ಗುರುವಾರ , ಮೇ 13, 2021
22 °C

ವಾಂತಿ, ಭೇದಿ: 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು:  ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 40ಕ್ಕೂ ಅಧಿಕ ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಬುಧವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳಿಸಲಾಗಿದೆ.ಪಟ್ಟಣದ ಶ್ರೀಕಂಠಪುರಿ ಬಡಾವಣೆ 1ನೇ ಕ್ರಾಸ್ ನಿವಾಸಿ ಕೆಂಪಮ್ಮ , ಶ್ರೀರಾಂಪುರದ ಜಯಮ್ಮ , ಶಂಕರಪುರದ ಚಲುವರಾಜು, ತ್ಯಾಗರಾಜ ಕಾಲೋನಿಯ ಶಾಂತ, ತಾಂಡವಪುರ ಗ್ರಾಮದ ಶಿವರುದ್ರಸ್ವಾಮಿ, ಹೆಜ್ಜಿಗೆಯ ವರಲಕ್ಷ್ಮಿ, ವಿದ್ಯಾನಗರದ ಶೋಭಾ ಎಂಬವರ ಪುತ್ರಿ ದಿವ್ಯ  ಸೇರಿದಂತೆ 40ಕ್ಕೂ ಅಧಿಕ ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಗಂಭೀರ ಸ್ವರೂಪದ ಒಬ್ಬ ರೋಗಿಯನ್ನು ಮೈಸೂರು ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಂಗಳವಾರ ಸಂಜೆಯಿಂದ ರೋಗಿಗಳು ಆಸ್ಪತ್ರೆಗೆ ಬರಲಾರಂಭಿಸಿದ್ದು, ಬುಧವಾರ ಸಂಜೆಯಾದರೂ ರೋಗಿಗಳ ಸಂಖ್ಯೆ ಏರುತ್ತಲೇ ಇತ್ತು.ಪಟ್ಟಣದಲ್ಲಿ ಮಂಗಳವಾರ ನಡೆದ ಶ್ರೀಕಂಠೇಶ್ವರಸ್ವಾಮಿಯ ದೊಡ್ಡಜಾತ್ರೆ ಪ್ರಯುಕ್ತ ಹಾದಿ, ಬೀದಿಯಲ್ಲಿ ಹಲವೆಡೆ ನೀರು ಮಜ್ಜಿಗೆ, ಪಾನಕ, ತಿಂಡಿ, ತಿನಿಸುಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿತ್ತು. ಅಸ್ವಸ್ಥರಲ್ಲಿ ಅನೇಕರು ಉಚಿತ ಪಾನೀಯ, ತಿಂಡಿ ಸೇವನೆ ಮಾಡಿದವರು ಇದ್ದಾರೆ. ಅಲ್ಲದೇ ಪಟ್ಟಣದಲ್ಲಿ ಚರಂಡಿಯ ಕಲುಷಿತ ನೀರು, ಹಲವೆಡೆ ಸೋರಿಕೆ ಜಾಗದಲ್ಲಿ ಕುಡಿಯುವ ನೀರಿನ ಪೈಪ್ ಜೊತೆ ಬೆರೆಯುತ್ತಿದೆ. ಹೀಗೆ ಅಶುದ್ಧ ನೀರು ಮತ್ತು ಆಹಾರ ಸೇವನೆಯಿಂದ ವಾಂತಿ, ಭೇದಿ ಸಂಭವಿಸಿರಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್ ತಿಳಿಸಿದ್ದಾರೆ.ರೋಗಿಗಳಿಂದ ಮಲದ ಸ್ಯಾಂಪಲ್ ಸಂಗ್ರಹಿಸಿದ್ದು, ಬುಧವಾರ ಸರ್ಕಾರಿ ರಜೆ ಇರುವ ಕಾರಣ ಗುರುವಾರ ಪರೀಕ್ಷೆಗೆ ಕಳುಹಿಸಲಾಗುವುದು. ಪಟ್ಟಣದ ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಲು, ರಸ್ತೆಬದಿ ಕೊಯ್ದ ಹಣ್ಣುಗಳ ಮಾರಾಟ ತಡೆಗಟ್ಟಲು ಪುರಸಭೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.