ಬುಧವಾರ, ಮೇ 25, 2022
31 °C

ರೂಪಕ ವಿಲಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಸಮಾಜದ ವಿದ್ಯಮಾನಗಳನ್ನು ನಿರ್ವಚಿಸಲು ‘ಪಾಶ್ಚಿಮಾತ್ಯ’ ಜ್ಞಾನದಿಂದ ಮುಕ್ತವಾದ, ನಮ್ಮದೇ ಸಾಂಸ್ಕೃತಿಕ ಪರಿಕರಗಳನ್ನು ನಾವು ರಚಿಸಿಕೊಳ್ಳಬೇಕು ಎನ್ನುವುದು ಅಕ್ಷರ ಅವರ ನಿಲುವು. ತಮ್ಮ ಈ ವೈಚಾರಿಕತೆಯ ಮಹತ್ವವನ್ನು ಪ್ರಕಟಿಸುವ ಸಲುವಾಗಿ ಅವರು ಈತ್ತೀಚಿಗೆ ಪತ್ರಿಕೆಗಳಲ್ಲಿ ವರದಿಯಾಗಿರುವ ಎರಡು ವಿದ್ಯಮಾನಗಳನ್ನು ಜೋಡಿಸಿ ‘ಹರಕೆ-ಹರಾಜು’ ಎಂಬ ಲೇಖನ ಬರೆದಿದ್ದಾರೆ. ಅವರ ಈ ಉದ್ದೇಶದ ಬಗ್ಗೆ ನನಗೇನೂ ತಕರಾರಿಲ್ಲ; ಆದರೆ ಅವರ ವೈಚಾರಿಕ ರಚನೆಯಲ್ಲಿಯೇ ಕೆಲವು ಸಮಸ್ಯೆಗಳಿವೆ.

 

ವಸಾಹತುಶಾಹಿ ಕಾಲಕ್ಕೆ ಮುಂಚೆ ಇದ್ದ ಸಾಮಾಜಿಕ-ಸಾಂಸ್ಕೃತಿಕ ರಚನೆಗಳು ‘ನಮ್ಮ ದೇಶದ ಸಾಂಸ್ಕೃತಿಕ ಪರಿಕರಗಳು’ ಎಂದು ಇಟ್ಟುಕೊಂಡರೂ ಸಮಸ್ಯೆ ಬಗೆಹರಿಯುವುದಿಲ್ಲ. ಅವು ‘ಅನ್ಯ ಸಂಸ್ಕೃತಿ’ಗಳಿಂದ ಮುಕ್ತವಾಗಿದ್ದವೆ? ಜಾತಿ-ಮತ-ಲಿಂಗ-ಪ್ರದೇಶ-ಆಸ್ತಿವಂತಿಕೆಯ ಭೇದಗಳನ್ನು ಮೀರಿ ಸರ್ವಸಮ್ಮತವಾಗಿದ್ದವೆ? ಎಂಬ ಸಮಸ್ಯೆಗಳಿಗೆ ಸಮಾಧಾನ ಕಂಡುಕೊಳ್ಳಬೇಕಾಗುತ್ತದೆ. ಆ ಬಗೆಯ ಪ್ರಯತ್ನಗಳನ್ನಾದರೂ ಮಾಡಬಹುದಲ್ಲ ಎನ್ನುವುದೂ ಸರಿ.

 

ಆದರೆ, 350 ವರ್ಷಗಳ ಕಾಲಾವಧಿಯಲ್ಲಿ ಬದುಕಿದ ಹತ್ತಾರು ತಲೆಮಾರುಗಳ ಜನರ ಬದುಕಿನ ಅನುಭವಗಳಿಂದ ಮುಕ್ತರಾಗಿ ನಾವು ಅಂತಹ ಪರಿಕರಗಳನ್ನು ಆಯ್ದುಕೊಳ್ಳಬಲ್ಲೆವೇ? ಅಂತಹ ಆಯ್ಕೆಗಳು ‘ಪಾಶ್ಚಿಮಾತ್ಯ ಜ್ಞಾನ’ದ ಪ್ರಭಾವದಿಂದ ಸಂಪೂರ್ಣ ಮುಕ್ತವಾಗಿರಲು ಸಾಧ್ಯವೇ? ಇದು ಅಕ್ಷರ  ಅವರ ವೈಚಾರಿಕ ರಚನೆ ಎದುರಿಸಬೇಕಾಗಿರುವ ಮುಖ್ಯ ಸಮಸ್ಯೆ. ಈ ಸಮಸ್ಯೆ ಹೊಸದೇನೂ ಅಲ್ಲ; 250 ವರ್ಷಗಳಿಂದಲೂ ದಕ್ಷಿಣ ಏಶಿಯಾದ ಸಾಮಾಜಿಕ-ಸಾಂಸ್ಕೃತಿಕ ದ್ರಷ್ಟಾರರು ಈ ಸಮಸ್ಯೆಯ ಬಗ್ಗೆ ಜಾಗೃತರಾಗಿದ್ದುಕೊಂಡು ತಮ್ಮ ಚಿಂತನ ಧಾರೆಗಳನ್ನು ನಮಗೆ ಎರೆದಿದ್ದಾರೆ. ಅಕ್ಷರ ಅವರಿಗೆ ಇಂಥ ಸವಾಲೇ ನಗಣ್ಯ. ಆ ಕಾರಣಕ್ಕೆ ಅವರ ‘ಹರಕೆ-ಹರಾಜು’ ವೈಚಾರಿಕ ಅಹಮಿಕೆಯ ‘ರೂಪಕ ವಿಲಾಸ’ವಾಗಿ ಮಾತ್ರವೇ ಉಳಿದುಬಿಟ್ಟಿದೆ.‘ಹರಕೆ’ಯ ಪ್ರಶ್ನೆಯನ್ನು ಮೂರು ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು; ಈ ಅರ್ಥೈಸುವಿಕೆಯಲ್ಲಿಯೇ ‘ಹರಾಜಿ’ನ ಜೊತೆ ಅದಕ್ಕಿರುವ ಸಂಬಂಧದ ವಾಸ್ತವಿಕತೆಯನ್ನೂ ಕಾಣಬಹುದು.  ‘ಮಡಿಸ್ನಾನ’ದಂತಹ ‘ಹರಕೆ’ ಹೊರುವವರಲ್ಲಿ ಎರಡು ವರ್ಗಗಳಿವೆ. ಮೊದಲ ವರ್ಗದ ಜನ ತಮ್ಮ ರೋಗರುಜಿನಗಳ ಇಲಾಜಿಗೆ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಖರ್ಚು ಮಾಡಿ, ಕೈಖಾಲಿಯಾದಾಗ ದಾರಿ ಕಾಣದೆ ಕಂಗಾಲಾದವರು. ತಮ್ಮದೇ ಸ್ಥಿತಿಯಲ್ಲಿರುವ  ಜನರಿಂದ ವಿಷಯ ತಿಳಿದುಕೊಂಡು ಅವರು ಸುಬ್ರಹ್ಮಣ್ಯಕ್ಕೂ, ಪೊಟ್ಟಾ ಚರ್ಚು, ಬಾಬ ಬುಡನಗಿರಿಯಂತಹ ದರ್ಗಾಗಳಿಗೂ ಹರಕೆ ಹೊತ್ತು ಹೋಗುತ್ತಾರೆ. ಇದೊಂದು ದುಃಖಿತ ಸಮುದಾಯವೇ ಸರಿ. ಅವರಿಗೆ ಹರಕೆಗಳಲ್ಲಿ ‘ಹೃದಯಹೀನ ಜಗತ್ತಿನ ಹೃದಯ’ ಕಾಣುತ್ತದೆ.

 

