ಗುರುವಾರ , ಜೂನ್ 4, 2020
27 °C

ವಸ್ತು ಪ್ರದರ್ಶನದಲ್ಲಿ ಧಾರ್ಮಿಕತೆಯ ಅನಾವರಣ

ಪ್ರಜಾವಾಣಿ ವಾರ್ತೆ/ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಸ್ತು ಪ್ರದರ್ಶನದಲ್ಲಿ ಧಾರ್ಮಿಕತೆಯ ಅನಾವರಣ

ವಿಜಾಪುರ: ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದಿಂದ ಇಲ್ಲಿಯ ರಾಮಮಂದಿರ ರಸ್ತೆಯ ಜೈನ ಮಂದಿರದಲ್ಲಿ ಹಮ್ಮಿಕೊಂಡಿರುವ ಜೈನ ಧಾರ್ಮಿಕ ಕಲಾ ಪ್ರದರ್ಶನದಲ್ಲಿ ಜೈನ ಧರ್ಮದ ಇತಿಹಾಸ ಮತ್ತು ಶ್ರೇಷ್ಠತೆ ಅನಾವರಣಗೊಂಡಿದೆ. ಅಲ್ಲಿರುವ ಅದ್ಭುತ ಕಲಾಕೃತಿ-ಮಾದರಿಗಳು ನಗರದ ಜೈನ ಸಮಾಜದ ಮಹಿಳೆಯರ ಸೃಜನಶೀಲತೆಗೆ ಸಾಕ್ಷಿಯಾಗಿವೆ.ಜೈನ ಧರ್ಮಗುರುಗಳಾದ ಮಂಗಲ ನಿಶ್ರಾ, ಹಂಸಶ್ರೀಜಿ ಮಹಾರಾಜ್, ನಮನ ಕುಮಾರಿಜಿ, ಸಂಬೋಧಾಜಿ, ಸುರಭಿಜಿ ಅವರು ಇಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದು, ಅದರ ನಿಮಿತ್ತ ಈ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.ಜೈನ ಧರ್ಮದ ಮಾಹಿತಿ ಮತ್ತು ಪ್ರಚಾರದ ಈ ಧಾರ್ಮಿಕ ವಸ್ತು ಪ್ರದರ್ಶನದಲ್ಲಿ ಎಲ್ಲ ಮಾದರಿಗಳನ್ನು ತಯಾರಿಸಿರುವವರು ವಿಜಾಪುರದ ಮಹಿಳೆಯರು ಎಂಬುದು ವಿಶೇಷ.ಯಾವ ಪಾಪ ಮಾಡಿದರೆ ಯಾವ ಶಿಕ್ಷೆ ಕಾದಿದೆ. ಹೆಣ್ಣು ಭ್ರೂಣ ಹತ್ಯೆ ಮಹಾಪಾಪ. ಪ್ರಾಣಿ ಹಿಂಸೆ-ಅತ್ಯಾಚಾರ- ಅನಾಚಾರ, ಮಾಂಸಾಹಾರ- ಸಾರಾಯಿ ಸೇವನೆಯಿಂದ ಆಗುವ ತೊಂದರೆ. ತಂದೆ-ತಾಯಿಗಳಿಗೆ ಕಿರುಕುಳ ನೀಡಿದರೆ ದೊರೆಯುವ ಶಿಕ್ಷೆ... ಹೀಗೆ ಜೈನ ಧರ್ಮದ ಸಂದೇಶಗಳನ್ನು ಚಿತ್ರಪಟದ ಮೂಲಕ ವಿವರಿಸಲಾಗಿದೆ.ಜೈನ ಧರ್ಮದವರ ಪವಿತ್ರ ತೀರ್ಥಕ್ಷೇತ್ರ ಬಿಹಾರ ರಾಜ್ಯದಲ್ಲಿರುವ ಸಮ್ಮೇತ ಶಿಖರಜಿ ಪ್ರತಿರೂಪ. ಮಹಾವೀರ ಭಗವಾನ್ ಅವರಿಗೆ ಅನಾರ್ಯ ದೇಶದಲ್ಲಿ ಜನತೆ ನೀಡಿದ ಹಿಂಸೆ. ಕಾಡಿಗೆ ಬೆಂಕಿ ಬಿದ್ದಾಗ ತನ್ನ ಕಾಲಡಿಯಲ್ಲಿ ಆಶ್ರಯ ಪಡೆದಿದ್ದ ಮೊಲದ ಬಗ್ಗೆ ಆನೆ ತೋರಿದ ಅನುಕಂಪ. ಚಂದ್ರಗುಪ್ತರ 16 ಕನಸುಗಳ ದೃಶ್ಯ ಮತ್ತು ವರ್ಣನೆ...