ಬುಧವಾರ, ಮೇ 18, 2022
23 °C

ಲಕ್ಷ್ಮೇಶ್ವರ: ತಾಲ್ಲೂಕು ಹಣೆಪಟ್ಟಿ ಸಿಕ್ಕೇತೆ?

ಪ್ರಜಾವಾಣಿ ವಾರ್ತೆ/ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಹಿಂದಿನ ಬಿಜೆಪಿ ಸರ್ಕಾರ ಬಜೆಟ್ ಮಂಡಿಸುವ ವೇಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ಪಟ್ಟಣಗಳನ್ನು ನೂತನ ತಾಲ್ಲೂಕುಗಳನ್ನಾಗಿ ಘೋಷಣೆ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡೂ ಪಟ್ಟಣಗಳನ್ನು ಹೊಸ ತಾಲ್ಲೂಕು ಎಂದು ನಮೂದಿಸಿ ಬಜೆಟ್ ಪುಸ್ತಕ ಪ್ರಕಟಿಸಿತ್ತಲ್ಲದೆ ಹೊಸ ತಾಲ್ಲೂಕುಗಳ ಅನುಷ್ಠಾನಕ್ಕಾಗಿ ತಲಾ ಎರಡು ಕೋಟಿ ರೂಪಾಯಿ ಅನುದಾನವನ್ನೂ ಬಿಜೆಪಿ ಸರ್ಕಾರ ಮೀಸಲಿಟ್ಟಿತ್ತು. ಆದರೆ ಕಾಂಗ್ರೆಸ್ ಪಕ್ಷ ಆಡಳಿತದ ಗದ್ದುಗೆ ಏರುತ್ತಿದ್ದಂತೆಯೇ ಹೊಸ ತಾಲ್ಲೂಕುಗಳ ಬಗ್ಗೆ ಆರಂಭದಲ್ಲಿಯೇ ಅಪಸ್ವರ ಎತ್ತಿದೆ.ನೂತನ ಕಂದಾಯ ಸಚಿವರು ಹೊಸ ತಾಲ್ಲೂಕುಗಳ ಅನುಷ್ಠಾನ ಸದ್ಯಕ್ಕಿಲ್ಲ ಎಂದು ಅಧಿಕಾರ ವಹಿಸಿಕೊಂಡ ಕೂಡಲೇ ಹೇಳಿಕೆ ನೀಡುವುದರ ಮೂಲಕ ಹೊಸ ತಾಲ್ಲೂಕಿನ ಜನತೆಯಲ್ಲಿ ಅಚ್ಚರಿ ಮೂಡಿಸಿದ್ದರು. ಇದಕ್ಕೆ ಪೂರಕವಾಗಿ ಇದೀಗ ಕಾಂಗ್ರೆಸ್ ಸರ್ಕಾರ ತನ್ನ ನೂತನ ಬಜೆಟ್ ಮಂಡಿಸಲು ಸರ್ವ ಸಿದ್ಧತೆ ನಡೆಸಿದ್ದು ಇದರಲ್ಲಿ ಹೊಸ ತಾಲ್ಲೂಕುಗಳನ್ನು ಸೇರಿಸುತ್ತಾರೆಯೋ ಇಲ್ಲವೋ ಅ ಎಂಬ ಅನುಮಾನ ಜನತೆಯನ್ನು ಕಾಡುತ್ತಿದೆ. ಸದ್ಯ ಪಟ್ಟಣದಲ್ಲಿ ಇದರ ಬಗ್ಗೆಯೇ ಬಿಸಿ ಚರ್ಚೆ ನಡೆಯುತ್ತಿದೆ.ಲಕ್ಷ್ಮೇಶ್ವರ ಪಟ್ಟಣ ತಾಲ್ಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದೆ ಎಂದು ವಾಸುದೇವರಾವ್, ಪಿ.ಸಿ. ಗದ್ದಿಗೌಡರ, ಹುಂಡೇಕಾರ್ ಸಮಿತಿಗಳು ಸರ್ಕಾರಕ್ಕೆ ಸಲಹೆ ಮಾಡಿದ್ದವು. ಇದರ ಜೊತೆಗೆ ಎಂ.