ಶನಿವಾರ, ಫೆಬ್ರವರಿ 27, 2021
25 °C

ಲೊಳಲೊಟ್ಟೆ! (ಚಿತ್ರ: ಧನ್ ಧನಾ ಧನ್)

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಲೊಳಲೊಟ್ಟೆ! (ಚಿತ್ರ: ಧನ್ ಧನಾ ಧನ್)

ಹಾಸ್ಯಚಿತ್ರಗಳ ಇತ್ತೀಚಿನ ಚರಿತ್ರೆಯನ್ನು ಪ್ರಸ್ತಾಪ ಮಾಡಿದರೆ ಬಾಲಿವುಡ್‌ನ ಡೇವಿಡ್ ಧವನ್ ಅವರ ಹೆಸರನ್ನು ಬಿಡಲು ಸಾಧ್ಯವಿಲ್ಲ. ಅತಿ ಬಾಲಿಶ ಎನ್ನಿಸುವ ವಸ್ತುಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅವರು ಭರ್ಜರಿ ವ್ಯಾಪಾರ ಮಾಡಿರುವ ಅನೇಕ ಉದಾಹರಣೆಗಳಿವೆ.ಆದರೆ, ಈಗ ಅವರೂ ಬಾಲಿವುಡ್‌ನಲ್ಲಿ ಏಗಲು ಒದ್ದಾಡುತ್ತಿರುವುದು ಸತ್ಯ. ಇಂಥ ಡೇವಿಡ್ ಧವನ್ ಒಂಬತ್ತು ವರ್ಷದ ಹಿಂದೆ ನಿರ್ದೇಶಿಸಿದ್ದ `ಹಮ್ ಕಿಸೀಸೆ ಕಮ್ ನಹೀ~ ಚಿತ್ರವನ್ನು ರಾಮ್‌ನಾಥ್ ಋಗ್ವೇದಿ ಈಗ ತೆರೆಗೆ ತಂದಿರುವುದೇ ಅಚ್ಚರಿಯ ನಿರ್ಧಾರ.

