ಗುರುವಾರ , ಮೇ 6, 2021
23 °C

ವರದಿಗೆ ಪ್ರತಿಕ್ರಿಯಿಸದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಹೈಕೋರ್ಟ್ ನೇಮಿಸಿದ್ದ ಕರ್ನಾಟಕ ಆನೆ ಕಾರ್ಯಪಡೆ (ಕೆಇಟಿಎಫ್)ಯು ಕಳೆದ ಸೆಪ್ಟೆಂಬರ್‌ನಲ್ಲಿಯೇ ತನ್ನ ವರದಿಯನ್ನು ನೀಡಿದೆ. ಆ ವರದಿಯನ್ನು ಪರಿಶೀಲಿಸಿ ಹೈಕೋರ್ಟ್‌ಗೆ ತನ್ನ ಅಭಿಪ್ರಾಯ ತಿಳಿಸಬೇಕಿದ್ದ ರಾಜ್ಯ ಸರ್ಕಾರಕ್ಕೆ ಇದುವರೆಗೆ ಪುರುಸೊತ್ತು ಸಿಕ್ಕಿಲ್ಲ.`ಹಲವು ಇಲಾಖೆಗಳಿಂದ ಮಾಹಿತಿ ಪಡೆದು ಸರ್ಕಾರ ತನ್ನ ಅಭಿಪ್ರಾಯ ತಿಳಿಸಬೇಕಾದ ಕಾರಣ ಕಾಲಾವಕಾಶ ಕೇಳುತ್ತಿದೆ' ಎಂದು ಹೇಳುತ್ತಾರೆ ಕೆಇಟಿಎಫ್‌ನ ಅಧ್ಯಕ್ಷರೂ ಆಗಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ. ರಾಮನ್ ಸುಕುಮಾರ್ ಹೇಳುತ್ತಾರೆ.`ಆನೆಗಳ ಆವಾಸಸ್ಥಾನವನ್ನು ಸಂರಕ್ಷಿಸಬೇಕು. ಒಂದುವೇಳೆ ಆನೆಗಳು ಜನವಸತಿ ಪ್ರದೇಶಗಳ ಕಡೆಗೆ ಬಂದರೆ ಅವುಗಳನ್ನು ವ್ಯವಸ್ಥಿತ ಕಾರ್ಯಾಚರಣೆ ಮೂಲಕ ಮತ್ತೆ ಕಾಡಿಗೆ ಕಳುಹಿಸಬೇಕು ಮತ್ತು ಗದ್ದೆಗಳಿಗೆ ನುಗ್ಗದಂತೆ ಬೇಲಿಗಳನ್ನು ಹಾಕಬೇಕು' ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆನೆಗಳ ಹಾವಳಿಯಿಂದ ಫಸಲು ನಾಶವಾದರೆ ರೈತರಿಗೆ ಪರಿಹಾರ ನೀಡಬೇಕು ಎಂದೂ ತಿಳಿಸಲಾಗಿದೆ.ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಮತ್ತು ನಾಗರಹೊಳೆ ಪ್ರದೇಶದಲ್ಲಿ ಸೌರ ಬೇಲಿಯನ್ನು ಅಳವಡಿಸಲಾಗಿದ್ದು, ಆನೆಗಳು ಜನವಸತಿ ಪ್ರದೇಶಗಳ ಕಡೆಗೆ ನುಗ್ಗದಂತೆ ಯಶಸ್ವಿಯಾಗಿ ತಡೆಗಟ್ಟಲಾಗಿದೆ. ಮಾನವ-ಆನೆ ಸಂಘರ್ಷದ ಎಲ್ಲ ತಾಣಗಳಲ್ಲೂ ಈ ಮಾದರಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸುಕುಮಾರ್ ವಿವರಿಸುತ್ತಾರೆ.ತಮಿಳುನಾಡಿನಿಂದ ಆನೇಕಲ್‌ಗೆ ಆನೆಗಳು ಪ್ರವೇಶಿಸಿದ ಘಟನೆ ಕುರಿತಂತೆ ಪ್ರತಿಕ್ರಿಯಿಸುವ ಅವರು, `ಆನೆಗಳು ಮತ್ತೆ ಕಾಡು ಪ್ರವೇಶಿಸಲು ಅಂತರರಾಜ್ಯ ಸಮನ್ವಯದ ಕಾರ್ಯಾಚರಣೆ ಅಗತ್ಯ' ಎಂದು ಪ್ರತಿಪಾದಿಸುತ್ತಾರೆ. `ಆನೆ-ಮಾನವ ಸಂಘರ್ಷ ತುಂಬಾ ಸೂಕ್ಷ್ಮ ವಿಷಯವಾದ ಕಾರಣ. ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು ಎಂಬ ವಿಷಯವಾಗಿ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು ಸರ್ಕಾರೇತರ ಸಂಸ್ಥೆಗಳ ಸಹಾಯ ಪಡೆಯಬೇಕು' ಎಂದು ಸಲಹೆ ನೀಡುತ್ತಾರೆ.`ಕಾಡಾನೆಗಳ ಹತ್ತಿರ ಸುಳಿಯುವುದು ಅಪಾಯಕಾರಿ. ಕಾಡು ಪ್ರಾಣಿಗಳ ವಿಚಾರದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಂಡೇ ಛಾಯಾಚಿತ್ರ ತೆಗೆಯಬೇಕಿತ್ತು' ಎಂದು ಆನೆಗಳ ದಾಳಿಯಲ್ಲಿ ಪತ್ರಿಕಾ ವಿತರಕರೊಬ್ಬರು ಮೃತಪಟ್ಟ ದುರ್ಘಟನೆ ವಿಷಯವಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಪ್ರತಿಕ್ರಿಯಿಸುತ್ತಾರೆ.`ಕಾಡಾನೆಗಳು ನಾಡಿಗೆ ನುಗ್ಗಿದಾಗ ತಕ್ಷಣ ಕಾರ್ಯಾಚರಣೆ ನಡೆಸಲು ಕ್ಷಿಪ್ರ ಪಡೆಯೊಂದನ್ನು ರಚಿಸಬೇಕು. ಅದರಲ್ಲಿ ಎಂತಹ ತುರ್ತು ಪರಿಸ್ಥಿತಿಯನ್ನೂ ನಿಭಾಯಿಸುವ ತಂತ್ರಜ್ಞಾನ, ವೈದ್ಯರ ಬಲ ಇರಬೇಕು. ತರಬೇತಿ ಪಡೆದ ಸಾಕಾನೆಗಳನ್ನು ಬಳಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕು' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.