ಎರಡನೆಯ ವರ್ಗದವರು ಲೌಕಿಕವಾಗಿ ಅನುಕೂಲಸ್ಥರು, ತಮ್ಮ ತಾಪತ್ರಯಗಳಿಗೆ ಆಧುನಿಕ ಮಾರ್ಗಗಳಲ್ಲಿಯೇ ಪರಿಹಾರ ಕಂಡುಕೊಳ್ಳುವವರು. ಇವರು, ‘ಹರಕೆ’ ನಿಜವಾದಲ್ಲಿ ವೈದ್ಯಕೀಯ ಖರ್ಚು ಉಳಿಯಿತು, ಇಲ್ಲದಿದ್ದಲ್ಲಿ ತಮ್ಮ ದೈವಶ್ರದ್ಧೆಯ ಪ್ರದರ್ಶನವಂತೂ ಆಯಿತು ಎಂಬ ಲೆಕ್ಕಾಚಾರದ ಮಂದಿ. ಈ ಹಂತದಲ್ಲಿ ‘ಹರಾಜಿ’ನ ಲೆಕ್ಕಾಚಾರವನ್ನೂ ಪ್ರಾಸಂಗಿಕವಾಗಿ ನೋಡಬಹುದು. ‘ಹರಕೆ’ ಹೊತ್ತ ಮೊದಲ ವರ್ಗ ‘ಹರಾಜಿ’ನ ಲೋಕವ್ಯವಹಾರದಿಂದ ಮತ್ತಷ್ಟು ಸಂಕಷ್ಟದ ಸ್ಥಿತಿಗೆ ತಳ್ಳಲ್ಪಡುವವರು. ಎರಡನೆಯ ವರ್ಗದ ಮಂದಿ ‘ಹರಾಜಿ’ನ ಜಗತ್ತಿನಲ್ಲಿಯೇ ಮುಳುಗಿರುವವರು; ಅವರಿಗೆ ‘ಹರಕೆ-ಹರಾಜು’ ಎರಡೂ ಲೋಕವ್ಯವಹಾರ. ಈ ಎರಡು ವರ್ಗಗಳ ಜೊತೆಗೆ, ‘ಹರಕೆ’ಯನ್ನು ವ್ಯವಸ್ಥಿತವಾಗಿ ಆಯೋಜಿಸುವ ದೇವಸ್ಥಾನದ ಅಧಿಕಾರವರ್ಗ, ‘ಹರಾಜ’ನ್ನು ವ್ಯವಸ್ಥಿತವಾಗಿ ನಿಯಂತ್ರಿಸುವ ಉದ್ಯಮಪತಿಗಳ ಅಧಿಕಾರವರ್ಗವೂ, ಇವೆರಡೂ ಅಧಿಕಾರ ವರ್ಗಗಳನ್ನು ವಿರೋಧಿಸುವ ಬಂಡುಕೋರ ಮಂದಿಯೂ ಇದ್ದಾರೆ. ‘ಹರಕೆ-ಹರಾಜಿ’ನ ಚಿತ್ರ ಈ ಎಲ್ಲ ಪಾತ್ರಗಳಿಲ್ಲದೆ ಪೂರ್ಣವಾಗದು.ಇವತ್ತು ಮೊದಲನೆಯ ವರ್ಗದ ‘ನಂಬಿಕೆ’ಯುಳ್ಳವರಿಗೆ ಮಾತ್ರವೇ ಮೀಸಲಾಗಿರುವುದು ದರ್ಗಾಗಳಷ್ಟೇ. ದೇವಸ್ಥಾನಗಳು ಜಾತಿವಂತರನ್ನು, ಸಾಮಾಜಿಕ-ರಾಜಕೀಯ-ಆರ್ಥಿಕ ಅಧಿಕಾರಸ್ಥರನ್ನೂ ಯಥಾಪ್ರೀತಿ ಓಲೈಸಿ ಭಕ್ತಗಣದ ಮಧ್ಯೆ ತಮ್ಮ ರೇಟಿಂಗನ್ನು ಹೆಚ್ಚಿಸಿಕೊಳ್ಳುವ ಟೂರಿಸ್ಟ್ ಕೇಂದ್ರಗಳಾಗಿವೆ. ಮೊದಲನೆಯ ವರ್ಗದ ಗತಿಹೀನ ಸ್ಥಿತಿ ದೇವಸ್ಥಾನಗಳಿಗೆ ಯಾವತ್ತೂ ತಮ್ಮ ದೈವಿಕತೆಯನ್ನು ಮೆರೆಯಲು ಇರುವ ಒಂದು ಫಿಕ್ಸೆಡ್ ಡೆಪಾಸಿಟ್ ಮಾತ್ರ; ಅದನ್ನು ಬಂಡವಾಳವಾಗಿಟ್ಟುಕೊಂಡು ಎರಡನೆಯ ವರ್ಗದವರನ್ನೂ, ‘ಹರಾಜಿ’ನಲ್ಲಿ ಪಾಲುದಾರರಾಗಿರುವ ಮಂದಿಯನ್ನೂ ‘ಯಾವುದೋ ಮೂಲೆಯಲ್ಲಿರುವ’ ತಮ್ಮ ದೇವಸ್ಥಾನಕ್ಕೆ ಆಕರ್ಷಿಸಲು ದೇವಸ್ಥಾನದ ಅಧಿಕಾರವರ್ಗ ಸ್ಪರ್ಧಾತ್ಮಕವಾಗಿ ಸನ್ನದ್ಧವಾಗಿರುತ್ತದೆ.

