ಶನಿವಾರ, ಮೇ 8, 2021
18 °C

ಲಿವ್-ಇನ್ ಮುಕ್ತ ಮುಕ್ತ ಮುಕ್ತ...

ಸುಧೀಂದ್ರಪ್ರಸಾದ್ ಇ.ಎಸ್. Updated:

ಅಕ್ಷರ ಗಾತ್ರ : | |

ಭವ ಬಂಧನಗಳ ಮೀರುವಿಕೆ. ಸಾವು ನೋವುಗಳಿಲ್ಲದ ಸಂತೋಷವನ್ನು ಹೊಂದುವಿಕೆ. ಇದು ಭಾರತೀಯರ `ಮುಕ್ತಿ'ಯ ಪರಿಕಲ್ಪನೆ. ಆಧುನಿಕ ಸಮಾಜದ ಪರಿಕಲ್ಪನೆಯಾದ `ಲಿವ್ ಇನ್' ಕೂಡ ಮುಕ್ತ ಮುಕ್ತ ಎನ್ನುವ ಧ್ಯೇಯ ವಾಕ್ಯವನ್ನೇ ಹೊಂದಿದೆ. `ಬೇಡ ಗೆಳೆಯ ನಂಟಿಗೆ ಹೆಸರು' ಎಂದರೂ ಎಲ್ಲೆಕಟ್ಟು ಒಲ್ಲೆಂದರೂ ಅನುಬಂಧದ ಚೌಕಟ್ಟೊಂದು ರೂಪುಗೊಳ್ಳುವುದು `ಲಿವ್-ಇನ್'ನಲ್ಲಿನ ವಿಸ್ಮಯ.ಇಹವನ್ನು ಅರ್ಥಪೂರ್ಣವಾಗಿ ದಾಟಲಿಕ್ಕೆ ಸಂಸಾರವೊಂದು ಸುಂದರ ಹರಿಗೋಲು ಎನ್ನುತ್ತದೆ ಭಾರತೀಯ ಸಂಸ್ಕೃತಿ. `ಲಿವ್ ಇನ್'ನ ಸಂದರ್ಭದಲ್ಲಿ ಕೂಡ ಸಂಸಾರದ ಪರಿಕಲ್ಪನೆ ವರ್ಜ್ಯವೇನಲ್ಲ. ಬದಲಾವಣೆ ಇರುವುದು ಚೌಕಟ್ಟುಗಳ ಸಡಿಲಿಕೆಯಲ್ಲಿ. ಸಂಸಾರ ಸಾಗರದಲ್ಲಿ ಕೂಡಿ ಈಜೋಣ ಎನ್ನುವುದು ಇಲ್ಲಿಯೂ ಸಲ್ಲುತ್ತದೆ. ಆದರೆ, ದಣಿವಾದಾಗ ದಂಡೆಯಲಿ ಕೈಕುಲುಕಿ ಬೆನ್ನು ಮಾಡಿ ನಡೆಯಲಿಕ್ಕೆ `ಲಿವ್-ಇನ್' ಅವಕಾಶ ಕಲ್ಪಿಸುತ್ತದೆ.ಲಿವ್-ಇನ್ ಪರಿಕಲ್ಪನೆಯನ್ನು ಮತ್ತೂ ಸರಳವಾಗಿ ಹೇಳಬಹುದು. ಇಲ್ಲಿ ಗಂಡು ಹೆಣ್ಣು ಒಟ್ಟಿಗಿರುತ್ತಾರೆ, ಅವರ ನಂಟು ಗಂಡ ಹೆಂಡತಿಯಂತೆಯೇ ಇರುತ್ತದೆ, ಆದರೆ ಅವರು ದಂಪತಿಯಲ್ಲ. ಒಂದೇ ಸೂರಿನಡಿ ಸಹಜೀವನ ನಡೆಸುತ್ತಾರೆ, ಆದರೆ ಅವರದು ಸಂಸಾರವಲ್ಲ. ಹಾಗಿದ್ದರೆ ಇದು ಏನು? ಉತ್ತರ ಸರಳ: ಅದು `ಲಿವ್-ಇನ್'.