ಮೊದಲಿಗೆ ಮೂಲ ಚಿತ್ರದ ಪಾತ್ರವರ್ಗವನ್ನು ನಾವು ನೆನಪಿಸಿಕೊಳ್ಳಬೇಕು:ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಅಜಯ್ ದೇವಗನ್ ಹಾಗೂ ಸಂಜಯ್ ದತ್. ಆ ಜಾಗದಲ್ಲಿ ಈ ಪಾತ್ರವರ್ಗವನ್ನು ಜೋಡಿಸಿಕೊಳ್ಳಬೇಕು: ರವಿಶಂಕರ್ (ಸಿಲ್ಲಿ ಲಲ್ಲಿ), ಶರ್ಮಿಳಾ ಮಾಂಡ್ರೆ, ಪ್ರೇಮ್ ಹಾಗೂ ಆದಿ ಲೋಕೇಶ್. ಚಿತ್ರದ ಗುಣಮಟ್ಟದ ಹೋಲಿಕೆಯ ಮಾತು ಹಾಗಿರಲಿ, ತಾರಾಬಳಗದ ಈ ಹೋಲಿಕೆಯೇ ತಮಾಷೆಯಾಗಿ ಕಾಣುತ್ತದಲ್ಲವೇ?`ಅತಾರ್ಕಿಕ ಹಾಸ್ಯಚಿತ್ರ~ (ಬ್ರೇನ್‌ಲೆಸ್ ಕಾಮಿಡಿ) ಪ್ರಕಾರವು ತೊಂಬತ್ತರ ದಶಕದಲ್ಲಿ ಗಳಿಸಿದ ಯಶಸ್ಸು ಅಷ್ಟಿಷ್ಟಲ್ಲ. ಅದರ ಪ್ರೇರಣೆಯಿಂದಲೇ ಕನ್ನಡದ ಅನೇಕ ಹಾಸ್ಯ ಧಾರಾವಾಹಿಗಳೂ ಮೂಡಿರುವ ಸಾಧ್ಯತೆ ಇದೆ. ಅಂಥ ಧಾರವಾಹಿಗಳಲ್ಲಿ `ಸಿಲ್ಲಿ ಲಲ್ಲಿ~ ಕೂಡ ಒಂದು.ಡಾ.ವಿಠಲ್ ರಾವ್ ಪಾತ್ರದಲ್ಲಿ ರವಿಶಂಕರ್ ಅದರಲ್ಲಿ ಗಮನ ಸೆಳೆದಿದ್ದರು. ಅಲ್ಲಿ ವೈದ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ ಕಾರಣಕ್ಕೋ ಏನೋ `ಧನ್ ಧನಾ ಧನ್~ನಲ್ಲೂ ಅವರಿಗೆ ವೈದ್ಯನ ಪಾತ್ರವನ್ನೇ ನೀಡಲಾಗಿದೆ. ಆದರೆ, ಧಾರಾವಾಹಿಯ ಹ್ಯಾಂಗೋವರ್‌ನಲ್ಲೇ ಅವರ ಭಾವಾಭಿನಯ ಹೊಮ್ಮಿರುವುದು ಚಿತ್ರದಲ್ಲಿ ಎದ್ದುಕಾಣುವ ಕೊರತೆ.ಬೇರೆ ಭಾಷೆಯಲ್ಲಿ ಅನೇಕ ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾದ ಚಿತ್ರ ಈಗಲೂ ಗೆದ್ದೀತು ಎಂಬ ನಿರ್ದೇಶಕರ ಭ್ರಮೆಗೆ `ಧನ್ ಧನಾ ಧನ್~ ಒಳ್ಳೆಯ ಉದಾಹರಣೆ. ಕೆಲಸವಿಲ್ಲದೆ ಮೈಕೈ ಹುರಿ ಮಾಡಿದ ನಾಯಕ ನಾಯಕಿಯ ಹಿಂದೆ ಸುತ್ತುತ್ತಾ, ಆಕೆಯ ಅಣ್ಣನ ಕಣ್ಣಿಗೆ ಮಣ್ಣೆರಚುತ್ತಾ ಪ್ರೀತಿಸುವ ಪರಿ ಚಿತ್ರದಲ್ಲಿ ತುಂಬಾ ಕೃತಕವಾಗಿ ಮೂಡಿದೆ.ಸಂಜಯ್ ದತ್ ನಿರ್ವಹಿಸಿರುವ ಪಾತ್ರದಲ್ಲಿ ಪೀಚಲಾಗಿರುವ, ಕಣ್ಗಳಲ್ಲಿ ಕಾಂತಿಯೇ ಇಲ್ಲದ ಆದಿ ಲೋಕೇಶ್ ಅವರನ್ನು ನೋಡುವುದು ಕೂಡ ಕಷ್ಟವೇ ಸರಿ. ಅಭಿನಯದ ವಿಷಯದಲ್ಲಿ ಪ್ರೇಮ್ ಅವರೇ ವಾಸಿ. ನಾಯಕಿ ಶರ್ಮಿಳಾ ಅಭಿನಯ ಅವರ ನಗುವಿನಷ್ಟೇನೂ ಚೆನ್ನಾಗಿಲ್ಲ.ಬಗೆಬಗೆಯ ಹಾಸ್ಯ ಧಾರಾವಾಹಿಗಳ ಕೆಲವು ಕಂತುಗಳ ಕಲಸುಮೇಲೋಗರದಂತೆ ಕಾಣುವ `ಧನ್ ಧನಾ ಧನ್~ ತಾಂತ್ರಿಕವಾಗಿ ಕೂಡ ಸೊರಗಿದೆ. ಇದ್ದಕ್ಕಿದ್ದಂತೆ ದೃಶ್ಯಗಳ ಬಣ್ಣ ಬದಲಾಗುವುದರ ಮರ್ಮ ಏನೆಂಬುದು (ಛಾಯಾಗ್ರಾಹಕ: ಮೋಹನ್) ಅರ್ಥವಾಗುವುದಿಲ್ಲ. ಸಾಯಿ ಕಾರ್ತೀಕ್ ಸಂಗೀತಕ್ಕೂ ಕಾಡುವ ಗುಣವಿಲ್ಲ.ಆತುರದಲ್ಲಿ ಮಾಡಿದ ದುರ್ಬಲ ಅನುಕರಣೆಯಂತೆ ಕಾಣುವ `ಧನ್ ಧನಾ ಧನ್~, ಕಳೆದ ವಾರವಷ್ಟೇ ಬಿಡುಗಡೆಯಾದ ಇದೇ ನಾಯಕನಟನ ಒಳ್ಳೆಯ ಚಿತ್ರವೆಂಬ (ಐ ಯಮ್ ಸಾರಿ ಮತ್ತೆ ಪ್ರೀತ್ಸೋಣ) ಮೊಸರಿಗೆ ಹಾಕಿದ ಕಲ್ಲಿನಂತೆ ಕಾಣುತ್ತದೆ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.