿ: ಯುವಕರು ಕೃಷಿಯನ್ನು ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಸ್ಥಿತಿ ಗಂಭೀರಗೊಳ್ಳಲಿದೆ ಎಂಬುದನ್ನು ಅರಿತ ವಿ.ವಿ. ಕೆಲ ತಿಂಗಳ ಹಿಂದೆ `ಯುವ ಕೃಷಿಕರ ರಾಷ್ಟ್ರೀಯ ಕಾರ್ಯಾಗಾರ~ವನ್ನೂ ಏರ್ಪಡಿಸಿತ್ತು. ಇದೀಗ ಯುವ ರೈತರನ್ನು ಪ್ರೋತ್ಸಾಹಿಸಲು ತನ್ನ ವ್ಯಾಪ್ತಿಯ 17 ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ `ಉತ್ತಮ ಯುವ ಕೃಷಿಕ~ ಮತ್ತು `ಉತ್ತಮ ಯುವ ಕೃಷಿಕ ಮಹಿಳೆ~ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.

 

ಪ್ರತಿ ಮೇಳದಲ್ಲಿ ನೀಡುವ ಉತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಯ ಜೊತೆಯಲ್ಲೇ ಈ ಪ್ರಶಸ್ತಿ ನೀಡಲಿದ್ದು, ತಲಾ ಎರಡು ಸಾವಿರ ರೂಪಾಯಿ ನಗದು ಬಹುಮಾನ ಹೊಂದಿರುತ್ತದೆ.ಪ್ರತಿವರ್ಷವೂ ಮೇಳಕ್ಕೆ ಭೇಟಿ ನೀಡುವ ರೈತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಐದು ದಿನಗಳಿಗೆ (ಇಲ್ಲಿಯವರೆಗೆ ನಾಲ್ಕು ದಿನ ನಡೆಯುತ್ತಿತ್ತು) ಹೆಚ್ಚಿಸಿದೆ. ಕಳೆದ ಬಾರಿ 6 ಲಕ್ಷ ರೈತರು, ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಕನಿಷ್ಠ 10 ಲಕ್ಷ ರೈತರು ಭೇಟಿ ನೀಡಬಹುದು ಎಂದು ವಿ.ವಿ. ಅಂದಾಜಿಸಿದೆ.ಈ ಮೇಳದ ಉದ್ದೇಶ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕುಲಪತಿ ಡಾ.ಕೆ.ನಾರಾಯಣಗೌಡ, `ಹೆಚ್ಚುತ್ತಿರುವ ನಗರೀಕರಣದಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ನಗರಗಳಿಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆ 1980-90ರ ದಶಕದಲ್ಲಿ ನಡೆಯಿತು. 1990-2000ರ ದಶಕದಲ್ಲಿ ಕೃಷಿಗೆ ಪೂರಕವಾದ ಉಪಕರಣಗಳನ್ನು ತಯಾರಿಸುತ್ತಿದ್ದ ಕುಶಲಕರ್ಮಿಗಳೂ ವಲಸೆ ಹೊರಟರು.ಇನ್ನೈದು ವರ್ಷ ಕಳೆದರೆ ಬೃಹತ್ ಪ್ರಮಾಣದ ಕೃಷಿಯಲ್ಲಿ ತೊಡಗಿರುವ ರೈತರೂ ನಗರಗಳತ್ತ ಮುಖ ಮಾಡಿದರೆ ಅಚ್ಚರಿ ಇಲ್ಲ. ಆಗ ಆಹಾರ ಉತ್ಪಾದನೆ ಕೊರತೆ ಗಂಭೀರ ಸಮಸ್ಯೆಯಾಗಲಿದೆ. ಈ ಬಗ್ಗೆ ಮೇಳದಲ್ಲಿ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಯುವ ರೈತರಿಗೆ ಪ್ರಶಸ್ತಿ ನೀಡುತ್ತಿರುವುದೂ ಸಹ ಅವರನ್ನು ಕೃಷಿಯತ್ತ ಉತ್ತೇಜಿಸುವುದಕ್ಕಾಗಿ~ ಎಂದರು.

ಮಳಿಗೆ ಸ್ಥಾಪನೆಗೆ ಅರ್ಜಿ ಆಹ್ವಾನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಆಹಾರ ಮತ್ತು ಮೌಲ್ಯವರ್ಧನೆಯ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸಿದೆ.ವಿವಿಧ ಸರ್ಕಾರಿ ಸಂಸ್ಥೆಗಳು, ನಿಗಮ, ಸರ್ಕಾರೇತರ ಸಂಸ್ಥೆಗಳು, ಮಂಡಳಿಗಳು, ಕೃಷಿ ಪರಿಕರಗಳ ಉತ್ಪಾದಕರು ಹಾಗೂ ಮಾರಾಟಗಾರರು ಮತ್ತು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಸಂಘ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು ಕೆಳಕಂಡ ವಿಳಾಸವನ್ನು ಸಂಪರ್ಕಿಸಬೇಕು. ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳ. ಮೊಬೈಲ್: 99866 63132

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.