ಮಂಗಳವಾರ, ಮೇ 17, 2022
27 °C

ರೋಚಕ ಹೋರಾಟದ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಪುರ: ‘ಕಾಗದದ ಮೇಲಿನ (ಪತ್ರಿಕೆಗಳು) ಲೆಕ್ಕಾಚಾರಕ್ಕೂ ಮೈದಾನದಲ್ಲಿ ಆಡುವುದಕ್ಕೂ ಬಹಳ ವ್ಯತ್ಯಾಸವಿದೆ. ಪರಿಸ್ಥಿತಿಗೆ ತಕ್ಕಂತೆ ಬೌಲರುಗಳನ್ನು ಆರಿಸಬೇಕಾಗುತ್ತದೆ’ ಎಂಬುದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಸ್ಪಷ್ಟ ಅಭಿಪ್ರಾಯ. ದಕ್ಷಿಣ ಆಫ್ರಿಕ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಲೆಗ್‌ಸ್ಪಿನ್ನರ್ ಪಿಯೂಶ್ ಚಾವ್ಲಾ ಅವರ ಬದಲು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಆಡಿಸಲಾಗುವುದೇ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಇದು.ಶುಕ್ರವಾರ ಭಾರತ ತಂಡ ಅಭ್ಯಾಸ ನಡೆಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರನ್ನು ಆಡಿಸಲಾಗುವುದು ಎಂಬ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಲಿಲ್ಲ. ಈ ವಿವಾದ ಅವರಿಗೆ ಇಷ್ಟವಿಲ್ಲ ಎಂಬುದು ಮಾತ್ರ ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು. “ಹಾಲೆಂಡ್ ವಿರುದ್ಧ ಪಿಯೂಶ್ ಆಡುವುದು ಮುಖ್ಯವಾಗಿತ್ತು. ಅವರೊಬ್ಬ ಯುವ ಬೌಲರ್. ಅಶ್ವಿನ್ ಕೂಡ ಆತ್ಮವಿಶ್ವಾಸದ ಬೌಲರ್. ಆದರೆ ಯಾರು ಹೆಚ್ಚು ಉಪಯುಕ್ತ ಎಂಬ ಬಗ್ಗೆ ಯೋಚನೆ ಮಾಡಿಯೇ ಆಡಿಸಲಾಗುತ್ತದೆ” ಎಂದು ಅವರು ಹೇಳಿದರು.“ಹರಭಜನ್ ಸಿಂಗ್ ಹೆಚ್ಚು ವಿಕೆಟ್ ಪಡೆದಿರಲಿಕ್ಕಿಲ್ಲ. ಆದರೆ ಅವರು ರನ್ನುಗಳನ್ನು ನಿಯಂತ್ರಿಸಿದ್ದಾರೆ. ಅವರಿಗೆ ಏನು ಮಾಡಬೇಕು ಎಂದು ಹೇಳುವ ಅಗತ್ಯ ಇಲ್ಲ. ಪತ್ರಿಕೆಗಳಲ್ಲಿ ಬರುವ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಫೀಲ್ಡಿಂಗ್‌ನಲ್ಲಿ ಸುಧಾರಣೆಯಾಗಿದೆ. ಸೆಹ್ವಾಗ್ ಮತ್ತು ಸಚಿನ್ ಅವರಿಂದ ದೊಡ್ಡ ಜೊತೆಯಾಟ ಬರದಿದ್ದರೂ ನಮಗೇನೂ ತೊಂದರೆಯಾಗಿಲ್ಲ. ತಂಡ ಈಗಾಗಲೇ ಕ್ವಾರ್ಟರ್‌ಫೈನಲ್ ತಲುಪಿದ್ದರೂ ಉಳಿದ ಎರಡು ಲೀಗ್ ಪಂದ್ಯಗಳನ್ನು ನಾವು ಗಂಭೀರವಾಗಿಯೇ ಪರಿಗಣಿಸಿದ್ದೇವೆ. ದಕ್ಷಿಣ ಆಫ್ರಿಕ ಬಲಿಷ್ಠ ತಂಡ. ಶನಿವಾರ ರೋಚಕ ಹೋರಾಟವಂತೂ ಕಂಡುಬರಲಿದೆ” ಎಂದೂ ಅವರು ಹೇಳಿದರು.ಸ್ಮಿತ್ ವಿಶ್ವಾಸ: ದೋನಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕ ತಂಡದ ನಾಯಕ ಗ್ರೇಮ್ ಸ್ಮಿತ್, ಗಾಯಗೊಂಡಿರುವ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಆಡುವ ಬಗ್ಗೆ ಶನಿವಾರ ಬೆಳಿಗ್ಗೆ ತಂಡದ ಮೀಟಿಂಗ್‌ನಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು. ಇಮ್ರಾನ್ ಅವರನ್ನು ಆಡಿಸುವುದು ಖಚಿತ ಎಂಬ ಧಾಟಿಯಲ್ಲೇ ಅವರು ಮಾತನಾಡಿದರು.“ಈ ವಿಶ್ವ ಕಪ್‌ನಲ್ಲಿ ನಮಗಿಂತ ಹೆಚ್ಚಾಗಿ ಭಾರತವೇ ಫೇವರಿಟ್ ತಂಡ. ನಾವು ಎರಡು ಪಂದ್ಯ ಗೆದ್ದಾಗ ಎಲ್ಲರೂ ನಮ್ಮನ್ನೂ ಫೇವರಿಟ್ ಎಂದರು. ಒಂದು ಪಂದ್ಯ ಸೋತಾಗ, ನಮ್ಮನ್ನು ಮುಗ್ಗರಿುವ ತಂಡ ಎಂದರು. ವಿಶ್ವ ಕಪ್‌ನಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ” ಎಂದು ಅವರು ನುಡಿದರು.“ನಾಗಪುರದ ಪಿಚ್ ಉತ್ತಮವಾಗಿದೆ. ಹೆಚ್ಚು ರನ್ನುಗಳು ಬರಲಿವೆ. ನಮ್ಮ ಮಧ್ಯಮ ಕ್ರಮಾಂಕ ಇನ್ನಷ್ಟು ಉತ್ತಮವಾಗಿ ಆಡಬೇಕಿದೆ. ಭಾರತ ಮತ್ತು ದಕ್ಷಿಣ ಆಫ್ರಿಕ ಇತ್ತೀಚೆಗೆ ಬಹಳಷ್ಟು ಪಂದ್ಯಗಳನ್ನು ಆಡಿರುವುದರಿಂದ, ಇಬ್ಬರಿಗೂ ಅವರವರ ಶಕ್ತಿಯ ಅರಿವಿದೆ ಎಂದು ಅವರು ಅಭಿಪ್ರಾಯಪಟ್ಟರು.ಭಾರತ

