ಶುಕ್ರವಾರ, ಜೂನ್ 18, 2021
28 °C

ವಹ್ನಿ ಪುಷ್ಕರಣಿಯಲ್ಲಿ ಮೀನುಗಳ ಕಳವು

ಪ್ರಜಾವಾಣಿ ವಾರ್ತೆ/ ರವಿ ಬೆಟ್ಟಸೋಗೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಇಲ್ಲಿನ ಐತಿಹಾಸಿಕ ರಾಮೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಯ ವಹ್ನಿ ಪುಷ್ಕರಣಿ ಯಲ್ಲಿ ಇರುವ ವಿವಿಧ ಜಾತಿಯ ಬೃಹತ್ ಗಾತ್ರದ ಮೀನು ಕಳವು ಮಾಡಿಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.ಆದರೆ, ಮೀನುಗಳ ಸಂರಕ್ಷಣೆ ಮಾಡ ಬೇಕಾದ ಹೊಣೆ ಹೊತ್ತ ಇಲಾಖೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿ ಹೋಗಿದ್ದಾರೆ.ಕಾವೇರಿ ನದಿಯಲ್ಲಿ ಎಷ್ಟೇ ಪ್ರವಾಹ ಬಂದರೂ ಸಹ ವಹ್ನಿಪುಷ್ಕರಣಿಯನ್ನು ಬಿಟ್ಟು ಕದಲದ ಮೀನುಗಳನ್ನು ದೈವ ಸ್ವರೂಪಿ ಎಂದೇ ಹೇಳಲಾಗಿದೆ. ಅಲ್ಲದೇ ಅವುಗಳನ್ನು ಕಳವು ಮಾಡಿ ತಿನ್ನುವುದು ಪಾಪದ ಕೆಲಸ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿ ಮನೆ ಮಾಡಿದೆ. ಮೀನುಗಳ್ಳರು ಮಾತ್ರ ಇದ್ಯಾವುದಕ್ಕೂ ಕಿವಿಗೊಡದೇ ರಾತ್ರೋರಾತ್ರಿ ಕದ್ದು ಬೇಟೆಯಾಡುತ್ತಿರುವುದು ಸ್ಥಳೀಯರಲ್ಲಿ ತೀವ್ರ ಕಳವಳ ಮೂಡಿಸಿದೆ.

ವಿಶ್ವವಿಖ್ಯಾತ ಬಿಳಿ ಮೀನು ಮತ್ತಿತರ ಅಪಾಯದ ಅಂಚಿನಲ್ಲಿರುವ ಮೀನುಗಳ ಆವಾಸಸ್ಥಾನವಾಗಿರುವ ಈ ವಹ್ನಿ ಪುಷ್ಕರಣಿಯ ಎರಡು ಬದಿಯಲ್ಲೂ 200 ಮೀಟರ್ ನದಿಯನ್ನು ಮತ್ಯ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಸರ್ಕಾರ 1935ರಲ್ಲಿ ಮೀನು ಹಿಡಿಯು ವುದನ್ನು ನಿಷೇಧಿಸಿದೆ. ಹಾಗಾಗಿ ಈ ನೈಸರ್ಗಿ ಪರಿಸರವನ್ನು ಸಂರಕ್ಷಿಸಿ ಮತ್ಸ್ಯ ಸಂಕುಲವನ್ನು ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ.

ಆದರೂ, ಕಳೆದ ಕೆಲವು ವರ್ಷ ಗಳಿಂದ ವಹ್ನಿ ಪುಷ್ಕರಣಿಯಲ್ಲಿ ಮೀನು ಗಳ್ಳರು ಅತಿಕ್ರಮ ಪ್ರವೇಶ ಮಾಡಿ ಮೀನುಗಳನ್ನು ಕಳವು ಮಾಡುತ್ತಿದ್ದಾರೆ  ಎಂಬ ಆರೋಪಗಳು ಕೇಳಿಸುತ್ತವೆ ಹೊರತು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಯಾವುದೇ ಕಠಿಣ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಪ್ರತಿ ವರ್ಷ ಬೇಸಿಗೆ ಕಾಲ ಬಂದರೆ ಸಾಕು ಕಾವೇರಿ ನದಿಯಲ್ಲಿ ಸಹಜವಾ ಗಿಯೇ ನೀರಿನ ಪ್ರಮಾಣ ಗಣನೀಯ ವಾಗಿ ಇಳಿಮುಖ ಆಗುವ ಕಾರಣ ವಹ್ನಿ ಪುಷ್ಕರಣಿಯಲ್ಲಿರುವ ಮೀನುಗಳು ಚೆನ್ನಾಗಿ ಕಣ್ಣಿಗೆ ಬೀಳುತ್ತವೆ. ಇದು ಮೀನುಗಳ್ಳರು ರಾತ್ರಿ ವೇಳೆ ಅತಿಕ್ರಮ ಪ್ರವೇಶ ಮಾಡಿ ಮೀನುಗಳನ್ನು ಕಳವು ಮಾಡಲು ದಾರಿಮಾಡಿಕೊಟ್ಟಂತಾಗಿದೆ.

ಕಳೆದ ಐದಾರು ದಿನಗಳಿಂದ ವಹ್ನಿ ಪುಷ್ಕರಣಿಯಲ್ಲಿ ಮೀನುಗಳ್ಳರ ಹಾವಳಿ ಹೆಚ್ಚಾಗಿರುವುದು ಕಂಡುಬರುತ್ತಿದೆ. ರಾತ್ರಿ ವೇಳೆ ಕಳ್ಳರು ಮೀನುಗಳನ್ನು ಕಳವು ಮಾಡಿ ಹೋಗುವ ಸಂದರ್ಭ ದಲ್ಲಿ ಪುಷ್ಕರಣಿ ಮೆಟ್ಟಿಲು ಮೇಲೆ ಆಕಸ್ಮಿಕವಾಗಿ ಬಿಟ್ಟು ಹೋಗಿರುವ ಭಾರಿ ತೂಕದ ಮೀನುಗಳು ಬಿದ್ದಿರುವುದನ್ನು ಸ್ಥಳೀಯರು ಹಗಲು ಹೊತ್ತಿನಲ್ಲಿ ನೋಡಿದ್ದಾರೆ.

ಕಳೆದ ವರ್ಷ ಕೂಡ ಪುಷ್ಕರಣಿಯಲ್ಲಿ ನೀರು ಕಡಿಮೆಯಾದ ಪರಿಣಾಮ ಮೀನುಗಳನ್ನು ಕಳವು ಮಾಡುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ ಯಲ್ಲಿ ನದಿಯಲ್ಲಿ ಹಾಯ್ಗಲುಗಳಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಕಟ್ಟಿ ನೀರು ನಿಲ್ಲುವಂತೆ ತಡೆಗಟ್ಟ ಲಾಗಿತ್ತು.   ಮೀನುಗಾರಿಕೆ ಇಲಾಖೆ ಕ್ರಮಕ್ಕೆ ಮುಂದಾಗಿರಲಿಲ್ಲ. ಹೀಗಾಗಿ ರಾತ್ರಿ ವೇಳೆ ಕಾವಲುಗಾರರು ಇಲ್ಲದ ಪುಷ್ಕರಣಿಯಲ್ಲಿರುವ ಅಪರೂಪದ ಮೀನುಗಳ ಸಂತತಿ ಕ್ಷೀಣಿಸುತ್ತಿದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಮೀನುಗಳ ಸಂರಕ್ಷಣೆಗೆ ಮುಂದಾಗ ಬೇಕು ಎಂಬುದು ಒತ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.