ಸೋಮವಾರ, ಮೇ 23, 2022
24 °C

ರೈತನ ಮೇಲೆ ಸಚಿವ ನಿರಾಣಿ ಹಲ್ಲೆ; ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ/ಮುಧೋಳ: ರೈತರೊಬ್ಬರ ಮೇಲೆ ಸಚಿವ ಮುರಗೇಶ ನಿರಾಣಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಮುಧೋಳ ಪಟ್ಟಣದಲ್ಲಿ ಶನಿವಾರ ರಸ್ತೆ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.`ಸಚಿವರು ಕ್ಷುಲ್ಲಕ ಕಾರಣಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ~ ಎಂದು ಮಂಟೂರು ಗ್ರಾಮದ ರೈತ ಶಿವಾನಂದ ತಿಮಸಾನಿ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. `ಮಂಟೂರ ಸಮೀಪದ ತೋಟದ ಮನೆಗೆ ನಾನು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಟಿಪ್ಪರ್ ಹಿಂದಿಕ್ಕುವ ಸಂದರ್ಭದಲ್ಲಿ ಎದುರಿನಿಂದ ಸಚಿವರ ಕಾರು ವೇಗವಾಗಿ ಬಂತು. ಈ ಸಂದರ್ಭದಲ್ಲಿ ಸಂಚಾರಕ್ಕೆ ಅಡಚಣೆಯಾಯಿತು. ತಕ್ಷಣ ಸಚಿವರು ಕಾರನ್ನು ನಿಲ್ಲಿಸಿ ನಿಂದಿಸಿದರು. ಕ್ಷಮೆ ಯಾಚಿಸಿದರೂ ಬಿಡದೆ ಮತ್ತೆ ನಮ್ಮ ತೋಟದ ಮನೆಗೆ ಆಗಮಿಸಿ ನನ್ನ ಮೇಲೆ ಹಲ್ಲೆ ಮಾಡಿದರು~ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಈ ವಿಷಯ ತಿಳಿಯುತ್ತಿದ್ದಂತೆಯೇ ಪಟ್ಟಣದಲ್ಲಿ ಗುಂಪು ಸೇರಿದ ನೂರಾರು ರೈತರು ಮುಧೋಳ-ಲೋಕಾಪುರ ರಸ್ತೆ ತಡೆ ನಡೆಸಿ  ಆಕ್ರೋಶ ವ್ಯಕ್ತಪಡಿಸಿದರು.ನಿರಾಕರಣೆ: ಘಟನೆ ಕುರಿತು `ಪ್ರಜಾವಾಣಿ~ಗೆ  ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ನಿರಾಣಿ, ತಾವು ರೈತನ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೇಳಿಕೊಂಡರು.`ಮಂಟೂರ ಮಾರ್ಗವಾಗಿ ಬೀಳಗಿಗೆ ಹೋಗುತ್ತಿದ್ದ ವೇಳೆ ಇಲ್ಲಿನ ಬಸ್ ನಿಲ್ದಾಣ ಬಳಿ ನಿಂತಿದ್ದ ರೈತ ಶಿವಾನಂದ ನನ್ನನ್ನು ನೋಡಿ ಅವಾಚ್ಯವಾಗಿ ನಿಂದಿಸಿ ಮನೆಯತ್ತ ಕಾರಿನಲ್ಲಿ ಹೋದರು. ಸಾರ್ವಜನಿಕವಾಗಿ ನನ್ನನ್ನು ನಿಂದಿಸಿದ ಕಾರಣ ತಿಳಿಯುವ ಸಂಬಂಧ ಅವರ ಮನೆ ಬಳಿ ಹೋದಾಗ ನಿಮ್ಮನ್ನು ನಾನು ಬೈದಿಲ್ಲ ಎಂದು ಶಿವಾನಂದ ಕ್ಷಮೆ ಯಾಚಿಸಿದರು. ಅಲ್ಲಿಂದ ನಾನು ತೆರಳಿದೆ. ಬಳಿಕ ಶಿವಾನಂದ ಮಾಧ್ಯಮಗಳ ಎದುರು ನಾನು ಹಲ್ಲೆ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ~ ಎಂದು ಹೇಳಿದರು.`ಕಳೆದ ವರ್ಷ ಮುಧೋಳದಲ್ಲಿ ನಡೆದ ರೈತರ ಗಲಾಟೆಯಲ್ಲಿ ಶಿವಾನಂದ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿ, ಜಾಮೀನು ರಹಿತ ವಾರೆಂಟ್ ಆಗಿದೆ. ಬಂಧನ ಭೀತಿಯಲ್ಲಿರುವ ಶಿವಾನಂದ ಪೂರ್ವ ನಿಯೋಜಿತವಾಗಿ ಪ್ರತಿ ದೂರು ದಾಖಲಿಸುವ ಸಂಬಂಧ ಶನಿವಾರದ ಘಟನೆಗೆ ಬಣ್ಣಹಚ್ಚಿದ್ದಾರೆ. ನಾನು ರೈತರ ಮೇಲೆ ಕೈಮಾಡುವ ಮಟ್ಟಕ್ಕೆ ಇಳಿದಿಲ್ಲ~ ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.