ಬುಧವಾರ, ಜೂನ್ 29, 2022
25 °C

ರುಚಿಕರ ಸಂಗೀತ ಕಾದಂಬರಿ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ರುಚಿಕರ ಸಂಗೀತ ಕಾದಂಬರಿ

ಸಂಗೀತವನ್ನೇ ದ್ರವ್ಯ ಆಗಿಸಿಕೊಂಡ ಕಥೆ-ಕಾದಂಬರಿಗಳು ಕನ್ನಡದಲ್ಲಿ ತೀರಾ ಕಡಿಮೆ. ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ `ಮಂದ್ರ~ ಕಾದಂಬರಿ ಬಿಟ್ಟರೆ ಕನ್ನಡ ಸಾಹಿತ್ಯದಲ್ಲಿ ಸಂಗೀತವನ್ನು ಕುರಿತಾದ ಪೂರ್ಣ ಪ್ರಮಾಣದ ಕಾದಂಬರಿ ಬಂದೇ ಇಲ್ಲ ಎನ್ನಬಹುದು.

 

ಈ ಸಾಲಿಗೆ ಸೇರುವ ಹೊಸ ಕಾದಂಬರಿ ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧರಾದ ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಬರೆದಿರುವ `ಅನಂತನಾದ~.

ಈ ಕಾದಂಬರಿ ಎರಡು ವಿಧದಲ್ಲಿ ವಿಶಿಷ್ಟ.

 

ಸಂಗೀತದ ಅಂತಃಸತ್ವವನ್ನು, ತಾಂತ್ರಿಕ ಅಂಶಗಳ ಒಳಗೊಂಡಿ ರುವುದು ಮೊದಲ ವಿಶೇಷ. ಸ್ವತಃ ಕರ್ನಾಟಕ ಸಂಗೀತದ ಮೇರು ಕಲಾವಿದರೇ ಬರೆದಿರುವುದು ಇನ್ನೊಂದು ವಿಶೇಷ.

 

ಒಬ್ಬ ಶಾಸ್ತ್ರೀಯ ಸಂಗೀತಗಾರರಾಗಿ, ಸಂಗೀತವನ್ನು ಹೊರತುಪಡಿಸಿ ಸಾಹಿತ್ಯಕವಾಗಿ ಏನಾದರೂ ರಚಿಸಬೇಕು ಎನ್ನುವ ತುಡಿತ ವಿದ್ವಾನ್ ಆರ್‌ಕೆಪಿ ಅವರನ್ನು ಕಾಡಿದ್ದರ ಅಭಿವ್ಯಕ್ತಿಯೇ ಈ ಗೇಯ ಕಾದಂಬರಿ.ಕೀರ್ತನ ಎಂಬ ಪುಟ್ಟ ಹುಡುಗಿಯ ಅಸಾಧಾರಣ ಸಂಗೀತ ಪ್ರತಿಭೆ ಕಾದಂಬರಿಯ ಕಥನ. ಈ ಬಾಲಕಿಯ ಸಾಧನೆಯ ಹಿನ್ನೆಲೆಯಲ್ಲಿ ರಾಗ, ತಾಳ, ಕೀರ್ತನೆಗಳ ಬಗ್ಗೆಯೂ ವಿವರಣೆ ಕೊಡುವ ಕಾದಂಬರಿಯ ಆರಂಭ ಗಮನಸೆಳೆಯುವಂತಿದೆ.ಕಾದಂಬರಿ ಉದ್ದಕ್ಕೂ ಮನೋರಂಜನೆ, ಕುತೂಹಲ ಪ್ರಸಂಗಗಳು ಇದ್ದು, ಕೃತಿಯನ್ನು ಸರಾಗ ಓದಿಸಿಕೊಂಡು ಹೋಗಲು ಸಹಕಾರಿಯಾಗಿದೆ. ಪಲ್ಲವೀಪುರದ ನವರಾತ್ರಿ ಉತ್ಸವದಲ್ಲಿ ಕೀರ್ತನ ಹಾಡಿದ್ದರ ವರ್ಣನೆ ಸೊಗಸಾಗಿದೆ.

 

ಮೊದಲ ಸಂಗೀತ ಕಛೇರಿಯಲ್ಲಿ ಕೀರ್ತನ ಹಾಡಿದ ಕಲ್ಯಾಣಿ ರಾಗದ `ವರ್ಣ~ದ ವರ್ಣನೆ ಕಲ್ಯಾಣಿ ರಾಗ ಕೇಳಿದಷ್ಟೇ ಆನಂದವಾಗುತ್ತದೆ. ಆದರೆ ಭಾಗ ಒಂದರಲ್ಲೇ, ಕೀರ್ತನ ಜ್ವರ ಬಂದು ಸಾಯುವುದರ ವಿವರಣೆ ಮಾತ್ರ ಕೊಂಚ ಅಸಹಜ ಎನಿಸುತ್ತದೆ.ಮುಂದೆ ಕೀರ್ತನಳ ಅಣ್ಣ ಅನಂತ ಸಂಗೀತ ಗುರುಗಳ ಅನ್ವೇಷಣೆಗಾಗಿ ಚಿದಂಬರಂ, ತಂಜಾವೂರು ಎಂದು ಅಲೆದಾಡಿ ಸಂಗೀತದಲ್ಲಿ ಸಂಪೂರ್ಣ ಹಿಡಿತ ಸಾಧಿಸುವ ಪರಿ ಮಾತ್ರ ಅತ್ಯಂತ ರೋಚಕ. ನಡುನಡುವೆ ಬರುವ ಗಂಭೀರ ಪ್ರಸಂಗಗಳು ಕಾದಂಬರಿಯ ಏಕತಾನತೆಯನ್ನು ಮರೆಸಿ ಲವಲವಿಕೆಯಿಂದ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ.ಸಂಗೀತದ ಪಾರಿಭಾಷಿಕ ಶಬ್ದಗಳು, ರಾಗ, ರಾಗಲಕ್ಷಣ, ತಾಳ-ಭಾವ-ಲಯ, ಆಹತ ಮತ್ತು ಅನಾಹತ ನಾದಗಳ ವಿಶ್ಲೇಷಣೆ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಸಂಗೀತ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಿಗೆ ಸೂಕ್ತವೆನಿಸುವ ಹಾಗೆ ಕಥೆಯನ್ನು ವಿಸ್ತರಿಸಿರುವುದು ಕೂಡ ಸೊಗಸಾಗಿದೆ.

 

ಮಂದ್ರದಲ್ಲಿ ಷಡ್ಜ, ನಿಷಾದಗಳನ್ನು ಹಿಡಿಯುವ ರೀತಿ, ತಾರಸ್ಥಾಯಿವರೆಗೂ ಸ್ವರವನ್ನು ವಿಸ್ತರಿಸುವ ಪರಿ, ವಿವಿಧ ರಾಗಗಳ, ನವಾವರಣ ಕೃತಿಗಳ ವಿಶ್ಲೇಷಣೆ, ವಾಗ್ಗೇಯಕಾರರ ಉಲ್ಲೇಖ, ಅವರ ಕೃತಿ ಕುರಿತ ಪರಿಚಯದ ಜತೆಗೆ ಕೀರ್ತನೆಯ ರಾಗಗಳ ಮಾಹಿತಿ ಎಲ್ಲವೂ ಸಮಗ್ರವಾಗಿದೆ.

 

ಶಾಸ್ತ್ರೀಯ ಸಂಗೀತದ ಅನೇಕ ತಾಂತ್ರಿಕ ಅಂಶಗಳು, ಶಕ್ತಿ ಸಾಮರ್ಥ್ಯದ, ಸಾರದ ಪ್ರಸ್ತಾಪ ಕಾದಂಬ ಉದ್ದಕ್ಕೂ ಕಾಣಬಹುದು. ಕಾದಂಬರಿ ಪೂರ್ತಿ ಓದಿ ಮುಗಿಸಿದಾಗ ಒಂದು ದೀರ್ಘವಾದ ಶಾಸ್ತ್ರೀಯ ಸಂಗೀತ ತರಗತಿಯಲ್ಲಿ ಕುಳಿತು ಸಂಗೀತ ಪಾಠ ಕೇಳಿದ ಅನುಭವವಾಗುತ್ತದೆ.ಸರಳವಾದ ಭಾಷೆ, ಸುಲಲಿತ ನಿರೂಪಣೆ, ನವಿರಾದ ಶೈಲಿ- ಒಬ್ಬ ಮೇರು ಕಲಾವಿದ ಹಾಡುಗಾರಿಕೆಯಲ್ಲಿ ಮಾತ್ರವಲ್ಲ; ಬರವಣಿಗೆಯಲ್ಲೂ ತಮ್ಮ ಸಾಧನೆ ತೋರಿಸಿರುವುದು ಅಚ್ಚರಿ ಹುಟ್ಟಿಸುವಂತಿದೆ. ಕಾದಂಬರಿಯ ನಡುವೆ ಬಳಸಿರುವ ತಂಬೂರಿ ಮತ್ತು ಇತರ ರೇಖಾಚಿತ್ರಗಳು ಕೂಡ ಗಮನಸೆಳೆಯುವಂತಿವೆ.ಸಂಗೀತ ಶಿಕ್ಷಕರು, ಆಸಕ್ತರು, ಸಂಗೀತ ವಿದ್ಯಾರ್ಥಿಗಳು ಓದಲೇ ಬೇಕಾದ ಕೃತಿ ಇದು. ಸಂಗೀತದ ವಿದ್ಯಾರ್ಥಿಗಳು ಇದನ್ನು ಅಭ್ಯಾಸದ ಕೈಪಿಡಿಯಾಗಿಯೂ ಬಳಸಬಹುದು.ಅನಂತನಾದ (ಗೇಯ ಕಾದಂಬರಿ)

ಲೇ: ವಿದ್ವಾನ್ ಆರ್.ಕೆ. ಪದ್ಮನಾಭ

ಪು: 180; ಬೆ: ರೂ. 135

ಪ್ರ: ಪ್ರಿಸಮ್ ಬುಕ್ಸ್ ಪ್ರೈ ಲಿ., ನಂ.1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು-70

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.