ಮಂಗಳವಾರ, ಏಪ್ರಿಲ್ 20, 2021
26 °C

ರೈಲ್ವೆ ಸಚಿವರ ಜತೆ ಚರ್ಚಿಸಿ ದಿನಾಂಕ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಈ ತಿಂಗಳ 9ರಿಂದ 24ರವರೆಗೆ ತಾವು ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸದಿಂದ ಹಿಂತಿರುಗಿದ ನಂತರ ಮೈಸೂರು- ಕುಶಾಲನಗರ ನಡುವೆ ರೈಲು ಮಾರ್ಗದ ಸಂಪರ್ಕ ಸರ್ವೆಗೆ ಚಾಲನೆ ನೀಡಲು ರೈಲ್ವೆ ಸಚಿವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಎಚ್. ವಿಶ್ವನಾಥ್ ತಿಳಿಸಿದ್ದಾರೆ.‘ಬಹುಶಃ ಈ ತಿಂಗಳ ಕೊನೇ ಭಾಗ ಅಥವಾ ಮುಂದಿನ ತಿಂಗಳ ಪ್ರಾರಂಭದಲ್ಲಿ ರೈಲ್ವೆ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ’ ಎಂದು ಸಂಸದರು ‘ಪ್ರಜಾವಾಣಿ’ಗೆ ತಿಳಿಸಿದರು. ಕಳೆದ ವರ್ಷದ ರೈಲ್ವೆ ಬಜೆಟ್‌ನಲ್ಲಿ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮೈಸೂರು-ಕುಶಾಲನಗರ-ಮಡಿಕೇರಿ ನಡುವೆ ರೈಲ್ವೆ ಸಂಪರ್ಕ ಕಲ್ಪಿಸುವ ಸಂಬಂಧ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಪ್ರಸ್ತಾಪ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.ಮೈಸೂರು-ಹುಣಸೂರು-ಗೋಣಿಕೊಪ್ಪಲು-ಮಾಕುಟ್ಟ-ತಲಚೇರಿ ನಡುವೆ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಸರ್ವೆ ಕಾರ್ಯ ಕೈಗೆತ್ತಿಕೊಳ್ಳುವುದಕ್ಕೂ ಮೊನ್ನೆ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಕೇಂದ್ರ ರೈಲ್ವೆ ಸಚಿವರು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು. ಪ್ರಸ್ತುತ ಕುಶಾಲನಗರಕ್ಕೂ ರೈಲ್ವೆ ಸಂಪರ್ಕ ಕಲ್ಪಿಸುವುದಕ್ಕೂ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ರೈಲ್ವೆ ಸಂಪರ್ಕದಂತಹ ಯೋಜನೆಗಳು ಬಹಳ ಮುಖ್ಯ. ನಮಗೆಲ್ಲರಿಗೂ ಪ್ರಕೃತಿ ಬೇಕು. ಪ್ರಕೃತಿಯನ್ನೂ ಉಳಿಸಿಕೊಂಡು ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕೊಡಗಿಗೆ ಜನ ಹೇಗೆ ಬರುತ್ತಾರೆ ಹೇಳಿ?’ ಎಂದು ಪ್ರಶ್ನಿಸಿದರು.ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಕೊಡಗಿನಲ್ಲಿ ರೈಲ್ವೆ ಮಾರ್ಗ ಕೈಗೊಂಡಲ್ಲಿ ಸಾಕಷ್ಟು ಅರಣ್ಯ ನಾಶವಾಗಿ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂಬುದು ಪರಿಸರವಾದಿಗಳ ಆತಂಕ. ಇನ್ನು, ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿ, ಕಾಫಿ ರಫ್ತು, ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಸಂಪರ್ಕ ಸೇವೆ ಕಲ್ಪಿಸುವ ಉದ್ದೇಶದಿಂದ ಕೊಡಗಿಗೆ ರೈಲು ಸಂಪರ್ಕ ಸೇವೆ ಅನಿವಾರ್ಯ ಎಂಬುದು ಪ್ರಗತಿಪರರ ವಾದ.ಕಳೆದ ವರ್ಷ ರೈಲ್ವೆ ಸಚಿವರು ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದಕ್ಕೆ ಸರ್ವೆ ಕಾರ್ಯ ಕೈಗೆತ್ತಿಕೊಳ್ಳುವ ಪ್ರಸ್ತಾಪ ಮಾಡಿದ ನಂತರ ಜಿಲ್ಲೆಯಲ್ಲಿ ಪರ- ವಿರೋಧ ಚರ್ಚೆಗಳು ನಡೆಯುತ್ತಿವೆಯಾದರೂ ಇದುವರೆಗೆ ಒಮ್ಮೆಯೂ ಒಂದು ವೇದಿಕೆಯಲ್ಲಿ ಚರ್ಚೆ ನಡೆದಿಲ್ಲ. ಅಲ್ಲದೆ, ಒಂದು ವರ್ಷ ಮುಗಿದರೂ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ.5ರ ಸಭೆ ರದ್ದು: ಮೈಸೂರಿನಲ್ಲಿ ಮಾರ್ಚ್ 5ರಂದು ಜಿಲ್ಲಾಧಿಕಾರಿಗಳು ಮೊದಲೇ ಸಭೆ ನಿಗದಿಪಡಿಸಿರುವ ಮಡಿಕೇರಿಯಲ್ಲಿ ಶನಿವಾರ ನಡೆಸಲು ನಿಗದಿಪಡಿಸಿದ್ದ ಸಭೆಯನ್ನು ರದ್ದುಪಡಿಸಲಾಗಿದೆ ಎಂದರು. ಸಮಾಜ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅರಣ್ಯ ಸೇರಿದಂತೆ ಪ್ರಮುಖ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲು ಸಂಸದರು ಮಾರ್ಚ್ 5ರಂದು ಸಭೆ ನಡೆಸಲು ಉದ್ದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.