ಸೋಮವಾರ, ಮಾರ್ಚ್ 8, 2021
19 °C

ರೋಬೊ ಸರ್ಜರಿ

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ರೋಬೊ ಸರ್ಜರಿ

ದೇಶದಲ್ಲಿ ಇದೇ ಮೊದಲ ಬಾರಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆ ಶುರುವಾಗಿದ್ದು, ನಗರದ ಆಸ್ಪತ್ರೆ ಅದಕ್ಕೆ ಸಾಕ್ಷಿಯಾಗಿರುವುದು ವಿಶೇಷ.ಇತ್ತೀಚೆಗೆ ಥೈರಾಯ್ಡ ಮತ್ತು ಗಂಟಲಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಮಣಿಪಾಲ್ ಆಸ್ಪತ್ರೆ ಇದಕ್ಕೆ ರೋಬೋಟಿಕ್ ಸರ್ಜರಿ ಪರಿಚಯಿಸಿದೆ.ಕ್ಯಾನ್ಸರ್ ಮತ್ತು ಥೈರಾಯ್ಡ ಗಡ್ಡೆಗಳನ್ನು ಅತಿ ಸುಲಭವಾಗಿ ತೆಗೆದುಹಾಕಬಹುದಾದ ಈ ರೋಬೋಟಿಕ್ ಶಸ್ತ್ರಚಿಕಿತ್ಸೆ ದೇಶದಲ್ಲಿ ಇದೇ ಮೊದಲು ನಡೆಯುತ್ತಿದೆ ಎಂಬುದನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಚ್. ಸುದರ್ಶನ ಬಲ್ಲಾಳ್ ಖಾತರಿ ಪಡಿಸುತ್ತಾರೆ.ಈ ಸರ್ಜರಿ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ಅತ್ಯಂತ ವಿಭಿನ್ನ. ಇದರ ವಿಶೇಷತೆಗಳು ಹಲವು. ಹಿಂದೆಲ್ಲಾ ಥೈರಾಯ್ಡ ಮತ್ತು ಗಂಟಲಿನ ಕ್ಯಾನ್ಸರ್ ಗಡ್ಡೆಗಳನ್ನು ತೆಗೆಯಲು ಗಂಟಲಿನ ಭಾಗವನ್ನು ಸೀಳಿ, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು.ಗಂಟಲು ಅಥವಾ ಬಾಯಿಯ ಕ್ಯಾನ್ಸರ್ ಆದರೆ ದವಡೆಯ ಮೂಳೆಗಳನ್ನು ಸಡಿಲಪಡಿಸಿ ನಂತರ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಈ ಅವಧಿಯಲ್ಲಿ ಹೆಚ್ಚು ರಕ್ತಸ್ರಾವ, ನೋವು ಸಹಜ. ಶಸ್ತ್ರಚಿಕಿತ್ಸೆ ನಂತರವೂ ರೋಗಿ ನೋವಿನಿಂದ ಚೇತರಿಸಿಕೊಳ್ಳಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು.ಆಸ್ಪತ್ರೆಯಲ್ಲೇ ಹಲವು ಕಾಲ ಇರಬೇಕಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಶಸ್ತ್ರಚಿಕಿತ್ಸೆಯ ಕಲೆಗಳು ಚರ್ಮದ ಮೇಲೆ ಹಾಗೆಯೇ ಉಳಿದುಕೊಂಡುಬಿಡುತ್ತಿದ್ದವು. ಈ ಎಲ್ಲಾ ನ್ಯೂನತೆಗಳನ್ನು ಹಿಂದಿಕ್ಕಲು ಈ ರೋಬೋಟಿಕ್ ಸರ್ಜರಿ ಅತ್ಯುನ್ನತ ಪರಿಹಾರ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆಯಲ್ಲಿ ರೋಬೋಟಿಕ್ ಸರ್ಜರಿ ಮಾಡುವ ವೈದ್ಯ ಡಾ. ಎಸ್. ಪಿ. ಸೋಮಶೇಖರ್.

ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಕೇವಲ ಒಂದೂವರೆ ಗಂಟೆ ಅವಧಿಯಲ್ಲಿ ಥೈರಾಯ್ಡ ಅಥವಾ ಕ್ಯಾನ್ಸರ್ ಗಡ್ಡೆ ತೆಗೆದುಹಾಕುವ ಅತಿ ಸೂಕ್ಷ್ಮ ಮತ್ತು ಅತ್ಯಂತ ವೇಗದ ಯಂತ್ರ ಈ ರೋಬೋ. ಅಮೆರಿಕಾದಿಂದ ತರಿಸಲಾಗಿರುವ ಈ ಯಂತ್ರವನ್ನು ನಿರ್ವಹಿಸಲು ತರಬೇತಿ ಪಡೆದಿರುವ ಒಂದು ತಂಡವೇ ಇಲ್ಲಿದೆ.ರೋಬೋ ಕೆಲಸ ನಿರ್ವಹಿಸುವುದು ಹೀಗೆ...ರೋಬೋಗೆ ನಾಲ್ಕು ಕೈಗಳಿರುತ್ತವೆ. ಅತಿ ಸೂಕ್ಷ್ಮಾತಿಸೂಕ್ಷ್ಮವಾಗಿರುವ ಈ ಕೈಗಳು ಅತ್ಯಂತ ನಿಖರವಾಗಿ ಕೆಲಸ ನಿರ್ವಹಿಸುತ್ತವೆ. ಅವು ಚಿಕ್ಕದಾದ್ದರಿಂದ ಬಾಯಿಯ ಮೂಲಕ ಗಂಟಲಿಗೆ ನೇರವಾಗಿ ಒಳಹೋಗುತ್ತದೆ. ಗಂಟಲಿನ ಅತಿ ಸೂಕ್ಷ್ಮ ನರಗಳನ್ನು ನೋಡಲು ಈ ರೋಬೋದಲ್ಲಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

 

