ಬೆಂಗಳೂರು: ಉತ್ತರ ಕರ್ನಾಟಕದ ಹಲವೆಡೆ ಸೋಮವಾರ ಸಂಜೆ ಹಾಗೂ ಮಂಗಳವಾರ ಸಹ ಬಿದ್ದ ಅಕಾಲಿಕ ಮಳೆಯಿಂದ ವಿಜಾಪುರ ಜಿಲ್ಲೆಯೊಂದರಲ್ಲೆ ರೂ. 200 ಕೋಟಿಗೂ ಅಧಿಕ ಬೆಳೆ ಹಾನಿ ಹಾಗೂ ಅನೇಕ ಜಾನುವಾರುಗಳು ಸಾವನ್ನಪ್ಪಿವೆ.

ವಿಜಾಪುರ ವರದಿ: ಆಲಿಕಲ್ಲು ಮಳೆ ಇಂಡಿ ತಾಲ್ಲೂಕಿನ 40ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಬೆಳೆಯನ್ನೆಲ್ಲ ಬಲಿ ಪಡೆದಿದೆ. ಆಲಿಕಲ್ಲುಗಳ ರಭಸದ ಏಟಿಗೆ 60ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದು, ಪಕ್ಷಿ–ಕೋಳಿಗಳ ಸಾವಿನ ಲೆಕ್ಕ ಇನ್ನೂ ಸಿಕ್ಕಿಲ್ಲ.

ಹಾನಿಗೀಡಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದರೆ, ಕಟಾವಿಗೆ ಬಂದಿದ್ದ ದ್ರಾಕ್ಷಿಯ ಗೊನೆಗಳು ತುಂಡು ತುಂಡಾಗಿ ನೆಲದ ಮೇಲೆ ಬಿದ್ದಿದ್ದವು. ನಿಂಬೆ, ದಾಳಿಂಬೆ ನೆಲ ಕಚ್ಚಿದ್ದವು. ಗೋಧಿ, ಕಡಲೆ ಮತ್ತಿತರ ಬೆಳೆಯಲ್ಲಿ ಕಾಯಿಯೇ ಉಳಿದಿರಲಿಲ್ಲ. ಮೆಕ್ಕೆಜೋಳ, ಜೋಳದ ಬೆಳೆ ತುಂಡು ತುಂಡಾಗಿತ್ತು. ಸೋಮವಾರ ಸಂಜೆ ಬಿದ್ದ ಆಲಿಕಲ್ಲುಗಳು ಇನ್ನೂ ಕರಗದೇ ಹಾಗೇ ಇದ್ದವು. ಆಲಿಕಲ್ಲುಗಳ ಏಟಿಗೆ ಮೃತಪಟ್ಟ ಕೋಳಿ–ಪಕ್ಷಿಗಳ ಶವಗಳೂ ಅಲ್ಲಲ್ಲಿ ಬಿದ್ದಿದ್ದವು.

ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದಲ್ಲಿ ಹಾನಿಗೀಡಾದ ದ್ರಾಕ್ಷಿ ತೋಟದಲ್ಲಿದ್ದ ಮೊಹ್ಮದ್ಸಾಬ್ ವಾಲೀಕಾರ, ‘ಗಾರ್ ಮಳಿ (ಆಲಿಕಲ್ಲು ಮಳೆ) ಬೆಳಿಗಳನ್ನೆಲ್ಲಾ ಸರ್ವನಾಶ ಮಾಡೈತಿ. ನಮ್ನೂ ವೈದಿದ್ರ ಛಲೋ ಇತ್ ನೋಡ್ರಿ...’ ಎಂದು ಕಣ್ಣೀರಿಟ್ಟರು.

‘ನನ್ನ ಜೀವಮಾನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಳೆ ನೋಡಿದ್ದೇನೆ. ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಎಲ್ಲವೂ ನೀರಿನಲ್ಲಿ ನಿಂತು ಕೊಳೆಯುತ್ತಿದೆ’ ಎಂದು 55 ವರ್ಷದ ತಾನಾಜಿ ಸಕಾರಾಂ ಭೋಸಲೆ ಹಳಹಳಿಸಿದರು.

ಅಪಾರ ಹಾನಿ: ‘ಅಕಾಲಿಕ ಮಳೆಯಿಂದ ದ್ರಾಕ್ಷಿ, ದಾಳಿಂಬೆ, ನಿಂಬೆ, ಈರುಳ್ಳಿ, ಗೋಧಿ, ಕಡಲೆ ಸೇರಿದಂತೆ 4,000 ಹೆಕ್ಟೇರ್ಗೂ ಅಧಿಕ ಪ್ರದೇಶದ ಬೆಳೆ ಹಾನಿಯಾಗಿದೆ. ಪ್ರಾಥಮಿಕ ವರದಿಯಂತೆ ಅಂದಾಜು ರೂ. 200 ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ ತಿಳಿಸಿದರು.