`ಲಿವ್-ಇನ್' ಎನ್ನುವುದೀಗ ಪಶ್ಚಿಮ ದೇಶಗಳಿಗಷ್ಟೇ ಮೀಸಲಾದ ಸಂಗತಿಯಾಗಿ ಉಳಿದಿಲ್ಲ. ಬೆಂಗಳೂರಲ್ಲಿ, ಮಂಗಳೂರು - ಮೈಸೂರುಗಳಂಥ ನಗರಗಳಲ್ಲೂ `ಬಲು ಅಪರೂಪ ನಂ ಜೋಡಿ' ಎನ್ನುವ `ಲಿವ್ ಇನ್' ಸಂಗಾತಿಗಳು ಕಾಣಸಿಗುತ್ತಾರೆ. ಬಟ್ಟೆ, ಊಟದ ಜತೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನೂ ಬದುಕಿನ ಕೆಲವು ಹಂತಗಳಲ್ಲಿ ಅನುಸರಿಸುತ್ತಿರುವ ಭಾರತೀಯರು ಕಳೆದ ಕೆಲವು ವರ್ಷಗಳಿಂದ `ಲಿವ್-ಇನ್' ಸಂಬಂಧದ ಮೊರೆ ಹೋಗುತ್ತಿದ್ದಾರೆ.ಸಹಜೀವನ! ಹಗುರ ಜೀವನ!

ತನ್ನ ಸಂಗಾತಿಗೆ ಹೊರೆಯಾಗದೆ ಇರುವುದು ಹಾಗೂ ಒಬ್ಬರ ಮೇಲೆ ಇನ್ನೊಬ್ಬರ ಅಧಿಕಾರ ಚಲಾಯಿಸದೆ ಇರುವುದು `ಲಿವ್-ಇನ್'ನಲ್ಲಿನ ಎದ್ದುಕಾಣುವ ಗುಣ. ಇಲ್ಲಿ ಹೆಣ್ಣು ಗಂಡು ಇಬ್ಬರೂ ಸಮಾನರು. ಬಹುತೇಕ ಜೋಡಿಗಳು ಮನಸ್ಸು ದೇಹದ ಜೊತೆಗೆ ಖರ್ಚುಗಳನ್ನೂ  ಹಂಚಿಕೊಳ್ಳುತ್ತಾರೆ. ಸಂಗಾತಿ ಬೇಡ ಅನ್ನಿಸಿದರೆ ಅಥವಾ ಅವರೊಂದಿಗೆ ಹೊಂದಾಣಿಕೆ ಕಷ್ಟ ಎನ್ನಿಸಿದರೆ ಇಬ್ಬರೂ ಬೇರಾಗುತ್ತಾರೆ. ಆದರೆ, `ಲಿವ್-ಇನ್'ನಲ್ಲಿ ಇದ್ದುಕೊಂಡೇ ಕೆಲವು ವರ್ಷಗಳ ನಂತರ ಮದುವೆ ಆಗುವವರೂ ಇದ್ದಾರೆ.ಅಂದಹಾಗೆ `ಲಿವ್-ಇನ್' ಎಂಬ ಪದಕ್ಕೆ ಯಾವ ಪದಕೋಶದಲ್ಲೂ ಅರ್ಥ ಸಿಗದು. ಯಾವ ಕಾನೂನು ಪುಸ್ತಕದಲ್ಲೂ ಇದು ಸೇರ್ಪಡೆಯಾಗಿಲ್ಲ. ಮಹಿಳೆ ಹಾಗೂ ಪುರುಷ ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ಕೆಲ ಕಾಲ ಪತಿ ಪತ್ನಿಯರಂತೆ ಬದುಕು ನಡೆಸುವ ಈ ಸಂಬಂಧವನ್ನು ಹಲವರು ಹಲವು ಬಗೆಯಲ್ಲಿ ಬಣ್ಣಿಸುತ್ತಾರೆ. ಅರ್ಥವಿಲ್ಲದ ಸಂಬಂಧ ಎಂದು ಕೆಲವರು ಹೇಳಿದರೆ, ಲೈಂಗಿಕವಾಗಿ ದುರ್ಬಳಕೆ ಮಾಡಬಹುದಾದ ಒಂದು ಸಂಬಂಧ ಎನ್ನುವವರೂ ಇದ್ದಾರೆ. ಇದು ಅಪರಾಧವಲ್ಲದೆ ಮತ್ತೇನೂ ಅಲ್ಲ ಎಂದು ಹೇಳುವವರೂ ಉಂಟು.`ಲಿವ್-ಇನ್' ಯಾಕಾಗಿ?

