ಗುರುವಾರ , ಜೂನ್ 17, 2021
27 °C

ರೈಲ್ವೆ ಬಜೆಟ್ ಮಂಡನೆ: ಪ್ರಯಾಣ ದರದಲ್ಲಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಬುಧವಾರ ಬೆಳಿಗ್ಗೆ ಲೋಕಸಭೆಯಲ್ಲಿ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನ್ನು ಮಂಡಿಸಿದರು.

ಪ್ರಮುಖವಾಗಿ ರೈಲು ಸುರಕ್ಷತೆ ಸೇರಿದಂತೆ 5 ವಿಷಯಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರಾಧಾನ್ಯತೆ ಕೊಡಲಾಗಿದೆ ಎಂದು ಅವರು ಹೇಳಿದರು.ಉಳಿದ ನಾಲ್ಕು ಆದ್ಯತಾ ವಿಷಯಗಳೆಂದರೆ, ಕ್ರೋಢಿಕರಣ, ದಟ್ಟನೆ ನಿವಾರಣೆ, ಸಾಮಾರ್ಥ್ಯದಲ್ಲಿ ಹೆಚ್ಚಳ, ನಿರ್ವಹಣೆಯ ಅನುಪಾತದಲ್ಲಿ ಇಳಿಕೆ ಸಾಧಿಸಿ ಆಧುನೀಕತೆ ತರುವುದುರೈಲ್ವೆ ಆಧುನೀಕರಣಕ್ಕೆ ಒತ್ತು ನೀಡಿರುವ ತ್ರಿವೇದಿ ಅವರು ಅದಕ್ಕಾಗಿ 5.60 ಲಕ್ಷ ಕೋಟಿ ರೂ ಹಣದ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಅವರು ಮುಂದಿನ 5 ವರ್ಷಗಳಲ್ಲಿ ಕಾವಲುಗಾರ ರಹಿತ ಕ್ರಾಸಿಂಗ್‌ನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗುತ್ತದೆ ಎಂದು ಪ್ರಕಟಿಸಿದರು.

ಟಿಕೆಟ್ ದರ ಹೆಚ್ಚಳ : ಕಳೆದ ಹಲವು ವರ್ಷಗಳಿಂದ ಏರಿಕೆ ಕಾಣದೆ ಇದ್ದ ಪ್ರಯಾಣಿಕರ ಟಿಕೆಟ್ ದರವನ್ನು ಈ ಬಾರಿ ಪ್ರತಿ ಕಿಲೋಮೀಟರ್ ಗೆ 2 ರಿಂದ 30 ಪೈಸೆಗಳಷ್ಟು ಹೆಚ್ಚಿಸಲಾಗಿದೆ.

ಎಕ್ಸ್ ಪ್ರೆಸ್ ರೈಲು ಪ್ರಯಾಣದರವನ್ನು ಪ್ರತಿ ಕಿ.ಮೀ.ಗೆ 5 ಪೈಸೆಯಷ್ಟು ಹೆಚ್ಚಿಸಲಾಗಿದೆ.  ಎ.ಸಿ. ಚೇರ್ ಕಾರ್ ಮತ್ತು ಎ.ಸಿ.3 ಟೈಯರ್ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 10 ಪೈಸೆ, ಎ.ಸಿ. 2 ಟೈಯರ್ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 15 ಪೈಸೆ, ಎ.ಸಿ. ಮೊದಲ ದರ್ಜೆ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 30 ಪೈಸೆಯಷ್ಟು ಹೆಚ್ಚಿಸಲಾಗಿದೆ.

ಫ್ಲಾಟ್ ಫಾರಂ ಟಿಕೆಟ್ ದರವನ್ನು 3 ರೂಗಳಿಂದ 5 ರೂಗಳಿಗೆ ಹೆಚ್ಚಿಸಲಾಗಿದೆ.

ರೈಲ್ವೆ ಸುರಕ್ಷತಾ ಪ್ರಾಧಿಕಾರ :  ಶೂನ್ಯ ಸಾವಿನ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದ ತ್ರಿವೇದಿ ಸ್ವತಂತ್ರ ರೈಲ್ವೆ ಸುರಕ್ಷತಾ ಪ್ರಾಧಿಕಾರ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಾಂಶಗಳು;

1. ಕಳೆದ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರೈಲ್ವೆ ಇಲಾಖೆ 1.92 ಲಕ್ಷ ಕೋಟಿ ರೂಗಳನ್ನು ಹೂಡಿಕೆ ಮಾಡಿದ್ದರೆ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಹೂಡಿಕೆ ಮಾಡುವ ಮೊತ್ತ 7.35 ಲಕ್ಷ ಕೋಟಿ ರೂಗಳು.

2. ಹಣಕಾಸು ಸಚಿವಾಲಯವು ರೈಲ್ವೆ ಆಧುನೀಕರಣ ಕಾಮಗಾರಿಗಳಿಗಾಗಿ ರೈಲ್ವೆ ಇಲಾಖೆಗೆ ಶೇ. 8.55ರ ಬಡ್ಡಿದರದಲ್ಲಿ 3 ಸಾವಿರ ಕೋಟಿ ರೂ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ.

3. 2012-13ರ ಅವಧಿಯಲ್ಲಿ 85 ಹೊಸ ಮಾರ್ಗಗಳ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಇದಕ್ಕಾಗಿ 6870 ಕೋಟಿ ರೂಗಳನ್ನು ಹೂಡಿಕೆ ಮಾಡುವುದು. 114 ಹೊಸ ಮಾರ್ಗಗಳ ಸರ್ವೇಕ್ಷಣೆ ಕಾರ್ಯವನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.

4. 800 ಕಿಲೋಮೀಟರ್ ಉದ್ದದ ಗೇಜ್ ಪರಿವರ್ತನೆಗಾಗಿ 1950 ಕೋಟಿ ರೂಗಳನ್ನು ಮೀಸಲಿಡಲಾಗಿದೆ.

5. 19 ಕಿಲೋಮೀಟರ್ ನಷ್ಟು ಸಿಗ್ನಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.

6. ರೈಲಿನ ವೇಗವನ್ನು ಗಂಟೆಗೆ 160 ಕಿಲೋ ಮೀಟರ್ ನಷ್ಟು ಹೆಚ್ಚಿಸುವುದು. ಈ ಮೂಲಕ ದೆಹಲಿ ಹಾಗೂ ಕೋಲ್ಕೋತ್ತಾ ನಡುವಣದ ಪ್ರಯಾಣದ ಅವಧಿಯನ್ನು 17 ಗಂಟೆಯಿಂದ 14 ಗಂಟೆಗೆ ತಗ್ಗಿಸಲಾಗುತ್ತದೆ ಎಂದು ತ್ರಿವೇದಿ ತಿಳಿಸಿದರು.

7. ಆಧುನೀಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಿರುವುದರಿಂದ 2012-13ರ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.

8. ಹೊಸದಾಗಿ 75 ಎಕ್ಸ್ ಪ್ರೆಸ್ ಪ್ರಯಾಣಿಕರ ರೈಲುಗಳನ್ನು ಆರಂಭಿಸಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.