ಬೀದರ್ನಲ್ಲೂ ಹಾನಿ
ಬೀದರ್ ವರದಿ: ಜಿಲ್ಲೆಯ ಹುಮನಾಬಾದ್, ಭಾಲ್ಕಿ, ಔರಾದ್, ಬಸವಕಲ್ಯಾಣ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬೆಳಗ್ಗಿನ ಜಾವ 2 ಗಂಟೆಯಿಂದ ಸುರಿದ ಆಲಿಕಲ್ಲು ಮಳೆಯಿಂದ 800 ಎಕರೆ ಬೆಳೆ ಹಾನಿ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಹುಮನಾಬಾದ್ ತಾಲ್ಲೂಕಿನ ಗಡವಂತಿ, ಮೊಳಕೇರಾ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಹಾಲಹಿಪ್ಪರ್ಗಾ, ಕೋಸಂ, ಬಾಳೂರು, ಚಂದಾಪುರ ಹಾಗೂ ಜೈನಾಪುರ ಮತ್ತು ಬೀದರ್ ತಾಲ್ಲೂಕಿನ ಮನ್ನಳ್ಳಿ ಆಸುಪಾಸಿನಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಉಳಿದಂತೆ ಜಿಲ್ಲೆಯಾದ್ಯಂತ ಅಕಾಲಿಕ ಮಳೆ ಸುರಿದಿದೆ. ಮಧ್ಯರಾತ್ರಿ ರಾತ್ರಿ 2 ಗಂಟೆಯಿಂದ ಸುಮಾರು ಅರ್ಧ ತಾಸು ಸುರಿದಿದೆ.

ಹಾಲಹಿಪ್ಪರ್ಗಾ ಗ್ರಾಮದಲ್ಲಿ ದೊಡ್ಡ ಪ್ರಮಾಣದ ಆಲಿಕಲ್ಲುಗಳು ಬಿದ್ದಿದ್ದು, ಶಬ್ದಕ್ಕೆ ಆಂತಕ ಮೂಡಿಸಿತ್ತು. ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ, ಜನವಾಡ, ಮುಡಬಿ ಹಾಗೂ ರಾಜೇಶ್ವರ, ಶಿವಪುರ, ಮುಚಳಂಬ, ರಾಜೇಶ್ವರ, ಜನವಾಡ, ಮುಡಬಿ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಆಗಿದೆ.

ಮಳೆ: ಕನಿಷ್ಠ 2 ಮಿಲಿ ಮೀಟರ್ನಿಂದ ಗರಿಷ್ಠ 30 ಮಿಲಿ ಮೀಟರ್ ವರೆಗೂ ಸರಾಸರಿ ಮಳೆ ಸುರಿದಿದ್ದು, ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯವಾದಂತೆ 24 ಗಂಟೆಗಳ ಅವಧಿಯಲ್ಲಿ ಹುಮನಾಬಾದ್ ತಾಲ್ಲೂಕಿನಲ್ಲಿ ಸರಾಸರಿ 21 ಮಿಲಿ ಮೀಟರ್, ಬೀದರ್ ತಾಲ್ಲೂಕಿನಲ್ಲಿ 14ಮಿ. ಮೀ, ಭಾಲ್ಕಿ ತಾಲ್ಲೂಕಿನಲ್ಲಿ 20 ಮಿ.ಮೀ , ಬಸವಕಲ್ಯಾಣ ತಾಲ್ಲೂಕಿನಲ್ಲಿ ಸರಾಸರಿ 33ಮಿ. ಮೀ ಮತ್ತು ಔರಾದ್ ತಾಲ್ಲೂಕಿನಲ್ಲಿ ಸರಾಸರಿ 30 ಮಿಲಿ ಮೀಟರ್ ಮಳೆಯಾಗಿದೆ.

ಹುಮನಾಬಾದ್ ತಾಲ್ಲೂಕಿನ ಚಿಟ್ಟಗುಪ್ಪಾ, ಮಂಗಲಗಿ, ಉಡಬಾಳ, ಮುತ್ತಂಗಿ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಿಂದ ಜೋಳ, ತೊಗರಿ ಮತ್ತಿತರ ಬೆಳೆಗಳು ಹಾನಿಯಾಗಿವೆ. -ಈ ಬಾರಿ ಮಾವಿನ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಟ್ಟಿದ್ದವು. ಮಳೆಯಿಂದ ಅವು ಉದುರಿದ್ದು, ಗಿಡಗಳು ಬೋಳಾಗಿ ನಿಂತಿವೆ. ದ್ರಾಕ್ಷಿ ತೋಟಗಳಿಗೂ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ.

