ಬುಧವಾರ, ಮೇ 18, 2022
28 °C

ಲೋಕಪಾಲಕ್ಕೆ ಸಂವಿಧಾನಬದ್ಧ ಸ್ಥಾನಮಾನ: ಪ್ರಕ್ರಿಯೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ):  ಲೋಕಪಾಲಕ್ಕೆ ಸಂವಿಧಾನ ಬದ್ಧ ಸ್ಥಾನಮಾನ ನೀಡಲು ಅಗತ್ಯವಾದ ಕರಡು ಶಾಸನ ರಚನೆಗೆ ಮುಂದಾಗಿರುವ ಸಂಸದೀಯ ಸಮಿತಿ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಸಲ್ಲಿಸಿರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿದೆ.   ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಜೆ.ಎಸ್. ವರ್ಮಾ ಮತ್ತು ಎಂ.ಎನ್. ವೆಂಕಟಾಚಲಯ್ಯ ಅವರನ್ನು ಒಳಗೊಂಡ ದ್ವಿಸದಸ್ಯ ಸಮಿತಿ ಕಳೆದ ವಾರ ಸಂವಿಧಾನ ತಿದ್ದುಪಡಿ ಮಸೂದೆ (116ನೇ ತಿದ್ದುಪಡಿ) ಕರಡನ್ನು ಸಂಸದೀಯ ಸ್ಥಾಯಿ ಸಮಿತಿ (ಕಾನೂನು, ನ್ಯಾಯಾಂಗ ಮತ್ತು ಸಿಬ್ಬಂದಿ)ಗೆ ಸಲ್ಲಿಸಿದೆ.ರಾಜ್ಯ ಸರ್ಕಾರಗಳ ಅನುಮೋದನೆ ಪಡೆಯದೆ ಲೋಕಪಾಲಕ್ಕೆ ಸಂವಿಧಾನ ಬದ್ಧ ಸ್ಥಾನಮಾನ ನೀಡುವ ಅಧಿಕಾರವನ್ನು ಈ ಶಾಸನ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿಗೆ ಮುಂದಾಗಿದೆ.ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಕಳೆದ ವಾರವೇ ಈ ಕುರಿತು ಸುಳಿವು ನೀಡಿದ್ದರು. `ಪ್ರಬಲ ಲೋಕಪಾಲ ಮಸೂದೆಗಾಗಿ ನಾವು ಸಿದ್ಧತೆ ನಡೆಸ್ದ್ದಿದು, ಇದಕ್ಕೆ ಅಗತ್ಯವಿರುವ ಸಂವಿಧಾನ ತಿದ್ದುಪಡಿ ಕರಡು ಕೂಡ ಸಿದ್ಧವಾಗಿದೆ. ತಿದ್ದುಪಡಿಯ ನಂತರ ಲೋಕಪಾಲಕ್ಕೆ ಸಂವಿಧಾನಬದ್ಧ ಸ್ಥಾನಮಾನ ದೊರೆಯಲಿದೆ.ಲೋಕಪಾಲ ಸಂಸ್ಥೆ ಚುನಾವಣಾ ಆಯೋಗಕ್ಕಿಂತ ಬಲಾಢ್ಯ ಸಂಸ್ಥೆಯಾಗಿ ಹೊರಹೊಮ್ಮಲಿದೆ~ ಎಂದು ಅವರು ಹೇಳಿದ್ದಾರೆ. ಮೂರನೇ ಎರಡರಷ್ಟು ಬಹುಮತ ಪಡೆದರೆ ಸಂಸತ್ ಚಳಿಗಾಲ ಅಧಿವೇಶನದ ಮೊದಲ ದಿನವೇ ತಿದ್ದುಪಡಿ ಮಸೂದೆ ಅಂಗೀಕರಿಸಬಹುದು ಎಂದು ನ್ಯಾಯಮೂರ್ತಿ ವರ್ಮಾ ಅವರು ಹೇಳಿದ್ದಾರೆ.ಸಂವಿಧಾನದ ಪರಿಚ್ಛೇದ 368ರ ಪ್ರಕಾರ ತಿದ್ದುಪಡಿಗೆ ಅರ್ಧಕ್ಕಿಂತ ಹೆಚ್ಚು ರಾಜ್ಯಗಳ ಅನುಮೋದನೆ ಅಗತ್ಯ. ಆದರೆ, ಮಸೂದೆ ಜಾರಿಯಾದರೆ ಆ ಅಗತ್ಯ ಬರುವುದಿಲ್ಲ ಎಂದಿದ್ದಾರೆ.ಉದ್ದೇಶಿತ ತಿದ್ದುಪಡಿ ಭಾಗ 15(ಎ) ಮತ್ತು 329, 329ಸಿ, 329 ಡಿ ಕಲಂ ಸೇರ್ಪಡೆಗೆ ಸಂಬಂಧಿಸಿದೆ. 329ಸಿ ಕಲಂ ಲೋಕಪಾಲ ಮತ್ತು 329(ಡಿ) ಪ್ರತಿ ರಾಜ್ಯದಲ್ಲೂ ಲೋಕಾಯುಕ್ತ ಸಂಸ್ಥೆಗಳ ಸ್ಥಾಪನೆ ಕುರಿತಾಗಿದೆ. ಶಾಸನಸಭೆಗಳು ಮಾತ್ರ ಅವುಗಳಿಗೆ ಸೂಕ್ತ ಹಾಗೂ ಹೆಚ್ಚಿನ ಅಧಿಕಾರ ನೀಡಬಹುದಾಗಿದೆ ಎಂದು ವರ್ಮಾ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.