ಮಂಗಳವಾರ, ಏಪ್ರಿಲ್ 13, 2021
28 °C

ವರ್ಣರಂಜಿತ ನೃತ್ಯೋತ್ಸವ

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ವರ್ಣರಂಜಿತ ನೃತ್ಯೋತ್ಸವ

ಶುಭಾ ಧನಂಜಯ ನರ್ತಕಿ (ಭರತನಾಟ್ಯ, ಕಥಕ್), ಬೋಧಕಿಯಾಗಿ ಕಲಾಕ್ಷೇತ್ರದಲ್ಲಿ ಸುಪರಿಚಿತರು. ತಮ್ಮ `ನಾಟ್ಯಾಂತರಂಗ~ ಶಾಲೆಯ ಮೂಲಕ ನೂರಾರು ಆಸಕ್ತರಿಗೆ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ನೃತ್ಯವಲ್ಲದೆ ಗಾಯನ, ವಾದ್ಯ ಸಂಗೀತ, ಯೋಗ ಮುಂತಾದ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರ ಪತಿ ಕೆ. ಧನಂಜಯ ಅವರೂ ಶ್ರಮ ವಹಿಸಿ ಶಾಲೆಯ ಬೆಳವಣಿಗೆಯಲ್ಲಿ ನೆರವಾಗುತ್ತಿದ್ದಾರೆ.ಶಾಲೆ 25 ಸಂವತ್ಸರಗಳನ್ನು ದಾಟುತ್ತಿರುವ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸಡಗರಕ್ಕೆ  `ನೃತ್ಯ ಭಾರತ~ ಎಂಬ ನೃತ್ಯೋತ್ಸವವನ್ನು ಏರ್ಪಡಿಸಿದ್ದರು. ಉತ್ಸವದಲ್ಲಿ ಭರತನಾಟ್ಯವಲ್ಲದೆ ಒಡಿಸ್ಸಿ, ಕೂಚುಪುಡಿ, ಕಥಕ್, ಕಲರಿಪಯಟ್ಟು, ಕಥಕ್ಕಳಿ ನೃತ್ಯ ಪ್ರಕಾರಗಳಲ್ಲದೆ ಸಂಗೀತ, ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸಿದ್ದು ಉತ್ಸವದ ಬೆಡಗನ್ನು ವರ್ಧಿಸಿತು.ಕಳೆದ ಮಂಗಳವಾರ ಸಂಜೆ ಪ್ರಾರಂಭಕ್ಕೆ ನೃತ್ಯ ಸ್ಪರ್ಧೆಯಲ್ಲಿ ಗೆದ್ದ ಬಹುಮಾನ ವಿಜೇತರಿಂದ ಭರತನಾಟ್ಯ ನಡೆಯಿತು. `ಕರ್ನಾಟಕದಲ್ಲಿ ಮಾರ್ಗಿ-ದೇಸೀ ನೃತ್ಯಗಳು~ ಕುರಿತು ಪ್ರಾತ್ಯಕ್ಷಿಕೆ ನೀಡಿದ ಡಾ. ಕರುಣಾ ವಿಜಯೇಂದ್ರ ಉಪಯುಕ್ತ ಮಾಹಿತಿ ನೀಡಿದರು.

 

