ಭಾನುವಾರ, ಜೂನ್ 20, 2021
30 °C
ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ

ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಮಾದರಿ ನೀತಿ ಸಂಹಿತೆ ಚಾಚೂ ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಎಸ್‌.ಶೇಖರಪ್ಪ ತಿಳಿಸಿದರು.ನಗರದಲ್ಲಿ ಬುಧವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಮಾರ್ಚ್‌ 19ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 26ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ. 27ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಮಾ.29 ಕೊನೆ ದಿನ. ಮತದಾನ ಏ.17ರಂದು ನಡೆಯಲಿದ್ದು, ಮೇ 16ರಂದು ಮತ ಎಣಿಕೆ ನಡೆಯಲಿದೆ. ಮೇ 28ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬುಧವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಮೇ 28ರವರೆಗೂ ನೀತಿ ಸಂಹಿತೆ ಪಾಲಿಸಬೇಕು ಎಂದು ತಿಳಿಸಿದರು.ಯಾವುದೇ ರಾಜಕೀಯ ಪಕ್ಷಗಳು ಅನುಮತಿ ಪಡೆಯದೆ ಸಭೆ, ಸಮಾರಂಭಗಳನ್ನು ನಡೆಸು­ವಂತಿಲ್ಲ. ಯಾವುದೇ ಹೊಸ ಯೋಜನೆ ಮತ್ತು ಭರವಸೆಗಳನ್ನು ಪ್ರಕಟಿಸುವಂತಿಲ್ಲ. ಹೊಸ ಟೆಂಡರ್‌ ಮತ್ತು ಫಲಾನುಭವಿಗಳ ಆಯ್ಕೆಯನ್ನು ಮುಂದೂಡಲಾಗಿದೆ. ಚುನಾಯಿತ ಪ್ರತಿನಿಧಿಗಳು ಸರ್ಕಾರಿ ವಾಹನಗಳನ್ನು ಬಳಸುವಂತಿಲ್ಲ. ಪ್ರವಾಸಿ ಮಂದಿರ, ಅತಿಥಿಗೃಹಗಳನ್ನು ತಕ್ಷಣ­ದಿಂದಲೇ ಸುಪರ್ದಿಗೆ ತೆಗೆದು­ಕೊಳ್ಳಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಸಭೆ, ಸಮಾರಂಭಗಳಲ್ಲಿ ಮುಖಂಡರು ಭಾಗವಹಿಸಬಾರದು ಎಂದರು.ಹೊಸ ಕಾಮಗಾರಿಗಳನ್ನು ಕೈಗೆತ್ತಿ­ಕೊಳ್ಳು­ವಂತಿಲ್ಲ. ಆದರೆ, ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ನೀತಿ ಸಂಹಿತೆ ಅಡ್ಡಿ­ಯಾಗುವುದಿಲ್ಲ. ಹೊಸ ಮತದಾರರ ಸೇರ್ಪಡೆ ನೋಂದಣಿ ಇದೇ 16ರವರೆಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳಲ್ಲಿ 1168 ಮತಗಟ್ಟೆ (ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ 932)ಗಳನ್ನು ಸ್ಥಾಪಿಸಲಾಗುತ್ತಿದ್ದು, 422 ಸೂಕ್ಷ್ಮ ಮತಗಟ್ಟೆ ಮತ್ತು 237 ಅತಿಸೂಕ್ಷ್ಮ ಮತಗಟ್ಟೆ ಹಾಗೂ 52 ನಕ್ಸಲ್‌ಬಾಧಿತ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಜಿಲ್ಲೆಯಲ್ಲಿ 424858 ಪುರುಷರು ಮತ್ತು 414004 ಮಹಿಳೆಯರು ಸೇರಿದಂತೆ 8,38,894 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಿಗೆರೆ ಜಿ.ಜೆ.ಸಿ. ಕಾಲೇಜು, ಚಿಕ್ಕಮಗಳೂರು ಎಸ್‌ಟಿಜೆ ಕಾಲೇಜು, ತರೀಕೆರೆ ಎಸ್‌ಜೆಎಂ ಕಾಲೇಜು, ಕಡೂರು ಜಿ.ಜೆ.ಸಿ.ಕಾಲೇಜಿನಲ್ಲಿ ನಡೆಯಲಿದೆ. 5671 ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, 1340 ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು 1710 ಮತಪತ್ರ ಲಭ್ಯವಿವೆ. 171 ಬಸ್‌, 336 ಜೀಪು ಹಾಗೂ 10 ಮಿನಿಬಸ್‌ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕರುಣಾಕರ, ಉಪ ವಿಭಾಗಾಧಿಕಾರಿಗಳಾದ ಚನ್ನಬಸಪ್ಪ, ಅನುರಾಧಾ ಇನ್ನಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.