ಬಹು ಸಂಸ್ಕೃತಿಯ ಕಾಸ್ಮೊಪಾಲಿಟನ್ ನಗರಗಳನ್ನು ಗಿರಣಿಗೆ ಹೋಲಿಸುವುದಿದೆ. ನಗರದ ಮಾತಿರಲಿ, ಇಲ್ಲಿ ಬದುಕೇ ಗಿರಣಿ ಇದ್ದಂತೆ. ಜೀವನ ಹಾಗೂ ನೌಕರಿಯಲ್ಲಿ ವಿಪರೀತ ಒತ್ತಡ. ಕಣ್ಪಟ್ಟಿ ಕಟ್ಟಿಕೊಂಡ ಕುದುರೆಯಂತೆ ನಿರಂತರ ಓಟ. ಹೀಗಾಗಿ ಕುಟುಂಬದ ಆರೈಕೆ, ಬೇಕು ಬೇಡಗಳಿಗೆ ಗಮನ ಕೊಡಲು ಒಂದಿಷ್ಟೂ ಸಮಯವಿಲ್ಲ ಎಂದು ಹೇಳುವವರ ಸಂಖ್ಯೆ ನಿಧಾನಕ್ಕೆ ಹೆಚ್ಚುತ್ತಿದೆ.ವೃತ್ತಿ ಜೀವನದ ಬೆಳವಣಿಗೆಯ ಕುರಿತು ಅಪಾರ ಕನಸು ಕಟ್ಟಿಕೊಂಡವರು, ಮನೆಗಿಂತ ಹೆಚ್ಚು ಸಮಯ ಕಚೇರಿಯಲ್ಲೇ ಕಳೆಯುವವರೂ ಈ ಪಟ್ಟಿಯಲ್ಲಿದ್ದಾರೆ. ಇಂಥವರಿಗೆ ಕುಟುಂಬ ಮತ್ತು ಮಕ್ಕಳು ಎಂದೂ ತೀರದ ಜಂಜಾಟದಂತೆ ಕಾಣಿಸುತ್ತದೆ. ಹಾಗೆಂದು ದೇಹದ ತುಡಿತಗಳನ್ನು, ಮಾನಸಿಕ ಅಗತ್ಯಗಳನ್ನು ಹತ್ತಿಕ್ಕಲು ಸಾಧ್ಯವೇ? ಈ ದ್ವಂದ್ವದಲ್ಲಿ, ಯಾವುದೇ ಕಟ್ಟುಪಾಡುಗಳಿಲ್ಲದ ಬೆಳ್ಳಿಗೆರೆಯಂತೆ ಕಾಣಿಸುತ್ತದೆ `ಲಿವ್-ಇನ್'.ದುಡಿಯುವ ಮಹಿಳೆಯರಿಗೆ ಕುಟುಂಬ ಹಾಗೂ ಮಕ್ಕಳ ನಿರ್ವಹಣೆಗೆ ಹೆಚ್ಚಿನ ಸಮಯ ನೀಡಲು ಆಗದೆ ಇರುವುದು ಕೂಡ `ಲಿವ್-ಇನ್'ಗೆ ಪೂರಕವಾಗಿದೆ. ಮದುವೆ ಎನ್ನುವುದು ತಮ್ಮ ಸ್ವಾತಂತ್ರ್ಯ ಹರಣ ಎಂದು ನಂಬಿದ ಕೆಲವರಿಗೆ `ಲಿವ್-ಇನ್'ನಲ್ಲಿ ಖುಷಿ. ಈ ನಂಟು ಅನೇಕರ ಸ್ವಾತಂತ್ರ್ಯ ಮತ್ತು ವಿಮೋಚನೆಯ ರೂಪವೂ ಹೌದು.