 

ಈ ‘ಹರಾಜು’ ವ್ಯವಹಾರ ಮೂರು ವರ್ಷಗಳ ಹಿಂದೆ ಶುರುವಾದ ನಂತರದಲ್ಲಿ ಎಂತೆಂಥ ಹರಾಜು ಕೂಗಿದವರು ಹಾಗೂ ಹರಾಜಿಗೆ ನಿಂತ ನಕ್ಷತ್ರಗಳೂ ಈ ಯಾವುದೋ ಮೂಲೆಯ ದೇವಸ್ಥಾನಕ್ಕೆ ಬಂದಿರುವುದು ಮತ್ತು ದೇವಳದ ಅಧಿಕಾರಸ್ಥರು ಅವರ ಜೊತೆ ಎದೆಯುಬ್ಬಿಸಿ ಫೋಟೊಕ್ಕೆ ಪೋಸು ಕೊಟ್ಟಿರುವುದೂ ಪತ್ರಿಕೆಗಳ ‘ಮುಖಪುಟ’ದಲ್ಲಿ ಪ್ರಕಟವಾಗಿದೆ-ಅಕ್ಷರ ಅವರು ಗಮನಿಸಬೇಕಾಗಿ ವಿನಂತಿ. ‘ಹರಕೆ-ಹರಾಜ’ನ್ನು ನಿಯಂತ್ರಿಸುವ ಅಧಿಕಾರಸ್ಥರು ಪರಸ್ಪರ ಶಾಮೀಲಾಗಿರುವ ಸಂಗತಿ ಗುಟ್ಟಾಗಿಯೇನೂ ಇಲ್ಲ. ಆದರೂ ಅಕ್ಷರ ಯಾಕೆ ‘ಹರಕೆ’ಯನ್ನು ವಿರೋಧಿಸುವವರು ‘ಹರಾಜ’ನ್ನು ಸಮರ್ಥಿಸುತ್ತಾರೆ ಎಂದು ಹೇಳುತ್ತಾರೆ? ನನ್ನ ಪ್ರಕಾರ, ‘ಬ್ರಾಹ್ಮಣರು ಉಂಡ ಎಂಜಲು ಎಲೆಯ ಮೇಲೆ ಕೆಳಜಾತಿಯ ಜನ ಉರುಳುವುದು ಅವಮಾನ’ ಎಂದು ಸುಬ್ರ್ಮಹ್ಮಣ್ಯಕ್ಕೆ ಬಂದು ಪ್ರತಿಭಟಿಸಿದ ಹತ್ತು ಜನ ಬಂಡುಕೋರರ ಎದೆಗೆ ಅಕ್ಷರ ತಮ್ಮ ಬಾಣವನ್ನು ಹೂಡಿದ್ದಾರೆ.

 

ಈ ಬಂಡುಕೋರರು ‘ಪಾಶ್ಚಿಮಾತ್ಯ ಚಿಂತನೆ’ಗಳನ್ನು ವಿವೇಚನೆ ಇಲ್ಲದೆ ಎರವಲು ಪಡೆದು ‘ದೇಶಿಯ’ವಾದ ನಂಬಿಕೆಯನ್ನು ಹೀಗಳೆಯುವ ಅಪಾಯಕಾರಿ ಗುಂಪು ಎಂಬುದು ಅಕ್ಷರ ಅವರ ತೀರ್ಮಾನ. ಈ ಬಂಡುಕೋರರ ವಾಸ್ತವಿಕ ವಿಳಾಸವಾದರೂ ಏನು? ಇವರು, ‘ಹರಕೆ’ ತೀರಿಸುವ ಮೊದಲನೇ ವರ್ಗದವರೂ ಸೇರಿದಂತೆ, ಜನರನ್ನು ಅವರ ಲೌಕಿಕ ಕಷ್ಟಗಳ ಆಧಾರದಲ್ಲಿ ಒಗ್ಗೂಡಿಸಿ ‘ಅಭಿವೃದ್ಧಿ ಯೋಜನೆ’ಗಳ ಫಲವಾಗಿ ನಿರಾಶ್ರಿತರಾಗುವ ಜನರ ಪರವಾಗಿ, ರೈತರು ಆತ್ಮಹತ್ಯೆಯತ್ತ ದೂಡುವ  ಅಧಿಕಾರಸ್ಥರ ವ್ಯವಹಾರಗಳ ವಿರುದ್ಧ, ‘ಸೌಂದರ್ಯ ಸ್ಪರ್ಧೆ’ಗಳ ಆಯೋಜಕರ ವಿರುದ್ಧ, ‘ಕೆಂಟುಕಿ ಫ್ರೈಡ್ ಚಿಕನ್’ ಅಂಗಡಿಗಳ ಸರಣಿ ಸ್ಥಾಪನೆಯ ವಿರುದ್ಧ ಪ್ರತಿಭಟಿಸುತ್ತಾರೆ; ಆ ಕಾರಣಕ್ಕಾಗಿ ಹಲವಾರು ಕ್ರಿಮಿನಲ್ ಕೇಸುಗಳಲ್ಲಿ ಸಿಲುಕಿ ನಿತ್ಯವೂ ಕೋರ್ಟಿಗೆ ಅಲೆಯುವುದು ‘ಸಹಜ’ವೆಂಬಂತೆ ಬದುಕುತ್ತಾರೆ. ಈ ವಾಸ್ತವಿಕ ವಿವರಗಳ ಅರಿವು ಇರುವ ಯಾರಿಗೇ ಆದರು, ಈ ಜನ ಪ್ರತಿಭಟಿಸುತ್ತಿರುವುದು ‘ಹರಕೆ’ಯನ್ನು ಹೊತ್ತ ಮೊದಲ ವರ್ಗದ ಜನರ ವಿರುದ್ಧವಾಗಿಯಲ್ಲ, ‘ಹರಕೆ’ಯನ್ನು ಜಾತಿ ಮತ್ತು ಸಾಮಾಜಿಕ ಅಧಿಕಾರಗಳ ಸಲಕರಣೆ ಮಾಡಿಕೊಂಡಿರುವ ಎರಡನೆಯ ವರ್ಗದ ‘ಭಕ್ತ’ರು, ದೇವಾಲಯ ವ್ಯವಸ್ಥೆ ಹಾಗೂ ‘ಹರಾಜ’ನ್ನು ನಡೆಸುವ ಮಂದಿಯ ವಿರುದ್ಧ ಎಂಬುದು ತಿಳಿಯುತ್ತದೆ. ಅಂತಹ ವ್ಯವಧಾನ ಅಕ್ಷರ ಅವರಿಗಿಲ್ಲ.ಕೊನೆಯದಾಗಿ, ‘ಮಾನಾವಮಾನಗಳ’ ಕಲ್ಪನೆ ‘ನಮ್ಮ ಕಾಲ-ದೇಶ’ಗಳಿಗೆ ಸೂಕ್ತವಾಗಿರಬೇಕೆಂಬ ಅಕ್ಷರ ಅವರ ರೂಪಕ ವ್ಯಾಖ್ಯಾನದ ಸಮ್ಮುಖ, ‘ನಮ್ಮ ಕಾಲ-ದೇಶ’ದಲ್ಲಿಯೇ ಬದಲಾವಣೆಯ ಸಂಕಲ್ಪ ಪ್ರಕಟಿಸಿದ ಇಬ್ಬರ ಉದಾಹರಣೆ ಕೊಟ್ಟು ಮಾತು ಮುಗಿಸುತ್ತೇನೆ. ಒಂದನೆಯದು: ಗಾಂಧೀಜಿ ಪುರಿಗೆ ಹೋಗಿದ್ದರು. ಅಲ್ಲಿನ ಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿ ಅಸ್ಪೃಶ್ಯರಿಗೆ ಪ್ರವೇಶವಿಲ್ಲದಿರುವುದು ಅವರಿಗೆ ‘ಅವಮಾನ’ದ ಸಂಗತಿಯಾಗಿ ಕಂಡಿತು. ಮಾನವಂತರಾದ ಯಾರೂ ಆ ದೇವಸ್ಥಾನಕ್ಕೆ ಹೋಗಕೂಡದೆಂದು ಕರೆಯಿತ್ತರು. ಆದರೆ ಕಸ್ತೂರಬಾ ಅವರು ಗುಪ್ತವಾಗಿ ದೇವರ ದರ್ಶನ ಪಡೆದುಬಂದರು. ವಿಷಯ ತಿಳಿದದ್ದೇ ಗಾಂಧೀಜಿ ಅದನ್ನು ಸಾರ್ವಜನಿಕವಾಗಿ ಖಂಡಿಸಿದರು. ಎರಡನೆಯದು-ದಲಿತರು ಪಾಯಿಖಾನೆಗಳಿಂದ ಮಲವನ್ನು ಹೆಕ್ಕಿ,  ತಲೆಯ ಮೇಲೆ ಹೊತ್ತು ವಿಲೇವಾರಿ ಮಾಡುವ ವ್ಯವಸ್ಥೆ ಸ್ವಾತಂತ್ರೋತ್ತರ ಕಾಲದಲ್ಲೂ ನಡೆದುಕೊಂಡು ಬರುತ್ತಿರುವ ಕುರಿತು ಕೆ.ವಿ.ಸುಬ್ಬಣ್ಣ ಅವರು ನೀಡಿದ ಪ್ರತಿಕ್ರಿಯೆ: ‘ತಲೆಯ ಮೇಲೆ ಮಲಹೊರುವ ದೈನ್ಯ ಹರಿಜನರಿಗೆ ಅಸಹ್ಯ ಹೇವರಿಕೆ ಕ್ರೋಧ ತರಬೇಕು. ಹಾಗೆ... ಉತ್ತಮನಿಗೆ ಊಟದ ತುತ್ತನೆತ್ತುವಾಗ ಅದು ಮಲವಾಗಿ ಕಾಣಬೇಕು. ಅಲ್ಲಿಗೆ ಆತ ಮನುಷ್ಯನಾಗುತ್ತಾನೆ... ಆದರೆ, ಅಂಥ ಸ್ಥಿತಿಯ ತನಕ ನಾವು ಕಾದು ಕೂರಲಾರೆವು. ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಸಮೀಪಿಸಿದರೂ ಈ ಸಮಸ್ಯೆ ತೀವ್ರವಾಗಿ ಮುಂದುವರೆದುಕೊಂಡು ಬಂದಿದೆಯಲ್ಲ-ಇದಕ್ಕಿಂತ ಅವಮಾನಕರವಾದ ಸಂಗತಿ ಇನ್ನೊಂದಿಲ್ಲ. ಈಗಾದರೂ ನಾವು ಯುದ್ಧಕಾಲದ ತುರ್ತಿನಿಂದ ಕ್ರಿಯಾಶೀಲರಾಗಬೇಕು’ (ಪು.60, ಅರೆ ಶತಮಾನದ ಅಲೆ ಬರಹದ ಅಲೆ ಬರಹಗಳು, ಅಕ್ಷರ ಪ್ರಕಾಶನ,ಹೆಗ್ಗೋಡು).ಅಕ್ಷರ ಅವರ ‘ಸ್ವಂತದ ಮಾನಾವಮಾನ’ಗಳ ಕಲ್ಪನೆಗಳ ಲೋಕದಲ್ಲಿ ಗಾಂಧಿ, ಸುಬ್ಬಣ್ಣರಂತಹವರ ವೈಚಾರಿಕ ಸಂಕಲ್ಪಗಳಿಗೆ ಪ್ರವೇಶವಿಲ್ಲ ಮಾತ್ರವಲ್ಲ, ಅವು ‘ನಮ್ಮ ಸಮಾಜಕ್ಕೆ ದೊಡ್ಡ ಅವಮಾನ’ ಉಂಟುಮಾಡುವಂತಹ ವೈಚಾರಿಕ ನೆಲೆಗಳೂ ಆಗಿಬಿಡುತ್ತವೆ. ಇದು ನನಗೆ ಸಮ್ಮತವಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.