ಔರಾದ್ ತಾಲ್ಲೂಕಿನ ವಿವಿಧೆಡೆ ತೊಗರಿ ಮತ್ತು ಕಡಲೆ ಬೆಳೆಗೆ ಹಾನಿಯಾಗಿದೆ. ಇಲ್ಲಿನ ಮಾಂಜ್ರಾ ನದಿ ಪಾತ್ರ ಸೇರಿದಂತೆ ಅಲ್ಲಲ್ಲಿ ಕಟಾವಿಗೆ ಬಂದ ಬಿಳಿಜೋಳ ಕೂಡ ಹಾನಿಯಾಗಿದೆ.

ಗುಲ್ಬರ್ಗ ವರದಿ: ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದು ಟೊಮೆಟೊ, ತೊಗರಿ, ಜೋಳ, ಕಡಲೆ ಸೇರಿದಂತೆ ಅಪಾರ ಬೆಳೆ ಹಾನಿಯಾಗಿದೆ. ಅಲ್ಲದೇ 42 ಕುರಿಗಳು ಸತ್ತಿವೆ.

ಸಪೋಟಾ, ಮಾವಿಗೂ ಹಾನಿ
ಬಳ್ಳಾರಿ ವರದಿ: ಸೋಮವಾರ ಸಂಜೆ ಆಲಿಕಲ್ಲು ಸಮೇತ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಡಿ.ನಾಗೇನಹಳ್ಳಿ, ಮೋಕಾ, ತಂಬ್ರಳ್ಳಿ ಮತ್ತಿತರ ಗ್ರಾಮಗಳ ರೈತರ ತೋಟಗಳಲ್ಲಿನ ನೂರಾರು ಚಿಕ್ಕು (ಸಪೋಟಾ) ಮತ್ತು ಮಾವಿನ ಮರಗಳು ನೆಲಕ್ಕುರುಳಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಕೆಲವೇ ದಿನಗಳಲ್ಲಿ ಕೈಗೆಟುಕಲಿದ್ದ ಚಿಕ್ಕು ಹಾಗೂ ಮಾವಿನ ಕಾಯಿಗಳೂ ನೆಲಕ್ಕುರುಳಿದ್ದು, ಮರದಲ್ಲಿರುವ ಕಾಯಿಗಳಿಗೂ ಪೆಟ್ಟು ತಗುಲಿ ಸಾಕಷ್ಟು ಹಾನಿಯಾಗಿದೆ.

ಹಗರಿ ನದಿ ದಂಡೆಯಲ್ಲಿರುವ ಗ್ರಾಮದ ಸುತ್ತ ಬೆಳೆಯುವ ವಿಶೇಷ ತಳಿಯ ‘ಕ್ರಿಕೆಟ್ ಬಾಲ್’ ಸಪೋಟಾ ಹಣ್ಣಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಾಕಷ್ಟು ಬೇಡಿಕೆ ಇದ್ದು, ಕೆಲವೇ ದಿನಗಳಲ್ಲಿ ಕಾಯಿ ಕಟಾವು ಮಾಡಲು ಸಿದ್ಧತೆ ನಡೆಸಿದ್ದ ರೈತರಿಗೆ ಇದರಿಂದ ದಿಕ್ಕೇ ತೋಚದಂತಾಗಿದೆ.

ಮಂಗಳವಾರ ರೈತರೆಲ್ಲ ತಮ್ಮ ತೋಟಗಳಲ್ಲಿ ಅಳಿದುಳಿದ ಮರಗಳ ರಕ್ಷಣೆಗೆ ಮುಂದಾಗಿದ್ದ ದೃಶ್ಯ ಮನ ಕಲಕುವಂತಿತ್ತು.
ಈ ಗ್ರಾಮಗಳ ರೈತರು ಬೆಳೆದಿರುವ ಮಾವಿನ ಫಸಲಿಗೂ ಸಾಕಷ್ಟು ಅಪಾರ ಹಾನಿ ತಗುಲಿದೆ. ನೂರಾರ ಎಕರೆ ಭೂಮಿಯಲ್ಲಿನ ಮೆಣಸಿನಕಾಯಿ ಸಸಿ, ಟೊಮೆಟೋ ಸಸಿಗಳೂ ಕೊಚ್ಚಿ ಹೋಗಿವೆ.

ಮೈಸೂರು: ಗುಡುಗು ಮಳೆ
ಮೈಸೂರು ವರದಿ: ನಗರದಲ್ಲಿ ಮಂಗಳವಾರ ರಾತ್ರಿ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು.

ರಾತ್ರಿ 7.30ರ ವೇಳೆಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆ ಸುರಿಯಿತು. ವಿವಿಧ ಬಡಾವಣೆಗಳಲ್ಲಿ ಮಳೆ–ಗಾಳಿ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಬನ್ನಿಮಂಟಪದ ‘ಎ’ ಬಡಾವಣೆಯಲ್ಲಿ ಸಿಡಿಲ ಬಡಿತಕ್ಕೆ ತೆಂಗಿನಮರವೊಂದಕ್ಕೆ ಬೆಂಕಿ ಹೊತ್ತಿಕೊಂಡು ಸುಳಿ ಮುರಿದಿದೆ.

ಜೆ.ಪಿ. ನಗರ ಬಡಾವಣೆ, ಮೈಸೂರು ವಿಶ್ವವಿದ್ಯಾಲಯದ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ವಿದ್ಯಾಲಯದ ಬಳಿಯ ರಸ್ತೆಯಲ್ಲಿ ಮರ ನೆಲಕ್ಕುರುಳಿವೆ.
ಮಳೆ ರಭಸವಾಗಿ ಬಿದ್ದಿದ್ದರಿಂದ ರಸ್ತೆಗಳಲ್ಲಿ ನೀರು ಧಾರಾಕಾರವಾಗಿ ಹರಿದು ರಸ್ತೆ, ಚರಂಡಿಗಳ ಕೊಳೆ ತೊಳೆಯಿತು. ನಗರದ ದೇವರಾಜ ಅರಸು ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ದ್ವಿಚಕ್ರವಾಹನ ಸವಾರರು ಮಳೆಯಲ್ಲಿ ವಾಹನ ಚಲಿಸಲು ಪರದಾಡಿದರು.

ಹಾನಿ ಸಮೀಕ್ಷೆಗೆ ಆದೇಶ
ವಿಜಾಪುರ: ಆಲಿಕಲ್ಲು ಸಹಿತ ಮಳೆಯಿಂದ ತೀವ್ರ ಹಾನಿಗೊಳಗಾದ ಇಂಡಿ ತಾಲ್ಲೂಕಿನ ಹಲವು ಪ್ರದೇಶಗಳಿಗೆ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಭೆೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂಡಿ ತಾಲ್ಲೂಕಿನ ನಂದರ್ಗಿ, ದುಮಕನಾಳ, ಬರಡೋಲ, ದೇವರ ನಿಂಬರಗಿ ಮತ್ತಿತರ ಗ್ರಾಮಗಳ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿದ ಸಚಿವರು ಅಲ್ಲಿನ ರೈತರಿಂದ ಮಾಹಿತಿ ಪಡೆದರು.

ಹಾನಿಗೊಳಗಾದ ರೈತ ಕುಟುಂಬಗಳ ಆರ್ಥಿಕ ಸ್ಥಿತಿಗತಿ, ಬೆಳೆಗಾಗಿ ಮಾಡಿರುವ ಖರ್ಚಿನ ಸಂಪೂರ್ಣ ವಿವರ ಪಡೆದ ಸಚಿವರು, ‘ತೋಟಗಾರಿಕೆ ಇಲಾಖೆಯಿಂದ ತಂಡಗಳನ್ನು ರಚಿಸಿ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಪ್ರತಿ ರೈತರ ವಿವರ ದಾಖಲಿಸಿ ಸಮಗ್ರ ವರದಿ ತಯಾರಿಸಬೇಕು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಎಸ್. ಇನಾಮದಾರಗೆ ಆದೇಶಿಸಿದರು.

ಮುಖ್ಯಮಂತ್ರಿಗಳು ಬುಧವಾರ (ಇದೇ 5ರಂದು) ವಿಜಾಪುರಕ್ಕೆ ಆಗಮಿಸಲಿದ್ದು, ಅಕಾಲಿಕ ಮಳೆಯಿಂದ ಆಗಿರುವ ನಷ್ಟವನ್ನು ಅವರ ಗಮನಕ್ಕೆ ತಂದು ರೈತರಿಗೆ ಪರಿಹಾರ ನೀಡುವಂತೆ ವಿನಂತಿಸುವುದಾಗಿ ಸಚಿವ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.