`ಲಿವ್-ಇನ್' ಜನಪ್ರಿಯತೆಯನ್ನು ನೋಡಿದರೆ, ಸಮಾಜ ಮತ್ತು ಧರ್ಮಗಳು ಒಪ್ಪುವ ಸಾಂಪ್ರದಾಯಿಕ ಹಾಗೂ ಕಾನೂನುಬದ್ಧ ಮದುವೆಗಳಲ್ಲಿ ಇಂದಿನ ಯುವಜನಾಂಗಕ್ಕೆ ನಂಬಿಕೆ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಆದರೆ, ಇಲ್ಲಿರುವುದು ನಂಬಿಕೆಯ ಪ್ರಶ್ನೆಯಲ್ಲ, ಅನುಕೂಲದ ಪ್ರಶ್ನೆ.ಜೀವನಶೈಲಿಯ ಉದಾರೀಕರಣ

ಹತ್ತಾರು ವರ್ಷಗಳ ಹಿಂದಿನ ಮಾತು. ಆಗ ಹುಡುಗ ಹುಡುಗಿಯರು ಭೇಟಿಯಾಗುವುದು, ಒಡನಾಟುವುದು ಈಗಿನಷ್ಟು ಸರಳವಾಗಿರಲಿಲ್ಲ. ನೆಂಟರಿಷ್ಟರ ಮದುವೆಗಳು, ಶಾಲಾ ಕಾಲೇಜು ವಾರ್ಷಿಕೋತ್ಸವಗಳು ಹುಡುಗ ಹುಡುಗಿಯರ ಒಡನಾಟಕ್ಕೆ ವೇದಿಕೆಗಳಾಗುತ್ತಿದ್ದವು. ಹಾಗಾಗಿ `ಲಿವ್-ಇನ್' ರೀತಿಯ ಸಂಬಂಧಗಳಿಗೆ ಆಗ ಅವಕಾಶಗಳು ತೀರಾ ಕಡಿಮೆ ಇದ್ದವು. ಆದರೆ ಇಂದಿನ ಹುಡುಗ ಹುಡುಗಿಯರ ಭೇಟಿಗೆ ಸಾಕಷ್ಟು ವೇದಿಕೆಗಳಿವೆ. ಶಾಲೆ, ಕಾಲೇಜು, ಮನೆಪಾಠ, ಹೋಟೆಲ್, ಸಿನಿಮಾ, ಪಬ್, ಡಿಸ್ಕೋಥೆಕ್, ಫೋನ್, ಅಂತರಜಾಲದ ಸಾಮಾಜಿಕ ತಾಣಗಳು... ಹೀಗೆ ಹಲವು ಸಂಪರ್ಕಗಳಿವೆ.ವೃತ್ತಿ ಜೀವನದಲ್ಲಿ `ಸೆಟ್ಟಲ್' ಆಗಬೇಕೆಂಬ ಒಂದೇ ಗುರಿಯಿಂದಾಗಿ ಬಹಳಷ್ಟು ಮಂದಿ ತಡವಾಗಿ ಮದುವೆ ಆಗುತ್ತಿದ್ದಾರೆ. ಈ ಎಲ್ಲ ಕಾರಣಗಳೂ `ಲಿವ್-ಇನ್'ಗೆ ಪೂರಕವಾಗಿವೆ.ಹಿಂದೆ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಪ್ರೌಢಿಮೆ ಒದಗುವ ಮೊದಲೇ ಅವರ ಪೋಷಕರು ಮದುವೆ ಮಾಡುತ್ತಿದ್ದರು. ಕಿರಿಯ ವಯಸ್ಸಿನಲ್ಲೇ ಮದುವೆ, ಮಕ್ಕಳು, ಸಂಸಾರವನ್ನು ನಿಭಾಯಿಸುವ ಜವಾಬ್ದಾರಿ ಹೊರುವ ಅನಿವಾರ್ಯತೆಯಿಂದಾಗಿ `ಲಿವ್-ಇನ್' ಸಂಬಂಧಗಳು ತೀರಾ ವಿರಳವಾಗಿದ್ದವು. ಈಗ ಕಾಲ ಬದಲಾಗಿದೆ. ಮದುವೆಯ ವಯಸ್ಸೂ ಮುಂದಕ್ಕೆ ಹೋಗಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರವಷ್ಟೇ ಮದುವೆ ಆಗಲು ಯೋಚಿಸುವವರೂ ಹೆಚ್ಚುತ್ತಿದ್ದಾರೆ. ಇಂಥವರಿಗೆಲ್ಲ `ಲಿವ್-ಇನ್' ಎನ್ನುವುದು ಒಂದು ಪ್ರಯೋಗಶಾಲೆ ರೂಪದಲ್ಲಿ ಒದಗಿಬರುತ್ತದೆ.ಕಲಿಕೆ-ಗಳಿಕೆಯ ಸ್ವಾತಂತ್ರ್ಯ

ಊತ್ಸಾಹಿ ಯುವ ಜನಾಂಗಕ್ಕೆ ವಿಪುಲ ನೌಕರಿ ಅವಕಾಶಗಳಿವೆ. ಆರ್ಥಿಕವಾಗಿ ಸ್ವತಂತ್ರರು ಹಾಗೂ ಸಬಲರಾಗಿರುವ ಯುವಜನರು ಕುಟುಂಬ ಅಥವಾ ಪೋಷಕರನ್ನು ಅವಲಂಬಿಸುವುದು ತಗ್ಗಿದೆ. `ನನ್ನ ಬದುಕು ನನ್ನದು' ಎನ್ನುವ ಧೋರಣೆ ಅವರದು. ತಮ್ಮ ಖಾಸಗಿ ಜೀವನದ ಕೆಲ ನಿರ್ಧಾರಗಳನ್ನು ಕುಟುಂಬದ ಪೂರ್ವಾನುಮತಿ ಇಲ್ಲದೆ ತೆಗೆದುಕೊಳ್ಳುತ್ತಾರೆ. ಇವುಗಳಲ್ಲಿ `ಲಿವ್-ಇನ್' ಕೂಡ ಸೇರಿದೆ. ಬಹಳಷ್ಟು ಯುವಕ-ಯುವತಿಯರು ವಿದ್ಯಾಭ್ಯಾಸ, ಉದ್ಯೋಗ ಇತ್ಯಾದಿ ಕಾರಣಗಳಿಂದ ಮನೆಯಿಂದ ದೂರವಿದ್ದಾರೆ. ಕುಟುಂಬದ ನಿಯಂತ್ರಣ ರೇಖೆಯಿಂದ ಹೊರಗುಳಿದಿರುವುದು `ಲಿವ್-ಇನ್'ಗೆ ಒಂದು ಅವಕಾಶ ದೊರೆತಂತೆ.ಅದರಲ್ಲೂ ಬೆಂಗಳೂರಿನಂತಹ ಪ್ರದೇಶದಲ್ಲಿ ಕೈಗೆಟುಕದ ಬಾಡಿಗೆ ಮನೆ, ದುಬಾರಿ ಜೀವನ ಶೈಲಿ ಇತ್ಯಾದಿ ಕಾರಣಗಳು ಒಂದೇ ಮನೆಯಲ್ಲಿ ಒಟ್ಟಿಗೆ ಜೀವನ ನಡೆಸಲು ಪ್ರೇರೇಪಿಸುತ್ತವೆ. ಇದು ಕ್ರಮೇಣ `ಲಿವ್-ಇನ್' ಆಗಿ ಬದಲಾಗುತ್ತದೆ.