ಭಾನುವಾರ, ಜೂನ್ 13, 2021
21 °C

ಲಲನಾವಾದವೆಂಬ ಪುರುಷವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ತ್ರೀವಾದಕ್ಕೆ ಬ್ರೇಕು ಲಲನಾವಾದ ಬೇಕು ಎಂಬ ಶೀರ್ಷಿಕೆಯಡಿಯಲ್ಲಿ (ಕಾಮನಬಿಲ್ಲು ಪುರವಣಿ ಮಾರ್ಚ್ 8, 2012) ಅಂತರರಾಷ್ಟ್ರೀಯ ಮಹಿಳಾ ದಿನದಂದೆ ವಿಜಯಲಕ್ಷ್ಮಿಯವರು ಆಘಾತಕಾರಿ ಒಣ ವಾದವೊಂದನ್ನು ನಮ್ಮ ಮುಂದೆ ಇಟ್ಟಿದ್ದಾರೆ.

 ದೊಡ್ಡ ನಗರಗಳಲ್ಲಿಯ ನಾಲ್ಕಾರು ಲಿಪ್‌ಸ್ಟಿಕ್ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ತ್ರೀವಾದವನ್ನು ಅರ್ಥೈಸಲು ಹೊರಟಿದ್ದಾರೆ.ಇವರ ಲೇಖನ ಸ್ತ್ರೀವಾದವನ್ನು ಕಟುವಾಗಿ ಟೀಕಿಸುತ್ತಲೇ ಸಾಗುತ್ತದೆ. ಸಾಮಾಜಿಕ ಅಸಮಾನತೆ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸ್ತ್ರೀವಾದ ಅಗತ್ಯವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಎನ್ನುವ ಮೂಲಕ ಸ್ತ್ರೀ ಅಸಮಾನತೆ ಯಾವುದೋ ಕಾಲದ ಇತಿಹಾಸ ಎನ್ನುವಂತೆ ನಿರೂಪಿಸುತ್ತಾರೆ. ಆದರೆ ಇಂದಿಗೂ ಮಹಿಳೆ ಅಸಮಾನತೆಯ ಕೂಪದಲ್ಲೇ ಬಳಲುತ್ತಿದ್ದಾಳೆ.

 