ಬಿ. ಪ್ರಕಾಶ ಸಮಿತಿ ಕೂಡ ಕೆಲವು ಮಾರ್ಪಾಡುಗಳನ್ನು ಮಾಡಿ ಪಟ್ಟಣವನ್ನು ತಾಲ್ಲೂಕ ಕೇಂದ್ರವನ್ನಾಗಿ ಮಾಡಲು ಅಡ್ಡಿ ಇಲ್ಲ ಎಂದು ವರದಿ ಸಲ್ಲಿಸಿತ್ತು. ಈ ನಾಲ್ಕೂ ವರದಿಗಳನ್ನು ಆಧರಿಸಿಯೇ ಬಿಜೆಪಿ ಸರ್ಕಾರ ಲಕ್ಷ್ಮೇಶ್ವರವನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡಿತ್ತು.ತಾಲ್ಲೂಕಿಗಾಗಿ ಮೂರ‌್ನಾಲ್ಕು ದಶಕಗಳಿಂದ ಹೋರಾಡುತ್ತ ಬಂದಿದ್ದ ತಾಲ್ಲೂಕಾ ಹೋರಾಟ ಸಮಿತಿಯವರಲ್ಲಿ ಹರ್ಷ ಮೂಡಿತ್ತು. ಆ ಸಂದರ್ಭದಲ್ಲಿ ಪಟ್ಟಣದ ಎಲ್ಲರೂ ಸಂತೋಷಪಟ್ಟಿದ್ದರು. ಆದರೆ ಇದೀಗ ಮತ್ತೆ ಹೊಸ ಬಜೆಟ್ ಮಂಡನೆಯಾಗುತ್ತಿದ್ದು ಇದರಲ್ಲಿ ಹೊಸ ತಾಲ್ಲೂಕುಗಳನ್ನು ಸೇರಿಸುತ್ತಾರೆಯೋ ಇಲ್ಲವೋ ಎಂಬ ಸಂಶಯ ಜನರ ತಲೆಯನ್ನು ಗುಂಗಿ ಹುಳವಿನಂತೆ ಕೊರೆಯುತ್ತಿದ್ದು ಅವರೂ ಸಹ ಬಜೆಟ್ ಮಂಡನೆಯನ್ನು ಕುತೂಹಲದಿಂದ ಕಾಯುತ್ತಿದ್ದಾರೆ.ಲಕ್ಷ್ಮೇಶ್ವರವನ್ನು ತಾಲ್ಲೂಕನ್ನಾಗಿ ಮಾಡಬೇಕು ಎಂದು ಈ ಹಿಂದೆ ಕಾಂಗ್ರೆಸ್‌ನ ಅನೇಕ ಮುಖಂಡರೇ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಆದರೆ ಬಜೆಟ್‌ನಲ್ಲಿ ಲಕ್ಷ್ಮೇಶ್ವರವನ್ನು ತಾಲ್ಲೂಕು ಎಂದು ಘೋಷಿಸದಿದ್ದರೆ ಅವರಿಗೆಲ್ಲ ತೀವ್ರ ಮುಜುಗುರ ಉಂಟಾಗಬಹುದು. ಬೇರೆ ಸರ್ಕಾರ ಪಟ್ಟಣವನ್ನು ತಾಲ್ಲೂಕು ಕೇಂದ್ರವೆಂದು ಘೋಷಣೆ ಮಾಡಿದಾಗ ಪಟಾಕಿ ಸಿಡಿಸಿ ಸಿಹಿ ಹಂಚಿ ಖುಷಿ ಪಟ್ಟಿರುವ ಅವರು ನಿರಾಸೆಯನ್ನೂ ಅನುಭವಿಸಬೇಕಾಗುತ್ತದೆ. ಕಾರಣ ಈಗ ಎಲ್ಲರದೂ ಒಂದೇ ಆಸೆ. ಲಕ್ಷ್ಮೇಶ್ವರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಅದರ ಅನುಷ್ಠಾನಕ್ಕೆ ಅಗತ್ಯ ನೆರವು ನೀಡಬೇಕು ಎಂಬುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.