ಹಳ್ಳಿಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಕಣ್ಗಾವಲಿನಲ್ಲೇ ಇರುತ್ತಾನೆ. ಹೀಗಾಗಿ ಹೆಚ್ಚು ಸ್ವತಂತ್ರವಾಗಿರಲು ಅಥವಾ ಮನಸ್ಸಿಗೆ ಅನ್ನಿಸಿದ್ದನ್ನು ಮಾಡುವುದು ಕಷ್ಟ. ಆದರೆ ಪಟ್ಟಣ ಪ್ರದೇಶದಲ್ಲಿ ವಾಸಿಸುವ, ಉತ್ತಮ ಪೋಷಾಕು ಧರಿಸಿ ಊರಿಗೆ ಬರುವ ಊರಿನ ಮಂದಿಯೇ ಇವರ ಪ್ರೇರಕ ಶಕ್ತಿ. ಉದ್ಯೋಗ ಅರಸಿ ಪಟ್ಟಣಕ್ಕೆ ಕಾಲಿಟ್ಟ ಇವರ ಮೇಲೆ ಯಾರ ನಿಯಂತ್ರಣವೂ ಇಲ್ಲದಿರುವುದರಿಂದ ಲಿವ್-ಇನ್‌ನಂಥ ಸಂಬಂಧ ಹೊಂದಲು ರಹದಾರಿ ಸಿಕ್ಕಂತಾಗುತ್ತದೆ.`ಲಿವ್-ಇನ್'ಗೆ ಇರುವ ಮತ್ತೂ ಒಂದು ಕಾರಣ ಅಂತರ ಧರ್ಮೀಯ ವಿವಾಹಕ್ಕೆ ಸಮಾಜದಲ್ಲಿ ಇರುವ ಅಡ್ಡಿ ಆತಂಕಗಳು. ಮರ್ಯಾದಾ ಹತ್ಯೆ, ಕುಟುಂಬದ ವಿರೋಧ, ಇತ್ಯಾದಿಗಳಿಗೆ ಅಂಜುವ ಹಲವರು `ಲಿವ್-ಇನ್'ನಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.ಜವಾಬ್ದಾರಿ ನಿಭಾಯಿಸಲಾಗದ, ಸ್ವಾತಂತ್ರ್ಯ ಬಯಸುವ ಹಾಗೂ ಬದ್ಧತೆ ಇಲ್ಲದವರು ಮಾತ್ರ `ಲಿವ್-ಇನ್' ಸಂಬಂಧದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಒಂದು ಗಂಡಿಗೊಂದು ಹೆಣ್ಣು ಹೊಂದಿಕೊಂಡು ಬಾಳುವುದಕ್ಕೆ ಮದುವೆ ಯಾಕೆ ಬೇಕು ಎನ್ನುವವರೂ ಇದ್ದಾರೆ. ಧರ್ಮ, ಕಾನೂನು ಹಾಗೂ ಸಮಾಜ ಮದುವೆಗೆ ಒದಗಿಸುವ ಭದ್ರತೆಗಳನ್ನು `ಲಿವ್-ಇನ್' ಕೂಡ ಒಳಗೊಂಡಿದೆ. ಹಾಗಾಗಿ `ಲಿವ್-ಇನ್' ಮತ್ತು ಮದುವೆ ನಡುವೆ ಹೆಚ್ಚೇನೂ ವ್ಯತ್ಯಾಸಗಳಿಲ್ಲ ಎನ್ನುವ ವಿಶ್ಲೇಷಣೆಯೂ ಇದೆ. `ಲಿವ್-ಇನ್' ಮೂಲಕ ಯುವಜನತೆಯ ಮನಸ್ಥಿತಿ ಅರ್ಥ ಮಾಡಿಕೊಳ್ಳುವ ಅಧ್ಯಯನಗಳೂ ನಡೆದಿವೆ.ಕಾನೂನು ಹೇಳುತ್ತದೆ...