ಉದಯೋನ್ಮುಖ ಕಲಾವಿದರಲ್ಲಿ ಪ್ರತೀಕ್ಷಾ ಕಾಶಿ ಈಗಾಗಲೇ ಹೆಸರು ಮಾಡುತ್ತಿರುವವರು. ಪ್ರಾರಂಭದ ತರಂಗದಲ್ಲಿ ತಟ್ಟೆಯ ಮೇಲೆ ನಿಂತು ವಿವಿಧ ಜತಿಗಳಿಗೆ ನರ್ತಿಸಿದರು. ಆದರೆ ಅದು ಬಹು ಸಂಕ್ಷಿಪ್ತವಾಗಿತ್ತು. ರಾಗಮಾಲಿಕೆಯಲ್ಲಿ ಭೈರವಿ ಸಹ ನರ್ತಿಸಿದರು. ಸುಲಲಿತವಾಗಿ ಕೂಚುಪುಡಿ ಮಾಡಿದ ಪ್ರತೀಕ್ಷಾ ಕಾಶಿಗೆ ಉತ್ತಮ ಭವಿಷ್ಯವಿದೆ.ನಂತರ ಯುಗಳ ನೃತ್ಯದಲ್ಲಿ ಮೈಸೂರಿನ ಬದರೀ ದಿವ್ಯಾಭೂಷಣ ಮತ್ತು ಅಂಜನಾ ಭೂಷಣ ಭರತನಾಟ್ಯ ಮಾಡಿದರು. ಶ್ರಿರಂಜಿನಿ ರಾಗದಲ್ಲಿ `ಗಜವದನಾ ಕರುಣಾ ಸದನ~ದಿಂದ ಪ್ರಾರಂಭಿಸಿ, ಕಮಾಚ್ ರಾಗದ `ಬ್ರೋಚೇವಾರೆವರುರಾ~ ಆಯ್ದರು.ಸುಲಲಿತವಾಗಿ ನರ್ತಿಸಿದರೂ ಸುಭಗವಾಗಿಯೇನೂ ಇರಲಿಲ್ಲ! ಇಬ್ಬರೂ ತೂಕ ತಗ್ಗಿಸಿಕೊಳ್ಳುವುದು ಒಳ್ಳೆಯದು. ಅಲ್ಲದೆ ಮುಖಭಾವ ಹೊಮ್ಮಲು ಭೂಷಣರ ಮೀಸೆ ಬೇರೆ ಅಡ್ಡಿಯಾಗುತ್ತಿತ್ತು. ಪ್ರೌಢ ಶಿಕ್ಷಣ, ಸಾಧನೆಗಳಿಂದ ದಂಪತಿ ನೃತ್ಯಕ್ಕೆ ಪ್ರೌಢತೆ ಬಂದು, ಪರಿಣಾಮ ಗಾಢವಾಗಬಹುದು.ಮುಂದೆ ಕೂಚುಪುಡಿ ಮಾಡಿದ ಕೊಚಿನ್‌ನ ಅನುಪಮ ಮೋಹನ್ ತಂಡದವರು ಜನಪ್ರಿಯ `ಶ್ರಿಕೃಷ್ಣ ಪಾರಿಜಾತ~ವನ್ನು ಅಭಿನಯಿಸಿದರು. ರುಕ್ಮಿಣಿ, ಸತ್ಯಭಾಮೆ, ಶ್ರಿಕೃಷ್ಣ ಹಾಗೂ ನಾರದ ಪಾತ್ರಧಾರಿಗಳು ಹಾಡುತ್ತಾ, ನರ್ತಿಸುತ್ತಾ ಅಭಿನಯಿಸುತ್ತಾ ಕ್ಷಿಪ್ರಗತಿಯಲ್ಲಿ ಸಾಗಿದರು. ಗಾಢ ಪ್ರಭಾವದ ಹಿನ್ನೆಲೆ ಸಂಗೀತ, ಮಧ್ಯೆ ಮಧ್ಯೆ ಸ್ವಾರಸ್ಯಕರ ಸಂಭಾಷಣೆಗಳು ಮೇಳೈಸಿದವು. ನೃತ್ಯಭಾಗಕ್ಕಿಂತ ನಾಟಕವೇ ಮುಂದಾಗಿತ್ತು.ಸಂಗೀತದ ಅಬ್ಬರ ತಗ್ಗಿಸಿದ್ದರೆ ಪರಿಣಾಮ ಆಹ್ಲಾದಕರವಾಗಿರುತ್ತಿತ್ತು.  ನೃತ್ಯ ಭಾರತದ ಕಲ್ಪನೆ ವರ್ಣರಂಜಿತ. ನಾಲ್ಕಾರು ಶೈಲಿಯ ನೃತ್ಯಗಳು ಒಂದೇ ವೇದಿಕೆಯ ಮೇಲೆ ರಂಜಿಸಿದವು. ಆದರೆ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಪ್ರತಿ ತಂಡಕ್ಕೂ ಒಂದು ತಾಸಾದರೂ ಕಾಲಾವಧಿ ನೀಡಿದರೆ ಪ್ರದರ್ಶನಗಳು ಅರ್ಥಪೂರ್ಣವಾದೀತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.