ಗುರುವಾರ , ಏಪ್ರಿಲ್ 22, 2021
22 °C

ಲಂಡನ್ ಒಲಿಂಪಿಕ್ -2012 ಇನ್ನು 21 ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾರ್ಡ್ಸ್‌ನಲ್ಲಿ ಆರ್ಚರಿ ಚಿನ್ನ: ದೀಪಿಕಾ ಆಶಯ

ಕೋಲ್ಕತ್ತ (ಪಿಟಿಐ):
ಕ್ರಿಕೆಟ್ ಕಾಶಿ ಎನಿಸಿರುವ ಲಾರ್ಡ್ಸ್‌ನಲ್ಲಿ ನಡೆಯುವ ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯಲ್ಲಿ `ಪರ್ಫೆಕ್ಟ್ 10~ ಗುರಿ ಸಾಧಿಸುವ ಮೂಲಕ ಚಿನ್ನದ ಪದಕ ಗೆಲ್ಲುವುದು ಭಾರತದ ದೀಪಿಕಾ ಕುಮಾರಿ ಆಶಯ.ಡೋಲಾ ಬ್ಯಾನರ್ಜಿ ನಂತರ ವಿಶ್ವದ ಮೊದಲ ಕ್ರಮಾಂಕ ಪಡೆದ ಭಾರತದ ಆರ್ಚರಿ ಸ್ಪರ್ಧಿ ಎನಿಸಿರುವ ದೀಪಿಕಾ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಸ್ವರ್ಣ ಗೆಲ್ಲುವಷ್ಟು ನಿಖರ ಗುರಿ ಇಡುವ ಸಾಮರ್ಥ್ಯ ಹೊಂದಿರುವ ರಾಂಚಿಯ 18 ವರ್ಷ ವಯಸ್ಸಿನ ಯುವತಿ ಈಗಾಗಲೇ ಒತ್ತಡದಿಂದ ಮುಕ್ತವಾಗಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.ಭಾರತಕ್ಕೆ ಪದಕದ ನಿರೀಕ್ಷೆ ಅತಿಯಾಗಿ ಇರುವುದು ದೀಪಿಕಾ ಮೇಲೆ. ಇನ್ನೊಂದು ಪದಕ ಬೇರೆಯವರಿಂದ ಬಂದರೂ ಬರಬಹುದು ಎನ್ನುವುದು ಸದ್ಯದ ಲೆಕ್ಕಾಚಾರ. 2004ರ ಅಥೆನ್ಸ್ ಒಲಿಂಪಿಕ್ಸ್ ನಂತರ ಭಾರತ ಮತ್ತೊಮ್ಮೆ ಗರಿಷ್ಠ ಆರು ಕೋಟಾ ಸ್ಥಾನಗಳನ್ನು ಲಂಡನ್ ಒಲಿಂಪಿಕ್ಸ್‌ನಲ್ಲಿ ಪಡೆದುಕೊಂಡಿದೆ. ಆದರೆ ಈ ಆರು ಬಿಲ್ಲುಗಾರರಿಂದ ನಾಲ್ಕು ಸ್ಪರ್ಧೆಗಳಲ್ಲಿ ಎರಡು ಪದಕ ಬಂದರೆ ಅದೊಂದು ದೊಡ್ಡ ಸಾಧನೆಯೇ ಆಗಲಿದೆ.2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ನಂತರ ಪ್ರಕಾಶಮಾನವಾಗಿ ಹೊಳೆದ ದೀಪಿಕಾ ಆನಂತರ ಅಂಟಾಲಿಯಾದಲ್ಲಿ ನಡೆದಿದ್ದ ವಿಶ್ವಕಪ್ ಎರಡನೇ ಹಂತದ ಚಾಂಪಿಯನ್‌ಷಿಪ್‌ನಲ್ಲಿ ಕೂಡ ಅಗ್ರಸ್ಥಾನದ ಗೌರವ ಪಡೆದಿದ್ದಾರೆ. ಆದ್ದರಿಂದಲೇ ನಿರೀಕ್ಷೆಯ ಭಾರ ಹೆಚ್ಚಾಗಿದೆ.`ಒತ್ತಡದ ನಡುವೆಯೂ ಸ್ಪರ್ಧಿಸುವಂಥ ಗುಣ ಹೊಂದಿದ್ದಾಳೆ. ಆದ್ದರಿಂದ ಅವಳ ಮೇಲೆ ಹೆಚ್ಚಿನ ಭರವಸೆ~ ಎಂದು ಮಹಿಳಾ ಆರ್ಚರಿ ತಂಡದ ಕೋಚ್ ಪೂರ್ಣಿಮಾ ಮಹತೊ ತಿಳಿಸಿದ್ದಾರೆ.ರಾಷ್ಟ್ರೀಯ ಕೋಚ್ ಲಿಂಬಾರಾಮ್ ಅವರಿಗಂತೂ ಈ ಸ್ಪರ್ಧಿಯ ಮೇಲೆ ಅಪಾರ ವಿಶ್ವಾಸ. `ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ಮಟ್ಟ ಮುಟ್ಟಬಲ್ಲಳು~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.ಲಂಡನ್‌ಗೆ ಬಂದಿಳಿದ ಪೂನಿಯಾ
ನವದೆಹಲಿ (ಪಿಟಿಐ): ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಭಾರತದ ಅಗ್ರ ಕ್ರಮಾಂಕದ ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣಾ ಪೂನಿಯಾ ನಿಗದಿತ ಅವಧಿಗಿಂತ ಮುನ್ನವೇ ಲಂಡನ್‌ಗೆ ಆಗಮಿಸಿದ್ದು, ಅಭ್ಯಾಸ ಶುರು ಮಾಡಿದ್ದಾರೆ.ಪೂನಿಯಾ ಜುಲೈ ಮೂರರಂದು ಪತಿ ಹಾಗೂ ಕೋಚ್ ವಿಜೇಂದರ್ ಜೊತೆ ಲಂಡನ್‌ಗೆ ಬಂದಿಳಿದಿದ್ದಾರೆ. ಅವರು ಉನ್ನತ ದರ್ಜೆಯ ಸೌಲಭ್ಯ ಹೊಂದಿರುವ ಬೆಸಿಲ್ಡಾನ್ ಕ್ರೀಡಾ ಗ್ರಾಮದಲ್ಲಿ ತರಬೇತಿ ನಡೆಸುತ್ತಿದ್ದಾರೆ.