ಹೊಸ ತಲೆಮಾರಿನ ಜಾಣೆಯರನ್ನು ಸ್ತ್ರೀವಾದ ತೆಕ್ಕೆಗೆ ತೆಗೆದುಕೊಂಡಿಲ್ಲ ಎನ್ನುವ ಮೂಲಕ ಯುವ ಪಡೆಯನ್ನು ಮಹಿಳಾ ಹಕ್ಕುಗಳನ್ನು ಪಡೆಯುವಲ್ಲಿ ಹಿಂದಕ್ಕೆ ಸರಿಸುವುದು ಎಷ್ಟು ಸೂಕ್ತ? ಸ್ತ್ರೀವಾದವು ಕಾಲ ಕಾಲಕ್ಕೆ ಪರಿಷ್ಕರಣಗೊಳ್ಳದೇ ತುಕ್ಕು ಹಿಡಿಯುವುದು ಎಂದು ಅಪ್ಪಣೆ ಕೊಡಿಸಿದ್ದಾರೆ.ಆದರೆ 1909ರಲ್ಲಿ ಸಿದ್ಧ ಉಡುಪು ಕಾರ್ಖಾನೆಯ 30 ಸಾವಿರ ಮಹಿಳಾ ನೌಕರರು ತಮ್ಮ ಸೌಕರ್ಯಗಳಿಗಾಗಿ ಹೋರಾಟ ನಡೆಸಿದ ದ್ಯೋತಕವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರೂ, ಇಂದಿಗೂ ಸಿದ್ಧ ಉಡುಪು ತಯಾರಿಸುವ ಮಹಿಳಾ ನೌಕರರ ಪರಿಸ್ಥಿತಿ ಸಂಪೂರ್ಣ ಸುಧಾರಣೆಯಾಗಿಲ್ಲ.ಶತ ಶತಮಾನಗಳಿಂದಲೂ ದಬ್ಬಾಳಿಕೆಗೆ ಒಳಗಾದ ಮಹಿಳೆಗೆ ಸ್ತ್ರೀವಾದದಿಂದ ಕಿಂಚಿತ್ ನೆಮ್ಮದಿ ಸಿಕ್ಕಿರುವುದು ಸರ್ವ ವಿಧಿತ. ಇದು ಸ್ತ್ರೀವಾದದ ಪರಿಷ್ಕರಣೆಗೆ ಸಾಕ್ಷಿಯಲ್ಲವೇ? ಸ್ತ್ರೀವಾದ ಕುರಿತಂತೆ ಇರುವ ಟೀಕೆಗಳನ್ನು ಬಹಳಷ್ಟು ಮನಸ್ಸಿಗೆ ಹಚ್ಚಿಕೊಂಡ ಈ ಲೇಖಕಿ ಲಲನಾಮಣಿಗಳ ಬಗೆಗಿನ ಟೀಕೆಗಳನ್ನು ಗಮನಿಸುತ್ತಲೇ ಇಲ್ಲ. ಅನಾಕರ್ಷಕ ಮಹಿಳೆಯರನ್ನ ಮುಖ್ಯವಾಹಿನಿಗೆ ತರುತ್ತದೆ ಎನ್ನುವ ಮೂಲಕ ಲೇಖಕಿ ಮಹಿಳೆಯನ್ನು ಆಕರ್ಷಕ ಮತ್ತು ಅನಾಕರ್ಷಕ ಎಂಬ ಎರಡು ವಿಧದಲ್ಲಿ ನೋಡುವುದು ಜಾಹೀರಾತಿನ ಪ್ರಭಾವದಿಂದಲೋ ಏನೋ. ಸ್ತ್ರೀವಾದ ಎನ್ನುವುದು ಗಂಡಂದಿರನ್ನು ತೊರೆಯಲು ಮಕ್ಕಳನ್ನು ಕೊಲ್ಲಲು, ಮಾಟಗಾರಿಕೆಯನ್ನು ಕಲಿಯಲು ಹಾಗೂ ಸಲಿಂಗಿಗಳಾಗಲು ಉತ್ತೇಜಿಸುತ್ತದೆ ಎಂದು ಜನವಿರೋಧಿ ಟೀಕೆಯೊಂದನ್ನು ಮಾಡಿದ್ದಾರೆ.ಆದರೆ ಕುಡುಕ ಗಂಡಂದಿರಿಂದ ಮತ್ತು ಪುರುಷಾಧಿಕಾರದ ಮದದಿಂದ ಮಹಿಳೆಯರನ್ನು ಕೊಲ್ಲುತ್ತಿರುವವರ ಬಗೆಗೆ ಲೇಖಕಿಗೆ ಕರುಣೆ ಇಲ್ಲವೆ?  ಮಕ್ಕಳನ್ನು ಸಾಕಲು ಹರಸಾಹಸ ಪಡುವ ಸಹಸ್ರಾರು ತಾಯಂದಿರು ಇವರ ಕಣ್ಣಿಗೆ ಬೀಳುತ್ತಿಲ್ಲವೆ?  ಮಾಟಗಾರಿಕೆ ಮತ್ತು ಸಲಿಂಗಿ ಎಂಬ ಇವರ ಪದಪ್ರಯೋಗ ಪೂರ್ವಾಗ್ರಹ ಪೀಡಿತ, ಸ್ತ್ರೀಯನ್ನು ಮೊದಲಿನಿಂದಲೂ ಗುಮಾನಿಯಿಂದ ನೋಡುವ ಪುರುಷರಿಗಿಂತ ಸ್ತ್ರೀವಾದಿ ಹೋರಾಟಗಾರರನ್ನು ಗುಮಾನಿಯಿಂದ ನೋಡುವ ಲೇಖಕಿಗೆ ಪುರುಷರ ಅನುಕಂಪ ಬೇಕೆ ಬೇಕೆನಿಸುತ್ತಿದೆ.ಸಮಾನತೆಗಾಗಿ ಹೋರಾಡುವ ಸ್ತ್ರೀವಾದ ಎಂಬ ಶಬ್ದ ಇವರಿಗೆ ಎಲ್ಲಿಲ್ಲದ ಕಾಠಿಣ್ಯವನ್ನು ತಂದೊಡ್ಡಿದೆಯಂತೆ. ಮಹಿಳೆಯನ್ನು ಕೋಮಲೆ ಎಂದು ಪುನರ್‌ನಾಮಕರಣ ಮಾಡಿದ್ದಾರೆ.  ಮಹಿಳೆ ಜೀವಕಾರುಣ್ಯವನ್ನು ಗಮನಿಸಿದ ಮೃದು ಮನಸ್ಸಿನವಳು ಎಂದು ಹಣೆಪಟ್ಟಿ ಹಚ್ಚುತ್ತಾರೆ.ಕುಮಾರವ್ಯಾಸನ ಒಂದು ವಾಕ್ಯವನ್ನು ಸಪೋರ್ಟಿಗೆ ಪಡೆದುಕೊಂಡ ಇವರಿಗೆ ತಿರುಮಲಾಂಬ, ಆರ್.ಕಲ್ಯಾಣಮ್ಮನವರಿಂದ ಮೊದಲಗೊಂಡು ಇಂದಿನವರೆಗೂ ಸಹಸ್ರಾರು ಮಹಿಳೆಯರು ತೋಡಿಕೊಂಡ ನೋವಿನ ಬಗ್ಗೆ, ಪಡೆಯದ ಸಮಾನತೆಯ ಬಗ್ಗೆ, ಇರುವ ಸಂಕಟ ಅರಿವಾಗಬೇಕಷ್ಟೆ. ಗಂಡರೋ ನೀವ್ ಷಂಡರೋ ಹೇಳೆಂದಳಿಂದು ಮುಖಿ ಎಂಬ ಕುಮಾರವ್ಯಾಸನ ಮಾತುಗಳನ್ನು ಗಮನಿಸಬೇಕು.ಜೀನ್ಸ್ ತೊಟ್ಟು ನಾವು ಕೋಮಲೆಯರು ಎಂದು ಭಾವಿಸುವ ಫ್ಯಾಷನ್ ಶೋ ಲಲನೆಯರು ಲಲನಾವಾದಕ್ಕೆ ಹೊರಳಿದರೆ ತಪ್ಪೇನಿಲ್ಲ.  ಇದರಿಂದಾಗಿ ಸ್ತ್ರೀವಾದದ ಹೋರಟಕ್ಕೆ ಇರುವ ಒಂದು ಅಡಚಣೆ ಕಡಿಮೆಯಾಗುತ್ತದೆ. ಲಲನಾವಾದ, ಲಲಿತತ್ವ, ಲಲನಶೀಲತೆ ಈ ಮಂತ್ರಗಳಿಂದ ಮಹಿಳಾ ಸಮಾನತೆಯ ಮಾವಿನಕಾಯಿ ಉದುರುವುದಿಲ್ಲ. ಸ್ತ್ರೀ ಸಂಬಂಧಿತ ಪದ ಬಳಕೆಗಳನ್ನೆಲ್ಲ ವ್ಯಂಗ್ಯದಿಂದಲೇ ನೋಡುವ ಲೇಖಕಿಗೆ ಲಲನೆ ಎಂಬ ಪದ ಬಳಕೆಯ ಬಗ್ಗೆಯೇ ಅರಿವು ಇದ್ದಂತಿಲ್ಲ.  ಲಲನೆಯರು, ಲಲನಾಮಣಿಗಳು ಎಂಬ ಪದಪ್ರಯೋಗ ಸಮಾಜದಲ್ಲಿ ಮಹಿಳೆಯ ಒನಪು ಒಯ್ಯೊರವನ್ನಷ್ಟೇ ಅರ್ಥೈಸೀತು. ಸ್ತ್ರೀವಾದ ಎಂದೊಡನೆ ಪುರುಷವಾದದ ನೆನಪಾಗಿ ಪುರುಷ ವಿರೋಧಿ ಆಯಾಮ ಬಲಗೊಳ್ಳುತ್ತದೆ ಎಂದು ಆತಂಕ ಪಡುವ ಇವರಿಗೆ ಲಲನಾವಾದವನ್ನು ಪುರುಷರು ತಮ್ಮನ್ನು ಸೂತ್ರಧಾರರೆಂದು, ಮಹಿಳೆಯನ್ನು ಸೂತ್ರದ ಗೊಂಬೆಯಂತಲೂ ಭಾವಿಸುತ್ತಾರೆ ಎಂದು ಅನಿಸುವುದಿಲ್ಲವೆ? ಸ್ತ್ರೀವಾದದಿಂದ ನಾವೆಲ್ಲಾ ಸಮಾನತೆಯನ್ನು ಬಯಸಿದರೆ ಲೇಖಕಿಗೆ ಸಮಾನತೆಗಿಂತ ಲಾಲಿತ್ಯವೇ ಮುಖ್ಯವಾಗುತ್ತಿದೆ.

 

ಊರು ಸುಟ್ಟ ಮೇಲೆ ಹನುಮಪ್ಪ ಹೊರಗೆ ಎನ್ನುವಂತೆ ಎಲ್ಲಾ ಸಿದ್ಧಾಂತಗಳ ಸಾಧನೆಗಳನ್ನು ದೂರದಿಂದಲೇ ವೀಕ್ಷಿಸುತ್ತಾ ಎಲ್ಲವನ್ನೂ ತೂಗಿ, ಅರೆದು,  ಹಿಂಜಿ, ಹಿಚುಕಿ, ಬೀಸಾಡಿ ತಾವೊಬ್ಬ ವಾಸ್ತವವಾದಿ ಎನ್ನುವ ಬೌದ್ಧಿಕ ಸಂಕೋಚ ಉಳ್ಳವರಿಗೆ ಸ್ತ್ರೀವಾದಕ್ಕಿಂತ ಲಲನಾವಾದ ಹೊಸ ಹಿಂಜುವಿಕೆಗೆ ಅವಕಾಶ ನೀಡಬಹುದು.

ಸ್ತ್ರೀವಾದ ಕರ್ಣ ಕಠೋರವಾಗಿ ಜಿಡ್ಡುಗಟ್ಟಿದ ಕನ್ನಡಿಯಂತಾಗಿದೆಯಂತೆ. ಮಹಿಳಾವಾದ ಮಡಿಕೋಲಿನ ಅಜ್ಜಿಯಂತೆ ಇವೆರಡೂ ಮಾಹಿತಿ ತಂತ್ರಜ್ಞಾನದ ಈ ಕಾಲಕ್ಕೆ ಹೊಂದುವುದಿಲ್ಲವಂತೆ.  ಆದರೆ ಮಾಹಿತಿ ತಂತ್ರಜ್ಞಾನ ಬದುಕಿನಲ್ಲಿ ಬೇಕಾದಾಗ ಉಪಯೋಗಬಹುಸಾದ ತಂತ್ರವೇ ಹೊರತು ಬದುಕೇ ಮಾಹಿತಿ ತಂತಜ್ಞಾನದ ಮಂತ್ರವಾಗಬಾರದು.  ಕರ್ಣಾನಂದಕ್ಕಾಗಿ ಮತ್ತು ಶೃಂಗಾರಕ್ಕಾಗಿ ಬಳಸುವ ಕನ್ನಡಿಯಂತೆ ಲಲನಾವಾದವನ್ನು ನೋಡುವುದಾದರೆ ಅದು ಮೋಜಿನವಾದವೇ ಹೊರತು ಬದುಕಿನ ವಾದವಲ್ಲ. ಲೇಖನದ ಕೊನೆಯಲ್ಲಿ ಲಲನಾವಾದವನ್ನು ಪ್ರತಿಪಾದನೆ ಎನ್ನದೇ ಸ್ತ್ರೀವಾದದ ಪರಿಷ್ಕರಣೆ ಎಂದಿರುವುದು ಖೇದಕರ.  ಶತಮಾನಗಳಿಂದ ತುಳಿತಕ್ಕೆ ಒಳಗಾದ ಸ್ತ್ರೀಯರ ವಿಮೋಚನೆಗೆ ಕಟಿಬದ್ಧವಾದ ಸ್ತ್ರೀವಾದವನ್ನು ದಯಮಾಡಿ ಅದರಷ್ಟಕ್ಕೆ ಅದನ್ನು ಬಿಟ್ಟು ಬಿಡಿ. ಲಲನಾವಾದದ ರಾಡಿಯನ್ನು ಅದರ ಮೇಲೆ ಎರಚಬೇಡಿ.  ಸ್ವಾಭಿಮಾನದ ಬದುಕಿಗಾಗಿ ಹೋರಾಡುತ್ತಿದ್ದೇವೆ.  ನಿತ್ಯ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ.  ಭ್ರೂಣ ಹತ್ಯೆ, ಬಾಲ್ಯವಿವಾಹ, ಬಾಣಂತಿ ಸಾವು, ವರದಕ್ಷಿಣೆ ಕಿರುಕುಳ, ಮಹಿಳಾ ಮಾರಾಟ, ಲಿಂಗಾನುಪಾತದಲ್ಲಿ ಸಮತೆ, ಆಸ್ತಿ ಹಕ್ಕು ಮುಂತಾದ ವಿಷಯಗಳಲ್ಲಿ ಕಾನೂನುಗಳು ಜಾರಿಯಾದರೂ ಅನುಷ್ಠಾನಗೊಳ್ಳದೆ ಇದ್ದುದಕ್ಕೆ ಸಂಘಟಿತ ಹೋರಾಟ ನಡೆಸುತ್ತಿದ್ದೇವೆ. ರಾಜಕೀಯ ಮೀಸಲಾತಿಗಾಗಿ ಭುಗಿಲೆದ್ದಿದ್ದೇವೆ.  ಇದೆಲ್ಲವೂ ಸ್ತ್ರೀವಾದದ ಆಶಯವಾಗಿದೆ.  ಈ ಸಂದರ್ಭದಲ್ಲಿ ಲಲನಾವಾದವೆಂಬ ಪುರುಷವಾದವನ್ನು ಮುಂದಿಟ್ಟರೆ ಲಲನಾವಾದದ ವಿರುದ್ಧವೂ ಹೋರಾಡಬೇಕಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.