ಮಂಗಳವಾರ, ಏಪ್ರಿಲ್ 13, 2021
29 °C

ರಿವಾಜು ಪಾಠಕ್ಕೆ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಚಿನ್ನಿ ಚೂಟಿ ಹುಡುಗಿ. ಸದಾ ಮೊಂಡು ಹಟ. ವಸ್ತು ಯಾವುದೇ ಆಗಲಿ, ಅದನ್ನು ಬಿಚ್ಚಿದರೇ ಸಮಾಧಾನ. ಊಟ ಮಾಡಿಸುವುದು ಅಮ್ಮನಿಗೆ ಎರಡು ಗಂಟೆಯ ಕೆಲಸ. ಅದೂ ಆಕೆ ಓಡಿದಲ್ಲೆಲ್ಲಾ ಓಡಬೇಕು, ಕೇಳಿದ್ದೆಲ್ಲಾ ಕೊಡಬೇಕು, ಆಗ ಮಾತ್ರ ಮುಚ್ಚಿದ ಬಾಯಿ ತುತ್ತಿಗಾಗಿ ತೆರೆಯುತ್ತದೆ.

 

ಶಾಲೆಯಲ್ಲೂ ಅಷ್ಟೇ. ನಲವತ್ತೈದು ನಿಮಿಷದ ತರಗತಿಯಲ್ಲಿ ಕಾಲು ಕೆಳಗೆ ಹಾಕಿ ಕೂತು ಪಾಠ ಕೇಳುವುದೆಂದರೆ ಆಕೆಗೆ ಮಹಾನ್ ಬೋರು. ಎದ್ದು ಓಡಾಡಬೇಕು, ಇಲ್ಲವೇ ಪಕ್ಕದಲ್ಲಿ ಕೂತವಳಿಗೆ ಕಿರಿಕ್ ಮಾಡಬೇಕು. ಶಿಕ್ಷಕಿಯ ಏಟು ಆಕೆಯ `ಹೆಚ್ಚುವರಿ~ ಚಟುವಟಿಕೆಯನ್ನು ಕಡಿಮೆ ಮಾಡಿಲ್ಲ. 
ಮಗಳಿಗಿದು ಖುಷಿನನಗೆ ಅಚ್ಚರಿ ಮೂಡಿಸುವುದೆಂದರೆ ಆಕೆ ಶಾಲೆಗೆ ಹೋಗುವುದಕ್ಕಿಂತಲೂ ಹೆಚ್ಚು ಆಸಕ್ತಿಯಿಂದ, ತರಾತುರಿಯಿಂದ ಸಂಜೆಯ ಸ್ಕೂಲ್ ಆಫ್ ಸಕ್ಸಸ್‌ಗೆ ತೆರಳುತ್ತಾಳೆ. ಅಲ್ಲಿ ಒಂದು ಗಂಟೆ ಕಲಿಸಿಕೊಡುವ ಪಾಠಗಳು ಖುಷಿ ಕೊಡುತ್ತಿವೆ ಎಂಬುದು ಆಕೆಯ ಮಾತುಗಳಿಂದಲೇ ಸ್ಪಷ್ಟವಾಗುತ್ತವೆ.ಚಾಕೊಲೇಟ್ ಫ್ಯಾಕ್ಟರಿ, ಬೇಕರಿ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಕೇಕ್ ಮೊದಲಾದ ತಿಂಡಿ ಮಾಡುವ ವಿಧಾನವನ್ನೂ ತಿಳಿಸಿಕೊಟ್ಟಿದ್ದಾರೆ. ಸದಾ ಶಾಲೆ-ಹೋಂವರ್ಕ್ ಎಂದು ಕಳೆದುಹೋಗುವ ಮಕ್ಕಳು ಪಠ್ಯಕ್ಕಿಂತ ಹೊರತಾದ ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾದ ಶಿಕ್ಷಣವನ್ನು ಮನರಂಜನೆ ಮೂಲಕ ಕಲಿಯುವುದಕ್ಕೆ ನಮ್ಮ ಪ್ರೋತ್ಸಾಹ ಇದ್ದೇ ಇದೆ.ಪಠ್ಯಪುಸ್ತಕದ ಅಕ್ಷರಗಳ ಮಧ್ಯೆ ಕಳೆದುಹೋಗುವ ಮಗು ಜೀವನಕಲೆಯನ್ನೇ ಮರೆತು ಬಿಡುತ್ತದೆ. ಆದರಿಲ್ಲಿ ಪಠ್ಯದ ಗುದ್ದಾಟದೊಂದಿಗೆ ಜೀವನಕಲೆಯನ್ನೂ ಕರಗತ ಮಾಡಿಕೊಳ್ಳುವ ಸುವರ್ಣಾವಕಾಶವಿದೆ.

                 -ದಾನಿ ತಾಯಿ ದೀಪಾ

ಬಿನ್ನಿ ಇದಕ್ಕೆ ಸಂಪೂರ್ಣ ವಿರುದ್ಧ. ಅಮ್ಮನೊಂದಿಗೆ ನಾಲ್ಕು ಮಾತು ಆಡಿದರೆ ಹೆಚ್ಚು. ಕೇಳಿದ್ದಕ್ಕಷ್ಟೇ ಉತ್ತರ. ಸದಾ ಮೌನಿ. ತುಂಟಾಟವೂ ಇಲ್ಲ. ಶಾಲೆಯಲ್ಲಿ ಶಿಕ್ಷಕಿ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಹೇಳಲು ನಾಚಿಕೆ, ಮುಜುಗರ. ಪರಿಚಿತರ ಬಳಿಯೂ ಮಾತನಾಡದಷ್ಟು ಹಿಂಜರಿಕೆ.*

ಇವೆರಡು ಮೂರರಿಂದ ಹತ್ತು ವರ್ಷದ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು. ಈ ಹಂತವನ್ನು ಹೇಗೆ ದಾಟಿಸುವುದು ಎಂಬ ಭಯ ಪೋಷಕರಿಗಿರುವುದು ಸಾಮಾನ್ಯ. ಈ ಭಯ ಹೋಗಲಾಡಿಸಲೆಂದೇ ಸ್ಕೂಲ್ ಆಫ್ ಸಕ್ಸಸ್ ವಿಶೇಷ ತರಗತಿಗಳನ್ನು ನಡೆಸುತ್ತಿದೆ. ಇಂದಿರಾನಗರದ 14ನೇ ಕ್ರಾಸ್ ಬಳಿ ಇರುವ ಈ ಸ್ಕೂಲ್ ಆಫ್ ಸಕ್ಸಸ್‌ನಲ್ಲಿ ಇಂದು 25ಕ್ಕೂ ಹೆಚ್ಚು ಪುಟಾಣಿಗಳು ಮಾತಿನೊಂದಿಗೆ ಬದುಕುವ ಕಲೆ ಕಲಿಯುತ್ತಿದ್ದಾರೆ.ಶಾಲೆಯ ಅವಧಿ ಮುಗಿದ ನಂತರ ಅಂದರೆ ಸಂಜೆ 4ರಿಂದ 6ರವರೆಗೆ ನಡೆಯುವ ಈ ಶಾಲೆಯಲ್ಲಿ ಪಠ್ಯೇತರ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಮೂರರ ಎಳೆ ವಯಸ್ಸಿನ ಮಕ್ಕಳಿಗೆ ಚಿತ್ರ ಬಿಡಿಸುವುದು, ಬ್ಯಾಗ್ ತಯಾರಿಸುವುದು, ಇನ್ನೊಬ್ಬರೊಂದಿಗೆ ಮಾತನಾಡುವುದನ್ನು ಹೇಳಿಕೊಡುತ್ತಾರೆ.

 

ವಯಸ್ಸು ಹತ್ತು ದಾಟಿದ ಮಕ್ಕಳಿಗೆ ಒತ್ತಡ ನಿರ್ವಹಿಸುವ ವಿಧಾನ, ಪರೀಕ್ಷೆಗೆ ಅಂಜದೆ ಎದುರಿಸುವ ಬಗೆಯನ್ನು ತಿಳಿಸಿಕೊಡುತ್ತಾರೆ. ಶಿಕ್ಷಕಿಯರೂ ಮಕ್ಕಳೊಂದಿಗೆ ಆಪ್ತವಾಗಿ ಬೆರೆಯುವುದರಿಂದ ಅವರ ಭಯವೂ ದೂರವಾಗುತ್ತದೆ.`ಮಕ್ಕಳ ಭಾವನೆ ಅರ್ಥೈಸಿಕೊಳ್ಳುವ ಪ್ರಯತ್ನ ನಮ್ಮದು. ಕುಳಿತು ಪಾಠ ಕೇಳುವುದಿಲ್ಲ ಎನ್ನುವ ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಬಿಡುತ್ತೇವೆ. ಅವರು ಯಾವುದೋ ಮೂಲೆಯಲ್ಲಿ ಕುಳಿತು ಇಲ್ಲವೇ ಇನ್ನಾವುದೋ ವಸ್ತುವಿನೊಂದಿಗೆ ಆಟವಾಡುತ್ತಾ ಪಾಠ ಕೇಳುತ್ತಾರೆ.ಸ್ವಲ್ಪ ಹೊತ್ತಿನ ಬಳಿಕ ಅದೇ ಮಗು ತನ್ನ ಆಟದಿಂದ ಬೇಸರಗೊಂಡು ಶಿಕ್ಷಕಿ ಹೇಳುವ ಮಾತು ಕೇಳಲು ಬರುತ್ತದೆ. ಅದೇ ಕಾರಣಕ್ಕೆ ಮಕ್ಕಳಿಗೆ ನಾವಿಲ್ಲಿ ಸ್ವಾತಂತ್ರ್ಯ ನೀಡಿದ್ದೇವೆ. ತರಗತಿಯಲ್ಲಿ ಶಿಸ್ತಿನಿಂದ ಕುಳಿತಂತೆ ಇಲ್ಲೂ ಇರಬೇಕೆಂಬುದಿಲ್ಲ ಎಂಬುದೇ ನಮ್ಮ ಮೊದಲ ನಿಯಮ~ ಎನ್ನುತ್ತಾರೆ ಶಾಲೆಯ ಜವಾಬ್ದಾರಿ ಹೊತ್ತಿರುವ ರಾಜಲಕ್ಷ್ಮಿ ಸ್ವಾಮಿನಾಥನ್.`ವಾಟ್ ಈಸ್ ಟ್ರೀ~, `ವಾಟ್ ಈಸ್ ನೇಚರ್~ ಎಂಬ ಪ್ರಶ್ನೆ ಕೇಳಿ ಮಕ್ಕಳಿಂದ `ಮರ~, `ಪರಿಸರ~ ಎಂಬ ಉತ್ತರ ಪಡೆದು ಹೊರಬಂದ ರಾಜಲಕ್ಷ್ಮಿಯವರ ಮಾತಿನಲ್ಲಿ ಮಕ್ಕಳ ಕುರಿತ ಕಾಳಜಿ ತೀವ್ರವಾಗಿ ವ್ಯಕ್ತವಾಗುತ್ತಿತ್ತು. `ದಿನಕ್ಕೆರಡು ಕನ್ನಡ ಪದ ಕಲಿಸುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ಪುಟಾಣಿಗಳಿಗೆ ಪಠ್ಯದ ಹೊರತಾಗಿ ಸಂವಹನ ಹಾಗೂ ಬದುಕುವ ಕಲೆ ಹೇಳಿಕೊಡುತ್ತೇವೆ.

 

ಸುಲಭವಾಗಿ ಹೇಳುವುದಾದರೆ ಅಮ್ಮನನ್ನೇ ಅವಲಂಬಿಸದೆ ಬೆಳಗ್ಗೆ ಎದ್ದು ಬ್ರಷ್ ಮಾಡಿ, ಶಾಲೆಗೆ ಹೊರಡುವುದು, ಬ್ಯಾಗ್‌ನಲ್ಲಿ ಪುಸ್ತಕ ಅಂದವಾಗಿ ಜೋಡಿಸುವುದು, ಪೆನ್ಸಿಲ್‌ಗಳನ್ನು ಬಾಕ್ಸ್‌ನಲ್ಲಿಟ್ಟುಕೊಂಡು ಜೋಪಾನ ಮಾಡುವುದು, ಪ್ರಶ್ನೆಗೆ ಉತ್ತರಿಸುವುದು, ಶಿಕ್ಷಕಿಯೊಂದಿಗೆ ಮಾತನಾಡುವುದು ಇವೇ ಮೊದಲಾದ ಸಣ್ಣ ಪುಟ್ಟ ಸಂಗತಿಗಳನ್ನು ಇಲ್ಲಿ ಹೇಳಿಕೊಡುತ್ತೇವೆ.ಒಮ್ಮೆ ಹವ್ಯಾಸವಾದರೆ ತಾನೇ ಮುಂದುವರೆಯುತ್ತದೆ. ಈ ಮೂಲಕ ಮಕ್ಕಳಿಗೆ ಆತ್ಮವಿಶ್ವಾಸ, ಭರವಸೆ ತುಂಬುವ ಪ್ರಯತ್ನ ನಡೆಸುತ್ತಿದ್ದೇವೆ~ ಎನ್ನುತ್ತಾರವರು.`ಸ್ಕೂಲ್ ಆಫ್ ಸಕ್ಸಸ್‌ನ ಕೇಂದ್ರ ಕಚೇರಿ ಚೆನ್ನೈನಲ್ಲಿ ಆರಂಭವಾಗಿ ಒಂಬತ್ತು ವರ್ಷಗಳೇ ಕಳೆದವು. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತು ಭವಿಷ್ಯ ರೂಪಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಜೂನ್‌ನಿಂದ ಆರಂಭಗೊಂಡಿದೆ.

 

ಒಂದು ಕೋರ್ಸ್‌ನ ಅವಧಿ ಮೂರು ತಿಂಗಳು. ಶುಲ್ಕ ರೂ. 6,000. ಗುರುವಾರ, ಶುಕ್ರವಾರ ಹಾಗೂ ಶನಿವಾರ ತರಗತಿಗಳು ನಡೆಯುತ್ತವೆ. ಇದರೊಂದಿಗೆ ನಗರದ ಕೆಲವು ಪ್ರದೇಶಗಳಿಗೆ ಪ್ರವಾಸ (ಫೀಲ್ಡ್ ವಿಸಿಟ್) ಮಾಡಿ ಅಲ್ಲಿನ ವೈಶಿಷ್ಟ್ಯ ಕುರಿತು ಮಕ್ಕಳಿಗೆ ಮಾಹಿತಿ ನೀಡುತ್ತೇವೆ.ಯಾವುದೇ ಮಗು ನಮ್ಮನ್ನರಿತು, ಬೆರೆಯಲು ತೆಗೆದುಕೊಳ್ಳುವ ಕನಿಷ್ಠ ಸಮಯ ಇದು~ ಎಂದು ವಿವರಿಸುತ್ತಾರೆ. ರಾಜಲಕ್ಷ್ಮಿ ಅವರ ಸಂಪರ್ಕ: 96634 00443.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.