ಗುರುವಾರ , ಏಪ್ರಿಲ್ 22, 2021
29 °C

ರೋಗಗ್ರಸ್ತ 9 ಸರ್ಕಾರಿ ಉದ್ದಿಮೆಗಳ ನೌಕರರ ಕಷ್ಟ: 8ತಿಂಗಳಿಂದ ಸಂಬಳವೇ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರದ ಒಡೆತನದ 9 ಪ್ರಮುಖ ಉದ್ದಿಮೆಗಳು ತನ್ನ ನೌಕರರಿಗೆ ಏಳೆಂಟು ತಿಂಗಳಿಂದ ಪ್ರತಿ ತಿಂಗಳೂ ಸರಿಯಾಗಿ ವೇತನ ಪಾವತಿಸುತ್ತಿಲ್ಲ!ಇಂಥದೊಂದು ಕಳವಳಕಾರಿ ಸಂಗತಿಯನ್ನು ಭಾರಿ ಕೈಗಾರಿಕೆಗಳು ಮತ್ತು ಸರ್ಕಾರಿ ಒಡೆತನದ ಉದ್ದಿಮೆಗಳ ಖಾತೆ ಸಚಿವ ಪ್ರಫುಲ್ ಪಟೇಲ್ ಗುರುವಾರ ಲೋಕಸಭೆಗೆ ತಿಳಿಸಿದರು.ಎಚ್‌ಎಂಟಿ ಬೇರಿಂಗ್, ಎನ್‌ಇಪಿಎ ಲಿ., ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿ., ತ್ರಿವೇಣಿ ಸ್ಟ್ರಕ್ಚುರಲ್ಸ್,  ಹಿಂದೂಸ್ತಾನ್ ಕೇಬಲ್ಸ್ ಲಿಮಿಟೆಡ್ 2012ರ ಮಾರ್ಚ್ 31ರವರೆಗಷ್ಟೇ ನೌಕರರಿಗೆ ವೇತನ ಪಾವತಿಸಿವೆ. ಟೈರ್ ಕಾರ್ಪೊರೇಷನ್ ಆಫ್ ಇಂಡಿಯ 2012 ಆಗಸ್ಟ್‌ವರೆಗೆ, ಸ್ಕೂಟರ್ ಇಂಡಿಯ ಸೆಪ್ಟೆಂಬರ್ 30ರವರೆಗಿನ ಸಂಬಳವನ್ನಷ್ಟೇ ನೀಡಿವೆ ಎಂದು ಸಚಿವರು ಪ್ರಶ್ನೋತ್ತರ ವೇಳೆಯಲ್ಲಿ ಸದನಕ್ಕೆ ಉತ್ತರಿಸಿದರು.ಈ 9 ಕಂಪೆನಿಗಳೂ ಸದ್ಯ ನಷ್ಟದಲ್ಲಿವೆ. ಇವುಗಳಲ್ಲಿ ಒಟ್ಟು 5100 ನೌಕರರಿದ್ದಾರೆ. ಇದರಲ್ಲಿ ಎಂಟು ಕಂಪೆನಿಗಳಿಗೆ  ನೌಕರರ ವೇತನ ಪಾವತಿಗಾಗಿಯೇ ಯೋಜನೇತರ ಬಾಬ್ತಿನಿಂದ ಸಾಲ ನೀಡುವ ಸಂಬಂಧ ಪ್ರಸ್ತಾವನೆ ಬಂದಿದ್ದು, ಇನ್ನಷ್ಟೇ ಅನುಮೋದನೆ ದೊರೆಯಬೇಕಿದೆ ಎಂದು ಸಚಿವರು ವಿವರಿಸಿದರು.ಭಾರಿ ಕೈಗಾರಿಕೆಗಳ ಇಲಾಖೆ ವ್ಯಾಪ್ತಿಯಲ್ಲಿ ಸದ್ಯ 13 ಕಂಪೆನಿಗಳು ಭಾರಿ ನಷ್ಟದಲ್ಲಿದ್ದು, `ರೋಗಗ್ರಸ್ತ' ಉದ್ದಿಮೆಗಳು ಎಂದೇ ಪರಿಗಣಿಸಲಾಗಿದೆ.ಕಂಪೆನಿಗಳ ವಂಚನೆ-ತನಿಖೆ

ತಮ್ಮ ಸಚಿವಾಲಯದ ಅಧೀನದಲ್ಲಿರುವ `ಗಂಭೀರ ವಂಚನೆ ಪ್ರಕರಣ ತನಿಖಾ ಸಂಸ್ಥೆ'(ಎಸ್‌ಎಫ್‌ಐಒ), ಸದ್ಯ 34 ಪ್ರಕರಣಗಳ ತನಿಖೆ ಕೈಗೊಂಡಿದೆ ಎಂದು ಕಂಪೆನಿ ವ್ಯವಹಾರಗಳ ಸಚಿವ ಸಚಿನ್ ಪೈಲಟ್ ಲೋಕಸಭೆಗೆ ಗುರುವಾರ ತಿಳಿಸಿದರು.ಈ ಸಂಸ್ಥೆ ಆರಂಭವಾದಾಗಿನಿಂದ ಒಟ್ಟು 133 ಗಂಭೀರ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸದ್ಯ 34 ಪ್ರಕರಣಗಳಲ್ಲಿ ತನಿಖೆ ನಡೆದಿದೆ. 95 ಪ್ರಕರಣಗಳ ತನಿಖೆ ಪೂರ್ಣಗೊಂಡಿದೆ. ಉಳಿದ 4 ಪ್ರಕರಣಗಳ ತನಿಖೆಗೆ ನ್ಯಾಯಾಲಯ ತಡೆ ನೀಡಿದೆ ಎಂದು ವಿವರ ನೀಡಿದರು.ಬ್ಯಾಂಕ್‌ಗಳಿಗೆ ಭಾರಿ ವಂಚನೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ವಂಚಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2011ರಲ್ಲಿ ಬ್ಯಾಂಕ್‌ಗಳಿಗೆ ಒಟ್ಟು ರೂ. 3850 ಕೋಟಿಯಷ್ಟು ವಂಚನೆ ಆಗಿದ್ದಿತು. 2012ರಲ್ಲಿ ಇದು ರೂ. 6457 ಕೋಟಿಗೆ ಹೆಚ್ಚಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ರಾಜ್ಯಸಭೆಗೆ ತಿಳಿಸಿದರು.ವಂಚನೆ ಪ್ರಕರಣಗಳಿಂದಾಗಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿದೆ. ಈ ಬ್ಯಾಂಕ್‌ನ 2012ರ ವಹಿವಾಟಿನಲ್ಲಿ ಒಟ್ಟು ರೂ. 758 ಕೋಟಿಯಷ್ಟು ವಂಚನೆಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ. 728 ಕೋಟಿ ಮೋಸಕ್ಕೊಳಗಾಗುವುದರೊಂದಿಗೆ 2ನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.ವಂಚನೆ ಪ್ರಕರಣಗಳು, ಅವುಗಳ ಮಾದರಿ ಬಗ್ಗೆ ಎಲ್ಲ ಬ್ಯಾಂಕ್‌ಗಳ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವ ಯತ್ನವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸುತ್ತಲೇ ಇದೆ. ಹಾಗಿದ್ದೂ ವಂಚನೆ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಸಚಿವ ಚಿದಂಬರಂ ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.