ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತಮಹಲ್‌ನಲ್ಲಿ ತಂಗಿದ 2ನೇ ಪ್ರಧಾನಿ

ಗುಜರಾತ್‌ ಮುಖ್ಯಮಂತ್ರಿಯಾಗಿ ವಾಸ್ತವ್ಯವಿದ್ದಾಗಲೇ ಮೋದಿ ಕವನವನ್ನು ಬರೆದಿದ್ದರು!
Last Updated 4 ಜನವರಿ 2016, 8:43 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಲಲಿತಮಹಲ್‌ ಪ್ಯಾಲೇಸ್‌ ಹೋಟೆಲ್‌ ನಲ್ಲಿ ತಂಗಿದ 2ನೇ ಪ್ರಧಾನಮಂತ್ರಿ ಎನ್ನುವ ಖ್ಯಾತಿಗೆ ನರೇಂದ್ರ ಮೋದಿ ಅವರು ಭಾಜನರಾದರು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗ ವಹಿಸಲು ಎರಡು ದಿನಗಳ ಕಾಲದ ರಾಜ್ಯ ಪ್ರವಾಸದ ಭಾಗವಾಗಿ ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಲಲಿತಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ತಂಗಿದ್ದರು. ಇಂದಿರಾ ಗಾಂಧಿ ಅವರು ಇಲ್ಲಿ ವಾಸ್ತವ್ಯ ಹೂಡಿದ್ದ ಮೊದಲ ಪ್ರಧಾನಿ ಎನಿಸಿದ್ದರು.

ನರೇಂದ್ರ ಮೋದಿ ಅವರು ಗುಜ ರಾತ್‌ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲೂ ಇದೇ ಹೋಟೆಲಿನಲ್ಲಿ ಒಂದು ರಾತ್ರಿ ತಂಗಿದ್ದರು. ಇಲ್ಲಿನ ಆತಿಥ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.

ಸರ್ಕಾರಿ ಸ್ವಾಮ್ಯದ ಈ ಹೋಟೆಲಿನ ಮೊದಲ ಮಹಡಿಯಲ್ಲಿರುವ ‘222’ ಸಂಖ್ಯೆಯ ಕೊಠಡಿಯಲ್ಲಿ ಮೋದಿ ಅವರು ಉಳಿದಿದ್ದರು. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವ ರಿಗೂ ಈ ಕೊಠಡಿ ಅಚ್ಚುಮೆಚ್ಚು. ಹಲವು ಬಾರಿ ಅವರು ಇಲ್ಲಿ ತಂಗಿದ್ದರು. ಉಳಿ ದಂತೆ ರಾಷ್ಟ್ರಪತಿಗಳಾಗಿದ್ದ ಪ್ರತಿಭಾ ಪಾಟೀಲ್‌, ಶಂಕರ್‌ ದಯಾಳ್‌ ಶರ್ಮ, ವಿ.ವಿ. ಗಿರಿ ಮೊದಲಾದವರು ಕೂಡ ಇದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿ ದ್ದರು. ಮಹಾರಾಜರ ಕಾಲದಲ್ಲಿ ನಿರ್ಮಿಸ ಲ್ಪಟ್ಟ ಈ ಕಟ್ಟಡದಲ್ಲಿ ಅತಿಗಣ್ಯರಿಗೆ ನೀಡಲಾಗುತ್ತಿರುವ ಕೊಠಡಿ ‘222’. ರೋಸ್‌ವುಡ್‌ ಬಳಸಿ ಮಾಡಿರುವ ಪೀಠೋಪಕರಣಗಳು, ಸುಸಜ್ಜಿತ ಸೌಲಭ್ಯ ಗಳು ಇಲ್ಲಿನ ವಿಶೇಷ. ಈ ಕೊಠಡಿಯಲ್ಲಿ ಕಳೆದ ವರ್ಷ ಅಮೆರಿಕ ರಾಯಭಾರಿ ರಿಚರ್ಡ್‌ ವರ್ಮಾ ಅವರೂ ತಂಗಿದ್ದರು.

ಎಸ್‌ಪಿಜಿ (ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌) ವಶದಲ್ಲಿದ್ದ ಈ ಹೋಟೆಲಿನಲ್ಲಿ ನರೇಂದ್ರ ಮೋದಿ ಅವರೊಂದಿಗೆ ಕೇಂದ್ರ ಸಚಿವ ಅನಂತಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಕೂಡ ಪ್ರತ್ಯೇಕ ಕೊಠಡಿ ಗಳಲ್ಲಿ ತಂಗಿದ್ದರು. ಶನಿವಾರ ತಡರಾತ್ರಿ ವರೆಗೂ ಮೋದಿ ಅವರು ಇಲ್ಲಿನ ಮುಖಂಡರು, ಮೊದಲಾದವರೊಂದಿಗೆ ಒಂದರ ಮೇಲೊಂದರಂತೆ ಸಭೆ ನಡೆಸಿ ದರು ಎಂದು ಹೋಟೆಲ್‌ ಸಿಬ್ಬಂದಿ ಮಾಹಿತಿ ನೀಡಿದರು.

