ಭಾನುವಾರ, ಮೇ 16, 2021
26 °C

ರೋಗ ಭೀತಿ: ಜಾಗೃತಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ಚಚ್ಛತೆಗೆ ಆದ್ಯತೆ ನೀಡಿ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ  ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ನಾಯಕ್ ಸೂಚಿಸಿದರು.ಮಂಗಳವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಸ್ವಚ್ಛತಾ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು. ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್, ರೋಗಾಣುಗಳು ಹರಡದಂತೆ ಬ್ಲೀಚಿಂಗ್ ಪುಡಿ ಸಿಂಪಡಿಕೆ ಸೇರಿದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.ಕರ್ತವ್ಯ ನಿರತ ವೈದ್ಯರು ಸದಾ ತಮ್ಮ ಕೇಂದ್ರಸ್ಥಾನದಲ್ಲಿದ್ದು, ತಪಾಸಣೆ, ಚಿಕಿತ್ಸೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಯಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು. ಶಾಲಾ ಮಕ್ಕಳ ದಾಖಲಾತಿಯು ಪ್ರಾರಂಭಗೊಂಡಿದ್ದು, ಯಾವೊಬ್ಬ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತನಾಗಬಾರದು ಎಂದರು.ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನಡೆಸಲು ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕಡ್ಡಾಯವಾಗಿ ತರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು.  ಕೂಡಲೇ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಶಾಲಾ ಕಟ್ಟಡಗಳ ಕಾಂಪೌಂಡ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಗತ್ಯವಿರುವ ಕಡೆ ಶಾಲಾ ಕೊಠಡಿಗಳನ್ನು ತುರ್ತಾಗಿ ನಿರ್ಮಿಸಬೇಕು. ಅಂಗನವಾಡಿ ಕೇಂದ್ರಗಳನ್ನು ಗ್ರಾಮಗಳ ಮಧ್ಯ ಭಾಗದಲ್ಲಿ ಪ್ರಾರಂಭಿಸಬೇಕು ಎಂದು ಅವರು ಸೂಚಿಸಿದರು.

 

ಜಿಲ್ಲೆಯ ವಿವಿಧೆಡೆ ಪ್ರಗತಿ ಹಂತದಲ್ಲಿರುವ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗಳನ್ನು ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ವಸತಿ ಯೋಜನೆಗಳ ಅಡಿ ಪೂರ್ಣಗೊಳಿಸಿದ ಮನೆಗಳನ್ನು ಫಲಾನುಭವಿಗಳಿಗೆ ಆದಷ್ಟು ಬೇಗ ಹಸ್ತಾಂತರಿಸಬೇಕು. ಮನೆಗಳನ್ನು ನಿರ್ಮಾಣ ಮಾಡುವ ಇಲಾಖೆಗಳು  ಪೂರ್ಣಗೊಳಿಸಿದ ಕಾಮಗಾರಿಗಳನ್ನು  ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರಿಸಬೇಕು.  ಉದ್ಯೋಗ ಖಾತ್ರಿ ಯೋಜನೆಯಡಿ ಸೆಪ್ಟೆಂಬರ್ ಅಂತ್ಯದೊಳಗೆ ಶೇ 80ರಷ್ಟು ಪ್ರಮಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಆನ್‌ಲೈನ್‌ನಲ್ಲಿ ಪ್ರಗತಿ ವಿವರಗಳನ್ನು ಅಪ್‌ಲೋಡ್ ಮಾಡಬೇಕು ಎಂದು ಅವರು ಸೂಚಿಸಿದರು. ವಿವಿಧೆಡೆ ಅಂಗವಿಕಲರ ಅಭಿವೃದ್ಧಿಗೆ ಒದಗಿಸಲಾಗಿರುವ ಶೇ 3 ರಷ್ಟು ಮೀಸಲಾತಿ ನೀಡುವಿಕೆಯನ್ನು ಎಲ್ಲ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು. ಯೋಜನೆ, ಫಲಾನುಭವಿಗಳ ಆಯ್ಕೆ ಕುರಿತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಈ ಕುರಿತು ಸಂಬಂಧಿಸಿದ ಸರ್ಕಾರೇತರ ಸಂಸ್ಥೆಗಳೊಂದಿಗೆ ಚರ್ಚಿಸಬೇಕು. ಆಯಾ ತಿಂಗಳೇ ಯೋಜನೆಗಳನ್ನು ಶೇ 100 ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಇಲಾಖೆಗಳಿಂದ ಯೋಜನಾ ಕಾಮಗಾರಿಗಳ ಗುರಿ ಬಂದ ಕೂಡಲೇ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದರು.ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಕೂಡಲೇ ಪೂರೈಕೆ ಮಾಡಬೇಕು.  ಹಿಂದಿನ ವರ್ಷಗಳ ಅವಧಿಯಲ್ಲಿ  ವಸತಿ ಯೋಜನೆಗಳಡಿ ಆಯ್ಕೆಯಾಗಿದ್ದು, ತಾಂತ್ರಿಕ ದೋಷಗಳಿಂದ ರದ್ದಾದ ಫಲಾನುಭವಿಗಳನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆಯ್ಕೆಮಾಡಿಕೊಳ್ಳಬೇಕು. ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ ಸೂಚಿಸಿದರು. ಉಪಾಧ್ಯಕ್ಷೆ  ಮಮತಾ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುನಂದಬಾಯಿ,  ಸಾವಿತ್ರಮ್ಮ, ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಉಪಕಾರ್ಯದರ್ಶಿ ಮಹೇಶ್ವರಯ್ಯ, ನಂದೀಶ್, ಮುಖ್ಯಲೆಕ್ಕಾಧಿಕಾರಿ ಚೆನ್ನಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.