ಮರದಿಂದ ಹಣ್ಣು- ಕಾಯಿ ಕೀಳುವ, ಮರದಲ್ಲಿಯೇ ಮಾಗಿ ಉದುರಿದ ನಂತರ ಆ ಹಣ್ಣನ್ನು ತಿನ್ನುವವರ ಮನೋಸ್ಥಿತಿ ವಿವರಿಸುವ ಅಮೃತ ವೃಕ್ಷದ ಪರಿಕಲ್ಪನೆ. ಜೈನ ಸಾಧು ಅವರು ಅನುಸರಿಸುವ ಪಂಚ ಮಹಾವ್ರತ... ಶ್ರವಣಕುಮಾರನ ಸೇವೆ. ಭಗವಾನ್ ಮಹಾವೀರರ ದರ್ಶನದ ನಂತರ ಘಟಸರ್ಪವೂ ಬದಲಾದ ಪರಿ.ಮಲ್ಲಿನಾಥ ಭಗವಾನರ `ಮಲ್ಲಿ ಮಹಲ್~. ಧರತಿಯ ಸ್ವರೂಪ ಮತ್ತು ರಹಸ್ಯದ ಬಗ್ಗೆ ಜೈನ ಧರ್ಮದಲ್ಲಿ ಇರುವ ವರ್ಣನೆಯ ಪ್ರತಿರೂಪ. ಮೇರು ಪರ್ವತ, ಲಿಮಡಿ ರೈಲ್ವೆ ನಿಲ್ದಾಣ. ಶಾಲಿಭದ್ರ ರಾಜನ ಮೋಹಕ ಅರಮನೆ ಗಮನ ಸೆಳೆಯುತ್ತವೆ.`ವರ್ಷದಲ್ಲಿ ನಾಲ್ಕು ಊರುಗಳಲ್ಲಿ ಚಾತುರ್ಮಾಸ ವೃತ ಕೈಗೊಳ್ಳುತ್ತೇವೆ. ನಾವು ಹೋದಲ್ಲೆಲ್ಲ ಇಂಥ ಪ್ರದರ್ಶನ ಏರ್ಪಡಿಸುತ್ತಿದ್ದೇವೆ. ವಿಜಾಪುರದ ಮಹಿಳೆಯರು ತಮ್ಮ ಸೃಜನಶೀಲತೆಯ ಮೂಲಕ ನಮ್ಮ ಪರಿಕಲ್ಪನೆಯನ್ನು ಕಲಾಕೃತಿ-ಮಾದರಿಗಳ ಮೂಲಕ ಅನಾವರಣಗೊಳಿಸಿದ್ದಾರೆ. ನಾವು ಈಗಾಗಲೇ ಆರು ಕಡೆಗಳಲ್ಲಿ ನಡೆಸಿದ ಪ್ರದರ್ಶನಗಳಲ್ಲಿ ಈ ಪ್ರದರ್ಶನ ಹೆಚ್ಚು ಆಕರ್ಷಕವಾಗಿದೆ~ ಎಂದು ಹೆಮ್ಮೆ ಪಡುತ್ತಾರೆ ಸನ್ಯಾಸಿ ನಯನ ಕುಮಾರಿಜಿ.`ಇಂದಿನ ಯುವ ಪೀಳಿಗೆಗೆ ನಮ್ಮ ಧರ್ಮದ ಅರಿವು ನೀಡಬೇಕಾಗಿದೆ. ಧರ್ಮದ ಶ್ರೇಷ್ಠತೆ ಕುರಿತು ಪ್ರಾಯೋಗಿಕಮಾಹಿತಿ ನೀಡುವುದೇ ಈ ಪ್ರದರ್ಶನದ ಮುಖ್ಯ ಉದ್ದೇಶ. ಈ ಪ್ರದರ್ಶನ ವೀಕ್ಷಿಸಿದ ನಂತರ ಎಲ್ಲರೂ ತಮ್ಮ ಧರ್ಮ- ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ~ ಎನ್ನುತ್ತಾರೆ ಸ್ಮಿತಾ ಪಿ. ರುಣವಾಲ್.`ಕೋಮಲ ರುಣವಾಲ್, ಸೋನು ನಹಾರ್, ವಿಜಯ ರುಣವಾಲ್, ಕಿಶೋರ ಬಾಗಮಾರ, ಸ್ನೇಹಾ ರುಣವಾಲ್, ಮನಿಷಾ ರುಣವಾಲ್ ಇತರರು ಈ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಇದೇ 13ರ ವರೆಗೆ ನಿತ್ಯ ಬೆಳಿಗ್ಗೆ 10ರಿಂದ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಪ್ರಯೋಜನ ಪಡೆಯಬೇಕು~ ಎಂಬುದು ಅಶೋಕ ರುಣವಾಲ ಅವರ ಮನವಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.