ಶನಿವಾರ, ಮೇ 21, 2022
26 °C

ಲೋಕಪಾಲ ವ್ಯಾಪ್ತಿಯಡಿ ಸಿಬಿಐಕಾರ್ಯಸಾಧುವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಸಿಬಿಐ ಅನ್ನು ಲೋಕಪಾಲ ವ್ಯಾಪ್ತಿಯಡಿ ತರುವುದು ಕಾರ್ಯಸಾಧುವಲ್ಲ ಎಂದು ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಶುಕ್ರವಾರ ಇಲ್ಲಿ ಅಭಿಪ್ರಾಯ ಪಟ್ಟರು.`ಲೋಕಪಾಲದ ಕರಡು ಮಸೂದೆಯಲ್ಲಿ ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಲೋಕಪಾಲಕ್ಕೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಇಂತಹ ಪ್ರಸ್ತಾವ ಕಾರ್ಯಸಾಧ್ಯವಲ್ಲ ಅಥವಾ ಸಲಹೆ ನೀಡುವಂಥದ್ದೂ ಅಲ್ಲ ಎಂಬುದು ನನ್ನ ಅಭಿಪ್ರಾಯ~ ಎಂದು ಅವರು ತಿಳಿಸಿದರು.`ಭ್ರಷ್ಟಾಚಾರದ ವಿರುದ್ಧ ಹೋರಾಡುವ ವ್ಯವಸ್ಥೆಯನ್ನು ಬಲಪಡಿಸುವ ಯಾವುದೇ ಪ್ರಯತ್ನದಲ್ಲಿ ಸಿಬಿಐ ಸಮಗ್ರವಾಗಿ ಇರಬೇಕು ಮತ್ತು ಸ್ವತಂತ್ರ ಘಟಕವಾಗಿ ಉಳಿಯಬೇಕು~ ಎಂಬ ಅನಿಸಿಕೆ ವ್ಯಕ್ತಪಡಿಸಿದರು.ವಿವಿಧ ರಾಜ್ಯಗಳ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಗಳು ಮತ್ತು ಸಿಬಿಐ ಮುಖ್ಯಸ್ಥರ ದೈವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಬಿಐ ಕಾರ್ಯ ನಿರ್ವಹಣೆಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂದೂ ಒತ್ತಾಯಿಸಿದರು.

 `ವಿಚಾರಣೆ ನಡೆಸಲು ಮಂಜೂರಾತಿಯಲ್ಲಿ ವಿಳಂಬ ಸೇರಿದಂತೆ ಅನೇಕ ಅಡೆತಡೆಗಳನ್ನು ಸಂಸ್ಥೆಯು ಎದುರಿಸುತ್ತಿದೆ. ನ್ಯಾಯಾಂಗ, ಸರ್ಕಾರ ಮತ್ತು ಶ್ರೀಸಾಮಾನ್ಯನ ಹೆಚ್ಚುತ್ತಿರುವ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಿಬಿಐನ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವುದು ಮತ್ತು ಕಾರ್ಯನಿರ್ವಹಣೆ ಸ್ವಾಯತ್ತತೆ ನೀಡುವುದು ಈಗಿನ ಅಗತ್ಯ~ ಎಂದರು.`ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳು ಹಲವು ರೀತಿಯ ಅಡಚಣೆಗಳನ್ನು ಎದುರಿಸುತ್ತಿವೆ. 1946ರ ಡಿಎಸ್‌ಪಿಇ ಕಾಯಿದೆಯ 6(ಎ) ಸೆಕ್ಷನ್ ಪ್ರಕಾರ, ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಉನ್ನತ ಮಟ್ಟದ ಅಧಿಕಾರಿ ನಡೆಸಿದ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸರ್ಕಾರದ ಪೂರ್ವಾನುಮತಿಯಿಲ್ಲದೆ ತನಿಖೆ ಅಥವಾ ವಿಚಾರಣೆ ನಡೆಸಲು ಸಿಬಿಐಗೆ ಅವಕಾಶ ಇಲ್ಲ~ ಎಂದು ವಿವರಿಸಿದರು.`ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾಗುವುದು ಮತ್ತೊಂದು ಮುಖ್ಯ ಅಡೆತಡೆ. ಸಿಬಿಐ ಒಂದರಲ್ಲೇ ವಿಚಾರಣೆಗೆ ಬಾಕಿ ಇರುವ 10 ಸಾವಿರ ಪ್ರಕರಣಗಳು ಇವೆ~ ಎಂದು ಹೇಳಿದರು.`ನಿತ್ಯದ ಸಾಮಾನ್ಯ ಕೆಲಸಗಳಲ್ಲಿ ಅಧಿಕಾರಶಾಹಿಯೊಂದಿಗೆ ಸಾಮಾನ್ಯ ಪ್ರಜೆ ಸಂಪರ್ಕ ಸಾಧಿಸುವುದನ್ನು ಕಡಿಮೆ ಮಾಡಿದರೆ  ಕೆಳಹಂತದಲ್ಲಿನ ಭ್ರಷ್ಟಾಚಾರ ತಡೆಯಬಹುದು. ಭ್ರಷ್ಟಾಚಾರದ ಪಿಡುಗನ್ನು ಕೇವಲ ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳ ಮೂಲಕವೇ ತಡೆಯಲು ಸಾಧ್ಯವಿಲ್ಲ. ಎಲ್ಲ ಕಡೆಗಳಿಂದಲೂ ಪ್ರಯತ್ನ ಅಗತ್ಯ~ ~ ಎಂದೂ  ಅಭಿಪ್ರಾಯ ಪಟ್ಟರು.  `ಭ್ರಷ್ಟಾಚಾರವನ್ನು ಜನರು ಸಹಿಸುವುದಿಲ್ಲ. ಈ ಪ್ರವೃತ್ತಿ ಹೆಚ್ಚುತ್ತಿದೆ. ಸಮಾಜದಲ್ಲಿನ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕಾರ್ಯತಂತ್ರ ರೂಪಿಸಲು ಇದು ಸದವಕಾಶ~ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.