ಸದ್ಯದ ಪರಿಸ್ಥಿತಿಯಲ್ಲಿ `ಲಿವ್-ಇನ್' ಸಂಬಂಧವನ್ನು ಕಾನೂನುಬದ್ಧಗೊಳಿಸುವ ಯಾವುದೇ ಕಾಯ್ದೆಗಳು ಇಲ್ಲ. ಆರ್ಟಿಕಲ್ 21ರ ಅನ್ವಯ ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಬದುಕು ನಡೆಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿದೆ. ಹೀಗಾಗಿ ವಿವಾಹ ಪೂರ್ವ ಲೈಂಗಿಕತೆ ಎನ್ನುವುದು ಸಂಪ್ರದಾಯವಾದಿ ಭಾರತೀಯ ಸಮಾಜದಲ್ಲಿ ತಪ್ಪು ಎನಿಸಿಕೊಂಡರೂ ಕಾನೂನಿನ ದೃಷ್ಟಿಯಲ್ಲಿ ಇದು ಅಪರಾಧ ಅಲ್ಲ. ಅಲಹಾಬಾದ್ ನ್ಯಾಯಾಲಯದಲ್ಲಿ ನಡೆದ ಪ್ರಕರಣವೊಂದರ ಅನ್ವಯ, ಪ್ರಾಪ್ತವಯಸ್ಸಿಗೆ ಬಂದ ಹೆಣ್ಣು ಆಕೆ ಬಯಸಿದಲ್ಲಿಗೆ ಹೋಗಬಹುದು. ಮದುವೆಯಾಗದೆ ಗಂಡು ಹೆಣ್ಣು ಒಟ್ಟಿಗೆ ಜೀವನ ನಡೆಸಬಹುದು ಎಂದೂ ನ್ಯಾಯಾಲಯ ಹೇಳಿದೆ.ವಯಸ್ಕ ಗಂಡು ಹೆಣ್ಣಿನ ನಡುವೆ ಸಾಂಪ್ರದಾಯಿಕ ಮದುವೆಯ ಬದಲು `ಲಿವ್-ಇನ್' ಸಂಬಂಧ ಇದ್ದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.`ಭಾರತೀಯ ಸಾಕ್ಷಿ ಕಾಯ್ದೆ-1872'ರ 114ನೇ ಕಲಮಿನ ಅನ್ವಯ, ವಿವಾಹ ನಡೆದಿರುವ ಬಗ್ಗೆ ಯಾವುದೇ ಸ್ವತಂತ್ರ ಸಾಕ್ಷ್ಯಾಧಾರಗಳು ಇಲ್ಲದ ಪಕ್ಷದಲ್ಲಿ, ಪತಿ-ಪತ್ನಿ ದೀರ್ಘಕಾಲದವರೆಗೆ ಒಟ್ಟಿಗೆ ಸಂಸಾರ ನಡೆಸುತ್ತಿದ್ದರೆ, ಆ ವಿವಾಹವು ಸಿಂಧುವಾಗುತ್ತದೆ. ಆದರೆ ಒಟ್ಟಿಗೆ ಬಾಳುತ್ತಿರುವ ಬಗ್ಗೆ ಸಾಬೀತುಪಡಿಸುವುದು ಅಗತ್ಯ.`ಲಿವ್ ಇನ್ ರಿಲೇಷನ್‌ಷಿಪ್'ನಂತಹ ಸಂಬಂಧಗಳಲ್ಲಿ ಗಂಡು-ಹೆಣ್ಣು ಒಟ್ಟಿಗೆ ಬಾಳಿ, ಮಗು ಹುಟ್ಟಿದರೆ ಆ ಮಗುವನ್ನು ಕೂಡ ಕಾನೂನುಬದ್ಧ ಮಗುವೆಂದೇ ಪರಿಗಣಿಸಲಾಗುವುದು. ಅಂದರೆ, ಕಾನೂನುಬದ್ಧವಾಗಿ ವಿವಾಹವಾಗಿ ಹುಟ್ಟುವ ಮಗುವಿಗೆ ಇರುವ ಅನುಕೂಲಗಳು ಇಂತಹ ಸಂದರ್ಭಗಳಲ್ಲಿ ಹುಟ್ಟುವ ಮಗುವಿಗೂ ಅನ್ವಯ ಆಗುತ್ತವೆ. ರಾಧಿಕಾ ವರ್ಸಸ್ ಸ್ಟೇಟ್ ಆಫ್ ಮಧ್ಯಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ಬಗ್ಗೆ ಉಲ್ಲೇಖಿಸಿದೆ.