ಮಹೇಂದ್ರಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಹರಭಜನ್ ಸಿಂಗ್, ಜಹೀರ್ ಖಾನ್, ಪಿಯೂಶ್ ಚಾವ್ಲಾ, ಮುನಾಫ್ ಪಟೇಲ್, ಆರ್. ಅಶ್ವಿನ್, ಆಶಿಶ್ ನೆಹ್ರಾ, ಸುರೇಶ್ ರೈನಾ, ಎಸ್. ಶ್ರೀಶಾಂತ್.ದಕ್ಷಿಣ ಆಫ್ರಿಕ

ಗ್ರೇಮ್ ಸ್ಮಿತ್ (ನಾಯಕ), ಹಾಶಿಮ್ ಆಮ್ಲಾ, ಜ್ಯಾಕ್ ಕಾಲಿಸ್, ಎ.ಬಿ. ಡಿವಿಲಿಯರ್ಸ್, ಜೆ.ಪಿ. ಡುಮಿನಿ, ಜೊಹಾನ್ ಬೋಥಾ, ವಾಫ್ ಡು ಪ್ಲೆಸಿಸ್, ರಾಬಿನ್ ಪೀಟರ್ಸನ್, ಮಾರ್ನ್ ವಾನ್ ವೈಕ್, ಡೇಲ್ ಸ್ಟೇಯ್ನೆ, ಮೊರ್ನ್ ಮಾರ್ಕೆಲ್, ಇಮ್ರಾನ್ ತಾಹಿರ್, ವೇಯ್ನೆ ಪಾರ್ನೆಲ್, ಲಾನ್‌ವಾಬೊ ಟೊಟ್ಸೊಬೆ, ಕಾಲಿನ್ ಇನ್‌ಗ್ರಾಮ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.