ಸೋಮವಾರ, ಮೇ 16, 2022
28 °C

ಲೋಕಪಾಲ್ ಮಸೂದೆ: ಏ 5 ಹಜಾರೆ ಉಪವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಸಿಕ್, (ಪಿಟಿಐ): ಭ್ರಷ್ಟಾಚಾರ ತಡೆಗೆ ಲೋಕಪಾಲ ಮಸೂದೆ ಮಂಡಿಸುವಂತೆ ಆಗ್ರಹಿಸಲು ಸಮಾಜ ಸುಧಾರಣೆಯ ಪಣ ತೊಟ್ಟಿರುವ ಚಳುವಳಿಗಾರ ಅಣ್ಣಾ ಹಜಾರೆ ಅವರು, ಏಪ್ರಿಲ್ 5 ರಂದು ದೆಹಲಿಯಲ್ಲಿ  ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಉಲ್ಬಣಗೊಳ್ಳುತ್ತಿರುವ ಭ್ರಷ್ಟಚಾರ ಪಿಡುಗು ಮತ್ತು ಹೆಚ್ಚುತ್ತಿರುವ ಹಿಂಸಾಚಾರಗಳನ್ನು ಪ್ರತಿಭಟಿಸಿ ಏಪ್ರಿಲ್ 12 ರಂದು ತಾವು ಆಯೋಜಿಸಿರುವ ಜೈಲ್ ಭರೋ ಚಳುವಳಿಯಲ್ಲಿ ಜನ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ಅವರೊಂದಿಗಿನ ತಮ್ಮ ಭೇಟಿ ಫಲಪ್ರದವಾದಂತಿಲ್ಲ. ಪ್ರಸಕ್ತ ಲೋಕಸಭೆಯ ಅಧಿವೇಶನದಲ್ಲಿ ಏ 4 ರೊಳಗೆ ಲೋಕಪಾಲ್ ಮಸೂದೆ ಮಂಡನೆಯಾಗದಿದ್ದರೆ ತಾವು  ದೆಹಲಿಯಲ್ಲಿ ಏ 5 ರಿಂದ ಉಪವಾಸ ಸತ್ಯಾಗ್ರಹ ಕೂರುವುದು ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಇಲ್ಲಿನ ಕಾಳಿದಾಸ ಸಭಾಭವನದಲ್ಲಿ  ಸೋಮವಾರ ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಯುವಕರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟಿದ್ದಾರೆ. ಭ್ರಷ್ಚಾಚಾರ ವಿರೋಧಿ ಚಳುವಳಿ ಹುಟ್ಟುಹಾಕಿರುವ ಅವರು, ಮಹಾತ್ಮಾ ಗಾಂಧಿ ಅವರ ಶಾಂತಿಯುತ ಪ್ರತಿಭಟನಾ ಮಾರ್ಗದಿಂದ ಈ ಹೋರಾಟದಲ್ಲಿ ನಮಗೆ ನಿರೀಕ್ಷಿತ ಯಶಸ್ಸು ಸಿಗದು, ಆದ್ದರಿಂದ  ನಾವು ಮರಾಠರ ಅರಸ ಶಿವಾಜಿ ಅವರ ಮಾರ್ಗವನ್ನು ಅನುಸರಿಸಬೇಕು ಎಂದಿದ್ದಾರೆ.

ತಮ್ಮ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ~ಎರಡನೇ ಸ್ವಾತಂತ್ರ್ಯದ ಹೋರಾಟ~ ಎಂದು ಅವರು ಬಣ್ಣಿಸಿರುವ ಅವರು, ಜನರು ಲೋಕಪಾಲ್ ಮಸೂದೆ ಅಂಗಿಕರಿಸುವಂತೆ ಒತ್ತಾಯಿಸಲು ತಮ್ಮ ಪ್ರದೇಶದ ಗ್ರಾಮ ಪಂಚಾಯ್ತಿ, ತಹಶೀಲ್ದಾರರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳೆದುರು ಉಪವಾಸ ಸತ್ಯಾಗ್ರಹ  ನಡೆಸಬೇಕೆಂದು ಜನತೆಯನ್ನು ಕೋರಿಕೊಂಡಿದ್ದಾರೆ. ಲೋಕಪಾಲ್ ಮಸೂದೆಯಿಂದ ಮಾತ್ರ ಭ್ರಷ್ಟಾಚಾರ ಮತ್ತು   ಗುಂಡಾಗಿರಿಗಳನ್ನು  ದಮನಮಾಡುವುದು ಸಾಧ್ಯವೆಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.