ಭಾನುವಾರ ನಸುಕಿನ 5ಕ್ಕೆ ನಿದ್ರೆ ಯಿಂದ ಎದ್ದ ಮೋದಿ ಅವರು, ಯೋಗದ ನಂತರ ಸೈಕ್ಲಿಂಗ್‌ ಮಾಡಿ ದರು. ಸ್ನಾನ ಮಾಡಿ ಸಿದ್ಧವಾದ ನಂತರ, ಮಸಾಲೆದೋಸೆ, ಉಪ್ಪಿಟ್ಟು ಹಾಗೂ ಬಟಾಣಿ–ಸೊಪ್ಪು–ಪಾಲಕ್‌ನಿಂದ ತಯಾರಿಸಿದ ಪರೋಟ ತಿಂದರು. ದಾಳಿಂಬೆ ಜ್ಯೂಸ್‌ ಕುಡಿದು ಬೆಳಿಗ್ಗೆ 10ಕ್ಕೆ ಅಲ್ಲಿಂದ ಹೊರಟರು.

‘ಗುಜರಾತ್‌ ಮುಖ್ಯಮಂತ್ರಿಯಾಗಿ ಬಂದಿದ್ದಾಗ ಇಲ್ಲಿ ಹೆಚ್ಚಿನ ಸಮಯ ಉಳಿ ದಿದ್ದರು. ಬಹಳ ಮಾತನಾಡಿದ್ದರು. ನಮ್ಮ ಹೋಟೆಲ್‌ ಕುರಿತು ಗುಜರಾತ್‌ ಭಾಷೆ ಯಲ್ಲಿ 10–12 ಸಾಲುಗಳ ಕವನವನ್ನೇ ಬರೆದಿದ್ದರು. ಸ್ವಾಗತ ಹಾಗೂ ಆತಿಥ್ಯ ಕುರಿತು ಕವನ ಬರೆದಿದ್ದರು. ಆದರೆ, ಈ ಬಾರಿ ಸಮಯದ ಅಭಾವದಿಂದ ಹೆಚ್ಚು ಮಾತನಾಡಲಿಲ್ಲ. ಸಂದರ್ಶಕರ ಪುಸ್ತಕ ದಲ್ಲಿ ಅನಿಸಿಕೆಯನ್ನೇನೂ ಬರೆಯಲಿಲ್ಲ’ ಎಂದು ಹೋಟೆಲಿನ ಮಾರುಕಟ್ಟೆ ವಿಭಾ ಗದ ವ್ಯವಸ್ಥಾಪಕ ಜೋಸೆಫ್‌ ಮಥಾ ಯೀಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.
***
ಪ್ರಮೋದಾದೇವಿ, ಯದುವೀರ್‌ ಭೇಟಿ
ಲಲಿತಮಹಲ್‌ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾನುವಾರ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.

ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡ ಅವರು, ಸುಮಾರು 20 ನಿಮಿಷ ಚರ್ಚಿಸಿದರು.

ನಂತರ ಪ್ರಮೋದಾದೇವಿ ಒಡೆಯರ್‌ ಹಾಗೂ ಯದುವೀರ ಅವರು ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲೂ ಪಾಲ್ಗೊಂಡರು.
***
ಪ್ರವಾಸ ಯಶಸ್ವಿ
ಮೈಸೂರು: ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ಭಾನುವಾರ ಮಧ್ಯಾಹ್ನದ ವೇಳೆಗೆ ವಾಪಸಾದರು.

ಶನಿವಾರ ಸಂಜೆ 5.30ರ ಸುಮಾರಿಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಮೊದಲು ಅವಧೂತ ದತ್ತಪೀಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಲಲಿತಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ತಂಗಿದ್ದರು.

ಭಾನುವಾರ ಬೆಳಗ್ಗೆ 10.15ಕ್ಕೆ ಆರಂಭವಾದ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ, ಮಧ್ಯಾಹ್ನ 12.35ರ ವೇಳೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ತುಮಕೂರಿನತ್ತ ಪ್ರಯಾಣ ಬೆಳೆಸಿದರು.

ಅವರೊಂದಿಗೆ ರಾಜ್ಯಪಾಲ ವಜುಭಾಯಿ ಆರ್‌. ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT