ಲಾಭದ ನಿರೀಕ್ಷೆಯಲ್ಲಿ ನಗರ ಸಾರಿಗೆ: ಬರಲಿವೆ 30 ಬಸ್!

ಚಿಕ್ಕಬಳ್ಳಾಪುರ: ನಗರದಲ್ಲಿ ನಗರಸಾರಿಗೆ ಬಸ್ ಸೌಲಭ್ಯ ಚಾಲನೆ ಪಡೆದು ಮಾರ್ಚ್ ಅಂತ್ಯಕ್ಕೆ ನಾಲ್ಕು ತಿಂಗಳು ಪೂರೈಸಲಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಮೀಪದ ಗ್ರಾಮಗಳಿಗೆ ಹೋಗಲು ಆಟೊರಿಕ್ಷಾ, ದ್ವಿಚಕ್ರ ವಾಹನ ಅವಲಂಬಿಸುತ್ತಿದ್ದ ಜನರು ಈಗ ನಗರ ಸಾರಿಗೆ ಬಸ್ಗಳನ್ನು ನೆಚ್ಚಿಕೊಂಡಿದ್ದು, ಸಾರಿಗೆ ಸೌಲಭ್ಯ ಉಪಯುಕ್ತವಾಗಿದೆ ಎಂದು ಹೇಳುತ್ತಿದ್ದಾರೆ.
ನಂದಿ ಕ್ರಾಸ್ ಬಳಿಯಿದ್ದ ಜಿಲ್ಲಾಧಿಕಾರಿ ಕಚೇರಿಗೆ ಅಥವಾ ಸಮೀಪದ ಸ್ಥಳಕ್ಕೆ ಹೋಗಬೇಕಿದ್ದರೆ, ಬೆಂಗಳೂರಿಗೆ ಹೋಗುವ ಬಸ್ಗಳನ್ನು ಇಲ್ಲವೇ 8 ರಿಂದ 10 ಮಂದಿಯನ್ನು ಕೂರಿಸಿಕೊಂಡು ಹೋಗುವ ಆಟೊರಿಕ್ಷಾಗಳಿಗಾಗಿ ಕಾಯಬೇಕಾಗುತ್ತಿತ್ತು, ಆದರೆ ಈಗ ಸಾರಿಗೆ ಬಸ್ಗಳು ಇರುವುದರಿಂದ ಕಡಿಮೆ ದರದಲ್ಲೇ ಬಯಸಿದ ಸ್ಥಳಗಳಿಗೆ ತಲುಪುತ್ತವೆ. ಇದರಿಂದ ನಮಗೆ ಹಣದ ಉಳಿತಾಯದ ಜೊತೆಗೆ ಸ್ಥಳ ಶೀಘ್ರವೇ ತಲುಪಲು ಸಾಧ್ಯವಾಗುತ್ತಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.
ಕಳೆದ ವರ್ಷ ಅಕ್ಟೋಬರ್ 28ರಂದು ನಗರದ ಹಳೆ ಬಸ್ ನಿಲ್ದಾಣದಿಂದ ಏಕಕಾಲಕ್ಕೆ 5 ನಗರ ಸಾರಿಗೆ ಬಸ್ ಚಾಲನೆ ನೀಡಿದಾಗ, ಪ್ರಯಾಣಿಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂಬ ಅಳುಕು ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಕಾಡುತ್ತಿತ್ತು. ಜಿಲ್ಲಾ ಕೇಂದ್ರದಲ್ಲಿ ಜನರ ಓಡಾಟ ಹೆಚ್ಚಿರುವ ಕಾರಣ ಅಂತಹ ಆರ್ಥಿಕ ನಷ್ಟವಾಗಲಿಕ್ಕಿಲ್ಲ ಎಂಬ ಸಣ್ಣ ಆಶಾಭಾವನೆ ಹೊಂದಿದ್ದರು. ಅದೀಗ ನಿಜವಾಗುತ್ತಿರುವ ಸಮಾಧಾನ ಇದೆ.
ಬಸ್ಗಳಿಂದ ಅನುಕೂಲ: ನಗರದ ಹೊರವಲಯದಲ್ಲಿರುವ ಬೀಡಗಾನಹಳ್ಳಿ ಅಥವಾ ಪಕ್ಕದ ತಾಲ್ಲೂಕು ದೇವನಹಳ್ಳಿಗೆ ಹೋಗಬೇಕಿದ್ದರೂ ನಾವು ಬೆಂಗಳೂರಿನ ಬಸ್ಗಳನ್ನೇ ಅವಲಂಬಿಸಬೇಕಾಗುತ್ತಿತ್ತು. ಬೆಂಗಳೂರಿನ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದ ಕಾರಣ ನಮಗೆ ಸೀಟು ಸಿಗುತ್ತಿರಲಿಲ್ಲ. ಆದರೆ ನಗರ ಸಾರಿಗೆ ಬಸ್ಗಳು ಆರಂಭಗೊಂಡ ದಿನದಿಂದ ಪ್ರಯಾಣ ಸುಗಮವಾಗಿದೆ ಎಂದು ಪ್ರಯಾಣಿಕ ಸುರೇಶ್ ಬಾಬು ತಿಳಿಸಿದರು.
ನಂದಿ ಕ್ರಾಸ್ನಲ್ಲಿದ್ದ ಜಿಲ್ಲಾಧಿಕಾರಿ ಕಚೇರಿ ಈಗ ಪಟ್ರೇನಹಳ್ಳಿ ಸಮೀಪದ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಿದ್ದು, ಅಲ್ಲಿಗೆ ಹೋಗಲು ಸಹ ಯಾವುದೇ ಪ್ರಯಾಸ ಪಡಬೇಕಿಲ್ಲ. ಅದಕ್ಕಾಗಿ ಶಿಡ್ಲಘಟ್ಟ ಅಥವಾ ಚಿಂತಾಮಣಿಗೆ ಹೋಗುವ ಬಸ್ಗಳಿಗಾಗಿ ಕಾಯುವುದರ ಬದಲು ಪಟ್ರೇನಹಳ್ಳಿವರೆಗೂ ಹೋಗುವ ಬಸ್ನಲ್ಲಿ ಹೊರಟುಬಿಡುತ್ತೇವೆ. ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಇದೇ ಬಸ್ಗಳಲ್ಲಿ ಪ್ರಯಾಣಿಸುತ್ತಾರೆ ಎಂದು ಕೆ.ರಾಮಕೃಷ್ಣಪ್ಪ ತಿಳಿಸಿದರು.
ಲಾಭದ ನಿರೀಕ್ಷೆಯಲ್ಲಿದ್ದೇವೆ: ನಗರ ಸಾರಿಗೆ ಬಸ್ ಸೌಲಭ್ಯವನ್ನು ಇನ್ನಷ್ಟು ಸುಧಾರಿಸುವ ಉದ್ದೇಶವಿದೆ. ಸದ್ಯಕ್ಕೆ 5 ಬಸ್ ಸೌಲಭ್ಯವಿದ್ದು, ಅವುಗಳಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ನಾಲ್ಕು ತಿಂಗಳು ಹಿಂದೆಯಷ್ಟೇ ನೂತನ ಸೌಲಭ್ಯ ಕಲ್ಪಿಸಲಾಗಿದ್ದು, ಜನರು ಇನ್ನೂ ರೂಢಿಸಿಕೊಳ್ಳಬೇಕಿದೆ. ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದಷ್ಟೂ ಮತ್ತು ಬಸ್ಗಳ ಸಂಚಾರ ಹೆಚ್ಚಾದಷ್ಟು ಹೆಚ್ಚಿನ ಲಾಭ ಬರುತ್ತದೆ ಎಂದು ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರದ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬಸ್ನಿಂದ ಪ್ರತಿ ದಿನ ಸುಮಾರು 7 ರಿಂದ 8 ಸಾವಿರ ರೂಪಾಯಿವರೆಗೆ ಆದಾಯ ಬರಬೇಕು. ಆದರೆ 5 ಸಾವಿರ ರೂಪಾಯಿವರೆಗೆ ಆದಾಯ ಬರುತ್ತಿದೆ. 7 ಸಾವಿರ ರೂಪಾಯಿಗೂ ಮೇಲ್ಪಟ್ಟು ಆದಾಯ ಬಂದಲ್ಲಿ, ಆಗ ಬಸ್ಗಳಿಂದ ಲಾಭವಾಗುತ್ತಿದೆ, ನಿರೀಕ್ಷಿತ ಲಾಭ ಗಳಿಸಲು ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ಅವರು ತಿಳಿಸಿದರು.
ಇನ್ನೂ 30 ಬಸ್ಗಳ ಅಗತ್ಯವಿದ್ದು, ತಿಂಗಳ ಅವಧಿಯೊಳಗೆ ಅವು ಲಭ್ಯವಾಗಲಿವೆ. ಏಕಕಾಲಕ್ಕೆ 30 ಬಸ್ಗಳು ಸಂಚರಿಸುವುದರಿಂದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಬೇರೆ ಮಾರ್ಗಗಳಿಗೂ ಬಸ್ಗಳ ಸೌಲಭ್ಯ ವಿಸ್ತರಿ-ಸುವ ಉದ್ದೇಶ ಇದೆ ಎಂದು ಅವರು ತಿಳಿಸಿದರು.
ಬಸ್ ಸಂಚಾರ ಮಾರ್ಗ ವಿವರ: ನಗರ ಸಾರಿಗೆಯ 5 ಬಸ್ಗಳು ಪ್ರತಿ ದಿನ ಬೆಳಿಗ್ಗೆ 7 ರಿಂದ ಸಂಜೆ 7.15ರವರೆಗೆ ಸಂಚರಿಸುತ್ತವೆ.
ಸಂಚಾರ ಮಾರ್ಗ: ಮಾರ್ಗದ ಸಂಖ್ಯೆ–201 ಮತ್ತು 202. ಚಿಕ್ಕಬಳ್ಳಾಪುರದಿಂದ ನಂದಿಕ್ರಾಸ್. ನಿಲುಗಡೆ: ಅಗಲಗುರ್ಕಿ ಕ್ರಾಸ್, ಕೆ.ವಿ.ಶಿಕ್ಷಣ ಸಂಸ್ಥೆ ಆವರಣ, ಎಸ್ಜೆಸಿಐಟಿ ಎಂಜಿನಿಯರಿಂಗ್ ಕಾಲೇಜು, ಕೊತ್ತನೂರು ಕ್ರಾಸ್, ಚದಲಪುರ, ಹಳೆಯ ಜಿಲ್ಲಾಧಿಕಾರಿ ಕಚೇರಿ.
ಮಾರ್ಗದ ಸಂಖ್ಯೆ–201ಇ: ಚಿಕ್ಕಬಳ್ಳಾಪುರದಿಂದ ದೇವನಹಳ್ಳಿ. ನಿಲುಗಡೆ: ಅಗಲಗುರ್ಕಿ ಕ್ರಾಸ್, ಕೆ.ವಿ.ಶಿಕ್ಷಣ ಸಂಸ್ಥೆ ಆವರಣ, ಎಸ್ಜೆಸಿಐಟಿ ಎಂಜಿನಿಯರಿಂಗ್ ಕಾಲೇಜು, ಕೊತ್ತನೂರು ಕ್ರಾಸ್, ಚದಲಪುರ, ಹಳೆಯ ಜಿಲ್ಲಾಧಿಕಾರಿಗಳ ಕಚೇರಿ, ನಂದಿಕ್ರಾಸ್, ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜು, ಮುದುಗುರ್ಕಿ, ವೆಂಕಟಗಿರಿಕೋಟೆ, ಬುಳ್ಳಹಳ್ಳಿ ಕ್ರಾಸ್, ಆವತಿ, ಸಾಯಿಬಾಬಾ ದೇಗುಲ, ರಾಣಿ ಕ್ರಾಸ್.
ಮಾರ್ಗ ಸಂಖ್ಯೆ–203 ಮತ್ತು 204. ಪಟ್ರೇನಹಳ್ಳಿಯಿಂದ ತಿಪ್ಪೇನಹಳ್ಳಿ. ನಿಲುಗಡೆ: ನೂತನ ಜಿಲ್ಲಾಡಳಿತ ಭವನ, ಪೂಜನಹಳ್ಳಿ, ಅಣಕನೂರು, ಸರ್ ಎಂ.ವಿ.ಸ್ಮಾರಕ ಕಾಲೇಜು, ಶಿಡ್ಲಘಟ್ಟ ವೃತ್ತ, ಚಿಕ್ಕಬಳ್ಳಾಪುರ ಬಸ್ ನಿಲ್ದಾಣ, ಎಂ.ಜಿ.ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಪಿಎಂಸಿ, ನಿಮ್ಮಾಕಲಕುಂಟೆ, ಕಣಿಜೇನಹಳ್ಳಿ ಗೇಟ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.