ಬುಧವಾರ, ಏಪ್ರಿಲ್ 14, 2021
29 °C

ರೇಷ್ಮೆಗೂಡಿನಲ್ಲಿ ಬಿರುಗಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರ ಪಾಲಿಗೆ ಸಂಜೀವಿನಿಯಾಗಿದ್ದ ರೇಷ್ಮೆ  ಉದ್ಯಮ ಕಳೆದ 20 ದಿನಗಳಿಂದ ಭಾರಿ ನಷ್ಟ ಅನುಭವಿಸುತ್ತಿದೆ. ದಿಢೀರ್ ಬೆಲೆ ಕುಸಿತದಿಂದ ರೇಷ್ಮೆ ಕೃಷಿಕರು ಕಂಗಾಲಾಗಿದ್ದಾರೆ. ರೇಷ್ಮೆಯ ಒಳ್ಳೆಯ ದಿನಗಳು ಕೊನೆಯಾದವೇ ಎಂಬ ಆತಂಕ ರೈತರಲ್ಲಿ ಕಾಡುತ್ತಿದೆ.ಅವಿಭಜಿತ ಕೋಲಾರ ಜಿಲ್ಲೆ ಎಂದಾಕ್ಷಣ ಸಿಲ್ಕ್, ಮಿಲ್ಕ್, ಗೋಲ್ಡ್ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಆರಂಭದಲ್ಲಿ ಚಿನ್ನದ ಗಣಿಗಳನ್ನು ಮುಚ್ಚುವ ಮೂಲಕ ಚಿನ್ನದ ಉದ್ಯಮ ಮಾಯವಾಯಿತು.ರೇಷ್ಮೆ ಮತ್ತು ಹೈನುಗಾರಿಕೆ ಮಾತ್ರ ಜಿಲ್ಲೆಯ ರೈತರ ಜೀವನಾಡಿಯಾಗಿದ್ದವು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನಿರೀಕ್ಷಿತ ನಿರ್ಧಾರಗಳಿಂದ ರೇಷ್ಮೆ ಗೂಡಿನ ಬೆಲೆ ಕುಸಿದು ರೇಷ್ಮೆ ಉದ್ಯಮವು ಸಹ ಕುಂಠಿತಗೊಳ್ಳಲಿದೆ ಎಂಬ ಭೀತಿ ರೈತರಲ್ಲಿ ಆವರಿಸಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಹುಜನರಿಗೆ ಉದ್ಯೋಗ ಒದಗಿಸಿ ಅನ್ನವನ್ನು ನೀಡುತ್ತಿದ್ದ ರೇಷ್ಮೆ ಉದ್ಯಮ ಈಗ ಕವಲು ದಾರಿಯಲ್ಲಿ ನಿಂತಿದೆ. ರೇಷ್ಮೆ ಗೂಡು ಕೆ.ಜಿಗೆ 350 ರಿಂದ 400 ರೂಪಾಯಿಗೆ ಮಾರಾಟವಾಗುತ್ತಿತ್ತು.ಕೇಂದ್ರ ಸರ್ಕಾರ  ಆಮದು ರೇಷ್ಮೆಯ ತೆರಿಗೆಯನ್ನು ಶೇ 31ರಿಂದ ಶೇ 5ಕ್ಕೆ ಇಳಿಸುವ ಪ್ರಸ್ತಾವನೆಯಿಂದ ಗೂಡಿನ ಧಾರಣೆ 150 ರಿಂದ 200 ರೂಪಾಯಿಗೆ ಕುಸಿದಿದೆ. ಒಂದು ಕೆ.ಜಿ. ಗೂಡನ್ನು ಬೆಳೆಯಬೇಕಾದರೆ ಕನಿಷ್ಠ 300 ರಿಂದ 325 ರೂಪಾಯಿ ಖರ್ಚು ಬರುತ್ತದೆ. ಚೀನಾ ರೇಷ್ಮೆಯ ಮೇಲಿನ ತೆರಿಗೆ ಕಡಿತದಿಂದ ರೇಷ್ಮೆ ಗೂಡಿನ ಬೆಲೆ ಪಾತಾಳ ತಲುಪಿದೆ ಎಂದು ರೈತರು ಹೇಳುತ್ತಾರೆ.

‘ಹಿಂದುಳಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ನದಿ ನಾಲೆಗಳಿಲ್ಲ. ಜಿಲ್ಲೆಯ ಶೇ 75ರಷ್ಟು ಜನರ ಮುಖ್ಯ ಕಸುಬು ವ್ಯವಸಾಯ. ಕಳೆದ 5-6 ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. 800-1000 ಅಡಿಗಳು ಕೊರೆದರೂ ನೀರು ಸಿಗುತ್ತಿಲ್ಲ. ಒಂದು ಕೊಳವೆ ಬಾವಿ ಕೊರೆದು ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಪಡೆದು ನೀರನ್ನು ಮೇಲೆ ತರಬೇಕಾದರೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ‘ರೇಷ್ಮೆಯಿಂದ ನಾಲ್ಕು ಕಾಸು ಕಾಣುತ್ತಿದ್ದೆವು. ಆದರೆ ಇತ್ತೀಚಿನ ಅನಿರೀಕ್ಷಿತ ಬೆಳವಣಿಗೆಗಳಿಂದ ಎಲ್ಲವೂ ನಷ್ಟವಾಗಿದೆ’ ಎಂದು ರೈತರು ಸಂಕಷ್ಟ ತೋಡಿಕೊಳ್ಳುತ್ತಾರೆ. ಜಿಲ್ಲೆಯ ರೈತರು ರೇಷ್ಮೆಯನ್ನೇ ಅಧಿಕವಾಗಿ ನಂಬಿದ್ದರು. ತೀವ್ರ ಬೆಲೆ ಕುಸಿತದಿಂದ ಮುಂದೇನು ಎಂಬ ಆತಂಕಕ್ಕೆ ಒಳಗಾಗಿದ್ದಾರೆ ವಾತಾವರಣದ ಏರುಪೇರಿನಿಂದ ಬೆಳೆ ಬೆಳೆಯುವುದೇ ಕಷ್ಟ. ಶ್ರಮದಿಂದ ಬೆಳೆ ಬೆಳೆದರೂ ಬೆಲೆ ಇಲ್ಲ. ರೇೀಷ್ಮೆಯನ್ನೇ ನಂಬಿದ್ದ ಜನ ವಲಸೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲು ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆ ಸ್ಥಾಪಿಸಿಕೊಂಡು ಗೂಡುಗಳನ್ನು ರಸ್ತೆಗೆ ಸುರಿದು ರಸ್ತೆ ತಡೆ, ಉಪವಾಸ ಸತ್ಯಾಗ್ರಹ, ಗೂಡಿನ ಮಾರುಕಟ್ಟೆ ಮತ್ತು ಸರ್ಕಾರಿ ಕಚೇರಿಗಳಿಗೆ ಬೀಗಮುದ್ರೆ ಹಾಕುವುದು  ಬೀಗಮುದ್ರೆ ಹಾಕುವುದು ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಆದರೂ  ರೇಷ್ಮೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಗದೆ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ.‘ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ನಮ್ಮ ನೆರವಿಗೆ ಬಂದಿಲ್ಲ, ಬೆಲೆ ಕುಸಿತದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ಹೇಳಿಕೆ ನೀಡುತ್ತಾರೆ. ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡರು ಸಮಸ್ಯೆ ತಾತ್ಕಾಲಿಕವಾಗಿದ್ದು ಶೀಘ್ರವೇ ಬಗೆಹರಿಸಲಾಗುವುದು ಎಂದು ಹೇಳುತ್ತಾರೆ. ಆದರೆ ಈವರೆಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವುದು ರೈತರ ನೋವಿನ ನುಡಿ.ರೇಷ್ಮೆ ಬೆಲೆ ಕುಸಿತದಿಂದ ಕೇವಲ ರೈತರು ಮಾತ್ರ–ವಲ್ಲದೆ ರೀಲರುಗಳು, ಕೃಷಿ ಕೂಲಿಗಾರರು,  ಕಾರ್ಮಿಕರು, ಮೊಟ್ಟೆ ಉತ್ಪಾದಕರು, ಚಾಕಿ ಕೇಂದ್ರಗಳು, ವ್ಯಾಪಾರಸ್ಥರು ಸೇರಿದಂತೆ ಜನರು ಹಾಗೂ ಪರೋಕ್ಷವಾಗಿ ಇದನ್ನು ಅವಲಂಬಿಸಿದ್ದವರು ಸಹ ಆತಂಕಕ್ಕೆ ಒಳಗಾಗಿದ್ದಾರೆ. ಬೆಲೆ ಕುಸಿತ ಇದೇ ರೀತಿ ಮುಂದುವರೆದರೆ ಹಿಪ್ಪುನೇರಳೆ ತೋಟ ಕಿತ್ತು ಹಾಕಬೇಕಾಗುತ್ತದೆ ಎಂದು ರೈತರು ಹೇಳುತ್ತಾರೆ. ರೇಷ್ಮೆ ನೂಲು ತೆಗೆಯುವ ಘಟಕಗಳೆಲ್ಲ ಸ್ಥಗಿತಗೊಂಡು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಕೆಲಸಗಾರರಲ್ಲಿ ಆವರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.