ಲಿವ್-ಇನ್-ರಿಲೇಷನ್‌ಷಿಪ್ ಸಂಬಂಧದಲ್ಲೂ (ಕಾನೂನುಬದ್ಧವಾಗಿ ವಿವಾಹವಾದ ಸಂಬಂಧದಲ್ಲಿ ಇರುವಂತೆ) ಜೀವನಾಂಶ ಪಡೆಯಲು ಹೆಣ್ಣು ಅರ್ಹಳು. ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಕಾನೂನುಬದ್ಧವಾಗಿ ವಿವಾಹವಾದ ಮಹಿಳೆ ದೂರು ದಾಖಲಿಸುವಂತೆ, `ಲಿವ್-ಇನ್' ಸಂಬಂಧದಲ್ಲಿ ಇರುವ ಮಹಿಳೆಯೂ ದಾಖಲಿಸಬಹುದು. ತನ್ನ ಮೇಲೆ ತನ್ನ ಜೊತೆಗಾರನಿಂದ ಹಲ್ಲೆಯಾದರೆ ಆಕೆ ಕೌಟುಂಬಿಕ ದೌರ್ಜನ್ಯದ ಅಡಿಯಲ್ಲಿ ದೂರು ದಾಖಲಿಸಬಹುದು.`ಲಿವ್-ಇನ್' ಸಂಬಂಧದಲ್ಲಿದ್ದು ಕೆಲ ಸಮಯದ ನಂತರ ಪರಸ್ಪರ ಒಪ್ಪಿಗೆ ಇಲ್ಲದೆ ಗಂಡು ಸಂಬಂಧದಿಂದ ಬೇರ್ಪಟ್ಟರೆ ಹೆಣ್ಣು ದೂರು ನೀಡಿದ ಉದಾಹರಣೆಗಳು ಇವೆ. ಬೆಂಗಳೂರಿನ ಜೋಡಿಯೊಂದು ಇಂಥ ಸಂದರ್ಭ ಎದುರಿಸಿದಾಗ ಪೊಲೀಸರು ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ವಂಚನೆ, 376ರ ಅಡಿಯಲ್ಲಿ ಬಲಾತ್ಕಾರದ ಪ್ರಕರಣ ದಾಖಲಿಸಿದ್ದಾರೆ.ಒಟ್ಟಾರೆಯಾಗಿ ಮಹಿಳೆಯೊಬ್ಬಳು ಪುರುಷನೊಂದಿಗೆ ಎಲ್ಲಿಯವರೆಗೆ ಲಿವ್-ಇನ್ ಸಂಬಂಧದಲ್ಲಿರುತ್ತಾಳೋ ಅಲ್ಲಿಯವರೆಗೆ ಆಕೆಗೆ ಪತ್ನಿಯ ಹಕ್ಕು ಬಾಧ್ಯತೆಗಳು ದಕ್ಕಬೇಕೆಂಬ ಹೊಸ ಸಲಹೆಯೊಂದು ಸರ್ಕಾರದ ಮುಂದಿದೆ. ಇದಕ್ಕಾಗಿ ರಚಿತವಾದ ಸಮಿತಿ ಸಲಹೆಯ ಪ್ರಕಾರ ಸಿಆರ್‌ಪಿಸಿ ಸೆಕ್ಷನ್ 125ರ ಅನ್ವಯ ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಗೆ ಮಡದಿಯ ಸ್ಥಾನಮಾನ ನೀಡುವ ಕುರಿತು ಶಿಫಾರಸ್ಸು ಮಾಡಿದೆ.       

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.