ಮಂಗಳವಾರ, ಜೂನ್ 22, 2021
22 °C

ರೈಲ್ವೆ ಯೋಜನೆಗೆ ಸರ್ಕಾರ ಸ್ಪಂದಿಸಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪೂರ್ಣ ಅನುದಾನದಲ್ಲೇ ತುಮಕೂರು-ರಾಯದುರ್ಗ, ಮುನಿರಾಬಾದ್-ಹೊಸಪೇಟೆ ರೈಲು ಮಾರ್ಗಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತಯಾಚಿಸಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮತನಾಡಿದರು.ಇಂದಿರಾಗಾಂಧಿ ಭರವಸೆ ನೀಡಿದ್ದ ಕಡೂರು- ಚಿಕ್ಕಮಗಳೂರು ರೈಲು ಮಾರ್ಗವನ್ನು ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಚಿಕ್ಕಮಗಳೂರು-ಕುಶಾಲನಗರ ಮಾರ್ಗವನ್ನು ಕೈಗೆತ್ತಿಕೊಳ್ಳಲಾಗಿದೆ. ಪರಿಸರ ಇಲಾಖೆ ಆಕ್ಷೇಪಣೆಯಿಂದ ನೆನೆಗುದಿಗೆ ಬಿದ್ದಿದ್ದ ಸಕಲೇಶಪುರ ಮಾರ್ಗಕ್ಕೂ ಹಸಿರು ನಿಶಾನೆ ಸಿಕ್ಕಿದೆ ಎಂದು ತಿಳಿಸಿದರು.ರೈಲ್ವೆ ಯೋಜನೆಗಳಿಗೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸಹಭಾಗಿತ್ವ ಸಿಗಲು ಆರಂಭಿಸಿತು. ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡರಿಂದಲೂ ಸಹಕಾರ ಸಿಕ್ಕಿದೆ. ಒಳ್ಳೆಯ ಕೆಲಸ ಆದರೆ, ಯಾವ ಪಕ್ಷದವರಾದರೇನು ಪ್ರಶಂಸಿಸುವುದು ತಪ್ಪಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಸಕರನ್ನು ಖರೀದಿಸಿ ಅನೈತಿಕ ರಾಜಕಾರಣ ಮಾಡಿ, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದು, ಅರಾಜಕತೆ ಸೃಷ್ಟಿಸಿದ್ದನ್ನು ಯಾರೂ ಒಪ್ಪುವುದಿಲ್ಲ. ಈ ಚುನಾವಣೆಯಲ್ಲಿ ಮತದಾರರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಕ್ಷೇತ್ರದ ಜನತೆ ಜಯಪ್ರಕಾಶ್ ಹೆಗ್ಡೆಯವರನ್ನು ಆಯ್ಕೆ ಮಾಡಿದರೆ, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.ಚಿಕ್ಕಮಗಳೂರು ಜಿಲ್ಲೆಗೆ ಕೇಂದ್ರ ಸರ್ಕಾರ 2005ರಿಂದ 2011ರವರೆಗೆ ಸಾಲ ಮನ್ನಾ, ಸಾಲದ ಬಡ್ಡಿ ಮನ್ನಾಕ್ಕಾಗಿ ಒಟ್ಟು 991.40 ಕೋಟಿ ರೂಪಾಯಿ ನೆರವು ನೀಡಿದೆ. 30 ಸಾವಿರ ಕಾಫಿ ಬೆಳೆಗಾರರು ಮತ್ತು  20 ಸಾವಿರ ಮಂದಿ ಅಡಿಕೆ ಬೆಳೆಗಾರರು ಕೇಂದ್ರ ಸರ್ಕಾರದ ಪ್ರಯೋಜನ ಪಡೆದಿದ್ದಾರೆ ಎಂದರು.ಕಾಂಗ್ರೆಸ್‌ನಲ್ಲಿ ಎಲ್ಲರೂ ಒಟ್ಟಾಗಿದ್ದು, ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ. ಇಷ್ಟೊಂದು ಒಗ್ಗಟ್ಟು ಪ್ರದರ್ಶನ ಯಾವ ಚುನಾವಣೆಯಲ್ಲೂ ಇರಲಿಲ್ಲ. ನಮ್ಮಲ್ಲಿ ಒಡಕು ಮೂಡಿಸಬಹುದೆಂದು ಬಿಜೆಪಿ ಮುಖಂಡರು ಭಾವಿಸಿದ್ದರೆ ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಧನಂಜಯಕುಮಾರ್ ಕುಮಾರ್ ಹೇಳಿಕೆಗೆ ತೀಕ್ಷ್ಣ ಪ್ರತಿಕೆಯೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್, ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ, ಪಕ್ಷದ ಎಸ್‌ಸಿ ಎಸ್‌ಟಿ ಘಟಕದ ರಾಮ್‌ಚರಣ್ ಇನ್ನಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.