`ನಿಗದಿತ ಸಮಯಕ್ಕಿಂತ ಮುನ್ನವೇ ಲಂಡನ್ ತಲುಪಬೇಕು ಎಂಬ ನಿರ್ಧಾರವನ್ನು ಈ ಹಿಂದೆಯೇ ತೆಗೆದುಕೊಂಡಿದ್ದೆ. ಕಾರ್ಯಕ್ರಮ ಪಟ್ಟಿಯನ್ನು ಕ್ರೀಡಾ ಸಚಿವಾಲಯಕ್ಕೆ ನೀಡಿದ್ದೆವು. ಸ್ಪರ್ಧೆಯ ನಿಗದಿತ ದಿನಕ್ಕಿಂತ ಒಂದು ತಿಂಗಳ ಮೊದಲು ಲಂಡನ್ ತಲುಪಬೇಕು ಎಂದು ಅದರಲ್ಲಿ ನಾವು ವಿವರಿಸಿದ್ದೆವು~ ಎಂದು ಪೂನಿಯಾ ತಿಳಿಸಿದ್ದಾರೆ.`ಅಮೆರಿಕ ಹಾಗೂ ಇಂಗ್ಲೆಂಡ್ ನಡುವೆ ಹಗಲು-ರಾತ್ರಿ ವ್ಯತ್ಯಾಸವಿದೆ. ಹಾಗಾಗಿ ಆ ವಾತಾವರಣಕ್ಕೆ ಹೊಂದಿಕೊಳ್ಳುವುದು ಸವಾಲಿನ ವಿಷಯ. ಆ ಉದ್ದೇಶದಿಂದಲೇ ನಾವು ಬಹು ಬೇಗನೇ ಲಂಡನ್‌ಗೆ ಬಂದಿದ್ದೇವೆ~ ಎಂದರು.ಪೂನಿಯಾ ಮೂರು ತಿಂಗಳು ಅಮೆರಿಕದ ಪೋರ್ಟ್‌ಲ್ಯಾಂಡ್‌ನಲ್ಲಿ ತರಬೇತಿ ನಡೆಸಿದ್ದರು. `ನಾನು ಮಾತ್ರವಲ್ಲ, ಹೆಚ್ಚಿನ ದೇಶಗಳ ಅಥ್ಲೀಟ್‌ಗಳು ಇಲ್ಲಿಗೆ ಬಂದು ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಭಾರತದಿಂದ ಮಾತ್ರ ನಾನೊಬ್ಬಳೆ~ ಎಂದು ಅವರು ನುಡಿದಿದ್ದಾರೆ.30 ವರ್ಷ ವಯಸ್ಸಿನ ಪೂನಿಯಾ 2010ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರೀಗ ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಐಎಎಎಫ್ ರ‌್ಯಾಂಕಿಂಗ್‌ನಲ್ಲಿ ಅವರು ಒಂಬತ್ತನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ಡಿಸ್ಕಸ್ ಸ್ಪರ್ಧೆ ಆಗಸ್ಟ್ 3 ಹಾಗೂ 4ರಂದು ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.