ಶನಿವಾರ, ಜೂಲೈ 4, 2020
22 °C

ಲೀಗ್ ಹಂತದ ತಳಮಳ...!

ಪ್ರಮೋದ ಜಿ.ಕೆ Updated:

ಅಕ್ಷರ ಗಾತ್ರ : | |

ಲೀಗ್ ಹಂತದ ತಳಮಳ...!

ಪ್ರತಿ ವಿಶ್ವ ಕಪ್‌ನಲ್ಲಿ ಒಂದಿಷ್ಟು ತಳಮಳ, ಸಂಕಟ, ಸಂಭ್ರಮ ಹಾಗೂ ಕುತೂಹಲಗಳು ಇದ್ದೇ ಇರುತ್ತವೆ. ಈ ಸಲದ ವಿಶ್ವಕಪ್‌ನ ಲೀಗ್ ಪಂದ್ಯಗಳಲ್ಲಿ ಬಂದ ಕೆಲ ಫಲಿತಾಂಶಗಳು ಅಚ್ಚರಿಗೆ ಕಾರಣವಾಗಿವೆ, ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಹೀಗೂ ಸಾಧ್ಯವಾ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.ಅದರಲ್ಲೂ ವಿಶೇಷವಾಗಿ ‘ಬಿ’ ಗುಂಪಿನಲ್ಲಿ ಬಂದಿರುವ ರೋಚಕ ಫಲಿತಾಂಶಗಳು ಕ್ರಿಕೆಟ್ ಅಭಿಮಾನಿಗಳ ಹಾಗೂ ಆಟಗಾರರ ನಿದ್ದೆಗೆಡಿಸಿವೆ. ವಿಶ್ವಕಪ್ ಆರಂಭಿಕ ಪಂದ್ಯದಲ್ಲಿಯೇ ಬಾಂಗ್ಲಾದೇಶ ಭಾರತ ವಿರುದ್ಧ ಉತ್ತಮ ಮೊತ್ತವನ್ನೇ ಗಳಿಸಿತು. ಅದು ಇನ್ನೂ ಚೆನ್ನಾಗಿ ಆಡಿದ್ದರೆ 2007ರ ವಿಶ್ವಕಪ್‌ನಲ್ಲಿ ನೀಡಿದ್ದ ‘ಶಾಕ್’ ಮತ್ತೆ ಈ ಸಲವು ನೀಡಬಹುದಿತ್ತು. ಆದರೆ ಭಾರತ ಕೊಂಚದರಲ್ಲಿಯೇ ಪಾರಾಯಿತು.‘ಎ’ ಗುಂಪಿನಲ್ಲಿ ನ್ಯೂಜಿಲೆಂಡ್ ಹಾಗೂ ಕೀನ್ಯಾ ನಡುವಣ ಪಂದ್ಯವೂ ಕೂಡಾ ಅಚ್ಚರಿಗೆ ಕಾರಣವಾಯಿತು. 2003ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಕೀನ್ಯಾ ತನ್ನ ಮೊದಲ ಪಂದ್ಯದಲ್ಲಿ ಕೇವಲ 69 ರನ್‌ಗಳಿಗೆ ಕುಸಿಯಿತು. ಕೆನಡಾ ಕೂಡಾ 2003ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 36 ರನ್‌ಗಳಿಗೆ ಶರಣಾಗಿತ್ತು. ಇದು ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಯಿತು. 1979ರ ವಿಶ್ವಕಪ್‌ನಲ್ಲಿ ಕೂಡಾ ಕೆನಡಾ ಕೇವಲ 45 ರನ್‌ಗಳಿಗೂ ಕುಸಿತ ಕಂಡಿತ್ತು.‘ಬಿ’ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ನಡುವಣ ಪಂದ್ಯ ಅತ್ಯಂತ ರೋಚಕತೆ ಹಾಗೂ ಕುತೂಹಲ ಮೂಡಿಸಿತ್ತು. ಆರಂಭದಲ್ಲಿ ದುರ್ಬಲ ಐರ್ಲೆಂಡ್‌ಗೆ ಸೋಲು ಖಚಿತ ಎಂದು ಸಹಜವಾಗಿಯೇ ಎಂದುಕೊಂಡಿದ್ದ ಕ್ರಿಕೆಟ್ ಪಂಡಿತರ ಲೆಕ್ಕ ಸುಳ್ಳಾಯಿತು. ಐಸಿಸಿ ರ್ಯಾಂಕಿಂಗ್‌ನ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ವಿರುದ್ಧದ ಪಂದ್ಯವನ್ನು ‘ಟೈ’ ಮಾಡಿಕೊಂಡ ಕ್ರಿಕೆಟ್ ಜನಕರ ನಾಡಿನ ಆ್ಯಂಡ್ರ್ಯೂ ಸ್ಟ್ರಾಸ್ ಬಳಗ ಸುಲಭವಾಗಿ ಐರ್ಲೆಂಡ್ ಪಡೆಯನ್ನು ಮಟ್ಟ ಹಾಕುತ್ತದೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಕೆವಿನ್ ಒಬ್ರಿಯನ್ ಇಂಗ್ಲೆಂಡ್ ಪಡೆಯ ಕನಸನ್ನು ನುಚ್ಚು ನೂರು ಮಾಡಿದರು. ಅಷ್ಟೇ ಅಲ್ಲ ಕೇವಲ 50 ಎಸೆತೆಗಳಲ್ಲಿ ಭರ್ಜರಿ ಶತಕ ಗಳಿಸಿ ದಾಖಲೆಯನ್ನು ಬರೆದರು. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 327 ರನ್‌ಗಳ ಸವಾಲಿನ ಮೊತ್ತವನ್ನು ಒಡ್ಡಿದಾಗಲೆ ಐರ್ಲೆಂಡ್‌ಗೆ ಸೋಲು ಎಂದು ಬಹುತೇಕರು ಕ್ರೀಡಾಂಗಣದಿಂದ ಜಾಗ ಖಾಲಿ ಮಾಡಿದ್ದರು. ಒಂದು ಹಂತದಲ್ಲಿ ಐರ್ಲೆಂಡ್‌ಗೆ ಸೋಲಿನ ಭೀತಿಯೂ ಆವರಿಸಿತ್ತು. ಯಾವಾಗ ಕೆವಿನ್ ಬ್ಯಾಟಿಂಗ್ ‘ಮೋಡಿ’ ಮಾಡಿದರೋ ಪಂದ್ಯದ ದಿಕ್ಕು ಬದಲಾಯಿತು. ಇಂಗ್ಲೆಂಡ್ ಬೌಲರ್‌ಗಳ ಬೆವರು ಸುರಿಸುವಂತೆ ಮಾಡಿದ ಕೆವಿನ್ ನೆರವಿನಿಂದ ಐರ್ಲೆಂಡ್ ಆಟಗಾರರು ರಾತ್ರೋ ರಾತ್ರಿ ‘ಹೀರೋ’ಗಳಾಗಿ ಮೆರೆದರು. ದೂರದ ತಮ್ಮ ದೇಶದಿಂದ ಅಭಿಮಾನವಿಟ್ಟು ಉದ್ಯಾನ ನಗರಕ್ಕೆ ಆಗಮಿಸಿದ್ದ ಕ್ರೀಡಾ ಪ್ರೇಮಿಗಳ ಆಸೆಗೆ ನಿರಾಸೆಯಂತೂ ಮಾಡಲಿಲ್ಲ.ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಹೆಚ್ಚು ಸವಾಲು ಎದುರಾಗಿದ್ದು ಇಂಗ್ಲೆಂಡ್ ತಂಡಕ್ಕೆ. ಹಾಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲರ್‌ಗಳ ಬೆವರಿಳಿಸಿ 292 ರನ್‌ಗಳನ್ನು ಪೇರಿಸಿ ಅಗ್ರ ಸವಾಲನ್ನು ಒಡ್ಡಿದ್ದು ಸ್ಟ್ರಾಸ್ ಪಡೆಗೆ ಆರಂಭಿಕ ನಡುಕ ಉಂಟು ಮಾಡಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತು ನಿಜ. ಆದರೆ ‘ಕಷ್ಟಪಟ್ಟು’ ಗೆಲ್ಲಬೇಕಾದ ಅನಿವಾರ್ಯತೆ ಎದುರಾಯಿತು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಕೇವಲ 58 ರನ್‌ಗಳಿಗೆ ಆಲ್ ಔಟ್ ಆಯಿತು. ಇದು ಈ ಸಲದ (ಶುಕ್ರವಾರದಂತ್ಯಕ್ಕೆ) ವಿಶ್ವಕಪ್‌ನಲ್ಲಿ ದಾಖಲಾದ ಅತಿ ಕಡಿಮೆ ಒಟ್ಟು ಮೊತ್ತವು ಆಯಿತು.

ವೆಸ್ಟ್‌ಇಂಡೀಸ್‌ನ ಸುಲೆಮಾನ್ ಬೆನ್ ನಾಲ್ಕು ವಿಕೆಟ್ ಪಡೆದರೆ, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಪಾಕಿಸ್ತಾನ ಶಾಹಿದ್ ಅಫ್ರಿದಿ ಕೂಡಾ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಾಡುತ್ತಿದ್ದಾರೆ.ಲೀಗ್ ಹಂತದ ಇನ್ನೂ ಕೆಲ ಪಂದ್ಯಗಳು ಬಾಕಿಯಿವೆ. ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಪಂದ್ಯಗಳ ಸವಿ ಅನುಭವಿಸಲು ಮುಂದೆ ಅವಕಾಶವಿದೆ. ಅಲ್ಲಿಯೂ ಸಹ ರೋಚಕ, ಕುತೂಹಲಗಳ ಹೂರಣವೂ ಇದೆ. ಸವಿಯುವ ಸಂಭ್ರಮ ಕ್ರಿಕೆಟ್ ಪ್ರೇಮಿಗಳದ್ದಾಗಬೇಕು ಅಷ್ಟೇ!.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.