ಇದರಲ್ಲಿ `ಎಂಡೋರಿಸ್ಟ್~ ತಂತ್ರಜ್ಞಾನದ ಅಳವಡಿಕೆ ಇರುವುದರಿಂದ ಸರ್ಜನ್‌ಗೆ ರೋಬೋದ ನಿಯಂತ್ರಣ ಸುಲಭವೆನಿಸುತ್ತದೆ. ವೈದ್ಯರಿಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿದ ಅನುಭವವಾಗುತ್ತದೆ. ಈ ರೋಬೋ ಸ್ವಯಂಚಾಲಿತವಲ್ಲ. ವೈದ್ಯರ ನಿಯಂತ್ರಣದಿಂದ ಇದು ಕಾರ್ಯ ನಿರ್ವಹಿಸುತ್ತದೆ.ಚಿತ್ರಣಗಳನ್ನು ವೀಕ್ಷಿಸುತ್ತಾ ರೋಬೋವನ್ನು ವೈದ್ಯರು ನಿಯಂತ್ರಿಸುತ್ತಾರೆ. ರೋಬೊದ ಕೈಗಳಲ್ಲಿರುವ ಸ್ವಯಂಚಾಲಿತ (ಆಟೊಮೆಟೆಡ್) ಅಪ್ಲಿಕೇಷನ್ ಚಲನವಲನಕ್ಕೆ ಇನ್ನಷ್ಟು ಅನುಕೂಲ ಮಾಡಿಕೊಡುತ್ತದೆ.ರೋಬೋಟಿಕ್ ಸರ್ಜರಿಯಿಂದ ಯಾವುದೇ ನೋವಿಲ್ಲದೆ, ಕೇವಲ ಒಂದೂವರೆ ಅವಧಿಯಲ್ಲಿ ಗಡ್ಡೆಯನ್ನು ತೆಗೆದುಹಾಕಬಹುದು. ಈ ಪ್ರಕ್ರಿಯೆಯಲ್ಲಿ ರಕ್ತಸ್ರಾವವೂ ಇರುವುದಿಲ್ಲ. ಯಾವುದೇ ಕಲೆಗಳು ಉಳಿಯದಂತೆ ರೋಗಿ ಒಂದೇ ದಿನದಲ್ಲಿ ಸಂಪೂರ್ಣ ಗುಣಮುಖವಾಗಬಹುದು. ಆಸ್ಪತ್ರೆಯಲ್ಲಿ ಉಳಿಯುವ ಅವಶ್ಯಕತೆಯೂ ಇರುವುದಿಲ್ಲ. ಹೆಚ್ಚು ಗುಳಿಗೆ ನುಂಗುವ ಉಸಾಬರಿಯೂ ಇರುವುದಿಲ್ಲ.ಥೈರಾಯ್ಡ ಸಮಸ್ಯೆಯಿಂದ ಬಳಲುತ್ತಿದ್ದ 20 ವರ್ಷದ ಕಾವ್ಯಾ ಎಂಬುವರಿಗೆ ಕಳೆದ ವಾರವಷ್ಟೆ ಈ ರೋಬೋಟಿಕ್ ಸರ್ಜರಿ ಮಾಡಲಾಗಿತ್ತು. ಯಾವುದೇ ಕಲೆಯಿಲ್ಲದೆ ಅತಿ ಸುಲಭವಾಗಿ ಕೇವಲ 55 ನಿಮಿಷದಲ್ಲಿ ಈ ಚಿಕಿತ್ಸೆ ಯಶಸ್ವಿಯಾಯಿತು.ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ವೈದ್ಯರಾದ ಡಾ. ಸೋಮಶೇಖರ್, ಶಬ್ಬೀರ್ ಎಸ್. ಜವೇರಿ, ಮತ್ತು ಇ. ವಿ ರಾಮನ್ ಅವರ ತಂಡ ಕಾವ್ಯಾಗೆ ಈ ಚಿಕಿತ್ಸೆ ಕೈಗೊಂಡಿದ್ದರು.ಥೈರಾಯ್ಡ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚಾಗಿ ಮಹಿಳೆಯರಲ್ಲಿ. ಥೈರಾಯ್ಡಗೆಂದು ತೆರೆದ ಸರ್ಜರಿ ಮಾಡಿದಾಗ ಅದರ ಕಲೆ ಹಾಗೆಯೇ ಉಳಿದುಬಿಡುತ್ತದೆ. ಇದರಿಂದ ಮಾತನಾಡಲೂ ತೊಡಕಾಗುತ್ತದೆ, ಅದರಿಂದ ಹೊರಬರಲು ಈ ರೋಬೋಟಿಕ್ ಚಿಕಿತ್ಸೆಗಿಂತ ಉತ್ತಮ ಇನ್ನಾವುದೂ ಇಲ್ಲ ಎನ್ನುತ್ತಾರೆ ಡಾ. ಸೋಮಶೇಖರ್.ಅದೇ ರೀತಿ ಗಂಟಲಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 66 ವರ್ಷದ ವ್ಯಕ್ತಿಗೂ `ಟ್ರಾನ್ಸರಲ್ ರೋಬೋಟಿಕ್ ಸರ್ಜರಿ~ ನಡೆಸಲಾಯಿತು. ಅದು ಕೂಡ ಯಶಸ್ವಿಯಾಗಿದೆ ಎನ್ನುತ್ತಾರೆ ವೈದ್ಯರು. ಈ ಚಿಕಿತ್ಸೆಗೆ ತಗುಲುವ ವೆಚ್ಚ ಸಾಮಾನ್ಯ ಚಿಕಿತ್ಸೆಗಿಂತ 1.5 ಪಟ್ಟು ಹೆಚ್ಚು. ಅಂದರೆ ರೋಬೋಟಿಕ್ ಸರ್ಜರಿಗೆ ಸುಮಾರು 2ರಿಂದ 4 ಲಕ್ಷ ರೂ. ಆಗುತ್ತದೆ ಎನ್ನುತ್ತಾರೆ ಡಾ. ಎಚ್. ಸುದರ್ಶನ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.